ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸಂಖ್ಯೆ ನಿಯಂತ್ರಿಸದಿದ್ದರೆ ಅಭಿವೃದ್ಧಿ ಕಷ್ಟ

Last Updated 5 ಸೆಪ್ಟೆಂಬರ್ 2017, 8:49 IST
ಅಕ್ಷರ ಗಾತ್ರ

ಪುತ್ತೂರು: ಜನಸಂಖ್ಯೆ ಬೆಳೆದಂತೆ ಸಮಸ್ಯೆಗಳ ಸರಮಾಲೆಯೂ ಹೆಚ್ಚುತ್ತಿದ್ದು, ಜನಸಂಖ್ಯೆ ನಿಯಂತ್ರಣ ಆಗದೇ ಇದ್ದರೆ ದೇಶದ ಅಭಿವೃದ್ಧಿ ಕಷ್ಟ ಸಾಧ್ಯ ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜನಸಂಖ್ಯೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜನಸಂಖ್ಯೆ ಏರಿಕೆಯಿಂದ ಎದುರಾದ ಪ್ರತ್ಯಕ್ಷ ಸಮಸ್ಯೆಯೇ ತ್ಯಾಜ್ಯ. ಇದನ್ನು ವಿಲೇವಾರಿ ಮಾಡುವುದೇ ತ್ರಾಸದಾಯಕವಾಗಿ ಪರಿಣಮಿಸಿದ್ದು, ಪರಿಹಾರ ಕಾಣದಾಗಿದೆ. ತ್ಯಾಜ್ಯದ ಜತೆಗೆ ಮೂಲಸೌಕರ್ಯವೂ ಸಮಸ್ಯೆಯಾಗಿ ಕಾಡುತ್ತಿದೆ. ಏರುತ್ತಿರುವ ಜನಸಂಖ್ಯೆಗೆ ಮೂಲ ಸೌಕರ್ಯ ನೀಡುವುದೇ ದೊಡ್ಡ ಸವಾಲಾಗಿದೆ ಎಂದರು.

ಸರ್ಕಾರದಿಂದ ನೀಡುತ್ತಿದ್ದ ಜಾಗದ ಪ್ರಮಾಣ ಇದೀಗ 1 ಸೆಂಟ್ಸ್‌ಗೆ ಇಳಿದಿದ್ದು, ಅಂದರೆ ಜಾಗವೇ ಇಲ್ಲ ಎಂಬುದನ್ನು ತಿಳಿದುಕೊಳ್ಳಬೇಕು. ಪ್ರತಿಯೊಬ್ಬರಿಗೂ ಮನೆ ಬೇಕು ಎಂದು ಹೇಳುತ್ತೇವೆ. ಅಷ್ಟೂ ಜನರಿಗೆ ಸೂರು ಒದಗಿಸುವುದು ಸವಾಲೇ ಸರಿ. ಈ ಹಿನ್ನೆಲೆಯಲ್ಲಿ ಯೋಚಿಸುವಾಗ ಜನಸಂಖ್ಯೆಗೆ ಕಡಿವಾಣ ಹಾಕಲೇಬೇಕು. ಜನತೆಯ ಸಹಕಾರದಿಂದ ಮಾತ್ರ ಇದನ್ನು ಯಶಸ್ವಿಯಾಗಿ ಜಾರಿಗೆ ತರಲು ಸಾಧ್ಯ ಎಂದರು.

ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ರಾಜೇಶ್ವರಿ ಮಾತನಾಡಿ, ಸಮಾಜದಲ್ಲಿ ಗಂಡು- ಹೆಣ್ಣಿಗೆ ಸಮಾನ ಅವಕಾಶವಿದ್ದು, ಇಬ್ಬರು ಒಟ್ಟಾಗಿ ನಿರ್ಧಾರ ಕೈಗೊಂಡರೆ ಮಾತ್ರ ಜನಸಂಖ್ಯೆ ನಿಯಂತ್ರಣ ಸಾಧ್ಯ. ಜನಸಂಖ್ಯೆಯನ್ನು ಸಂಪನ್ಮೂಲವಾಗಿ ಬಳಸಿಕೊಳ್ಳುವ ಕಡೆಗೂ ಗಮನ ಹರಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಸರಕಾರದ ಹಲವು ಯೋಜನೆಗಳಿವೆ. ಇವನ್ನು ಬಳಸಿಕೊಳ್ಳುವಲ್ಲಿ ವಿಫಲವಾಗುತ್ತಿದ್ದೇವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭವಾನಿ ಚಿದಾನಂದ್ ಮಾತನಾಡಿದರು. ಸದಸ್ಯೆ ಮೀನಾಕ್ಷಿ ಮಂಜುನಾಥ್ ಉಪಸ್ಥಿತರಿದ್ದರು. ಜನಸಂಖ್ಯೆ ನಿಯಂತ್ರಣದ ಬಗ್ಗೆ ಸವಣೂರು ಸರಕಾರಿ ಪದವಿಪೂರ್ವ ಕಾಲೇಜು ಅರ್ಥಶಾಸ್ತ್ರ ಉಪನ್ಯಾಸಕಿ ಶೊಭಾ ಹಾಗೂ ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಮಿತ್ ಉಪನ್ಯಾಸ ನೀಡಿದರು. ಇದೇ ಸಂದರ್ಭ ಕಡಬ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ಎಲಿಯಮ್ಮ ಜೋನ್ ಹಾಗೂ ಕೊಳ್ತಿಗೆ ಆಶಾ ಕಾರ್ಯಕರ್ತೆ ವೇದಾವತಿ ಅವರನ್ನು ಸನ್ಮಾನಿಸಲಾಯಿತು.

ತಾಲ್ಲೂಕು ವೈದ್ಯಾಧಿಕಾರಿ ಡಾ. ಅಶೋಕ್ ಕುಮಾರ್ ರೈ ಸ್ವಾಗತಿಸಿ, ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ಲೀನಾ ವಂದಿಸಿದರು. ಶಿವಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT