ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ಪ್ರೀತಿಯ ಶಿಕ್ಷಕ ದಂಪತಿ

Last Updated 5 ಸೆಪ್ಟೆಂಬರ್ 2017, 9:41 IST
ಅಕ್ಷರ ಗಾತ್ರ

ರಾಮನಗರ: ತಮಗೆ ನಿಗದಿ ಪಡಿಸಿರುವ ಪಠ್ಯದ ಜತೆಗೆ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಹಾಗೂ ಪರಿಸರ ಪ್ರೀತಿಯ ಅರಿವನ್ನು ಮೂಡಿಸುತ್ತಿರುವ ಶಿಕ್ಷಕ ದಂಪತಿ ಇಲ್ಲಿದ್ದಾರೆ. ಕಲಿಕೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ತಮ್ಮ ಮನೆಯಲ್ಲಿ, ಶಾಲೆಯಲ್ಲಿ ವಿಶೇಷ ತರಗತಿಗಳನ್ನು ತೆಗೆದುಕೊಂಡು ಅವರಲ್ಲಿನ ಕಲಿಕೆಯ ಮಟ್ಟವನ್ನು ಹೆಚ್ಚಿಸುತ್ತಿದ್ದಾರೆ.

ಶಾಲಾ ದಾಖಲಾತಿ ಸಮಯದಲ್ಲಿ ಮೈದಾನಗಳಲ್ಲಿ ಆಟವಾಡುವ ಮಕ್ಕಳ ಹತ್ತಿರ ಮಾತನಾಡಿ ಅವರ ಹಾಗೂ ಪೋಷಕರ ಮನವೊಲಿಸಿ ಅವರನ್ನು ಸರ್ಕಾರಿ ಶಾಲೆಗೆ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕೆಲವು ಮಕ್ಕಳನ್ನು ತಾವೆ ಶಾಲೆಗೆ ಕರೆದುಕೊಂಡು ಹೋಗಿ ಈಗಲೂ ಬಿಡುತ್ತಾರೆ.

ಶಾಲಾ ಅವಧಿ ಮುಗಿದ ನಂತರ, ರಜೆಯ ದಿನಗಳಲ್ಲಿ ನವೋದಯ, ಮೊರಾರ್ಜಿ ಶಾಲೆಗಳ ಪ್ರವೇಶ ಪರೀಕ್ಷೆಗೆ ಸಂಬಂಧಿಸಿದಂತೆ ಉಚಿತ ತರಬೇತಿ ನೀಡಿ ನೂರಾರು ವಿದ್ಯಾರ್ಥಿಗಳು ಈ ಶಾಲೆಗಳಿಗೆ ಆಯ್ಕೆಯಾಗಲು ಕಾರಣರಾಗಿದ್ದಾರೆ. ಉಚಿತವಾಗಿ ಅರ್ಜಿಗಳನ್ನು ತಂದು ಭರ್ತಿ ಮಾಡಿ ಅವರಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುತ್ತಿದ್ದಾರೆ.

ಇವರು ನಗರದ ಐಜೂರಿನಲ್ಲಿ ವಾಸಿಸುತ್ತಿರುವ ಚಿಕ್ಕಹನುಮಂತಯ್ಯ ಹಾಗೂ ವಿ. ಜಲಜಾಕ್ಷಿ ದಂಪತಿ. ಚಿಕ್ಕಹನುಮಂತಯ್ಯ ಅವರು ಕೆಂಪೇಗೌಡನದೊಡ್ಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ, ವಿ. ಜಲಜಾಕ್ಷಿ ಅವರು ಕುಂಬಾಪುರ ಕಾಲೊನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ತಾವು ಕೆಲಸ ಮಾಡುವ ಶಾಲೆಯ ಆವರಣದಲ್ಲಿ ಮಾದರಿ ಕೈ ತೋಟಗಳನ್ನು ನಿರ್ಮಿಸಿದ್ದಾರೆ. ಬಿಸಿಯೂಟಕ್ಕೆ ಬೇಕಾಗುವ ತರಕಾರಿಗಳನ್ನು ಬೆಳೆದುಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಪರಿಸರ ಪ್ರೀತಿ, ಜಲ ಸಂರಕ್ಷಣೆ, ಸದ್ಬಳಕೆ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದ್ದಾರೆ.

‘ವಿದ್ಯಾರ್ಥಿಗಳಲ್ಲಿ ಮೊದಲು ಸಮಯಪ್ರಜ್ಞೆಯನ್ನು ಕಲಿಸಬೇಕು. ನಂತರ ಅವರ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರ ಕಲಿಕಾ ಮಟ್ಟ ಸುಧಾರಿಸುವಂತೆ ಬೋಧನೆ ಮಾಡಬೇಕು’ ಎನ್ನುತ್ತಾರೆ ಶಿಕ್ಷಕ ಚಿಕ್ಕಹನುಮಂತಯ್ಯ.

‘ಶಿಕ್ಷಕರು ಕೆಲಸಕ್ಕೆ ಸೇರಿದ ಕೂಡಲೆ ಓದುವ ಹವ್ಯಾಸವನ್ನು ಬಿಟ್ಟುಬಿಡುತ್ತಾರೆ. ಆದರೆ ಶಿಕ್ಷಕರು ನಿರಂತರವಾಗಿ ಅಧ್ಯಯನದಲ್ಲಿ ತೊಡಗಿಕೊಂಡರೆ ಮಾತ್ರ ಪರಿಣಾಮಕಾರಿಯಾದ ಬೋಧನೆ ಮಾಡಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

ಇತರರಿಗೆ ಮಾದರಿ : ‘ಮನೆ ಮತ್ತು ಶಾಲೆಯ ವಾತಾವರಣವನ್ನು ಶುಚಿಯಾಗಿಡಲು ಎಲ್ಲೆಂದರಲ್ಲಿ ಅಲ್ಲಿ ಬಿದ್ದಿರುವ ತ್ಯಾಜ್ಯವನ್ನೆಲ್ಲಾ ತೆಗೆದು ತೆರವುಗೊಳಿಸುತ್ತಾರೆ. ಸೊಳ್ಳೆಗಳ ಸಂತಾನೋತ್ಪತ್ತಿ ತಾಣವಾಗಿರುವ ಚರಂಡಿಗಳ ಹೂಳು ತೆಗೆದು ಶಿಕ್ಷಕ ದಂಪತಿಗಳು ಶುಚಿಗೊಳಿಸುವುದು ಸೇರಿದಂತೆ ಖಾಲಿ ಜಾಗದಲ್ಲಿ ಸಸಿಗಳನ್ನು ನೆಡುತ್ತಾರೆ’ ಎನ್ನುತ್ತಾರೆ ಸಾಹಿತಿ ಜಿ. ಶಿವಣ್ಣಕೊತ್ತೀಪುರ.

‘ಶಿಕ್ಷಕರು ಎಂದರೆ ಕೇವಲ ಬೋಧನೆಗೆ ಮಾತ್ರ ಸೀಮಿತ ಎಂದುಕೊಂಡಿರುವ ಇಂದಿನ ಪರಿಸ್ಥಿತಿಯಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಇವರು ಇತರರಿಗೆ ಮಾದರಿಯಾಗಿದ್ದಾರೆ. ಎಲ್ಲಾ ಸರ್ಕಾರಿ ಶಾಲಾ ಶಿಕ್ಷಕರು ಇವರಂತೆ ಇಚ್ಛಾಶಕ್ತಿಯಿಂದ ಕೆಲಸ ಮಾಡಿದರೆ ಸರ್ಕಾರಿ ಶಾಲೆಗಳು ಮುಚ್ಚುವ ಪರಿಸ್ಥಿತಿ ಬರುವುದಿಲ್ಲ’ ಎಂದು ಅವರು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT