ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ಚಲೋಗೆ ಸಕಲ ಸಿದ್ಧತೆ: ಪ್ರತಾಪ ಸಿಂಹ

Last Updated 2 ಸೆಪ್ಟೆಂಬರ್ 2017, 8:58 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ), ಕರ್ನಾಟಕ ಫೋರಂ ಫಾರ್‌ ಡಿಗ್ನಿಟಿ (ಕೆಎಫ್‌ಡಿ) ಹಾಗೂ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ಡಿಪಿಐ) ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಬಿಜೆಪಿ ಯುವ ಮೋರ್ಚಾ ವತಿಯಿಂದ ಇದೇ 7ರಂದು ಹಮ್ಮಿಕೊಂಡಿರುವ ಮಂಗಳೂರು ಚಲೋ ಬೈಕ್‌ ರ‍್ಯಾಲಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮೋರ್ಚಾದ ರಾಜ್ಯದ ಘಟಕದ ಅಧ್ಯಕ್ಷರೂ ಆಗಿರುವ ಸಂಸದ ಪ್ರತಾಪ ಸಿಂಹ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮೂಡುಬಿದಿರೆಯಲ್ಲಿ ಪ್ರಶಾಂತ್ ಪೂಜಾರಿ, ಶಿವಮೊಗ್ಗದಲ್ಲಿ ವಿಶ್ವನಾಥ್‌ ಶೆಟ್ಟಿ, ಮೈಸೂರಿನ ಕ್ಯಾತಮಾರನಹಳ್ಳಿಯಲ್ಲಿ ರಾಜು, ಕೊಡಗಿನಲ್ಲಿ ಕುಟ್ಟಪ್ಪ, ಬೆಂಗಳೂರಿನಲ್ಲಿ ರುದ್ರೇಶ್‌, ಮಂಗಳೂರಿನಲ್ಲಿ ಶರತ್‌ ಮಡಿವಾಳ ಹತ್ಯೆ ಪ್ರಕರಣಗಳಲ್ಲಿ ಈ ಸಂಘಟ ನೆಗಳವರ ಕೈವಾಡ ಇರುವ ಬಗ್ಗೆ ಸಾಕ್ಷ್ಯಗಳು ಸಿಕ್ಕಿವೆ. ಹೀಗಾಗಿ, ಸಂಘಟನೆಗಳನ್ನು ನಿಷೇಧಿಸ ಬೇಕು ಎಂದು ಮಂಗಳೂರು ಚಲೋ  ಆಯೋಜಿಸಿದ್ದು ಹುಬ್ಬಳ್ಳಿಯಲ್ಲಿ ಸೆ. 5ರಂದು ಬೈಕ್‌ ಜಾಥಾಗೆ ಚಾಲನೆ ನೀಡಲಾಗುವುದು’ ಎಂದು ಹೇಳಿದರು.

‘ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು ಹಾಗೂ ಬೆಂಗಳೂರಿನಿಂದಲೂ ಜಾಥಾಗಳು ಹೊರಡಲಿವೆ. ಐದು ಭಾಗಗಳಿಂದ ತಲಾ ಸುಮಾರು 1.5 ಸಾವಿರ ಬೈಕ್‌ಗಳು ಮಂಗಳೂರಿಗೆ ತಲುಪಲಿವೆ. 7ರಂದು ಬೆಳಿಗ್ಗೆ 11 ಗಂಟೆಗೆ ಮಂಗಳೂರಿನಲ್ಲಿ ಪ್ರತಿಭಟನೆ ನಡೆಯಲಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಎಲ್ಲ ಮುಖಂಡರು ಪಾಲ್ಗೊಳ್ಳುವರು’ ಎಂದರು.

‘ಹತ್ಯೆಗಳಿಗೆ ರೂಪಿಸಿರುವ ಸಂಚಿನ ವಿಧಾನ ಮೇಲ್ನೋಟಕ್ಕೆ ಒಂದೇ ರೀತಿ ಕಂಡುಬರುತ್ತಿದೆ. ಹೀಗಾಗಿ, ಈ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಮಂಗಳೂರು ಜಿಲ್ಲಾ ಉಸ್ತುವಾರಿ ರಮಾನಾಥ್‌ ರೈ ಅವರು ರಾಜೀನಾಮೆ ನೀಡಬೇಕು.’ ಎಂದು ಒತ್ತಾಯಿಸಲಾಗುವುದು’ ಎಂದರು.

ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಓಂಶಕ್ತಿ ಚಲಪತಿ, ಜಿಲ್ಲಾ ಘಟಕದ ಅಧ್ಯಕ್ಷ ಪುಣ್ಯಪಾಲ, ಬಿಜೆಪಿ ಮುಖಂಡರಾದ ಬಿ.ಎಸ್‌.ಚೈತ್ರಶ್ರೀ, ವರಸಿದ್ಧಿ ವೇಣುಗೋಪಾಲ, ಎಚ್‌.ಡಿ.ತಮ್ಮಯ್ಯ, ಬೆಳ್ಳಿ ಪ್ರಕಾಶ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT