ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸದುರ್ಗ: ಹಿಂದೂ ಮಹಾಸಾಗರ ಗಣಪತಿ ಶೋಭಾಯಾತ್ರೆ ಶಾಂತಿಯುತ

Last Updated 5 ಸೆಪ್ಟೆಂಬರ್ 2017, 9:05 IST
ಅಕ್ಷರ ಗಾತ್ರ

ಹೊಸದುರ್ಗ: ಪಟ್ಟಣದ ವಿರಾಟ್‌ ಹಿಂದೂ ಮಹಾಸಾಗರ ಗಣಪತಿಯ ಶೋಭಾಯಾತ್ರೆ ಸೋಮವಾರ ಅದ್ದೂರಿಯಾಗಿ ನಡೆಯಿತು. ನಂದಿ ವಿಗ್ರಹದ ಮೇಲೆ ಕುಳಿತಿದ್ದ ಅಲಂಕೃತ ಗಣೇಶ ಮೂರ್ತಿಯನ್ನು ತೆರೆದ ವಾಹನದಲ್ಲಿ ಕೂರಿಸಿ ವಿಶೇಷ ಪೂಜೆ ಸಲ್ಲಿಸಲಾಗಿತು.

ಪಟ್ಟಣದ ಹಳೇ ಪ್ರವಾಸಿ ಮಂದಿರ ಆವರಣದಿಂದ ಆರಂಭವಾದ ಮೆರವಣಿಗೆ ಟಿ.ಬಿ.ವೃತ್ತ, ಗಾಂಧಿ ವೃತ್ತ, ಹಳೇ ಬಸ್‌ ನಿಲ್ದಾಣ, ಹಿರಿಯೂರು ವೃತ್ತ, ಹುಳಿಯಾರು ವೃತ್ತ, ಕೃಷಿ ಮಾರುಕಟ್ಟೆ ಮೈದಾನ, ಕೋಟೆ ಬೀದಿ, ದುರ್ಗಮ್ಮ ದೇವಿ ಬಡಾವಣೆ, ದೊಡ್ಡ ಪೇಟೆ ಬೀದಿಗಳಲ್ಲಿ ಸಾಗಿತು.

ಬಣ್ಣ ಬಣ್ಣದ ಉಡುಪು ಧರಿಸಿದ್ದ ಯುವಕರು ಕೇಸರಿ ಬಾವುಟ ಹಿಡಿದು ಮೆರವಣಿಗೆಯಲ್ಲಿ ಸಾಗಿದರು. ಡಿಜೆ ಸಂಗೀತಕ್ಕೆ ಕುಣಿದರು. ಸೋಮವಾರ ಸಂತೆ ದಿನವಾಗಿದ್ದರಿಂದ ಅಪಾರ ಸಂಖ್ಯೆಯ ಭಕ್ತರು ತಾಲ್ಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದರು. ಬಿಸಿಲನ್ನು ಲೆಕ್ಕಿಸದ ಕೆಲವು ಜನರು ಬರಿಗಾಲಲ್ಲಿ ಮೆರವಣಿಗೆಯಲ್ಲಿ ಸಾಗಿದರು. ಪಟ್ಟಣದ ಮುಖ್ಯರಸ್ತೆಯ ಉದ್ದಕ್ಕೂ ಜನಸಾಗರ ನೆರೆದಿತ್ತು. ಬಿಗಿ ಪೊಲೀಸ್‌ ಬಂದೋಬಸ್ತ್‌ ಒದಗಿಸಲಾಯಿತು.

ಸಾರ್ವಜನಿಕರು ಉಚಿತ ನೀರು, ಉಪಹಾರ ವಿತರಿಸಿದರು. ಮೆರವಣಿಗೆ ನಂತರದಲ್ಲಿ ಲೋಕೋಪಯೋಗಿ ಇಲಾಖೆ ಆವರಣದಲ್ಲಿ ಪುರಸಭೆಯವರು ಸಿದ್ಧಪಡಿಸಿದ್ದ ಸಿಮೆಂಟ್‌ ತೊಟ್ಟಿಯಲ್ಲಿ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ವಿಸರ್ಜನೆ ಮಾಡಲಾಯಿತು.

ಕಳೆದ ಹನ್ನೊಂದು ದಿನದಿಂದ ಗಣೇಶ ಉತ್ಸವದ ಮಹಾಮಂಟಪದಲ್ಲಿ ಸಮೃದ್ಧ ಮಳೆ, ಬೆಳೆಗೆ ಪ್ರಾರ್ಥಿಸಿ ಹೋಮಹವನ ಹಾಗೂ ಶನಿದೇವರ ಕಥೆ, ರಸಸಿಂಚನ, ಸುಗಮ ಸಂಗೀತ, ಮಧುರ ಮಂಜುಳಗಾನ, ಮಕ್ಕಳ ಮೇಳ, ಭಕ್ತಿ ಕುಸುಮಾಂಜಲಿ, ಭರತನಾಟ್ಯ ಮತ್ತು ನೃತ್ಯರೂಪಕ, ಸಾಂಸ್ಕೃತಿಕ ಜಾನಪದ ರಸಮಂಜರಿ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ಜರುಗಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT