ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ಯಾತ್ಮದಿಂದ ಸಮಾಜ ಪರಿವರ್ತನೆ

ಬ್ರಹ್ಮಶ್ರೀ ನಾರಾಯಣಗುರು ಜಯಂತಿಯಲ್ಲಿ ಶಾಸಕ ವಿಶ್ವೇಶ್ವರ ಹೆಗಡೆ ಹೇಳಿಕೆ
Last Updated 7 ಸೆಪ್ಟೆಂಬರ್ 2017, 8:31 IST
ಅಕ್ಷರ ಗಾತ್ರ

ಶಿರಸಿ: ‘ಭಾರತದ ಅಸ್ಮಿತೆ ಅಧ್ಯಾತ್ಮ ದೊಂದಿಗೆ ಸಮ್ಮಿಳಿತಗೊಂಡಿದೆ. ಇಂತಹ ಅಧ್ಯಾತ್ಮದ ಮೂಲಕ ಸಮಾಜ ಪರಿವರ್ತನೆ ಸಾಧ್ಯ ಎಂಬುದನ್ನು ನಾರಾಯಣಗುರು ಸಾಬೀತು ಪಡಿಸಿದ್ದಾರೆ’ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯ್ತಿ, ನಗರಸಭೆ ಜಂಟಿಯಾಗಿ ಬುಧವಾರ ಇಲ್ಲಿ ಆಯೋಜಿಸಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಉದ್ಘಾಟಿಸಿ ಮಾತನಾಡಿದರು. ನಾರಾಯಣಗುರು ಪರಿವರ್ತನೆಯ ಹರಿಕಾರರಾಗಿದ್ದರು. ಸಮಾಜದಲ್ಲಿರುವ ನಕಾರಾತ್ಮಕ ಶಕ್ತಿಗಳನ್ನು ಸಕಾರಾತ್ಮಕ ಚಿಂತನೆಗಳ ಮೂಲಕ ಸರಿದಾರಿಗೆ ತರುವಲ್ಲಿ ಅವರು ಶ್ರಮಿಸಿದ್ದರು. ಶಿಕ್ಷಣ, ವೇದಾಧ್ಯಯನಕ್ಕೆ ಆದ್ಯತೆ ನೀಡಿದ್ದರು.

ದೇವಾಲಯವನ್ನು ನಿರ್ಮಿಸಿ ಸಮಾಜಕ್ಕೆ ಮಾರ್ಗದರ್ಶನ ಮಾಡಿದರು. ಭಾರತದ ಋಷಿ, ಮುನಿಗಳ ಪರಂಪರೆಯನ್ನು ನಂಬಿದ್ದ ಅವರು ಇದೇ ದಿಸೆಯಲ್ಲಿ ಜನಸಮೂಹವನ್ನು ಅಣಿಗೊಳಿಸಿದ್ದರು ಎಂದರು.

ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದ ಅವರು ದುಶ್ಚಟಗಳಿಗೆ ಬಲಿಯಾಗುತ್ತಿದ್ದ ಸಮಾಜವನ್ನು ಮೇಲೆತ್ತಲು ಪ್ರಯತ್ನಿಸಿದ್ದರು. ಅಸ್ಪ್ರಶ್ಯತೆ ವಿರುದ್ಧ ಹೋರಾಟ ಮಾಡಿದರು. ದೇವರ ಹೆಸರಿನಲ್ಲಿ ಪ್ರಾಣಿಬಲಿ ನೀಡುವುದನ್ನು ಅವರು ಬಲವಾಗಿ ವಿರೋಧಿಸಿದ್ದರು ಎಂದು ಹೇಳಿದರು.

ಉಪವಿಭಾಗಾಧಿಕಾರಿ ಕೆ. ರಾಜು ಮೊಗವೀರ ಮಾತನಾಡಿ, ‘19ನೇ ಶತಮಾನದಲ್ಲಿ ಭಾರತದಲ್ಲಿ ಸಾಕಷ್ಟು ಸಮಾಜ ಸುಧಾರಕರು ಆಗಿ ಹೋಗಿದ್ದಾರೆ. ಸಮಾಜಕ್ಕೆ ಮೌಢ್ಯ ಕವಿದಿರುವಾಗ ದಾರಿ ತೋರಲು ಸಮಾಜ ಸುಧಾರಕರು ಹುಟ್ಟಿ ಬರುತ್ತಾರೆ. ಸಾವಿರಾರು ವರ್ಷಗಳ ಹಿಂದಿನ ಚಿಂತನೆಗಳು ಅನುಷ್ಠಾನಗೊಳ್ಳುವಾಗ ಅದಕ್ಕೆ ಕಂದಾಚಾರಗಳು ಸೇರಿಕೊಂಡು ಮೇಲು, ಕೀಳು ಎಂಬ ಭಾವನೆ ಬೆಳೆಯುತ್ತದೆ. ಚಿಂತನೆ, ಅನುಕೂಲಕ್ಕೆ ಸರಿಯಾಗಿ ನಾವು ಈ ಭಾವನೆಯನ್ನು ಸೃಷ್ಟಿಸಿಕೊಂಡ ಪರಿಣಾಮ ಸಮಾಜದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ದಾರಿತಪ್ಪಿದ ಸಮಾಜವನ್ನು ಸರಿದಾರಿಗೆ ತರಲು ಸುಧಾರಕರು ಹುಟ್ಟಿಕೊಳ್ಳುತ್ತಾರೆ’ ಎಂದರು.

ಜಿಲ್ಲಾ ಪಂಚಾಯ್ತಿ ಸದಸ್ಯ ಬಸವರಾಜ ದೊಡ್ಮನಿ, ಪೌರಾಯುಕ್ತ ಮಹೇಂದ್ರಕುಮಾರ್ ಇದ್ದರು. ತಹಶೀಲ್ದಾರ್ ಬಸಪ್ಪ ಪೂಜಾರಿ ಸ್ವಾಗತಿಸಿದರು. ಎ.ವಿ. ದಾಸರ ನಿರೂಪಿಸಿದರು.

‘ಉನ್ನತ ತನಿಖೆಯಾಗಲಿ’
‘ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡನೀಯ. ತಾವು ನಂಬಿದ ವಿಚಾರದಲ್ಲಿ ಅವರು ಪತ್ರಿಕೆ ನಡೆಸುತ್ತಿದ್ದರು. ನಕ್ಸಲರನ್ನು ಮುಖ್ಯವಾಹಿನಿಗೆ ತರುವಲ್ಲಿ ಶ್ರಮಿಸಿದ್ದರು. ದುಷ್ಕರ್ಮಿಗಳು ಅವರನ್ನು ಗುಂಡಿಕ್ಕಿ ಕೊಂದಿರುವುದು ರಾಜ್ಯದ ಕಾನೂನು, ಸುವ್ಯವಸ್ಥೆ ಪ್ರಶ್ನಿಸುವಂತಾಗಿದೆ.

ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸಿ ಅಪರಾಧಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ನಮ್ಮ ಮತ್ತು ಅವರ ನಡುವೆ ವೈಚಾರಿಕ ಭಿನ್ನಾಭಿಪ್ರಾಯ ಇರಬಹುದು. ಆದರೆ ಇಂತಹ ಹಿಂಸೆಯನ್ನು ಒಪ್ಪಲು ಸಾಧ್ಯವಿಲ್ಲ. ಇಂತಹ ಮನೋಭಾವ ಸಮಾಜದಲ್ಲಿ ಬೆಳೆಯುವುದನ್ನು ನಿಯಂತ್ರಿಸಬೇಕು’ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿಕ್ರಿಯಿಸಿದರು.

*
ವಿಚಾರಗಳಿಗೆ ಅವಕಾಶ ವಿಲ್ಲ ದಿದ್ದಲ್ಲಿ ಹಿಂಸೆ ಉದ್ಭವವಾಗುತ್ತದೆ. ಸೀಮಿತ ಉದ್ದೇಶಕ್ಕೆ ಹಿಂಸೆಯನ್ನು ಬಳಸಿಕೊಂಡರೆ ಮುಂದೊಂದು ದಿನ ಅದರಿಂದ ನಮಗೇ ಸಮಸ್ಯೆ ಎದುರಾಗಬಹುದು.
-ಕೆ. ರಾಜು ಮೊಗವೀರ,
ಉಪವಿಭಾಗಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT