ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರ್ಯಾಕ್ಟರ್‌ ನುಗ್ಗಿಸಿ ತಹಶೀಲ್ದಾರ್‌ ಹತ್ಯೆಗೆ ಯತ್ನ

Last Updated 3 ಸೆಪ್ಟೆಂಬರ್ 2017, 10:32 IST
ಅಕ್ಷರ ಗಾತ್ರ

ಮಾಗಡಿ: ತಾಲ್ಲೂಕಿನ ಕುದೂರು ಹೋಬಳಿಯ ಚೀಲೂರು ಕೆರೆಯಲ್ಲಿ ಮರಳು ಫಿಲ್ಟರ್‌ ಅಡ್ಡೆ ಮೇಲೆ ದಾಳಿ ನಡೆಸಿದ ತಹಶೀಲ್ದಾರ್ ಮೇಲೆ ದುಷ್ಕರ್ಮಿಗಳು ಟ್ರ್ಯಾಕ್ಟರ್ ಡಿಕ್ಕಿ ಹೊಡೆಸಿ ಹತ್ಯೆಗೆ ಯತ್ನಿಸಿದ್ದು, ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಲಾಗಿದೆ.

ಸರ್ಕಾರಿ ಕೆರೆಯಲ್ಲಿ ಮರಳು ಫಿಲ್ಟರ್ ದಂಧೆ ನಡೆಯುತ್ತಿರುವ ಕುರಿತು ಮಾಹಿತಿ ಪಡೆದ ಇಲ್ಲಿನ ತಹಶೀಲ್ದಾರ್‌ ಲಕ್ಷ್ಮಿಸಾಗರ್‌ ಸಿಬ್ಬಂದಿ ಜೊತೆಗೂಡಿ ಶನಿವಾರ ಸಂಜೆ ನಾಲ್ಕರ ಸುಮಾರಿಗೆ ಬೈಕ್‌ಗಳಲ್ಲಿ ತೆರಳಿ ದಾಳಿ ನಡೆಸಿದರು. ಅಲ್ಲಿ ಎರಡು ಟ್ರ್ಯಾಕ್ಟರ್ ಹಾಗೂ ನಾಲ್ಕಾರು ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದು, ಪರಾರಿಯಾಗಲು ಯತ್ನಿಸಿದರು.

ಅವರನ್ನು ತಡೆಯಲು ಮುಂದಾದ ವೇಳೆ ತಹಶೀಲ್ದಾರ್ ಮೇಲೆ ಆರೋಪಿ ಧನಂಜಯ ಎಂಬಾತ ಟ್ರ್ಯಾಕ್ಟರ್‌ನಿಂದ ಡಿಕ್ಕಿ ಹೊಡೆಸಲು ಯತ್ನಿಸಿದ್ದು, ಕೂಡಲೇ ಪಕ್ಕದವರು ಎಳೆದುಕೊಂಡ ಕಾರಣ ಅನಾಹುತ ತಪ್ಪಿತು.

‘ದಾಳಿಯ ವೇಳೆ ಆರೋಪಿಗಳು ನನ್ನ ಹತ್ಯೆಗೆ ಯತ್ನಿಸಿದರು’ ಎಂದು ಘಟನೆ ಕುರಿತು ತಹಶೀಲ್ದಾರ್‌ ಲಕ್ಷ್ಮಿಸಾಗರ್ ‘ಪ್ರಜಾವಾಣಿ’ಗೆ ವಿವರಿಸಿದರು. ‘ಘಟನೆ ಸಂಬಂಧ ಹೂಜೇನಹಳ್ಳಿ ಗ್ರಾಮದ ಧನಂಜಯ (33), ಚಿಕ್ಕಣ್ಣ, ಸೂರ್ಯಕುಮಾರ್‌, ಮೋಹನ್‌ ಕುಮಾರ್‌ ಎಂಬುವವರನ್ನು ಕುದೂರು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಮರಳು ಸಾಗಣೆ ಕೃತ್ಯಕ್ಕೆ ಬಳಸಲಾಗುತ್ತಿದ್ದ ಎರಡೂ ಟ್ರ್ಯಾಕ್ಟರ್‌ಗಳಿಗೂ ನಂಬರ್ ಪ್ಲೇಟ್‌ ಇರಲಿಲ್ಲ’ ಎಂದು ಅವರು ವಿವರಿಸಿದರು.

ತಹಶೀಲ್ದಾರ್‌ ಜೊತೆ ಕುದೂರು ರಾಜಸ್ವ ನಿರೀಕ್ಷಕ ಶಿವಕುಮಾರ್‌, ಗ್ರಾಮ ಸಹಾಯಕರಾದ ಬೈಲಪ್ಪ, ನಟೇಶ್‌, ರಂಗಪ್ಪ, ರಂಗನಾಥ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ನಾಲ್ವರ ವಿರುದ್ಧ ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ‘ಪ್ರಕರಣ ಕುರಿತು ಈಗಷ್ಟೇ ದೂರು ದಾಖಲಿಸಿಕೊಳ್ಳಲಾಗುತ್ತಿದ್ದು, ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ರಾಮನಗರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ. ರಮೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT