ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಭವದ ಮಾರಮ್ಮದೇವಿ ತುಂಬಲು ಪರಿಷೆ

Last Updated 23 ಆಗಸ್ಟ್ 2017, 8:43 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಚಳ್ಳಕೆರೆ ತಾಲ್ಲೂಕು ತಳಕು ಹೋಬಳಿ ಗೌರಸಮುದ್ರದಲ್ಲಿ ಮಂಗಳವಾರ ಸುಪ್ರಸಿದ್ಧ ಮಾರಮ್ಮದೇವಿ ತುಂಬಲು ಪರಿಷೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನಡೆಯಿತು. ಹತ್ತಾರು ಅಪ್ಪಟ ಬುಡಕಟ್ಟು ಸಂಸ್ಕೃತಿಗಳನ್ನು ಬಿಂಬಿಸುವ ಜಾತ್ರೆ ಎಂದೇ ಹೆಸರು ಮಾಡಿರುವ ಹಾಗೂ ರಾಜ್ಯ ಹಾಗೂ ಆಂಧ್ಪ್ರದೇಶದ ಸಹಸ್ರಾರು ಭಕ್ತರನ್ನು ಕಲೆ ಒಂದಡೆ ಹಾಕುವ ವೈಶಿಷ್ಟ್ಯದ ‘ಗೌಸಂದ್ರ ಮಾರಮ್ಮ’ ಜಾತ್ರೆಯನ್ನು ಪ್ರತಿವರ್ಷ ಶ್ರಾವಣ ಮಾಸದ ಮುಕ್ತಾಯದಲ್ಲಿ ಬರುವ ಅಮಾವಾಸ್ಯೆ ನಂತರದ ಮಂಗಳವಾರ ನಡೆಸಿಕೊಂಡು ಬರಲಾಗುತ್ತಿದೆ.

ಇಲ್ಲಿ ಬೇವಿನಸೀರೆ ಹರಕೆ, ಬಾಯಿಗೆ ಬೀಗ, ಕುರಿ–ಕೋಳಿ, ದವಸ ಧಾನ್ಯ, ತರಕಾರಿಗಳನ್ನು ಅರ್ಪಿಸುವುದು ಐತಿಹ್ಯವಾಗಿದೆ. ಬೆಳಿಗ್ಗೆ 11ಕ್ಕೆ ದೇವಸ್ಥಾನದಿಂದ ದೇವಿಯನ್ನು ಮೆರವಣಿಗೆ ಮೂಲಕ ತುಂಬಲು ಸ್ಥಳಕ್ಕೆ ಕರೆದುಕೊಂಡು ಬರಲಾಯಿತು. 12.30ಕ್ಕೆ ದೇವಿಯನ್ನು ಪೌಳಿ ಸುತ್ತ ಎರಡು ಸುತ್ತು ಪ್ರದಕ್ಷಿಣೆ ಹಾಕಿಸಿದ ನಂತರ ಕಟ್ಟೆ ಮೇರೆ ಕೂರಿಸಲಾಯಿತು. ಈ ವೇಳೆ ಬುಡಕಟ್ಟು ಸಂಸ್ಕೃತಿಗಳಾದ ಉರುಮೆ, ತಪ್ಪಡೆ, ಡೋಲು, ಚಾಮರ, ನವಿಲುಗರಿ, ಬೇವಿನ ಕೊಂಬೆ ಪ್ರದರ್ಶನ ಗಮನ ಸೆಳೆದವು.

ದೇವಿ ಬರುವಾಗ ದಾರಿಯುದ್ದಕ್ಕೂ ಹರಕೆ ಹೊತ್ತ ಭಕ್ತರು ಕೋಳಿ, ಕಾಳುಮೆಣಸು, ಮಂಡಕ್ಕಿ, ಕರಿಮಣಿ, ಬಾಳೆಹಣ್ಣು, ತಮ್ಮ ಹೊಲಗಳಲ್ಲಿ ಬೆಳೆದಿದ್ದ ಹೂವು, ದವಸಗಳನ್ನು ತೂರಿದರು. ಈ ವೇಳೆ ಮಹಿಳೆಯರು ಕರಿಮೆಣಸು, ಕರಿಮಣಿಗಳನ್ನು ಆರಿಸಿಕೊಂಡರು.

ಕಟ್ಟೆ ಮೇಲೆ ದೇವಿಯನ್ನು ಪ್ರತಿಷ್ಠಾಪಿಸಿದ ನಂತರ ಎದುರಿನ ದೀಪಸ್ತಂಭವನ್ನು ಏರಿದ ಮೀಸಲು ಭಕ್ತರು ದೀಪ ಹೊತ್ತಿಸಿದರು. ಹರಕೆ ಹೊತ್ತ ಸಾವಿರಾರು ಭಕ್ತರು ಬೆಳಿಗ್ಗೆಯಿಂದೇ ಬೇವಿನಸೀರೆ ಸೇರಿದಂತೆ ಹಲವು ಹರಕೆ ಸಲ್ಲಿಕೆ ಮಾಡಿದರು.

ಶಾಸಕ ಎಸ್. ತಿಪ್ಪೇಸ್ವಾಮಿ, ವಿಧಾನ ಪರಿಷತ್‌ ಸದಸ್ಯೆ ಜಯಮ್ಮ ಬಾಲರಾಜ್‌, ನಂಜುಂಡಪ್ಪ ವರದಿ ಅನುಷ್ಠಾನ ಉಸ್ತುವಾರಿ ಸಮಿತಿ ಅಧ್ಯಕ್ಷ ಎನ್‌.ವೈ.ಗೋಪಾಲಕೃಷ್ಣ, ತಹಶೀಲ್ದಾರ್‌ ಕಾಂತರಾಜ್, ಜಿಲ್ಲಾಪಂಚಾಯ್ತಿ ಸದಸ್ಯ ಡಾ.ಬಿ.ಯೋಗೇಶ್‌ಬಾಬು ಉಪಸ್ಥಿತರಿದ್ದರು. ಬುಧವಾರ ಮಧ್ಯಾಹ್ನ 3ಕ್ಕೆ ಗೌರಸಮುದ್ರ ದೇವಸ್ಥಾನ ಮುಂಭಾಗ ಸಿಡಿ ಮಹೋತ್ಸವ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT