ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿಗರ ತಾಣ ಈ ಪರಮಾನಂದ ಬೆಟ್ಟ

Last Updated 9 ಸೆಪ್ಟೆಂಬರ್ 2017, 7:10 IST
ಅಕ್ಷರ ಗಾತ್ರ

ಸಿರವಾರ: ಪಟ್ಟಣದ ಮಧ್ಯೆ ಭಾಗದಲ್ಲಿರುವ ಪರಮಾನಂದ ಬೆಟ್ಟದ ಮೇಲೆ ಶಿವಮಾಲಾಧಾರಿಗಳ ನೇತೃತ್ವದಲ್ಲಿ ನಿರ್ಮಾಣವಾಗಿರುವ 21 ಅಡಿ ಎತ್ತರದ ಶಿವನ ಮೂರ್ತಿ ಮತ್ತು ಮಲ್ಲಿಕಾರ್ಜುನ ದೇವಸ್ಥಾನ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ. ನೂರಾರು ವರ್ಷಗಳ ಇತಿಹಾಸವಿರುವ ಬೆಟ್ಟದಲ್ಲಿ ಪುಟ್ಟದಾದ ಪರಮಾನಂದ ದೇವಸ್ಥಾನವಿದೆ.

ಇಲ್ಲಿ 25 ವರ್ಷಗಳ ಮುಂಚೆ ನಾಗರ ಪಂಚಮಿ ಮರುದಿನ ಜಾತ್ರೆ ನಡೆಯುತ್ತಿತ್ತು. ಊರಿನ ಪ್ರತಿಯೊಂದು ಮನೆಯವರು ಬೆಟ್ಟ ಹತ್ತಿ ದಿನಪೂರ್ತಿ ಕಳೆದು ಅಲ್ಲಿಯೇ ಊಟ ಮಾಡಿ ಸಂಜೆ ಮನೆ ಸೇರುತ್ತಿದ್ದರು. ಒಬ್ಬ ವ್ಯಕ್ತಿ ತನ್ನ ವೈಯಕ್ತಿಕ ಕಾರಣದಿಂದ ಬೆಟ್ಟದಿಂದ ಜಾರಿ ಬಿದ್ದು ಆತ್ಮಹತ್ಯೆಗೆ ಶರಣಾದ ಕಾರಣ ಅಂದಿನಿಂದ ಜಾತ್ರಾ ವೈಭವ ನಿಂತಿತ್ತು.

ಮರಳಿದ ವೈಭವ: 2015ರಲ್ಲಿ ಶ್ರೀಶೈಲ ಮಲ್ಲಿಕಾರ್ಜುನನ ಮಾಲೆ ಧರಿಸುವ ಮಾಲಾಧಾರಿಗಳು ಬೆಟ್ಟದ ಮೇಲೆ ಶಿವಮೂರ್ತಿ ಮತ್ತು ಮಲ್ಲಿಕಾರ್ಜುನ ದೇವಸ್ಥಾನ ನಿರ್ಮಾಣಕ್ಕೆ ಮುಂದಾದರು. 2016 ಶಿವರಾತ್ರಿಯಂದು ₹ 8 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ನಿರ್ಮಾಣವಾದ 21 ಅಡಿ ಎತ್ತರದ ಶಿವನ ಮೂರ್ತಿ ಮತ್ತು ಅದರ ತಳದಲ್ಲಿ ಮಲ್ಲಿಕಾರ್ಜುನ ದೇವಸ್ಥಾನ ಉದ್ಘಾಟನೆಯಾಯಿತು. ಅಂದಿನಿಂದ ಪ್ರತಿ ಅಮಾವಾಸ್ಯೆ ನೂರಾರು ಭಕ್ತರು ವಯಸ್ಸಿನ ಮಿತಿ ಇಲ್ಲದೆ ಬೆಟ್ಟ ಹತ್ತಿ , ಮಲ್ಲಿಕಾರ್ಜುನನಿಗೆ ಪೂಜೆ ಸಲ್ಲಿಸುತ್ತಾರೆ.

2017 ಜಾತ್ರೆ ಮತ್ತು ಸಾಮೂಹಿಕ ವಿವಾಹ: ಶಿವಮಾಲಾಧಾರಿಗಳು ದೇವಸ್ಥಾನ ನಿರ್ಮಿಸಿ ಸುಮ್ಮನಾಗದೆ ದೇವಸ್ಥಾನದ ಮೊದಲ ವಾರ್ಷಿಕೋತ್ಸವ ಮತ್ತು ಶಿವರಾತ್ರಿ ಅಮಾವಾಸ್ಯೆ ಅಂಗವಾಗಿ ಬಡವರ ಅನುಕೂಲಕ್ಕಾಗಿ 12 ಜೋಡಿಗಳ ಸಾಮೂಹಿಕ ವಿವಾಹ ನಡೆಸಿದರು. 500 ಕ್ಕೂ ಅಡಿ ಎತ್ತರದ ಮೇಲೆ ಇರುವ ದೇವಸ್ಥಾನಕ್ಕೆ ತೆರಳಲು ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದೆ.

ಅಮಾವಾಸ್ಯೆ, ಹಬ್ಬದ ದಿನಗಳ ಹೊರತಾಗಿ ಪ್ರತಿದಿನವೂ ನೂರಾರೂ ಭಕ್ತರು ಭೇಟಿ ನೀಡುತ್ತಾರೆ. ಶಿವಮಾಲಾಧಾರಿಗಳ ಈ ಶ್ರಮಕ್ಕೆ ಪಟ್ಟಣದ ಅನೇಕ ದಾನಿಗಳು ಕೈಜೋಡಿಸಿದ್ದಾರೆ. ಪಟ್ಟಣದಿಂದ ಸುತ್ತಲೂ ಹತ್ತು ಕಿ.ಮೀ.ದೂರದಿಂದ ಶಿವನ ಮೂರ್ತಿಯು ಪ್ರತಿಯೊಬ್ಬ ಕಣ್ಮನ ಸೆಳೆಯುತ್ತದೆ.

ಪ್ರತಿವಾರ ಶ್ರಮದಾನ: ವರ್ಷಗಳ ಪೂರ್ತಿ ದೇವಸ್ಥಾನದ ಆವರಣದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತರು ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಸಸಿ ನೆಡುವುದು, ಆವರಣದ ಸ್ವಚ್ಛತಾ ಕಾರ್ಯಗಳನ್ನು ಮಾಡುವ ಮೂಲಕ ಬೆಟ್ಟಕ್ಕೆ ಬಂದವರಿಗೆ ವಿಶ್ರಾಂತಿ ಪಡೆಯಲು ಅನುಕೂಲಕರ ವಾತಾವರಣ ನಿರ್ಮಾಣ ಮಾಡಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT