ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನ್ಸಿನಾಟಿ ಮಾಸ್ಟರ್ಸ್‌ ಟೆನಿಸ್‌ ಟೂರ್ನಿ; ಹಲೆಪ್‌ಗೆ ನಿರಾಸೆ

Last Updated 21 ಆಗಸ್ಟ್ 2017, 19:39 IST
ಅಕ್ಷರ ಗಾತ್ರ

ಸಿನ್ಸಿನಾಟಿ: ಸ್ಪೇನ್‌ನ ಗಾರ್ಬೈನ್‌ ಮುಗುರುಜಾ ಮತ್ತು ಬಲ್ಗೇರಿಯಾದ ಗ್ರೆಗೊರ್‌ ಡಿಮಿಟ್ರೊವ್‌ ಅವರು ಸಿನ್ಸಿನಾಟಿ ಓಪನ್‌ ಮಾಸ್ಟರ್ಸ್‌ ಟೆನಿಸ್‌ ಟೂರ್ನಿಯಲ್ಲಿ ಕ್ರಮವಾಗಿ ಮಹಿಳೆಯರ ಮತ್ತು ಪುರುಷರ ಸಿಂಗಲ್ಸ್‌ ವಿಭಾಗಗಳಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಭಾನುವಾರ ರಾತ್ರಿ ನಡೆದ ಮಹಿಳೆಯರ ವಿಭಾಗದ ಫೈನಲ್‌ ಹೋರಾಟದಲ್ಲಿ ಮುಗುರುಜಾ 6–1, 6–0ರ ನೇರ ಸೆಟ್‌ಗಳಿಂದ ರುಮೇನಿಯಾದ ಸಿಮೊನಾ ಹಲೆಪ್‌ ಅವರನ್ನು ಸೋಲಿಸಿದರು.

ಮೊದಲ ಸೆಟ್‌ನಲ್ಲಿ ಮುಗುರುಜಾ ಮಿಂಚಿನ ಆಟ ಆಡಿದರು. ಈ ಟೂರ್ನಿಯಲ್ಲಿ ಅವರು ನಾಲ್ಕನೇ ಶ್ರೇಯಾಂಕ ಪಡೆದಿದ್ದರು. ಅವರು ಶರವೇಗದ ಸರ್ವ್‌ಗಳನ್ನು ಮಾಡಿ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದರು. ಈ ಮೂಲಕ ಲೀಲಾಜಾಲವಾಗಿ ಗೇಮ್‌ ಗೆದ್ದರು.

ಎದುರಾಳಿ ಆಟಗಾರ್ತಿ ಶೀಘ್ರವೇ ಮುನ್ನಡೆ ಗಳಿಸಿದ್ದರಿಂದ ಹಲೆಪ್‌ ಒತ್ತಡಕ್ಕೆ ಒಳಗಾದಂತೆ ಕಂಡರು. ಹಲವು ಸ್ವಯಂಕೃತ ತಪ್ಪುಗಳನ್ನು ಮಾಡಿದ ಅವರು ಸರ್ವ್‌ಗಳನ್ನು ಕೈಚೆಲ್ಲಿ ಸುಲಭವಾಗಿ ಸೋಲೊಪ್ಪಿಕೊಂಡರು.

ವಿಂಬಲ್ಡನ್‌ನಲ್ಲಿ ಪ್ರಶಸ್ತಿ ಗೆದ್ದಿದ್ದ ಮುಗುರುಜಾ ಎರಡನೇ ಸೆಟ್‌ನಲ್ಲೂ ಮೋಡಿ ಮಾಡಿದರು. ಆಕರ್ಷಕ ಕ್ರಾಸ್‌ಕೋರ್ಟ್‌ ಹೊಡೆತಗಳ ಜೊತೆಗೆ ಚೆಂಡನ್ನು ನೆಟ್‌ನ ಸಮೀಪದಲ್ಲಿ ಡ್ರಾಪ್‌ ಮಾಡುವ ಮೂಲಕ ಗೇಮ್‌ ಗೆದ್ದ ಅವರು ಎದುರಾಳಿಯನ್ನು ಕಂಗೆಡಿಸಿದರು. ಈ ಮೂಲಕ ತಾವು ಮಾಡಿದ ಮೂರೂ ಸರ್ವ್‌ಗಳನ್ನು ಕಾಪಾಡಿಕೊಂಡ ಅವರು ಹಲೆಪ್‌ ಅವರ ಎಲ್ಲಾ ಸರ್ವ್‌ಗಳನ್ನು ಮುರಿದು ನಿರಾಯಾಸವಾಗಿ ಗೆದ್ದರು.

‘ಅಮೆರಿಕದ ಮ್ಯಾಡಿಸನ್‌ ಕೀಸ್‌ ವಿರುದ್ಧದ ಮೂರನೇ ಸುತ್ತಿನ ಹಣಾಹಣಿಯಲ್ಲಿ ಮೂರು ಮ್ಯಾಚ್‌ ಪಾಯಿಂಟ್ಸ್‌ಗಳನ್ನು ಉಳಿಸಿಕೊಂಡು ಗೆದ್ದಿದ್ದೆ. ಹಿಂದಿನ ಆ ಜಯ ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿತ್ತು. ಹೀಗಾಗಿ ಹಲೆಪ್‌ ಅವರನ್ನು ಸುಲಭವಾಗಿ ಮಣಿಸಲು ಸಾಧ್ಯವಾಯಿತು’ ಎಂದು ಮುಗುರುಜಾ ಪಂದ್ಯದ ಬಳಿಕ ಸುದ್ದಿಗಾರರಿಗೆ ಹೇಳಿದರು.

‘ಗಾರ್ಬೈನ್‌ ನನಗಿಂತಲೂ ತುಂಬಾ ಚೆನ್ನಾಗಿ ಆಡಿದರು. ಮುಂದಿನ ವರ್ಷ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಲು ಶ್ರಮಿಸುತ್ತೇನೆ’ ಎಂದು ಹಲೆಪ್‌ ನುಡಿದರು. ಡಿಮಿಟ್ರೊವ್‌ ಮುಡಿಗೆ ಗರಿ: ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಬಲ್ಗೇರಿಯಾದ ಗ್ರೆಗೊರ್‌ ಡಿಮಿಟ್ರೊವ್‌ ಟ್ರೋಫಿ ಎತ್ತಿಹಿಡಿದರು.

ಫೈನಲ್‌ ಹಣಾಹಣಿಯಲ್ಲಿ ಡಿಮಿಟ್ರೊವ್‌ 6–3, 7–5ರಲ್ಲಿ ಆಸ್ಟ್ರೇಲಿಯಾದ ನಿಕ್‌ ಕಿರ್ಗಿಯೊಸ್‌ ವಿರುದ್ಧ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT