ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮುಗುಳು ನಗೆ’ ಪ್ರೇಕ್ಷಕನ ಹೆಸರಿಗೆ ಬರೆದುಕೊಟ್ಟ ಆಸ್ತಿ!

Last Updated 31 ಆಗಸ್ಟ್ 2017, 19:30 IST
ಅಕ್ಷರ ಗಾತ್ರ

* ನಿಮ್ಮ ಇಷ್ಟುವರ್ಷದ ಚಿತ್ರಬದುಕಿನಲ್ಲಿ ‘ಮುಗುಳು ನಗೆ’ ಎಷ್ಟು ವಿಶೇಷವಾದದ್ದು?
ನನಗೆ ನಾನು ಮಾಡುವ ಪ್ರತೀ ಸಿನಿಮಾವೂ ಭಿನ್ನವಾದ ಸಿನಿಮಾ ಅಂತಲೇ ಅನಿಸುತ್ತಿರುತ್ತದೆ. ಆದರೆ ಇದು ತೀರಾ ಬೇರೆ ಥರ ಸಿನಿಮಾ. ಅದಕ್ಕೆ ಹಲವು ಕಾರಣಗಳಿವೆ. ಮೊದಲನೆಯದು ನನ್ನದು ಮತ್ತೆ ಗಣೇಶನ ಕಾಂಬಿನೇಷನ್ನು. ಸಂಬಂಧ, ಒಟ್ಟಿಗೆ ಉದ್ಧಾರ ಆದ ನೆನಪು... ಜತೆಗೆ ಕಳೆದ ಎಂಟ್ಹತ್ತು ವರ್ಷಗಳಲ್ಲಿ ನಾನು ಮಾಡಿಕೊಂಡು ಬಂದಿರುವ ಮ್ಯೂಸಿಕಲ್‌ ಜರ್ನಿಯ ವಿಸ್ತರಣೆ ಈ ಸಿನಿಮಾ. ಹಾಗೆಯೇ ಇದು ಇನ್ನೊಬ್ಬ ಗೆಳೆಯ ಹರಿಕೃಷ್ಣ  ಸಂಗೀತ ಸಂಯೋಜನೆಯ ನೂರನೇ ಸಿನಿಮಾ. ಸುಮಾರು ದೋಸ್ತಿಗಳು ವರ್ಕ್‌ ಆಗಿವೆ ಇಲ್ಲಿ. ಹಾಗೆಯೇ ತೀರಾ ಬೇರೆಯದೇ ಆದ ಕಥೆ. ಹಾಗಾಗಿ ಫಲಿತಾಂಶವೂ ತುಂಬಾ ದೊಡ್ಡ ರೀತಿಯಲ್ಲಿ ಬೇರೆಯದಾಗುತ್ತದೆ.

*  ಭಟ್ಟರು ಮತ್ತು ಗಣೇಶ್‌ ಕಾಂಬಿನೇಷನ್‌ ಅಂದ ತಕ್ಷಣ ನೆನಪಾಗುವುದು ‘ಮುಂಗಾರು ಮಳೆ’. ‘ಮುಗುಳು ನಗೆ’ಯೂ ಅಂಥದ್ದೇ ಇನ್ನೊಂದು ದಾಖಲೆ ಬರೆಯುತ್ತದೆ ಅನಿಸುತ್ತದೆಯೇ?
ಗೊತ್ತಿಲ್ಲ. ದಾಖಲೆಗಳು ನಾವು ಮಾಡುವುದು ಅಲ್ಲವೇ ಅಲ್ಲ. ಜನ ಮಾಡೂದು. ಅಷ್ಟೇ ಮಾರ್ಕ್ಸು ಸಿಗಬಹುದು. ಅಥವಾ ಅದಕ್ಕೆ ಹತ್ತುಪಟ್ಟು ಸಿಕ್ಕರೂ ಸಿಗಬಹುದು. ಅದನ್ನು ಹೆಂಗೆ ಹೇಳೂದು? ತುಂಬಾ ಮುಗ್ಧವಾಗಿ, ಪ್ರೀತಿಯಿಂದ ಕೆಲಸ ಮಾಡಬಹುದು ನಾವು. ಆದರೆ ದಾಖಲೆ ಬರೆಯುವುದು ನಮ್ಯಾರ ಕೈಯಲ್ಲೂ ಇರಲ್ಲ. ಅದನ್ನು ಜನರಿಗೆ ಬಿಟ್ಟುಬಿಡುವುದು ಒಳ್ಳೆಯದು. ಯಾಕೆಂದರೆ ಪ್ರೇಕ್ಷಕನಂಥ ಮ್ಯಾಜಿಸ್ಟ್ರೇಟು ಯಾರೂ ಇಲ್ಲ.

* ಹಿಂದಿನ ಹಲವು ಸಿನಿಮಾಗಳಲ್ಲಿ ನಿಮ್ಮ ಕಂಫರ್ಟ್‌ ಜೋನ್‌ನಿಂದ ಆಚೆ ಬಂದು ಪ್ರಯೋಗ ಮಾಡಿದ್ದಿರಿ. ಈಗ ಮತ್ತೆ ಪ್ರೇಮಕಥೆಯ ಅದೇ ಜಾಡಿಗೆ ಮರಳಿದ್ದೀರಾ? ಇದಕ್ಕೆ ಕಾರಣ ಏನು?
ಪ್ರೇಮಕಥೆ ಮಾಡುವುದು ಮಿಕ್ಕೆಲ್ಲ ಸಿನಿಮಾಗಳಿಗಿಂತ ಕಷ್ಟ. ಯಾಕಂದ್ರೆ ಅದು ಪ್ರೇಮಕಥೆ! ಯಾರೋ  ಎಂಬತ್ತು ವರ್ಷದ ನೋಡುಗನನ್ನೂ ಪ್ರೇಮಿಯಾಗಿಸಬೇಕಲ್ಲ. ಅದೇ ಸಮಯದಲ್ಲಿ ಇಂದಿನ ಎಳೆಯ ಮಕ್ಕಳ ಬದುಕಿಗೂ ಸಂಬಂಧಿಸಬೇಕು.

ಬೇರೆ ರೀತಿಯ ಸಿನಿಮಾಗಳನ್ನು ಮಾಡಲಿಕ್ಕೆ ಯಾಕೆ ಹೋಗ್ತೀವಿ ಅಂದ್ರೆ ಪ್ರೇಮಕಥೆ ಮಾಡೋದು ಕಷ್ಟ. ಬಹಳ ಜನ ಪ್ರೇಮಕಥೆಗಳ ಬಗ್ಗೆ ತುಂಬಾ ತಪ್ಪಾಗಿ ಮಾತನಾಡ್ತಾರೆ. ಆದರೆ ಜಗತ್ತಿನ ಅತಿದೊಡ್ಡ ಹಿಟ್‌ಗಳೆಲ್ಲ  ಪ್ರೇಮಕಥೆಗಳು. ಯಾಕೆಂದರೆ ಅದು ಯಾವತ್ತಿನ ಕಾಲಕ್ಕೂ ಇರುವ ಭಾವನೆ.

ಪ್ರೇಮ ಅಂದ್ರೆ ಒಂದೇ ಇರೋದು. ಅದರಲ್ಲಿ ಹೊಸತು ಏನಿಲ್ಲ. ಹುಡುಗ – ಹುಡುಗಿ. ಅದರ ಬಗ್ಗೆ ಏನು ಹೇಳೋದು ಅಂತ ತುಂಬ ಸಂಕಟ ಆಗ್ತದೆ.

ಒಬ್ಬ ಗಂಡಿನಲ್ಲಿ ಹೆಣ್ಣಿಗೆ ಸಂಬಂಧಪಟ್ಟಂಗೆ, ಹೆಣ್ಣಿನಲ್ಲಿ ಗಂಡಿಗೆ ಸಂಬಂಧಪಟ್ಟಂಗೆ ಏನೋ ನಡೀತದೆ. ಸೃಷ್ಟಿಯ ಮೂಲ ಅದು. ಮೈ – ಮನಸ್ಸುಗಳಲ್ಲಿಯೇ ಇರುವುದು. ಆ ಎರಡನ್ನು ಇಟ್ಟುಕೊಂಡು ಎಷ್ಟೆಲ್ಲ ಕಥೆಗಳು ಬಂದಿವೆ. ಎಷ್ಟು ಯೋಚನೆ ಮಾಡಿ ತಲೆ ಹುಣ್ಣು ಮಾಡಿಕೊಂಡ್ರೂ ಹೊಸತೇನೋ ಹುಟ್ಟಲಿಕ್ಕೆ ಸಾಧ್ಯವೇ ಇಲ್ಲ.

ನೀವು ಹೇಳಿದ ಹಾಗೆ ಪ್ರೇಮಕಥೆಗಳು ಕಂಪರ್ಟ್‌ ಜೋನ್‌ ಅಲ್ಲ.ಪ್ರೇಮಕಥೆಗಳು ಹುಟ್ಟುವುದೇ ಇಲ್ಲ. ಹುಟ್ಟಿ ಬೆಳೆದಿದ್ದು ಮತ್ತೆ ಚೊಂಬಾಗಿ ಕಾಣ್ತದೆ. ಅದೇ ಹಾಡು, ಅದೇ ಮೆಲೋಡಿ ಅನಿಸ್ತಿರ್ತದೆ. ಹಿಂಗೆಲ್ಲ ಇರೂದ್ರಿಂದ ಬೇರೆ ಏನೇನೋ ಮಾಡ್ತಿರ್ತೀವಿ.

ಆದ್ರೆ ಯಾವುದೇ ನಿರ್ದೇಶಕನಾಗಲಿ ಪ್ರೇಮಕಥೆ ಮಾಡಲೇಬೇಕು. ಅದನ್ನು ಸರಿಯಾಗಿ ಮಾಡಿದಾಗ ತುಂಬ ದೊಡ್ಡ ಮಟ್ಟದಲ್ಲಿ ಜನರಿಗೆ ತಲುಪ್ತದೆ. ಮತ್ತದೇ ಪ್ರೇಮಕಥೆ ಮಾಡ್ತಿದ್ದಾನಲ್ಲಾ ಅಂತಾರಲ್ಲಾ. ಹಂಗಲ್ಲ ಅದು. ದಿನಾ ಪ್ರೀತಿಸಬೇಕು. ಬದುಕನ್ನು ಪ್ರೀತಿಸಬೇಕು. ಆದರೆ ಅದು ನಮಗೆ ಆಗಲ್ವೇ... ಬೇಕಾದ್ರೆ ಕ್ರೈಂಗಳನ್ನು ಮಾಡಿಬಿಡ್ತೀವಿ. ದಿನಾ ಕಾಮ ಸಾಧ್ಯ; ದಿನಾ ಪ್ರೇಮ ಸಾಧ್ಯವಿಲ್ಲ! ದಿನಾ  ಐಟಂ ಸಾಂಗ್‌ ಬರೀಬೋದು, ದಿನಾ ಪ್ರೀತಿಯ ಬಗ್ಗೆ ಪದ್ಯ ಬರೀ ಅಂದ್ರೆ ಭಾರಿ ಕಷ್ಟ. ಆ ಕಷ್ಟಕ್ಕೆ ತಲೆಕೊಟ್ಟಾಗಲೇ ಅದರ ರೋಚಕತೆ ಅರಿವಾಗುವುದು. ಅಷ್ಟಾಗಿಯೂ ಹೇಳದೇ ಬಿಟ್ಟ ಸುಮಾರು ಸಂಗತಿಗಳು ಉಳಿದಿರುತ್ತವೆ.

*  ಈ ಪ್ರೇಮಕಥೆ ಹುಟ್ಟಿದ್ದು ಹೇಗೆ?
ಈಗ ಎರಡು ವರ್ಷಗಳ ಹಿಂದೆ ‘ನನ್ನ ಹೆಸರೇ ಅನುರಾಗಿ’ ಎಂಬುದೊಂದು ಪ್ರೇಮಕಥೆ ಮಾಡಬೇಕು ಅಂದುಕೊಂಡಿದ್ದೆ. ನಾಲ್ಕು ಹುಡುಗಿಯರನ್ನು ಇಟ್ಟುಕೊಂಡು ಏನೋ ಮಾಡಕ್ಕೋಗಿದ್ದು ಟೈಟಲ್‌ ಬದಲಾಗಿ ಈ ಸಿನಿಮಾ ಆಗಿದೆ. ಇದು ಇಂದಿನ ಹುಡುಗ/ ಹುಡುಗಿಯರಿಗೆ ಮಾಡಿದ ಸಿನಿಮಾ. ಎಂಬತ್ತನೇ ವಯಸ್ಸಿನಲ್ಲಿಯೂ ಹದಿನೆಂಟರ ಹುಡುಗರನ್ನು ತಲುಪುವುದು ಹೇಗೆ ಎಂಬುದೇ ನನ್ನನ್ನು ಕಾಡುತ್ತಿರುತ್ತದೆ. 

* ಇಷ್ಟು ವರ್ಷಗಳ ಅನುಭವದಲ್ಲಿ ಸಿನಿಮಾ ಮಾಧ್ಯಮವನ್ನು ಅರ್ಥಮಾಡಿಕೊಳ್ಳುವ ರೀತಿ ಬದಲಾಗಿದೆ ಅನಿಸಿದೆಯಾ?
ಸಿಕ್ಕಾಪಟ್ಟೆ ಬದಲಾಗಿದೆ. ಬದುಕು ಹಂಗೇ ಇರತ್ತೆ. ಬದುಕುವ ರೀತಿಗಳು ಬೇರೆ ಆಗಿರ್ತದೆ. ಮೊದಲು ನೂರು ವೋಲ್ಟ್‌ ಬಲ್ಬೇ ದೊಡ್ಡದಾಗಿತ್ತು. ಈಗ ಇನ್ನೂರು ವೋಲ್ಟ್‌ ಬಲ್ಬುಗಳು, ಟ್ಯೂಬ್‌ಲೈಟುಗಳು, ನಿಯಾನ್‌, ಎಲ್ಇಡಿಗಳು ಬಂದಿವೆ. ಹೀಗೆ ಬದುಕಿನಲ್ಲಿ ಬದಲಾವಣೆ ಬರ್ತಾನೇ ಇರ್ತವೆ. ಆದರೆ ಮೂಲಭೂತ ಕೆಲವು ಅಂಶಗಳು– ಇಡ್ಲಿ ದೋಸೆ, ಉಸಿರಾಟ ಇವೆಲ್ಲ ಬದಲಾಗಲ್ಲ. ಇಡ್ಲಿ ಗುಂಡಗಿದ್ದಿದ್ದು ಚೌಕ ಆಗ್ಬೋದು, ಆದ್ರೆ ಉದ್ದಿನ ಬೇಳೆ ಮತ್ತು ರವೆ ಬೇಕೇ ಬೇಕು ಅದಕ್ಕೆ. ಹಾಗೆಯೇ ಸಿನಿಮಾದಲ್ಲಿಯೂ ಏನೇನೋ ಬದಲಾವಣೆ ಆಗಬಹುದು. ಆದರೆ ಅದಕ್ಕೆ ಒಂದು ಕತ್ತಲಕೋಣೆ, ನಾಲ್ಕು ಮೂಲೆಯ ಪರದೆ ಬೇಕೇ ಬೇಕು. ಏನೇ ಗ್ರಾಫಿಕ್‌ ಮಾಡಿದ್ರೂ ಆ ನಾಲ್ಕು ಮೂಲೆಯ ಪರದೆಯ ಮೇಲೆಯೇ ತೋರಿಸಬೇಕು. ಗುಂಡಗೆ ತೋರಿಸಕ್ಕಾಗಲ್ಲ. ಹಾಗೆ ತಂತ್ರಜ್ಞಾನ ಬದಲಾಗಿದೆ; ಸಿನಿಮಾ ಬದಲಾಗಲ್ಲ.

* ‘ಮುಗುಳು ನಗೆ’ ಸಿನಿಮಾಗೆ ಗಣೇಶ ಅವರನ್ನೇ ಯಾಕೆ ಆಯ್ಕೆ ಮಾಡಿಕೊಂಡಿರಿ?
ಕಥೆಯ ಒಂದು ಡ್ರಾಫ್ಟ್‌ ಮುಗಿಸಿ ಒಂದೆರಡು ಹಾಡು ರೆಕಾರ್ಡ್‌ ಮಾಡಿದ ನಂತರ ನನಗೆ ಇದು  ಅನುಭವಿಗಳೇ ನಟಿಸಬೇಕಾದ ಕಥೆ ಅನಿಸಿತು. ಇಲ್ಲಿ ನಟ ವರ್ತಿಸಬೇಕು; ನಟಿಸುವಂತಿಲ್ಲ. ನಟಿಸುವುದು – ರೊಚ್ಚಿಗೆದ್ದು ಡೈಲಾಗ್‌ಗಳೆಲ್ಲ ತುಂಬ ಹಳೆಯದಾಯ್ತು. ವರ್ತಿಸಬೇಕು. ಅಳುವನ್ನೂ ಕಣ್ಣಲ್ಲೇ ಹೇಳಬೇಕು; ಕಣ್ಣೀರಿಂದಲ್ಲ.

ಹಾಗೆಯೇ ಅದ್ಭುತವಾಗಿ ನಗಬೇಕು. ನಗುವುದು ತುಂಬ ಕಷ್ಟ. ಕಿಸೆಯಲ್ಲಿ ಐದು ಸಾವಿರ ರೂಪಾಯಿ ಇಟ್ರೂ ಮುಗುಳು ನಗು ಬರಲ್ಲ. ಆದ್ರೆ ಗಣೇಶನಲ್ಲಿ ಆ ನಗು ಇದೆ. ಮನಸ್ಸನ್ನು ತುಂಬ ಶುದ್ಧವಾಗಿಟ್ಟುಕೊಂಡಿರ್ತಾನೆ ಅವನು. ಫ್ರೇಮಲ್ಲಿ ಯಾರು ಏನು ಮಾಡಿದ್ರೂ ಒಂಚೂರು ವಿಚಲಿತನಾಗದೆ ನಟಿಸಬಲ್ಲ. ಆದ್ದರಿಂದ ಅವನೇ ಇರಲಿ ಎಂದು ಕಥೆ ಹೇಳಿದೆ. ಇಷ್ಟಪಟ್ಟ. ಅದಕ್ಕೆ ಸರಿಯಾಗಿ ನಿರ್ಮಾಪಕ ಸೈಯ್ಯದ್‌ ಸಲಾಂ ಸಹ ಬಂದರು. ಹಲವು ಸಮಾನಮನಸ್ಕ ಜನರು ಸೇರಿ ಆದ ಸಿನಿಮಾ ಇದು.

*  ಭಟ್ಟರ ಸಿನಿಮಾಗಳಲ್ಲಿ ಕಥೆ ಇರಲ್ಲ ಎಂಬುದೊಂದು ಆರೋಪ ಇದೆ. ಆದರೆ ಈ ಒಂದೇ ಸಿನಿಮಾದಲ್ಲಿ ಹಲವು ಕಥೆಗಳು ಇರುವಂತಿವೆಯಲ್ಲ...
ನನ್ನ ಸಿನಿಮಾಗಳಲ್ಲಿ ಕಥೆ ಇರಲ್ಲ ಎನ್ನುವುದು ಹಳೆಯ ಆರೋಪ. ಅಂದರೆ ಅವರು ಅಂದುಕೊಂಡ ಕಥೆ ಇರಲ್ಲ. ಹಾಗನ್ನುವವರ ಒಳಗೊಬ್ಬ ಕಥೆಗಾರ ಇರ್ತಾನೆ. ಅವರು ಯಾವುದನ್ನು ಕಥೆ ಎಂದುಕೊಂಡಿರುತ್ತಾರೆಯೋ ಅದು ಇಲ್ಲಿ ಕಾಣಿಸುತ್ತಿರುವುದಿಲ್ಲ. ಅದಕ್ಕೆ ಕಥೆ ಇಲ್ಲ ಅಂತಾರೆ. ಅದನ್ನು ದೂರು ಅನ್ನುವುದು ಎಷ್ಟು ಸರಿ ಎಂದು ಗೊತ್ತಿಲ್ಲ. ಅವರಿಗೆ ಅನಿಸಿದ್ದನ್ನು ಹೇಳುವುದರಲ್ಲಿ ಯಾವ ತಪ್ಪೂ ಇಲ್ಲ.

ಅವರು ಕಥೆಯಿಂದ ಏನನ್ನು ಬಯಸುತ್ತಿರುತ್ತಾರೋ ಅದೆಲ್ಲವೂ ನನ್ನ ಸಿನಿಮಾಗಳಲ್ಲಿಯೂ ಇರ್ತವೆ. ಆದರೆ ಅದು ವಾಚ್ಯವಾಗಿ ಕಾಣಿಸ್ತಿರುವುದಿಲ್ಲ ಅಷ್ಟೆ. ಕಥನ ಮುಖ್ಯ. ಪಾತ್ರಗಳ ಒಳತೋಟಿಗಳನ್ನು ಕಾಣಿಸುತ್ತ ಹೋದರೆ ಅದೇ ಕಥೆ. ಎಲ್ಲರೂ ಮಾಡುವುದು ಅದನ್ನೆ. ಆದರೆ ಅವರು ತಾವಂದುಕೊಂಡ ಮಾದರಿಯ ಕಥೆಯನ್ನು ಸಿನಿಮಾದಲ್ಲಿ ಬಯಸುತ್ತಾರೆ. ಸಿಗುವುದಿಲ್ಲ. ಆಗ ಏನು ಮಾಡುವುದು ನಮಗೂ ತಿಳಿಯುವುದಿಲ್ಲ.

* ಮುಗುಳು ನಗೆಯಲ್ಲಿ ಯಾವ ರೀತಿಯ ಕಥನವಿದೆ?
ಇದು ಯಾವುದೇ ಕಾರಣಕ್ಕೂ ಬದುಕಿನಲ್ಲಿ ಕಣ್ಣೀರು ಬರದಿರುವ ಹುಡುಗನ ಕಥೆ. ಅವನು ಕೋಪ ಬಂದ್ರೂ ನಗ್ತಾನೆ, ದುಃಖ ಆದ್ರೂ ನಗ್ತಾನೆ. ಅಳು ಬಂದ್ರೂ ನಗ್ತಾನೆ! ಅವನ ಮುಖದ ಮುಗುಳು ನಗೆಯನ್ನು ಅಷ್ಟುಇಷ್ಟಪಡಲ್ಲ. ಅಳಬೇಕು ಅಂತ ಅವನ ಆಸೆ.

ನಾಲ್ಕು ಜನ ಹುಡುಗಿಯರು, ಅಪ್ಪ ಅಮ್ಮ, ಗೆಳೆಯರು, ಮೆಟಡೋರು ಎಲ್ಲ ಸೇರಿ ಅವನ ಒಂದು ಹನಿ ಕಣ್ಣೀರಾಗುತ್ತದೆ. ಇದು ಕಥೆ. ಇಲ್ಲಿ ನಾಲ್ಕು ಬೇರೆ ರೀತಿಯ ಪ್ರೇಮಕಥೆಗಳು ಇವೆ.

* ‘ಮುಗುಳು ನಗೆ’ ಸಿನಿಮಾಕ್ಕೆ ಪ್ರೇಕ್ಷಕನನ್ನು ಯಾವ ರೀತಿ ಆಮಂತ್ರಿಸುತ್ತೀರಿ?
ನಂದು ಗಣೇಶಂದು ಸಿನಿಮಾ ಅಂದ್ರೆ ಅದು ಕನ್ನಡ ಪ್ರೇಕ್ಷಕರ ಆಸ್ತಿ. ಅವರು ಸುಲಭದವರಲ್ಲ. ಸುಲಭಕ್ಕೆ ಯಾವುದನ್ನೂ ಒಪ್ಪಿಕೊಳ್ಳುವುದಿಲ್ಲ. ಒಪ್ಪುಕೊಂಡರೆ ತುಂಬ ಮೆರೆಸ್ತಾರೆ. ನಾವೂ ಅವರ ಸಿನಿಮಾ – ಅವರಿಗೆ ಬೇಕಾಗುವಂಥ ಮಾಡಬೇಕು ಅಷ್ಟೆ. ಬೇರೇನೂ ಬೇಕಾಗಿಲ್ಲ. ಅವರೇ ನಿಜವಾದ ವಿಮರ್ಶಕರು, ಮಾಲೀಕರು ಎಲ್ಲ. ನಮಗೆ ಯಾರೋ ಬಂದು ದುಡ್ಡು ಕೊಡ್ತಾರೆ ಅಂದ್ರೆ ಅದು ಜನರಿಂದ ಬಂದ ದುಡ್ಡೇ ಆಗಿರುತ್ತದೆ. ನಿಜವಾದ ನಿರ್ಮಾಪಕರು ಜನರೇ.

ಅಂಥ ಪ್ರೇಕ್ಷಕನಿಗೋಸ್ಕರ ಕಷ್ಟಪಟ್ಟಿದೀವಿ. ಅವನಿಗೋಸ್ಕರವೇ ಸಿನಿಮಾ ಮಾಡಿದೀವಿ. ಯಾರೋ ಒಬ್ಬ ಪ್ರೇಕ್ಷಕ ಬಂದು ಕೂತು  ಸಿನಿಮಾ ನೋಡಿ ಮತ್ತೊಂದಿಷ್ಟು ಜನರನ್ನು ಕಳಿಸುತ್ತಾನೆ ಅಂದರೆ ಆ ಸಿನಿಮಾ ನಮ್ಮದಲ್ಲವೇ ಅಲ್ಲ. ನಾವು ಬರಿ ನಿಮಿತ್ತ ಮಾತ್ರ. ಅವನಿಗೆ ಇಷ್ಟ ಆಯ್ತು ಅಂದ್ರೆ ನೂರು ಇನ್ನೂರು ರೂಪಾಯಿಗೆಲ್ಲ ಕೇರೇ ಮಾಡಲ್ಲ. ‘ಮುಗುಳು ನಗೆ’ ಪ್ರೇಕ್ಷಕನ ಆಸ್ತಿ. ಅವನ ಹೆಸರಿಗೆ ಬರೆದುಕೊಟ್ಟು ಆಗಿಹೋಗಿದೆ. ಅವನು ತನ್ನ ಆಸ್ತಿಯನ್ನಾಗಿಸಿಕೊಳ್ಳುತ್ತಾನೆಂಬ ನಂಬಿಕೆ ಇದೆ. ಅಷ್ಟೆ.

***

ದಿನಾ ಪ್ರೀತಿಸಬೇಕು. ಬದುಕನ್ನು ಪ್ರೀತಿಸಬೇಕು. ಆದರೆ ಅದು ನಮಗೆ ಆಗಲ್ವೇ... ಬೇಕಾದ್ರೆ ಕ್ರೈಂಗಳನ್ನು ಮಾಡಿಬಿಡ್ತೀವಿ. ದಿನಾ ಕಾಮ ಸಾಧ್ಯ; ದಿನಾ ಪ್ರೇಮ ಸಾಧ್ಯವಿಲ್ಲ! ದಿನಾ  ಐಟಂ ಸಾಂಗ್‌ ಬರೀಬೋದು, ದಿನಾ ಪ್ರೀತಿಯ ಬಗ್ಗೆ ಪದ್ಯ ಬರೀ ಅಂದ್ರೆ ಭಾರಿ ಕಷ್ಟ. ಆ ಕಷ್ಟಕ್ಕೆ ತಲೆಕೊಟ್ಟಾಗಲೇ ಅದರ ರೋಚಕತೆ ಅರಿವಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT