ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಗಷ್ಟೇ ನೆನಪಾಗುವ ದಲಿತರು

Last Updated 30 ಆಗಸ್ಟ್ 2017, 6:03 IST
ಅಕ್ಷರ ಗಾತ್ರ

ಹಾವೇರಿ: ‘ಚುನಾವಣೆ ಬಂದಾಗ ಬಿಜೆಪಿಗೆ ದಲಿತರು ಮತ್ತು ಬಸವಣ್ಣನವರ ನೆನಪಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಹೇಳಿದರು. ನಗರದಲ್ಲಿ ಮಂಗಳವಾರ ಕಾಂಗ್ರೆಸ್‌ ಬೂತ್‌ ಸಮಿತಿ ಸದಸ್ಯರು ಹಾಗೂ ಕಾರ್ಯಕರ್ತರ ಜಿಲ್ಲಾ ಮಟ್ಟದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. 

‘ನಾವು ಹುಟ್ಟು ದಲಿತರು. ಬಸವಣ್ಣನವರ ತತ್ವದಂತೆ ಸಮಾನತೆ ಹಾಗೂ ನುಡಿದಂತೆ ನಡೆದಿದ್ದೇವೆ. ಬಿಜೆಪಿಯಂತೆ ಒಡೆದು ಆಳುವ ನೀತಿ ಅನುಸರಿಸಿಲ್ಲ’ ಎಂದ ಅವರು, ‘ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಟ ನಡೆಯುವುದಿಲ್ಲ’ ಎಂದರು.

‘ಸಮಾನತೆಗಾಗಿ ಬಸವಣ್ಣನವರು ಹೋರಾಡಿದರೆ, ಬಿಜೆಪಿಯ ರಾಮಾ ಜೋಯಿಸರು ಮೀಸಲಾತಿ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದರು’ ಎಂದರು.  ‘2013ರಲ್ಲಿ ‘ಕಾಂಗ್ರೆಸ್‌ ನಡಿಗೆ ಜನರ ಬಳಿಗೆ’ ಎಂಬ ಕಾರ್ಯಕ್ರಮದ ಮೂಲಕ ಅಧಿಕಾರಕ್ಕೆ ತಂದಿದ್ದೇವೆ. 2018ರಲ್ಲಿ ‘ಮನೆ ಮನೆಗೆ ಕಾಂಗ್ರೆಸ್’ ಮೂಲಕ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ. ಈ ನಿಟ್ಟಿನಲ್ಲಿ ಬೂತ್ ಪದಾಧಿಕಾರಿಗಳ ಜವಾಬ್ದಾರಿ ಮಹತ್ತರವಾಗಿದೆ’ ಎಂದರು.

‘ನಾವು ಸ್ವಚ್ಛ ಆಡಳಿತವನ್ನು ನೀಡಿದ್ದೇವೆ. ಒಂದೇ ಅವಧಿಯನ್ನು ಮೂರು ಮುಖ್ಯಮಂತ್ರಿಗಳನ್ನು ಮಾಡಿಲ್ಲ. ಆದರೆ, ಬಿಜೆಪಿ ಸುಳ್ಳು ಹೇಳಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದೆ. ಅಂದು, ಆಧಾರ್, ಜಿಎಸ್‌ಟಿ, ವಿದೇಶಿ ಬಂಡವಾಳ ಹೂಡಿಕೆಗಳ ಬಗ್ಗೆ ಮೋದಿ ಏನು ಹೇಳಿದ್ದರು ಎಂದು ನೆನಪು ಮಾಡಿಕೊಳ್ಳಲಿ’ ಎಂದರು.

‘ಸಿದ್ದರಾಮಯ್ಯವರ ಮನೆಯಲ್ಲಿ ಅಕ್ಕಿ ಇರಲಿಲ್ಲ. ‘ಅನ್ನಭಾಗ್ಯ’ ನೀಡಿದರು. ಯಡಿಯೂರಪ್ಪನವರಿಗೆ ಮೂರು ಹೊತ್ತು ಅನ್ನ ಇತ್ತು. ಅಧಿಕಾರಕ್ಕೆ ಬಂದಾಗ ಬಡವರ ನೆನಪೇ ಆಗಲಿಲ್ಲ’ ಎಂದು ಲೇವಡಿ ಮಾಡಿದರು.

‘ನಾವು ರೈತರಿಗೆ ಬೀಜ–ಗೊಬ್ಬರ, ಸಾಲಮನ್ನಾ, ಪರಿಹಾರ ಕೊಟ್ಟೆವು. ಹೆಗಲಿಗೆ ಹಸಿರು ಶಾಲು ಹಾಕಿಕೊಂಡು ಗುಂಡು ಹಾಕಿಲ್ಲ’ ಎಂದ ಅವರು, ‘ರೈತರು ಆತ್ಮಹತ್ಯೆ ಮಾಡಿದ ಜಿಲ್ಲೆಯ ಮೈದೂರಕ್ಕೆ ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಬಂದರು. ಪರಿಹಾರ ಹೆಚ್ಚಿಸಲು ಸಲಹೆ ನೀಡಿದರು. ಆದರೆ, ಪ್ರಧಾನಿ ನರೇಂದ್ರ ಮೋದಿ ಅಥವಾ ಕೃಷಿ ಸಚಿವರು ಆತ್ಮಹತ್ಯೆ ಮಾಡಿಕೊಂಡ ರಾಜ್ಯದ ಒಬ್ಬ ರೈತರ ಮನೆಗೂ ಬಂದಿಲ್ಲ’ ಎಂದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು,‘ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ನಾಯಕತ್ವದ ವಿರುದ್ಧ ಯಾರೂ ಧ್ವನಿ ಎತ್ತಿಲ್ಲ. ಅವರು ಸಕ್ರಿಯ ರಾಜಕಾರಣಕ್ಕೆ ಬಂದು 13 ವರ್ಷಗಳಾಗಿವೆ. ಬೆಳೆಯಲು ಸಮಯ ಬೇಕಾಗಿತ್ತು’ ಎಂದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಸ್ಪರ್ಧಿಸಬಹುದು. ಜನ ತೀರ್ಮಾನ ಮಾಡುತ್ತಾರೆ’ ಎಂದು ಚಿತ್ರದುರ್ಗ ಕ್ಷೇತ್ರದಿಂದ ಮಾದಾರ ಚನ್ನಯ್ಯ ಸ್ವಾಮೀಜಿ ಬಿಜೆಪಿಯಿಂದ ಸ್ಪರ್ಧಿಸುತ್ತಾರೆ ಹಾಗೂ ಚಿತ್ರನಟ ಉಪೇಂದ್ರ ರಾಜಕೀಯ ಪ್ರವೇಶ ಕುರಿತ ಪ್ರಶ್ನೆಗೆ ಉತ್ತರಿಸಿದರು. ‘ಜನಾರ್ದನ ಪೂಜಾರಿ ವೈಯಕ್ತಿಕ ಅಭಿಪ್ರಾಯದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಬಗ್ಗೆ ಹೈಕಮಾಂಡ್ ಗಮನಕ್ಕೆ ತಂದಿದ್ದೇವೆ. ಅವರು ನಿರ್ಧರಿಸುತ್ತಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT