ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 90ರಷ್ಟು ಬಿತ್ತನೆ, ರೈತರ ಮೊಗದಲ್ಲಿ ಸಂತಸ

Last Updated 30 ಆಗಸ್ಟ್ 2017, 6:37 IST
ಅಕ್ಷರ ಗಾತ್ರ

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ರೈತರಲ್ಲಿ ಭಯ ಹುಟ್ಟಿಸಿದ್ದ ಮುಂಗಾರು ಮಳೆ ಈಗ ಸತತವಾಗಿ ಸುರಿಯುವ ಮೂಲಕ ಅವರ ಮೊಗದಲ್ಲಿ ಸಂತಸ ಮೂಡಿಸಿದೆ. ಕಳೆದ ತಿಂಗಳಿಂದ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿದ್ದು ಬಿತ್ತನೆ ಪ್ರಮಾಣ ನಿರೀಕ್ಷೆಗೂ ಮೀರಿ ಹೆಚ್ಚಳವಾಗಿದೆ. ತಂಬ್ರಹಳ್ಳಿ ಹೋಬಳಿಯಲ್ಲಿ ಭಾರಿ ಮಳೆಯಾಗಿದ್ದರೆ, ಹಂಪಸಾಗರ, ಕೋಗಳಿ ಮತ್ತು ಹಗರಿಬೊಮ್ಮನಹಳ್ಳಿ ಹೋಬಳಿಗಳಲ್ಲಿ ಸರಾಸರಿ ಮಳೆಯಾಗಿದೆ.

ಜೂನ್‌ ಕೊನೆ ವಾರದಲ್ಲಿ ಕೇವಲ ಶೇ12ರಷ್ಟಿದ್ದ ಬಿತ್ತನೆ ಪ್ರಮಾಣ, ಈಗ ಶೇ 90 ದಾಟಿದೆ. ತಾಲ್ಲೂಕಿನಲ್ಲಿ ಬಿತ್ತನೆ ಗುರಿ ಪ್ರದೇಶ 47 ಸಾವಿರ ಹೆಕ್ಟೇರ್‌ ನಷ್ಟಿದ್ದು, ಇಲ್ಲಿಯವರೆಗೂ 42938 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಅದರಲ್ಲಿ ಮಳೆಯಾಶ್ರಿತ ಗುರಿ 31800 ಹೆಕ್ಟೇರ್‌ ಇದ್ದು, ಉತ್ತಮ ಮಳೆಯಾಗಿರು ವುದರಿಂದ 34192 ಹೆಕ್ಟೇರ್‌ ಬಿತ್ತನೆಯಾಗಿದೆ.

ನೀರಾವರಿ ಪ್ರದೇಶದ ಗುರಿ 15200 ಹೆಕ್ಟೇರ್ ಇದ್ದು, 8746 ಹೆಕ್ಟೇರ್ ಬಿತ್ತನೆಯಾಗಿದೆ. ಜೋಳದ ಬಿತ್ತನೆ ಅವಧಿಯಲ್ಲಿ ಮಳೆ ಕೈ ಕೊಟ್ಟಿದ್ದು, ಬಿತ್ತನೆ ಪ್ರಮಾಣ ಕಡಿಮೆ ಆಗಲು ಪ್ರಮುಖ ಕಾರಣ.  ಸತತ ಬರಗಾಲದ ಹಿನ್ನೆಲೆಯಲ್ಲಿ ಕೊಳವೆ ಬಾವಿಗಳಲ್ಲಿ ಅಂತರ್ಜಲ ಪ್ರಮಾಣ ಕುಸಿದಿರುವು ದರಿಂದ  ಭತ್ತ, ಶೇಂಗಾ, ಹತ್ತಿ, ಕಬ್ಬು ಬಿತ್ತನೆ ಪ್ರಮಾಣ ಕಡಿಮೆ ಆಗಿದೆ. ಮಳೆಯಾಶ್ರಿತ ಪ್ರದೇಶದಲ್ಲಿ ಸಿರಿಧಾನ್ಯಗಳ ಬಿತ್ತನೆ ಪ್ರಮಾಣ ಹೆಚ್ಚಾಗಿದ್ದು, ರೈತರು ಇವುಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ.

ಸತತ ಮೂರು ವರ್ಷಗಳಿಂದ ಬರದಿಂದ ತತ್ತರಿಸಿದ್ದ ತಾಲ್ಲೂಕಿನಲ್ಲಿ ಮುಂಗಾರು ತಡವಾಗಿ ಪ್ರವೇಶ ಮಾಡಿದ್ದರೂ ಸಿರಿಧಾನ್ಯಗಳಾದ ನವಣೆ, ರಾಗಿ ಈ ಬಾರಿ ರೈತರನ್ನು ಕೈ ಹಿಡಿಯಬಹುದೆಂಬ ನಿರೀಕ್ಷೆ ರೈತರಲ್ಲಿದೆ. ಸೆಪ್ಟೆಂಬರ್‌ ತಿಂಗಳಲ್ಲಿ ಅಲ್ಪ ಪ್ರಮಾಣದ ಮಳೆಯಾದರೂ ಸಾಕು, ಉತ್ತಮ ಫಸಲು ಪಡೆಯಬಹುದು ಎನ್ನುತ್ತಾರೆ. ಬಹುತೇಕ ರೈತರು.

ತಾಲ್ಲೂಕಿನಲ್ಲಿ ಉತ್ತಮ ಬೆಳೆ ನಿರೀಕ್ಷೆ
‘ತಾಲ್ಲೂಕಿನಲ್ಲಿ ಕಳೆದ ತಿಂಗಳಿನಿಂದ ಉತ್ತಮ ಮಳೆ ಆಗುತ್ತಿರುವುದರಿಂದ ರೈತರು ಸಂತಸದಲ್ಲಿದ್ದಾರೆ. ರಾಗಿ, ನವಣೆ ಬಿತ್ತನೆ ಪ್ರಮಾಣ ಈ ವರ್ಷದಲ್ಲಿ ಹೆಚ್ಚಾಗಿದೆ. ಕೇವಲ 90ದಿನಗಳಲ್ಲಿ ಫಸಲು ರೈತರ ಕೈ ಸೇರುತ್ತದೆ, ಉತ್ತಮ ಬೆಲೆಯೂ ಇದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಅಗತ್ಯವಾದ ರಾಸಯನಿಕ ಗೊಬ್ಬರ, ಕ್ರಿಮಿನಾಶಕ ದಾಸ್ತಾನು ಮಾಡಲಾಗಿದೆ.’
ಎಚ್‌.ನಾಗರಾಜ,
ತಾಂತ್ರಿಕ ಅಧಿಕಾರಿ, ಕೃಷಿ ಇಲಾಖೆ

* * 

ಮಳೆ ಕೈಕೊಟ್ಟಿದ್ದರಿಂದ ಚಿಂತೆಯಾಗಿತ್ತು, ಈ ವರ್ಷವೂ ಬೇಸಾಯ ಮಾಡುವ ಕುರಿತು ಏನೂ ತೋಚದಾಗಿತ್ತು, ಈಗ ಮಳೆ ಬಂದಿರುವುದರಿಂದ ನವಣೆ, ರಾಗಿ ಬೆಳೆಗಳು ಉತ್ತಮವಾಗಿವೆ
ಭರಮಪ್ಪ, ಮೋರಿಗೇರಿ ರೈತ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT