ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲಿಷ್‌ ನಾಮಫಲಕ ತೆರವಿಗೆ 15 ದಿನ ಗಡುವು

Last Updated 22 ಆಗಸ್ಟ್ 2017, 19:53 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ರಕ್ಷಣಾ ವೇದಿಕೆಯ (ಪ್ರವೀಣ್‌ ಕುಮಾರ್‌ ಶೆಟ್ಟಿ ಬಣ) ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ ಘಟಕದ ವತಿಯಿಂದ ಕನ್ನಡ ನಾಮಫಲಕಗಳ ಜಾಗೃತಿ ಅಭಿಯಾನವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.

ನಾಗವಾರದ ಎಲಿಮೆಂಟ್ ಮಾಲ್‍ನಿಂದ ಆರಂಭವಾಗಿ ಥಣಿಸಂದ್ರ ಮುಖ್ಯರಸ್ತೆ, ನರೇಂದ್ರ ಟೆಂಟ್ ರಸ್ತೆ, ಎಸ್‍ಪಿಆರ್ ಬಿಡಿಎ ಸಂಕೀರ್ಣ, ಕಮ್ಮನಹಳ್ಳಿ ಮುಖ್ಯರಸ್ತೆ ಮೂಲಕ ಬಾಣಸವಾಡಿಯ ಒರಾಯನ್ ಮಾಲ್‍ವರೆಗೆ ಜಾಥಾ ನಡೆಯಿತು.

ಕಾರ್ಯಕರ್ತರು, ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎನ್ನುವ ಘೋಷಣೆಗಳನ್ನು ಕೂಗುತ್ತಾ ಸಾಗಿದರು. ರಾಜ್ಯದಲ್ಲಿ ಕನ್ನಡ ಭಾಷೆಯೇ ಸಾರ್ವಭೌಮ. ಕನ್ನಡವನ್ನು ಎಲ್ಲರೂ ಗೌರವಿಸುವಂತೆ ಮನವಿ ಮಾಡಿದರು.

ಸರ್ವಜ್ಞನಗರ ವ್ಯಾಪ್ತಿಯ ವಾಣಿಜ್ಯ ಮಳಿಗೆಗಳ ಮಾಲೀಕರಿಗೆ ಮತ್ತು ಬಾಡಿಗೆದಾರರಿಗೆ ಗುಲಾಬಿ ಹೂವು ಹಾಗೂ ಕರಪತ್ರ ನೀಡಿದ ಕಾರ್ಯಕರ್ತರು, ಇಂಗ್ಲಿಷ್ ನಾಮಫಲಕಗಳನ್ನು 15 ದಿನದೊಳಗೆ ತೆರವುಗೊಳಿಸಬೇಕು ಎಂದು ಸೂಚಿಸಿದರು.

‘ಅನ್ಯ ರಾಜ್ಯಗಳಿಂದ ಇಲ್ಲಿಗೆ ಬಂದು ವ್ಯಾಪಾರ–ವ್ಯವಹಾರಲ್ಲಿ ತೊಡಗಿರುವುದು ಸ್ವಾಗತಾರ್ಹ. ರಾಜ್ಯದಲ್ಲಿ ಕನ್ನಡ ಆಡಳಿತ ಭಾಷೆಯಾಗಿದೆ. ಎಲ್ಲರೂ ಕನ್ನಡದಲ್ಲೇ ವ್ಯವಹರಿಸಬೇಕು. ನಾಮಫಲಕಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು ಎಂಬ ಕಾನೂನು ಇದೆ. ಆದರೆ, ಬಹುತೇಕ ಮಳಿಗೆಗಳು, ಮಾಲ್‌ಗಳು ಕನ್ನಡವನ್ನು ಕಡೆಗಣಿಸಿವೆ’ ಎಂದು ವೇದಿಕೆಯ ಅಧ್ಯಕ್ಷ ಪ್ರವೀಣ್‍ ಕುಮಾರ್ ಶೆಟ್ಟಿ ದೂರಿದರು.

‘ನೆಲ–ಜಲ ಹಾಗೂ ಸೌಲಭ್ಯಗಳನ್ನು ಬಳಸಿಕೊಂಡ ಮೇಲೆ ಇಲ್ಲಿನ ಭಾಷೆಯನ್ನೂ ಕಲಿಯಬೇಕಾದದ್ದು ಎಲ್ಲರ ಕರ್ತವ್ಯ. ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ 70ರಷ್ಟು ಕನ್ನಡದ ಅಕ್ಷರಗಳಿರಬೇಕು. ಇಲ್ಲದಿದ್ದರೆ, ಇಂಗ್ಲಿಷ್‌ ಭಾಷೆಯಲ್ಲಿರುವ ನಾಮಫಲಕಗಳಿಗೆ ಮಸಿ ಬಳಿಯುತ್ತೇವೆ. ಕನ್ನಡಕ್ಕೆ ಆದ್ಯತೆ ನೀಡದ ಮಳಿಗೆಯ ಪರವಾನಗಿಯನ್ನು ರದ್ದುಪಡಿಸುವಂತೆ ಬಿಬಿಎಂಪಿಗೆ ದೂರು ನೀಡುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

‘ನಗರದ ಮಾಲ್‌ಗಳಲ್ಲಿ ಇಂಗ್ಲಿಷ್‌, ಹಿಂದಿ ಭಾಷಿಕರಿಗೇ ಕೆಲಸ ನೀಡಲಾಗುತ್ತಿದೆ. ಕನ್ನಡವನ್ನು ಕಡೆಗಣಿಸುವವರಿಗೆ ತಕ್ಕ ಪಾಠ ಕಲಿಸುತ್ತೇವೆ’ ಎಂದು ಘಟಕದ ಅಧ್ಯಕ್ಷ ಪರಮೇಶ್‌ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT