ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಟಿಯೋಸ್‌ನಲ್ಲಿ ಎಬಿಎಸ್‌-ಇಬಿಡಿ ಮತ್ತು ಏನೆಲ್ಲಾ...

ಕಾರುಗಳಲ್ಲಿನ ಸುರಕ್ಷತಾ ಸವಲತ್ತುಗಳ ಬಗ್ಗೆ ಅರಿವು ಮೂಡಿಸುವ ಟೊಯೊಟಾ ಕಾರ್ಯಕ್ರಮ
Last Updated 30 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

ಈಗ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರುವ ಮತ್ತು ಹೆಚ್ಚು ಮಾರಾಟವಾಗುತ್ತಿರುವ ಹಲವು ಕಾರ್‌ಗಳಲ್ಲಿ ಹಲವು ಸುರಕ್ಷತಾ ಸವಲತ್ತುಗಳಿವೆ. ಆದರೆ ಖರೀದಿ ವೇಳೆ ಗ್ರಾಹಕರಿಗೆ ಅವುಗಳ ಬಗ್ಗೆ ಮಾಹಿತಿ ನೀಡುವ ಮತ್ತು ಅರಿವು ಮೂಡಿಸುವ ಕೆಲಸವನ್ನು ಬಹುತೇಕ ಕಂಪೆನಿಗಳು ಮಾಡುತ್ತಿಲ್ಲ. ಹೀಗಾಗಿ ಕಾರಿನಲ್ಲಿರುವ ಸುರಕ್ಷತಾ ಸವಲತ್ತುಗಳ ಉಪಯೋಗ ಪಡೆಯುವ ಬಗ್ಗೆ ಬಹುತೇಕ ಬಳಕೆದಾರರಿಗೆ ಅರಿವು ಇರುವುದಿಲ್ಲ.

ಟೊಯೊಟಾ ಕಳೆದ ವಾರ ಬೆಂಗಳೂರಿನಲ್ಲಿ 'ಎಟಿಯೋಸ್ ಸೇಫ್ಟಿ ಎಕ್ಸ್‌ಪಿರಿಯೆನ್ಸ್' ಕಾರ್ಯಕ್ರಮವನ್ನು ಆಯೋಜಿಸಿತ್ತು. ಎಟಿಯೋಸ್‌ ಸೆಡಾನ್, ಅದೇ ಸರಣಿಯ ಲಿವಾ ಮತ್ತು ಲಿವಾ ಕ್ರಾಸ್‌ ಹ್ಯಾಚ್ ಬ್ಯಾಕ್‌ಗಳಲ್ಲಿ ಇರುವ ಸುರಕ್ಷತಾ ಸವಲತ್ತುಗಳ ಬಗ್ಗೆ, ಅವುಗಳ ಅನುಕೂಲಗಳ ಬಗ್ಗೆ ಮತ್ತು ಅವುಗಳ ಬಳಕೆ ಹೇಗೆ ಎಂಬುದನ್ನು ಗ್ರಾಹಕರಿಗೆ ವಿವರಿಸುವ ಉದ್ದೇಶದಿಂದ ಟೊಯೊಟಾ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. 'ಪ್ರಜಾವಾಣಿ'ಯನ್ನೂ ಈ ಕಾರ್ಯಕ್ರಮಕ್ಕೆ ಟೊಯೊಟಾ ಆಹ್ವಾನಿಸಿತ್ತು.

ಎಟಿಯೋಸ್ ಸರಣಿಯ ಎಲ್ಲಾ ಕಾರ್‌ಗಳಲ್ಲಿ ಎಬಿಎಸ್‌ ಇದೆ. ಎಬಿಎಸ್‌ ಎಂಬುದು ಆ್ಯಂಟಿ (anti) ಲಾಕ್‌ ಬ್ರೇಕಿಂಗ್ ಸಿಸ್ಟಂ ಎಂಬುದರ ಸಂಕ್ಷಿಪ್ತ ರೂಪ. ಈ ಸವಲತ್ತು ಭಾರತೀಯ ಕಾರುಗಳಿಗೆ ಬಂದು ಸರಿಸುಮಾರು ಎರಡು ದಶಕ ಕಳೆದಿದೆ. ಈ ಸವಲತ್ತು ಇದ್ದಲ್ಲಿ ತುರ್ತು ಸಂದರ್ಭದಲ್ಲಿ ಗಕ್ಕನೆ ಬ್ರೇಕ್‌ ಒತ್ತಿದಾಗ ಸ್ಟೀರಿಂಗ್ ತಿರುಗಿಸಲಾಗದಂತೆ ಬಂಧಿಯಾಗುವುದನ್ನು ತಪ್ಪಿಸುತ್ತದೆ. ಎಬಿಎಸ್‌ ಇಲ್ಲದ ಕಾರ್‌ಗಳಲ್ಲಿ ಗಕ್ಕನೆ ಬ್ರೇಕ್‌ ಒತ್ತಿದರೆ ಸ್ಟೀರಿಂಗ್ ಬಂದಿಯಾಗುವುದರಿಂದ ಕಾರಿನ ಚಲನೆಯ ದಿಕ್ಕನ್ನು ಬದಲಿಸಲು ಸಾಧ್ಯವಾಗುವುದಿಲ್ಲ. ಬದಲಿಗೆ ಕಾರಿನ ಚಕ್ರಗಳು ಸ್ಕಿಡ್‌ ಆಗುತ್ತಾ ಅದು ನಿಲ್ಲುವವರೆಗೂ ಒಂದೇ ದಿಕ್ಕಿನಲ್ಲಿ ಚಲಿಸುತ್ತದೆ. ಆದರೆ ಎಬಿಎಸ್‌ ಇದ್ದಲ್ಲಿ ಬ್ರೇಕ್‌ ಅನ್ನು ಮತ್ತೆ ಮತ್ತೆ ಸಡಿಲಿಸಿ ಹಿಡಿಯುತ್ತದೆ. ಹೀಗಾಗಿ ಸ್ಟೀರಿಂಗ್ ಬಂದಿಯಾಗುವುದಿಲ್ಲ. ಆದ ಕಾರಣ ಗಕ್ಕನೆ ಬ್ರೇಕ್ ಒತ್ತುವಂತಹ ತುರ್ತು ಸಂದರ್ಭದಲ್ಲೂ ಕಾರಿನ ಚಲನೆಯ ದಿಕ್ಕನ್ನು ಬದಲಿಸಲು ಅವಕಾಶವಿರುತ್ತದೆ. ಹೀಗಾಗಿ ಬಹುತೇಕ ಎಲ್ಲಾ ಚಾಲನಾ ಸನ್ನಿವೇಶಗಳಲ್ಲಿ ಎಬಿಎಸ್‌ ಉಪಯೋಗಕ್ಕೆ ಬರುತ್ತದೆ.

ಈ ಕಾರ್ಯಕ್ರಮದಲ್ಲಿ ನೀರು ಚೆಲ್ಲಿದ ರಸ್ತೆ ಮೇಲೆ ಎಬಿಎಸ್‌ ಅನ್ನು ಪರೀಕ್ಷಿಸಲು ಟೊಯೊಟಾ ಅವಕಾಶ ಮಾಡಿಕೊಟ್ಟಿತ್ತು. ಮೊದಲಿಗೆ ಎಬಿಎಸ್ ಇಲ್ಲದ ಕಾರ್ ಅನ್ನು ಆ ರಸ್ತೆಯಲ್ಲಿ ವೇಗವಾಗಿ ಚಲಾಯಿಸಿ ಗಕ್ಕನೆ ಬ್ರೇಕ್ ಒತ್ತಬೇಕಿತ್ತು.

ಹಾಗೆ ಮಾಡಿದಾಗ ಸ್ಟೀರಿಂಗ್ ಲಾಕ್‌ ಆಗಿ ಕಾರು ಒಂದೇ ದಿಕ್ಕಿನಲ್ಲಿ ಸ್ಕಿಡ್‌ ಆಗುತ್ತಾ, ಎದುರು ಇರಿಸಿದ್ದ ಪೋಲ್‌ಗೆ ಡಿಕ್ಕಿ ಹೊಡೆಯಿತು. ಆದರೆ ಅದೇ ಸನ್ನಿವೇಶದಲ್ಲಿ ಎಬಿಎಸ್‌ ಇದ್ದ ಕಾರ್‌ನ ದಿಕ್ಕು ಬದಲಿಸಿ, ಪೋಲ್‌ಗೆ ಡಿಕ್ಕಿಯಾಗದಂತೆ ತಪ್ಪಿಸಲು ಸಾಧ್ಯವಾಯಿತು. ಎಬಿಎಸ್‌ ಬಗ್ಗೆ ತಿಳಿಯದಿದ್ದರೂ ಅದರ ಬಳಕೆಗೆ ಒಗ್ಗಿಕೊಂಡಿರುವವರು, ಎಬಿಎಸ್‌ ಇಲ್ಲದ ಕಾರ್‌ಗಳನ್ನು ಚಾಲನೆ ಮಾಡುವಾಗ ತುಸು ಹೆದರಿದ್ದು ಕಾರ್ಯಕ್ರಮದ ವೇಳೆ ಅನುಭವಕ್ಕೆ ಬಂದಿತು. ಹೀಗಾಗಿ ಎಬಿಎಸ್‌ ಚಾಲಕನ ಆತ್ಮವಿಶ್ವಾಸವನ್ನು ಖಂಡಿತ ಹೆಚ್ಚಿಸುತ್ತದೆ.

ಇನ್ನು ಎಟಿಯೋಸ್ ಸರಣಿಯ ಕಾರುಗಳಲ್ಲಿ ಇರುವ ಮತ್ತೊಂದು ಪ್ರಮುಖ ಸುರಕ್ಷತಾ ಸವಲತ್ತು ಎಂದರೆ ಎಲೆಕ್ಟ್ರಾನಿಕ್ ಬ್ರೇಕ್ ಡಿಸ್ಟ್ರಿಬ್ಯೂಷನ್ ಅರ್ಥಾತ್ ಇಬಿಡಿ. ಕಾರಿನಲ್ಲಿ ಇಬ್ಬರೇ ಇರುವಾಗ, ಐದು ಮಂದಿ ಇದ್ದಾಗ ಮತ್ತು ಬೂಟ್‌ ಭರ್ತಿಯಾಗಿದ್ದಾಗ ಅದರ ಬ್ರೇಕಿಂಗ್‌ ಕಾರ್ಯ ವಿನ್ಯಾಸ ಬದಲಾಗಲು ಇಬಿಡಿ ಅನುಕೂಲ ಮಾಡಿಕೊಡುತ್ತದೆ. ಅಂದರೆ ಹೆಚ್ಚು ಭಾರವಿದ್ದಾಗ ಹಿಂಬದಿಯ ಚಕ್ರಗಳಿಗೆ ರವಾನೆಯಾಗುವ ಬ್ರೇಕಿಂಗ್ ಶಕ್ತಿಯ ಪ್ರಮಾಣ ಹೆಚ್ಚಿರುತ್ತದೆ. ಇದರಿಂದ ಬ್ರೇಕ್ ಒತ್ತಿದಾಗಲಿಂದ ಕಾರು ನಿಲ್ಲುವವರೆಗಿನ ಅಂತರ (ಬ್ರೇಕಿಂಗ್ ಡಿಸ್ಟೆನ್ಸ್) ಕಡಿಮೆ ಇರುತ್ತದೆ. ಇಬಿಡಿ ಇಲ್ಲದಿದ್ದಲ್ಲಿ ಪ್ರಯಾಣಿಕರ ಭಾರ ಹೆಚ್ಚಿದಂತೆ ಬ್ರೇಕಿಂಗ್ ಡಿಸ್ಟೆನ್ಸ್ ಸಹ ಹೆಚ್ಚುತ್ತಾ ಹೋಗುತ್ತದೆ. ಇದರ ಜತೆಯಲ್ಲೇ ರಸ್ತೆ ಕೆಸರುಮಯವಾಗಿದ್ದರೆ ಅಥವಾ ಒದ್ದೆಯಾಗಿದ್ದರೆ ಅಥವಾ ತೈಲ ಚೆಲ್ಲಿದ್ದರೆ ಅಂತಹ ಸಂದರ್ಭದಲ್ಲಿ ಗಕ್ಕನೆ ಬ್ರೇಕ್ ಒತ್ತಿದಾಗ ಹೆಚ್ಚು ರಸ್ತೆ ಹಿಡಿತ ಇರುವ ಚಕ್ರಕ್ಕಷ್ಟೇ ಹೆಚ್ಚು ಬ್ರೇಕಿಂಗ್ ಶಕ್ತಿ ರವಾನೆಯಾಗುವಂತೆ ಇಬಿಡಿ ಕೆಲಸ ಮಾಡುತ್ತದೆ. ಇದರಿಂದ ಕಾರು ಅಡ್ಡಾದಿಡ್ಡಿಯಾಗಿ ಜಾರುವುದು ತಪ್ಪುತ್ತದೆ. ಇದನ್ನೂ ನಿಯಂತ್ರಿತ ಟ್ರ್ಯಾಕ್‌ನಲ್ಲಿ ಪರೀಕ್ಷಿಸಲಾಯಿತು. ಅಂತಹ ಪರಿಸ್ಥಿತಿ ಯಲ್ಲೂ ಎಟಿಯೋಸ್ ಸುರಕ್ಷಿತವಾಗಿ ವರ್ತಿಸಿತು.

ಇನ್ನು ಎಟಿಯೋಸ್‌ ಸರಣಿಯ ಎಲ್ಲಾ ಮಾದರಿಗಳ ಎಲ್ಲಾ ಅವತರಣಿಕೆಗಳಲ್ಲೂ ಚಾಲಕನ ಮತ್ತು ಮುಂಬದಿ ಪ್ರಯಾಣಿಕನ ಏರ್‌ಬ್ಯಾಗ್‌ಗಳು ಇವೆ. ಆದರೆ ಸೀಟ್ ಬೆಲ್ಟ್‌ ಧರಿಸದಿದ್ದರೆ ಏರ್‌ಬ್ಯಾಗ್‌ ಉಪಯೋಗಕ್ಕೆ ಬರುವುದಿಲ್ಲ ಎಂಬುದರ ಬಗ್ಗೆ ಟೊಯೊಟಾ ಸಿಬ್ಬಂದಿ 'ವರ್ಚ್ಯುವಲ್ ರಿಯಾಲಿಟಿ' ಮೂಲಕ ಪ್ರಾತ್ಯಕ್ಷಿಕೆ ನೀಡಿದರು. ಜತೆಗೆ ಅಪಘಾತ ನಡೆದಾಗ ಡೋರ್‌ಗಳು ಲಾಕ್ ಆದರೆ ಹೆಡ್‌ ರೆಸ್ಟ್ ಬಳಸಿ ಗಾಜನ್ನು ಒಡೆಯಬಹುದು ಎಂಬ ಪ್ರಾತ್ಯಕ್ಷಿಕೆಯನ್ನೂ ನೀಡಿದರು.

ಕಾರು ಖರೀದಿಸಿದ ನಂತರ ಅವುಗಳಲ್ಲಿ ಇರುವ ಸುರಕ್ಷತಾ ಸವಲತ್ತುಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯ. ಈ ಬಗ್ಗೆ ಪ್ರತೀ ಕಾರ್‌ನ ಯೂಸರ್‌ ಮ್ಯಾನ್ಯುಯಲ್‌ನಲ್ಲಿ ಚಿತ್ರಸಹಿತ ವಿವರಣೆ ಇರುತ್ತದೆ. ಅದರ ಮೇಲೆ ಕಣ್ಣಾಡಿಸಬೇಕು ಅಷ್ಟೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT