ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣೇಶ ಮೂರ್ತಿ ವಿಸರ್ಜನೆಗೂ ನದಿಯಲ್ಲಿ ನೀರಿಲ್ಲ

Last Updated 22 ಆಗಸ್ಟ್ 2017, 6:32 IST
ಅಕ್ಷರ ಗಾತ್ರ

ಸಿರುಗುಪ್ಪ: ಗಣೇಶನನ್ನು ಪ್ರತಿಷ್ಠಾಪಿಸುವ ಭಕ್ತರಿಗೆ ಮೂರ್ತಿಯನ್ನು ವಿಸರ್ಜಿಸುವ ಬಗೆ ಹೇಗೆ ಎನ್ನುವ ಚಿಂತೆ ಕಾಡುತ್ತಿದೆ. ಪ್ರತಿ ವರ್ಷ ಸಾಮಾನ್ಯವಾಗಿ ವಿನಾ ಯಕನ ಭಕ್ತ ಸಮೂಹ ಮೂರ್ತಿಯನ್ನು ಸಂಭ್ರಮದಿಂದ ಮೆರವಣಿಗೆ ಮೂಲಕ ತೆರಳಿ ತುಂಗಭದ್ರಾ ನದಿ, ಕಾಲುವೆಗಳಲ್ಲಿ ವಿಸರ್ಜನೆ ಮಾಡುತ್ತಿದ್ದರು.

ಆದರೆ, ಈ ವರ್ಷ ಮುಂಗಾರು ಮಳೆ ಕೊರತೆಯಿಂದ ನದಿ ಬರಿದಾಗಿದೆ. ಅಲ್ಲದೇ ತುಂಗಭದ್ರಾ ಉಗಮ ಸ್ಥಾನದಲ್ಲಿ ಮಳೆಯ ಕೊರತೆಯಿಂದ ತುಂಗಭದ್ರಾ ಜಲಾಶಯ ಕೂಡ ಭರ್ತಿಯಾಗಿಲ್ಲ. ಹೀಗಾಗಿ ಅಚ್ಚುಕಟ್ಟು ಪ್ರದೇಶದ ಕಾಲುವೆ ಮತ್ತು ನದಿಗೆ ನೀರು ಬಿಡುಗಡೆ ಮಾಡದ ಪರಿಣಾಮ ನದಿಯ ಒಡಲು ಬಟಾ ಬಯಲಾಗಿ ಗೋಚರಿಸುತ್ತಿದೆ.
ಪ್ರತಿ ವರ್ಷ ಆಗಸ್ಟ್‌ 15 ರಂದು ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ಜಲಾಶಯದಿಂದ ನದಿಗೆ ನೀರು ಹರಿಸಲಾಗುತ್ತಿತ್ತು, ಇದರಿಂದ ನದಿಯಲ್ಲಿ ನೀರಿನ ಹರಿವು ನಿರಂತರವಾಗಿರುತ್ತಿತ್ತು.

ಆದರೆ ಈ ವರ್ಷ ನೀರು ಬಿಡುಗಡೆ ಆಗಿಲ್ಲ. ಆಗಸ್ಟ್‌ ತಿಂಗಳು ಮುಗಿಯುತ್ತಾ ಬಂದರೂ ಅಚ್ಚುಕಟ್ಟು ಪ್ರದೇಶದ ಕಾಲು ವೆಗಳಿಗೂ ನೀರು ಬಿಡುವ ನಿರ್ಧಾರ ಹೊರಬಿದ್ದಿಲ್ಲ. ಇದರಿಂದ ನದಿಯಲ್ಲಿ ನೀರಿಲ್ಲದೇ ನದಿಪಾತ್ರದ ನಗರ ಮತ್ತು ಗ್ರಾಮಗಳಲ್ಲಿ ಗಣೇಶ ವಿಸರ್ಜನೆಗೆ ತೊಂದರೆಯಾಗಿದೆ.

‘ಸಿರುಗುಪ್ಪದಲ್ಲಿ ಗಣೇಶ ಹಬ್ಬ ಆಚರಿಸಿದ ಬಳಿಕ ಮೂರ್ತಿಗಳನ್ನು ಶಂಭುಲಿಂಗೇಶ್ವರ ದೇವಸ್ಥಾನ ಮತ್ತು ದಢೇಸೂಗೂರು ಬಳಿಯ ತುಂಗಭದ್ರಾ ನದಿಯಲ್ಲಿ ವಿಸರ್ಜಿಸಲಾಗುತ್ತಿತ್ತು’ ಎಂದು ನೇತಾಜಿ ವ್ಯಾಯಾಮ ಶಾಲೆಯ ಅಧ್ಯಕ್ಷ ಯು.ಅಮರೇಶಪ್ಪ ಹೇಳಿದರು.

‘ಪ್ರತಿ ವರ್ಷ ಕಮ್ಮವಾರಿ ಸಂಘದಿಂದ ಅತ್ಯಂತ ಎತ್ತರದ ವಿನಾಯಕನ ಮೂರ್ತಿ ಪ್ರತಿಷ್ಠಾಪಿಸಿ 11 ದಿನದ ನಂತರ ನದಿಗೆ ವಿಸರ್ಜನೆ ಮಾಡುತ್ತಿದ್ದೆವು. ಆದರೆ ಈ ಬಾರಿ ಏನು ಮಾಡಬೇಕು ಎಂಬುದೇ ತಿಳಿಯುತ್ತಿಲ್ಲ’ ಎಂದು ಸಂಘದ ಅಧ್ಯಕ್ಷ ರಮೇಶ್‌ ಆತಂಕ ವ್ಯಕ್ತಪಡಿಸಿದರು.

‘ಬರಗಾಲದ ನಡುವೆಯೂ ಸರಳ ವಾಗಿ ಹಬ್ಬ ಆಚರಿಸಲಾಗುತ್ತಿದೆ. ಆದರೆ, ಬೃಹತ್‌ ಗಾತ್ರದ ಗಣೇಶ ಮೂರ್ತಿಗಳನ್ನು ಅಪಚಾರವಾಗದಂತೆ ಕರಗಿಸುವುದು ಹೇಗೆ ಎಂಬ ಆತಂಕ ಕಾಡುತ್ತಿದೆ’ ಎಂದು ಸಜ್ಜನ ಗಾಣಿಗರ ಸಮಾಜದ ಮುಖಂಡ, ನಗರಸಭೆ ಸದಸ್ಯ ಕೆ.ಕೃಷ್ಣ ಹೇಳಿದರು.

‘ಇಲ್ಲಿಯವರೆಗೆ ನಮಗೆ ಇಂತಹ ನೀರಿನ ಸಮಸ್ಯೆ ಬಂದಿರಲಿಲ್ಲ, ನಗರದಲ್ಲಿ ದೊಡ್ಡ ಬಾವಿಗಳಿಲ್ಲ, ನದಿಯಲ್ಲಿಯೇ ಎಲ್ಲರೂ ಗಣೇಶನನ್ನು ವಿಸರ್ಜಿಸುತ್ತಿದ್ದೆವು’ ಎಂದು ತಮ್ಮ ಅನುಭವ ಹೇಳಿದರು.

ತ್ಯಾಜ್ಯ ವಿಲೇವಾರಿ ಘಟಕದಲ್ಲಿ ವಿಸರ್ಜನೆ
ನಗರಸಭೆಯವರು ಈಗಾಗಲೇ ಹಬ್ಬದ ಪೂರ್ವಭಾವಿ ಸಭೆ ನಡೆಸಿ ಪರಿಸರಕ್ಕೆ ಹಾನಿಯಾಗುವ ಪಿಒಪಿ ಹಾಗೂ ರಾಸಾಯನಿಕ ಬಣ್ಣ ಹಾಕಿದ ಗಣಪತಿ ಮೂರ್ತಿಗಳನ್ನು ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ  ಸೂಚನೆಯಂತೆ ನಿಷೇಧಿಸಲಾಗಿದೆ. ನದಿಯಲ್ಲಿ ನೀರಿಲ್ಲದೇ ಇರುವುದರಿಂದ ವಿನಾಯಕ ವಿಸರ್ಜನೆಗೆ ನಗರಸಭೆಯು ಪರ್ಯಾಯ ವ್ಯವಸ್ಥೆಗೆ ಮುಂದಾಗಿದೆ.

ಗಣಪತಿ ವಿಗ್ರಹಗಳನ್ನು ಪಡೆದುಕೊಂಡು ಬಳ್ಳಾರಿ ರಸ್ತೆಯ ತಾಜ್ಯ ವಿಲೇವಾರಿ ಘಟಕದಲ್ಲಿ ಕೆರೆ ನಿರ್ಮಾಣ ಮಾಡಿ ನೀರು ನಿಲ್ಲಿಸಿ ಸಾಮೂಹಿಕ ಗಣಪತಿ ವಿಸರ್ಜನೆಯನ್ನು ಮಾಡಲಾಗುವುದು ಎಂದು ಪೌರಾಯುಕ್ತ ಮರಿಲಿಂಗಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT