ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದತ್ತಗಿರಿ ಶಾಲೆಯಿಂದ ಬಸವನಗರ ದತ್ತು

Last Updated 3 ಸೆಪ್ಟೆಂಬರ್ 2017, 6:52 IST
ಅಕ್ಷರ ಗಾತ್ರ

ಬೀದರ್‌: ದತ್ತಗಿರಿ ಮಹಾರಾಜ್ ಆಂಗ್ಲ ಮಾಧ್ಯಮ ಪಬ್ಲಿಕ್ ಶಾಲೆಯು ಸ್ವಚ್ಛತಾ ಅಭಿಯಾನ ನಡೆಸಲು ಇಲ್ಲಿಯ ಬಸವನಗರ ಕಾಲೊನಿಯನ್ನು ದತ್ತು ಪಡೆದಿದೆ. ಶಾಲೆಯ ಪ್ರಾಚಾರ್ಯೆ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸೆ. 15ರ ವರೆಗೆ ಕಾಲೊನಿಯಲ್ಲಿ ಶ್ರಮದಾನದ ಜತೆಗೆ ಸ್ವಚ್ಛತೆ ಜಾಗೃತಿ ಮೂಡಿಸಲಿದ್ದಾರೆ.

1ರಿಂದ 10ನೇ ತರಗತಿವರೆಗಿನ ಮಕ್ಕಳು ತಲಾ ಒಂದೊಂದು ದಿನ ಒಂದೂವರೆ ತಾಸು ಸ್ವಚ್ಛತೆ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಮುಖ ರಸ್ತೆ, ಖಾಲಿ ನಿವೇಶನ ಸೇರಿದಂತೆ ಕಾಲೊನಿ ಪರಿಸರದಲ್ಲಿನ ಕಸ, ಕಡ್ಡಿ, ಅನುಪಯುಕ್ತ ವಸ್ತುಗಳನ್ನು ಸಂಗ್ರಹಿಸಿ ಬೇರೆಡೆ ಸ್ಥಳಾಂತರಿಸಲಿದ್ದಾರೆ.

ವೈಯಕ್ತಿಕ ಸ್ವಚ್ಛತೆ, ಶೌಚಾಲಯ, ಸ್ನಾನಗೃಹದ ಸ್ವಚ್ಛತೆ, ಆರೋಗ್ಯಪೂರ್ಣ ದಿನಚರಿ, ದುಶ್ಚಟಗಳಿಂದ ಉಂಟಾಗುವ ದುಷ್ಪರಿಣಾಮಗಳ ಬಗೆಗೂ ಸಾರ್ವಜನಿಕರಿಗೆ ತಿಳಿವಳಿಕೆ ನೀಡಲಿದ್ದಾರೆ. ಅಭಿಯಾನದ ಅವಧಿಯಲ್ಲಿ ನಗರದ ಜನನಿಬಿಡ ಪ್ರದೇಶದಲ್ಲಿ ಇರುವ ಬಸವೇಶ್ವರ ವೃತ್ತ, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ಬೋಮಗೊಂಡೇಶ್ವ ವೃತ್ತವನ್ನೂ ಸ್ವಚ್ಛಗೊಳಿಸಲಿದ್ದಾರೆ.

ಶಾಲೆಯ ಆವರಣದಲ್ಲಿ ದತ್ತಗಿರಿ ಮಹಾರಾಜ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಮೇಶಕುಮಾರ ಪಾಂಡೆ ಪೊರಕೆ ಹಿಡಿದು ಕಸಗುಡಿಸುವ ಮೂಲಕ ಶುಕ್ರವಾರ ಅಭಿಯಾನಕ್ಕೆ ಚಾಲನೆ ನೀಡಿದರು. ‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಸ್ವಚ್ಛ ಭಾರತ ಅಭಿಯಾನಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕಿದೆ’ ಎಂದು ಹೇಳಿದರು.

‘ನಮ್ಮ ಸುತ್ತಲಿನ ಪರಿಸರ ಸ್ವಚ್ಛವಾಗಿದ್ದರೆ ಮಾತ್ರ ನಾವು ಆರೋಗ್ಯದಿಂದ ಬದುಕಲು ಸಾಧ್ಯ’ ಎಂದು ದತ್ತಗಿರಿ ಮಹಾರಾಜ್ ಆಂಗ್ಲಮಾಧ್ಯಮ ಪಬ್ಲಿಕ್ ಶಾಲೆಯ ಪ್ರಾಚಾರ್ಯೆ ಮಹಾದೇವಿ ಬೀದೆ ತಿಳಿಸಿದರು.

‘ಸಂಸ್ಥೆಯ ಸಂಸ್ಥಾಪಕ ಅವಧೂತಗಿರಿ ಮಹಾರಾಜರ ಮಾರ್ಗದರ್ಶನದಲ್ಲಿ ಸ್ವಚ್ಛತಾ ಅಭಿಯಾನ ನಡೆಸಲಾಗುತ್ತಿದೆ. ಮಕ್ಕಳು, ಪಾಲಕರು, ಸಾರ್ವಜನಿಕರಲ್ಲಿ ಸ್ವಚ್ಛತೆಯ ಮಹತ್ವದ ಬಗೆಗೆ ತಿಳಿವಳಿಕೆ ಮೂಡಿಸಲಾಗುತ್ತಿದೆ. ಸ್ವಚ್ಛತೆ ಮನೆಯಿಂದಲೇ ಆರಂಭವಾಗಬೇಕು ಎನ್ನುವುದನ್ನು ಮನದಟ್ಟು ಮಾಡಿಕೊಡಲಾಗುತ್ತಿದೆ’ ಎಂದು ಹೇಳಿದರು.

‘ಮಕ್ಕಳು ಶೌಚಕ್ಕೆ ಹೋಗಿ ಬಂದ ನಂತರ, ಊಟಕ್ಕೆ ಮುನ್ನ ಕಡ್ಡಾಯವಾಗಿ ಸಾಬೂನಿನಿಂದ ಕೈ ತೊಳೆದುಕೊಳ್ಳಬೇಕು. ಆ್ಯಸಿಡಿಟಿ ಸಮಸ್ಯೆಯನ್ನು ನಿವಾರಿಸಲು ಎದ್ದ ಕೂಡಲೇ ಎರಡು ಲೋಟ ಉಗುರು ಬೆಚ್ಚನೆಯ ನೀರು ಬಿಟ್ಟು ಬಿಟ್ಟು ಕುಡಿಯಬೇಕು. ಊಟ ಮಾಡಿದ ಒಂದು ತಾಸಿನ ನಂತರ ನೀರು ಕುಡಿಯಬೇಕು’ ಎಂದು ತಿಳಿಸಿದರು.
‘ಮನೆಗಳಲ್ಲಿ ಸಂಗ್ರಹವಾಗುವ ಕಸವನ್ನು ಹಸಿರು ಹಾಗೂ ಒಣತ್ಯಾಜ್ಯವಾಗಿ ವಿಂಗಡಿಸಿ ವಿಲೇವಾರಿ ಮಾಡಬೇಕು. ಮನೆ ಆವರಣದಲ್ಲಿ ತುಳಸಿ, ಅಮೃತಬಳ್ಳಿಯಂಥ ಔಷಧೀಯ ಗುಣಗಳುಳ್ಳ ಸಸಿಗಳನ್ನು ಬೆಳೆಸಬೇಕು’ ಎಂದು ಹೇಳಿದರು.

ದತ್ತಗಿರಿ ಮಹಾರಾಜ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಂಗಯ್ಯ ರೇಜಂತಲ್, ಉಪಾಧ್ಯಕ್ಷ ಮಲ್ಲಿಕಾರ್ಜುನ ಹತ್ತಿ, ಕಾರ್ಯದರ್ಶಿ ಶಿವರಾಜ ಪಾಟೀಲ, ಜಂಟಿ ಕಾರ್ಯದರ್ಶಿ ರಮೇಶ ಜಿ. ದುಕಾನದಾರ್, ಖಜಾಂಚಿ ಪ್ರಭಾಕರ ಮೈಲಾಪುರೆ, ಸದಸ್ಯರಾದ ಅನಿಲಕುಮಾರ ಯರಮಲ್ಲಿ, ರವಿ ಮಾಲಸಾ, ಶಿಕ್ಷಕರಾದ ಸಂಜೀವ ಎನ್., ನೀರಜಾ, ರಾಮರಾಜ ಡಿ., ವಿಜಯಕಾಂತ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು ಶಾಲೆ ಸುತ್ತಮುತ್ತಲಿನ ಪರಿಸರದಲ್ಲಿನ ಕಸ, ಕಡ್ಡಿ, ಪ್ಲಾಸ್ಟಿಕ್ ಕ್ಯಾರಿಬಾಗ್‌ಗಳನ್ನು ಆರಿಸಿ ಒಂದೆಡೆ ಸಂಗ್ರಹಿಸಿ ವಿಲೇವಾರಿ ಮಾಡಿ ಅಭಿಯಾನ ಶುರು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT