ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಯೂಟ ಸ್ವಚ್ಛತೆ ಬಗ್ಗೆ ಆತಂಕ

Last Updated 21 ಆಗಸ್ಟ್ 2017, 19:36 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರಿ ಶಾಲೆಗಳ ಮಕ್ಕಳಿಗೆ ನೀಡಲಾಗುವ ಮಧ್ಯಾಹ್ನದ ಬಿಸಿಯೂಟದ ಸ್ವಚ್ಛತೆ ಮತ್ತು ಮಕ್ಕಳ ಆರೋಗ್ಯ ಸುರಕ್ಷತೆಯ ಬಗ್ಗೆ ಸೋಮವಾರ ಆತಂಕ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ವಿವರಣೆ ಕೋರಿದೆ.

ಬಿಸಿಯೂಟ ಯೋಜನೆ ಅನುಷ್ಠಾನ ಮತ್ತು ಸ್ವಚ್ಛತೆ ನಿರ್ವಹಣೆಗೆ ಸಂಬಂಧಿಸಿದಂತೆ ಕೈಗೊಳ್ಳಲಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೇಹರ್‌ ಮತ್ತು ನ್ಯಾಯಮೂರ್ತಿ ಡಿ.ವೈ. ಚಲಮೇಶ್ವರ್‌ ಅವರ ಪೀಠ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

ಕಲುಷಿತ ಬಿಸಿಯೂಟ ಸೇವಿಸಿ ಬಿಹಾರದ ಸರ್ಕಾರಿ ಪ್ರಾಥಮಿಕ ಶಾಲೆಯ 23 ಮಕ್ಕಳು ಮೃತಪಟ್ಟ ಪ್ರಕರಣದ ನಂತರ ‘ಅಂತರರಾಷ್ಟ್ರೀಯ ಮಾನವ ಅಧಿಕಾರ ನಿಗ್ರಾಣಿ’ ಎಂಬ ಸ್ವಯಂಸೇವಾ ಸಂಸ್ಥೆ 2013ರಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.

ಈ ಯೋಜನೆಯ ಲಾಭ ಪಡೆಯುತ್ತಿರುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಇನ್ನಿತರ ಮಾಹಿತಿಯನ್ನು ಮೂರು ತಿಂಗಳ ಒಳಗಾಗಿ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸುವಂತೆ ಸುಪ್ರೀಂ ಕೋರ್ಟ್‌ ಈ ಹಿಂದೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿತ್ತು. ಮಾಹಿತಿ ನೀಡಲು ನಿರ್ದಿಷ್ಟ ಮಾದರಿಯ ಅರ್ಜಿ ನಮೂನೆಗೂ ಒಪ್ಪಿಗೆ ಸೂಚಿಸಿತ್ತು.

ಅದಕ್ಕೆ ಅನುಗುಣವಾಗಿ ಮಾಹಿತಿ ನೀಡಲು 25 ರಾಜ್ಯಗಳು ಒಪ್ಪಿಕೊಂಡಿದ್ದವು. ಆದರೆ, 11 ರಾಜ್ಯಗಳು ಇದುವರೆಗೂ ಮಾಹಿತಿ ನೀಡಿಲ್ಲ ಎಂದು ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿದೆ.

ಯೋಜನೆ ವ್ಯಾಪ್ತಿಗೆ ಒಳಪಡುವ ಶಾಲೆಗಳ ಸಂಖ್ಯೆ, ಲಾಭ ಪಡೆಯುತ್ತಿರುವ ಮಕ್ಕಳ ಸಂಖ್ಯೆ, ಅಡುಗೆಗೆ ಬಳಸುವ ಆಹಾರ ಧಾನ್ಯ, ತರಕಾರಿ, ಮೊಟ್ಟೆಗಳ ಗುಣಮಟ್ಟ ಮತ್ತು ಅದರಲ್ಲಿರುವ ಪೋಷಕಾಂಶಗಳ ಬಗ್ಗೆ ವಿವರವಾದ ಪ್ರಶ್ನೆಗಳನ್ನು ಅರ್ಜಿ ನಮೂನೆ ಒಳಗೊಂಡಿದೆ. ಆಹಾರ ಧಾನ್ಯ, ತರಕಾರಿ ಗುಣಮಟ್ಟ, ಅಡುಗೆ ಕೋಣೆ ಹಾಗೂ ಮಕ್ಕಳಿಗೆ ಪೂರೈಸುವ ಆಹಾರದ ಮೇಲೆ ನಿಗಾ ಇಡಲು ಮೇಲುಸ್ತುವಾರಿ ವ್ಯವಸ್ಥೆಯ ಬಗ್ಗೆ ನ್ಯಾಯಾಲಯ ಮಾಹಿತಿ ಕೋರಿತ್ತು.

ಇದಕ್ಕೂ ಮೊದಲು ಸುಪ್ರೀಂ ಕೋರ್ಟ್, ಬಿಸಿಯೂಟ ಸ್ವಚ್ಛತೆ ಕಾಪಾಡಲು ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಕರ್ನಾಟಕ ಸೇರಿದಂತೆ 12 ರಾಜ್ಯಗಳಿಗೆ ನೋಟಿಸ್‌ ನೀಡಿತ್ತು.

ದೇಶದಾದ್ಯಂತ 12 ಲಕ್ಷ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ಉಚಿತವಾಗಿ ಮಧ್ಯಾಹ್ನದ ಊಟ ಪೂರೈಸಲಾಗುತ್ತಿದೆ. ಮೂಲಸೌಕರ್ಯ, ಗುಣಮಟ್ಟದ ಕೊರತೆ, ನಿರಂತರವಾಗಿ ಕಲುಷಿತ ಆಹಾರ ಸೇವನೆಯಿಂದ ಮಕ್ಕಳ ಆರೋಗ್ಯದ ಮೇಲೆ
ದುಷ್ಪರಿಣಾಮವಾಗುವ ಸಾಧ್ಯತೆ ಇದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಆರೋಪಿಸಲಾಗಿದೆ. ಆಗಸ್ಟ್‌ 24ರಂದು ಅರ್ಜಿಯ ಮುಂದಿನ ವಿಚಾರಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT