ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ಲಾಭ ತಂದುಕೊಟ್ಟ ಹೈನೋದ್ಯಮ

Last Updated 22 ಆಗಸ್ಟ್ 2017, 6:37 IST
ಅಕ್ಷರ ಗಾತ್ರ

ಕುರುಗೋಡು: ಮಳೆ ಕೊರತೆ, ಅಂತರ್ಜಲ ಕುಸಿತದಿಂದ ಬೆಳೆ ನಷ್ಟ ಅನುಭವಿಸಿದ ರೈತರೊಬ್ಬರು ಹೈನು ಗಾರಿಕೆ ಮೂಲಕ ಲಾಭ ಗಳಿಸಿ ಯುವ ರೈತರಿಗೆ ಮಾದರಿ ಎನಿಸಿದ್ದಾರೆ. ಸ್ಥಳೀಯ ನಿವಾಸಿಯಾದ ಬಳ್ಳಾರಿ ದೊಡ್ಡಪ್ಪ ಮತ್ತು ಬಸಮ್ಮ ದಂಪತಿಯ ನಾಲ್ವರು ಗಂಡು ಮಕ್ಕಳಲ್ಲಿ ಮೂವರು ಸೇನೆಗೆ ಸೇರಿ ದೇಶ ಕಾಯುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದರೆ, 3ನೇ ಮಗ ಮರುವಳ್ಳಿ ಭೀಮಣ್ಣ ಅವರು ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂರು.

14 ಎಕರೆ ಪಿತ್ರಾರ್ಜಿತ ಜಮೀನಿನಲ್ಲಿ ಕೊಳವೆಬಾವಿ ಕೊರೆಸಿ ಹತ್ತಿ, ಮೆಣಸಿನಕಾಯಿ ಬೆಳೆ ಬೆಳೆಯುತ್ತಿದ್ದರು. ಕೆಲವು ವರ್ಷಗಳ ನಂತರ ಕೊಳವೆ ಬಾವಿಗಳಲ್ಲಿ ನೀರ ಬತ್ತಿಹೋಗಿ ಬೆಳೆನಷ್ಟ ಅನುಭವಿಸಿದರು.

ಲಭ್ಯವಿರುವ ಅಲ್ಪಸ್ವಲ್ಪ ನೀರಿನಲ್ಲಿ ಏನು ಮಾಡಲು ಸಾಧ್ಯ ಎಂದು ಕೈಕಟ್ಟಿ ಕುಳಿತುಕೊಂಡಿದ್ದ ಭೀಮಣ್ಣ, ಸ್ನೇಹಿತರೊಬ್ಬರ ಸಲಹೆಯ ಮೇರೆಗೆ ತೋಟಗಾರಿಕೆಯಲ್ಲಿ ತೊಡಗಿಸಿಕೊಂಡು ಮಾವು, ಸಪೋಟ ಮತ್ತು ದಾಳಿಂಬೆ ಬೆಳೆ ಬೆಳೆಯುವ ಪ್ರಯತ್ನ ಮಾಡಿದರು. 2009ರಲ್ಲಿ ಆಕಸ್ಮಿಕ ಬೆಂಕಿ ಅವಗಢದಲ್ಲಿ ಫಲದೊಂದಿಗೆ ಬೆಳೆದು ನಿಂತಿದ್ದ ತೋಟ ಭಸ್ಮವಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿತ್ತು.

ಈ ಘಟನೆ ಗಾಯದ ಮೇಲೆ ಬರೆ ಎಳೆದಂತಾಗಿತ್ತು. ದಿಕ್ಕು ತೋಚದಂತಾದಾಗ ಅವರಿಗೆ ಗೋಚರಿಸಿದ್ದು ಹೈನುಗಾರಿಕೆ ಹಾದಿ. 2013ರಲ್ಲಿ ತಮಿಳು ನಾಡಿದ ಈರೋಡ್ ದನಗಳ ಮಾರುಕಟ್ಟೆಯಲ್ಲಿ ₹48 ರಿಂದ ₹50 ಸಾವಿರಕ್ಕೆ ಒಂದರಂತೆ 30 ಎಚ್.ಎಫ್. ತಳಿಯ ಹಸು ಮತ್ತು 8 ಎಮ್ಮೆಗಳನ್ನು ಖರೀದಿಸಿ ತಂದು ಸ್ವಂತ ಜಮೀನಿನಲ್ಲಿ ಶೆಡ್ ನಿರ್ಮಿಸಿ, ಹೈನುಗಾರಿಕೆಯಲ್ಲಿ ತೊಡಗಿಸಿ ಕೊಂಡರು.

ಪ್ರತಿದಿನ ಒಟ್ಟು 150 ಲೀಟರ್ ಹಾಲು ಉತ್ಪಾದನೆ ಯಾಗುತ್ತಿದ್ದು, ಬೆಳಿಗ್ಗೆ 70 ಲೀಟರ್ ಹಾಲನ್ನು ಮನೆಗಳಿಗೆ ಮಾರಾಟ ಮಾಡುತ್ತಿದ್ದಾರೆ. ಉಳಿದ ಹಾಲನ್ನು ಸ್ಥಳೀಯ ಹಾಲು ಉತ್ಪಾದಕರ ಸಂಘಕ್ಕೆ ಪೂರೈಸುತ್ತಿದ್ದಾರೆ. ಇನ್ನು ಹೆಚ್ಚು ಆಕಳುಗಳನ್ನು ಸಾಕಿ ಅಧಿಕ ಹಾಲು ಉತ್ಪಾದಿ ಸುವ ಗುರಿ ತಮ್ಮದಾಗಿದೆ ಎಂದು ಭೀಮಣ್ಣ ಹೇಳುತ್ತಾರೆ.

ಎಮ್ಮೆ ಮತ್ತು ಹಸುವಿನ ಗಂಜಲು ಶೇಖರಿಸಲು ತೊಟ್ಟಿ ನಿರ್ಮಿಸಿದ್ದಾರೆ. ಎರೆಹುಳು ಗೊಬ್ಬರ ತಯಾರಿಕೆ ಘಟಕ ನಿರ್ಮಿಸಿಕೊಂಡಿದ್ದು, ಅದರಲ್ಲಿ ಉತ್ಪಾದನೆಯಾಗುವ ಗೊಬ್ಬರವನ್ನು ತಮಗೆ ಬೇಕಾದಷ್ಟು ಬಳಸಿ ಉಳಿದದ್ದನ್ನು ಬೇರೆ ರೈತರಿಗೆ ಮಾರಾಟ ಮಾಡಿ ಲಾಭ ಗಳಿಸುತ್ತಿದ್ದಾರೆ. ಜತೆಗೆ ಕುರಿ ಸಾಕಾಣಿಕೆ ಪ್ರಾರಂಭಿಸಿದ್ದು ಅದರಲ್ಲಿಯೂ ಲಾಭ ಕಂಡು ಕೊಂಡಿದ್ದಾರೆ. ಇವರನ್ನು ಸಂಪರ್ಕಿಸಲು ದೂರವಾಣಿ ಸಂಖ್ಯೆ: 9880417237.

* * 

ತೋಟಗಾರಿಕೆಯಲ್ಲಿ ನಷ್ಟ ಅನುಭವಿಸಿದೆ. ಎದೆಗುಂದದೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗಿದ್ದೇನೆ. ಮಳೆಯ ಕೊರತೆ ಮುಂದುವರಿದರೆ ಮೇವಿನ ಕೊರತೆ ಉಂಟಾಗುವ ಭೀತಿ ಇದೆ
ಮರುವಳ್ಳಿ ಭೀಮಣ್ಣ, ಹೈನು ಕೃಷಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT