ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿರಜವ್ವನಿಗ ‘ಜೀವಿ’ಗೆ 105

Last Updated 22 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಅಣ್ಣನ ದಿನಚರಿಯಲ್ಲಿ ಹೆಚ್ಚಿನ ಬದಲಾವಣೆ ಏನೂ ಆಗಿಲ್ಲ. ಬೆಳಿಗ್ಗೆ ನಾಲ್ಕೂಮುಕ್ಕಾಲು ಐದಕ್ಕೆಲ್ಲಾ ಎದ್ದೇಳುತ್ತಿದ್ದವರು ಈಗ ಆರರಿಂದ ಆರೂವರೆ ಹೊತ್ತಿಗೆ ಎದ್ದೇಳುತ್ತಾರೆ. ಪಕ್ಕದ ಪಾರ್ಕ್‌ನಲ್ಲಿ ವಾಕಿಂಗ್‌ ಹೋಗ್ತಿದ್ರು. ಈಗ ಮನೆಯ ಒಳಗೆ ಮತ್ತು ವೆರಾಂಡಾದಲ್ಲಿಯೇ ನಡೆದಾಡುತ್ತಾರೆ’.

ಇಂದು (ಆಗಸ್ಟ್‌ 23) 105ನೇ ವಸಂತಕ್ಕೆ ಕಾಲಿಡುತ್ತಿರುವ ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರ ದಿನಚರಿ ಕುರಿತು ಮಗ ಅರುಣ್‌ ಜಿ.ವಿ. ಹೀಗೆ ಹೇಳುತ್ತಾರೆ.

ಜಿ. ವಿ. ಅವರು ಸದಾ ಉತ್ಸಾಹದ ಚಿಲುಮೆ. ಸಾಹಿತ್ಯದ ಓದು ಮತ್ತು ಬರವಣಿಗೆ ಇಂದಿಗೂ ನಡೆದಿದೆ. ‘ಅವರಿಗೆ ಚೈತನ್ಯ ನೀಡುವುದು ನಾಲ್ಕು ಸಂಗತಿ. ಮೊದಲನೆಯದು, ಓದು ಮತ್ತು ಬರವಣಿಗೆ ಎರಡನೆಯದು ತಮ್ಮ ಮೇಲೆ ವಿಶ್ವಾಸವಿಟ್ಟು ಪ್ರತಿದಿನ ಸಾಯಂಕಾಲ ಮನೆಗೆ ಬಂದು ಸಾಹಿತ್ಯದ ವಾತಾವರಣ ಕಟ್ಟಿಕೊಡುವ ಆತ್ಮೀಯರು, ಮೂರನೆಯದು ವಾಯುವಿಹಾರ, ನಾಲ್ಕನೆಯದು ಮೊಮ್ಮಗಳ ಇಬ್ಬರು ಮಕ್ಕಳೊಂದಿಗೆ ವಾರಾಂತ್ಯದಲ್ಲಿ ಹರಟೆ, ಆಟ.

‘ಬರಿಗಣ್ಣಿನಲ್ಲೇ ಈಗಲೂ ಓದುತ್ತಾರೆ. ಆದರೆ ಕೆಲದಿನಗಳಿಂದ ಕಣ್ಣು ಮತ್ತು ಕಿವಿ ಸ್ವಲ್ಪ ಮಂದವಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಆದರೂ, ಮನೆಗೆ ಬರುವ ಪ್ರಜಾವಾಣಿ, ಡೆಕ್ಕನ್‌ ಹೆರಾಲ್ಡ್‌, ಸಂಯುಕ್ತ ಕರ್ನಾಟಕ, ಕನ್ನಡಪ್ರಭ ಮತ್ತು ದಿ ಹಿಂದೂ ಪತ್ರಿಕೆಯ ಆಯ್ದ ಸುದ್ದಿಗಳನ್ನು, ಸಂಪಾದಕೀಯಗಳನ್ನು ತಪ್ಪದೇ ಓದುತ್ತಾರೆ. ಪುರವಣಿಗಳಲ್ಲಿ ಆಸಕ್ತಿ ಹುಟ್ಟಿಸಿದ ಬರಹಗಳನ್ನೂ ಓದುತ್ತಾರೆ. ತೀರಾ ಅನಿವಾರ್ಯ ಸಂದರ್ಭಗಳಲ್ಲಿ ಹೊಸ ಪುಸ್ತಕಗಳಿಗೆ ಮುನ್ನುಡಿ, ಮೊದಲ ಮಾತು, ಶುಭ ಹಾರೈಕೆ ಬರೀತಾರೆ, ಅವರಿಷ್ಟದ ಯಾವುದಾದರೂ ಟಿಪ್ಪಣಿ ಬರೀತಾರೆ... ಮೊನ್ನೆ ಸ್ವಾತಂತ್ರ್ಯೋತ್ಸವದಂದು ರಾಮಕೃಷ್ಣಾಶ್ರಮದವರ ಒತ್ತಾಯಕ್ಕೆ ಕಟ್ಟುಬಿದ್ದು ಧ್ವಜಾರೋಹಣ ಮಾಡಲು ಹೋಗಿದ್ದರು. ಅಲ್ಲದೆ, ದೇಶ ವಿಭಜನೆಯ ಸಾಧಕ ಬಾಧಕಗಳ ಬಗ್ಗೆ ನಿರರ್ಗಳವಾಗಿ 15 ನಿಮಿಷ ಮಾತನಾಡಿದರು.

‘ದೈಹಿಕ ಮತ್ತು ಮಾನಸಿಕ ಆರೋಗ್ಯ ಸದೃಢವಾಗಿರುವುದರಿಂದ ಬಯಸಿದ ಕೆಲಸ ಕಾರ್ಯಗಳನ್ನು ಮಾಡುತ್ತಿರುತ್ತಾರೆ. ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ ಅಂಶ ಕೂಡಾ ಸಾಮಾನ್ಯ ಮಟ್ಟದಲ್ಲಿದೆ’ ಎಂದು ಅರುಣ್‌ ವಿವರಿಸುತ್ತಾರೆ. ನಮ್ಮ ನಡುವಿನ ‘ನಡೆದಾಡುವ ವಿಶ್ವಕೋಶ’ ಜಿ.ವಿ ಅವರು ದೀರ್ಘಕಾಲ ನಮ್ಮೊಂದಿಗಿರಲಿ ಎಂಬುದು ಅವರ ಅಭಿಮಾನಿಗಳ ಹಾರೈಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT