ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಲಾಸಿ ಕಾರು ಮತ್ತಷ್ಟು ದುಬಾರಿ

ಜಿಎಸ್‌ಟಿ ಮಂಡಳಿಯ 21ನೇ ಸಭೆ, 30 ವಸ್ತುಗಳ ಜಿಎಸ್‌ಟಿ ದರ ಕಡಿತ
Last Updated 9 ಸೆಪ್ಟೆಂಬರ್ 2017, 19:35 IST
ಅಕ್ಷರ ಗಾತ್ರ

ಹೈದರಾಬಾದ್‌: ಮಧ್ಯಮ ಗಾತ್ರದ, ಐಷಾರಾಮಿ ಕಾರುಗಳು ಮತ್ತು ಎಸ್‌ಯುವಿಗಳು ಇನ್ನಷ್ಟು ದುಬಾರಿಯಾಗಲಿವೆ. ಈ ವಾಹನಗಳಿಗೆ ಶೇ 2ರಿಂದ 7ರಷ್ಟು ಹೆಚ್ಚುವರಿ ಸೆಸ್ ವಿಧಿಸಲು ಜಿಎಸ್‌ಟಿ ಮಂಡಳಿ ಶನಿವಾರ ನಿರ್ಧರಿಸಿದೆ.

ಗಾತ್ರದಲ್ಲಿ ಚಿಕ್ಕದಾಗಿರುವ ಪೆಟ್ರೋಲ್‌, ಡೀಸೆಲ್‌ ಕಾರು (1,200 ಸಿಸಿ ಎಂಜಿನ್‌ವರೆಗಿನ), ಹೈಬ್ರಿಡ್‌ ಕಾರುಗಳು ಮತ್ತು 13 ಆಸನ ಸಾಮರ್ಥ್ಯಗಳ ವಾಹನಗಳಿಗೆ ಹೆಚ್ಚುವರಿ ಸೆಸ್‌ನಿಂದ ವಿನಾಯಿತಿ ನೀಡಲು ನಿರ್ಧರಿಸಿದೆ. ಇದುವರೆಗೆ ಈ ಎಲ್ಲ ವಾಹನಗಳಿಗೆ ಶೇ 15ರಷ್ಟು ಸೆಸ್‌ ವಿಧಿಸಲಾಗುತ್ತಿತ್ತು.

30 ವಸ್ತುಗಳ ದರ ಕಡಿತ: ಇಡ್ಲಿ/ದೋಸೆ ಹಿಟ್ಟು, ಹುಣಸೆ ಹಣ್ಣು, ಹುರಿಗಡಲೆ, ಕಸ್ಟರ್ಡ್‌ ಪುಡಿ, ದೂಪ, ಅಗರಬತ್ತಿ, ಗ್ಯಾಸ್‌ ಲೈಟರ್‌, ಕಂಪ್ಯೂಟರ್‌ ಪರದೆಗಳು, ರೈನ್‌ಕೋಟ್‌, ರಬ್ಬರ್‌ ಬ್ಯಾಂಡ್‌ ಸೇರಿದಂತೆ 30 ವಸ್ತುಗಳ ಮೇಲಿನ ತೆರಿಗೆ ದರ ಇಳಿಸಲೂ ಮಂಡಳಿ ನಿರ್ಧರಿಸಿದೆ.

‘ಕೆಲವು ವಸ್ತುಗಳ ವಿಧಿಸಲಾಗುತ್ತಿದ್ದ ಜಿಎಸ್‌ಟಿ ದರಗಳನ್ನು ಶೇ 28ರಿಂದ ಶೇ 18ಕ್ಕೆ, ಶೇ 18ರಿಂದ ಶೇ 12ಕ್ಕೆ ಮತ್ತು ಶೇ 12ರಿಂದ ಶೇ 5ಕ್ಕೆ ಇಳಿಸಲಾಗಿದೆ’ ಎಂದು ಅರುಣ್‌ ಜೇಟ್ಲಿ ಹೇಳಿದರು.

‘ಈ ಹಿಂದೆ ರೈನ್‌ಕೋಟ್‌ಗಳಿಗೆ ಶೇ 28ರಷ್ಟು ಜಿಎಸ್‌ಟಿ ದರ ನಿಗದಿಪಡಿಸಲಾಗಿತ್ತು. ಈಗ ಅದನ್ನು ಶೇ 18ಕ್ಕೆ ಇಳಿಸಲಾಗಿದೆ. ರಬ್ಬರ್‌ ಬ್ಯಾಂಡ್‌ಗಳ ಮೇಲಿನ ದರವನ್ನು ಶೇ 28ರಿಂದ ಶೇ 12ಕ್ಕೆ ಇಳಿಸಲಾಗಿದೆ’ ಎಂದು ವಿವರಿಸಿದರು.

ವಿನಾಯಿತಿ: ₹20 ಲಕ್ಷದವರೆಗಿನ ವಹಿವಾಟು ನಡೆಸುವ ಕುಶಲಕರ್ಮಿಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. ಖಾದಿ ಗ್ರಾಮೋದ್ಯೋಗ ಮಂಡಳಿಯ ಮೂಲಕ ಮಾರಾಟ ಮಾಡುವ ಖಾದಿ ಉತ್ಪನ್ನಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಲು ನಿರ್ಧರಿಸಲಾಗಿದೆ.

ರಿಟರ್ನ್‌ ಸಲ್ಲಿಕೆ ಅವಧಿ ವಿಸ್ತರಣೆ: ಜುಲೈ ತಿಂಗಳ ಜಿಎಸ್‌ಟಿ ರಿಟರ್ನ್‌ ಸಲ್ಲಿಕೆ ಅವಧಿಯನ್ನು ಸೆಪ್ಟೆಂಬರ್ 10 ರಿಂದ ಅಕ್ಟೋಬರ್‌ 10ರವರೆಗೆ ವಿಸ್ತರಿಸಲಾಗಿದೆ.

ಜಿಎಸ್‌ಟಿಎನ್‌ ಜಾಲತಾಣದಲ್ಲಿ ಪದೇ ಪದೇ ತಾಂತ್ರಿಕ ಸಮಸ್ಯೆ ಎದುರಾಗುತ್ತಿದೆ. ಇದರಿಂದ ರಿಟರ್ನ್‌ ಸಲ್ಲಿಕೆ ವಿಳಂಬವಾಗುತ್ತಿದೆ ಎನ್ನುವ ದೂರುಗಳು ಬರುತ್ತಿವೆ. ಹಾಗಾಗಿ ರಿಟರ್ನ್ ಸಲ್ಲಿಕೆ ಅವಧಿ ವಿಸ್ತರಿಸಲಾಗಿದೆ.

ಹೊಸ ವ್ಯವಸ್ಥೆ: ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗೆ ಇರುವುದಕ್ಕಾಗಿ ಪ್ಯಾಕ್‌ ಮಾಡಿರುವ ಆಹಾರ ಧಾನ್ಯಗಳ ಮಾರಾಟವನ್ನು ಸ್ಥಗಿತಗೊಳಿಸಿರುವ ವರ್ತಕರನ್ನು ನಿಯಂತ್ರಿಸಲು ಹೊಸ ವ್ಯವಸ್ಥೆ ಜಾರಿಗೆ ತರಲೂ ಮಂಡಳಿ ನಿರ್ಧರಿಸಿದೆ.

ಜಿಎಸ್‌ಟಿ ವ್ಯವಸ್ಥೆಯಲ್ಲಿ ಬ್ರ್ಯಾಂಡ್‌ ರಹಿತ ಆಹಾರಕ್ಕೆ ತೆರಿಗೆ ಇಲ್ಲ. ನೋಂದಾಯಿಸಿರುವ ಬ್ರ್ಯಾಂಡೆಡ್‌ ಆಹಾರಗಳ ಮೇಲೆ ಶೇ 5ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಇದನ್ನು ತಪ್ಪಿಸುವುದಕ್ಕಾಗಿ ಹಲವು ಉದ್ಯಮಗಳು ತಮ್ಮ ಬ್ರ್ಯಾಂಡ್‌ಗಳ ನೋಂದಣಿ ರದ್ದುಗೊಳಿಸುತ್ತಿವೆ.

ಇದನ್ನು ನಿಯಂತ್ರಿಸುವುದಕ್ಕೆ ಮಂಡಳಿ ಹೊಸ ವ್ಯವಸ್ಥೆ ಜಾರಿಗೊಳಿಸಿದ್ದು, 2017ರ ಮೇ 15ರ ಒಳಗಾಗಿ ನೋಂದಾಯಿತ ಎಲ್ಲ ಬ್ರ್ಯಾಂಡ್‌ಗಳೂ ತೆರಿಗೆ ವ್ಯಾಪ್ತಿಗೆ ಒಳಪಡಿಸಲು ತೀರ್ಮಾನಿಸಲಾಗಿದೆ.

‘ಒಂದು ವೇಳೆ ಆ ಬಳಿಕ ಬ್ರ್ಯಾಂಡ್‌ ನೋಂದಣಿ ರದ್ದು ಮಾಡಿದ್ದರೂ, ಅವರು ಕಡ್ಡಾಯವಾಗಿ ತೆರಿಗೆ ಪಾವತಿಸಲೇ ಬೇಕು ಎಂದು ಜೇಟ್ಲಿ ಹೇಳಿದರು.

ಜುಲೈ ತಿಂಗಳಿನಲ್ಲಿ ಈವರೆಗೆ ತೆರಿಗೆ ರೂಪದಲ್ಲಿ ₹95 ಸಾವಿರ ಕೋಟಿ ಸಂಗ್ರಹವಾಗಿದೆ. ಶೇ 70ರಷ್ಟು ಅರ್ಹ ತೆರಿಗೆದಾರರು ರಿಟರ್ನ್‌ ಸಲ್ಲಿಸಿದ್ದಾರೆ ಎಂದು ಅವರು ತಿಳಿಸಿದರು.
*
ರಂಗಕರ್ಮಿ ಪ್ರಸನ್ನ ಬಂಧನ
ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಗೆ ಮನವಿ ಸಲ್ಲಿಸಲು ಶನಿವಾರ ಹೈದರಾಬಾದಿಗೆ ತೆರಳಿದ ಹಿರಿಯ ರಂಗಕರ್ಮಿ ಪ್ರಸನ್ನ ಮತ್ತು ಅವರ ಜೊತೆಗಿದ್ದ 30 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ದೇಶದ ಬೇರೆ ಬೇರೆ ಭಾಗಗಳಿಂದ ಬಂದ ನೇಕಾರರು ಮತ್ತು ಗ್ರಾಮೀಣ ಕುಶಲಕರ್ಮಿಗಳ ಪ್ರತಿನಿಧಿಗಳು ಇಲ್ಲಿ ಸಮಾವೇಶವೊಂದರಲ್ಲಿ ನೆರೆದಿದ್ದೆವು. ಜಿಎಸ್‌ಟಿ ಮಂಡಳಿ ಸಭೆಗೆ ಮನವಿ ಸಲ್ಲಿಸಲು 30 ಜನರನ್ನು ಸಮಾವೇಶದಲ್ಲಿ ಆಯ್ಕೆ ಮಾಡಲಾಗಿತ್ತು. ನಾವು ಸಭೆ ನಡೆಯುತ್ತಿದ್ದ ಜಾಗಕ್ಕೆ ಹೋಗುತ್ತಿದ್ದಾಗ, ಸುಮಾರು ಒಂದು ಕಿ.ಮೀ ದೂರದಲ್ಲೇ ಪೊಲೀಸರು ನಮ್ಮನ್ನು ತಡೆದರು. ಆದರೆ, ನಾವು ನಮ್ಮನ್ನು ತಡೆದ ಜಾಗದಲ್ಲೇ ಸತ್ಯಾಗ್ರಹ ಕುಳಿತೆವು. ತಕ್ಷಣ ನಮ್ಮನ್ನು ಬಂಧಿಸಿದ ಪೊಲೀಸರು, ಗಚ್ಚಿಬೋಲಿ ಪೊಲೀಸ್‌ ಠಾಣೆಯಲ್ಲಿ ಕೂಡಿ ಹಾಕಿದ್ದಾರೆ. ಇಂದು ಅಥವಾ ನಾಳೆ ಬಿಡುಗಡೆ ಮಾಡಬಹುದು ’ ಎಂದು ಪ್ರಸನ್ನ ದೂರವಾಣಿಯಲ್ಲಿ ‘ಪ್ರಜಾವಾಣಿ’ಗೆ ತಿಳಿಸಿದರು.

*

ರೈತರಿಂದ  ಪ್ರತಿಭಟನೆ

ಒಣದ್ರಾಕ್ಷಿ, ಕೊತ್ತುಂಬರಿ ಬೀಜ ಮತ್ತು ಒಣ ಮೆಣಸಿನಕಾಯಿಯನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡುವಂತೆ ಒತ್ತಾಯಿಸಿ ಕೃಷಿ ವರ್ತಕರು ಜಿಎಸ್‌ಟಿ ಮಂಡಳಿ ಸಭೆ ನಡೆಯುತ್ತಿದ್ದ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಈ ಉತ್ಪನ್ನಗಳಿಗೆ ಶೇ 5 ರಷ್ಟು ತೆರಿಗೆ ವಿಧಿಸಲಾಗಿದೆ.

ಕಚ್ಚಾ ಅರಸಿನಕ್ಕೆ ತೆರಿಗೆ ವಿನಾಯ್ತಿ ನೀಡಲಾಗಿದೆ. ಆದರೆ ಅರಸಿನಕ್ಕೆ ಶೇ 5 ರಷ್ಟು ತೆರಿಗೆ ಇದೆ. ಇದನ್ನೂ ತೆಗೆಯುವಂತೆ ಪಂಡರ್‌ಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮತಿ ಒತ್ತಾಯಿಸಿದೆ.

ಜಾಲತಾಣದ ಬಗ್ಗೆ ಅಸಮಾಧಾನ: ಜಿಎಸ್‌ಟಿಎನ್‌ ಜಾಲತಾಣದ ಬಗ್ಗೆ ವರ್ತಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಾಂತ್ರಿಕ ದೋಷದಿಂದ ರಿಟರ್ನ್ ಸಲ್ಲಿಕೆಗೆ ಅಡ್ಡಿಯಾಗಿದೆ ಎಂದು ವರ್ತಕರು ರಾಜ್ಯ ಹಣಕಾಸು ಸಚಿವರುಗಳಿಗೆ ಕೆಂಪು ಬಾವುಟ ಪ್ರದರ್ಶಿಸಿದರು.

ವಾಹನ ತಯಾರಕರ ಅಸಮಾಧಾನ

ಮಧ್ಯಮ ಗಾತ್ರದ ಮತ್ತು ದೊಡ್ಡ ಕಾರುಗಳು ಹಾಗೂ ಎಸ್‌ಯುವಿಗಳ ಮೇಲಿನ್‌ ಸೆಸ್‌ ಏರಿಕೆ ಮಾಡಿರುವುದಕ್ಕೆ ಐಷಾರಾಮಿ ಕಾರು ತಯಾರಕ ಕಂಪೆನಿಗಳಾದ ಔಡಿ, ಮರ್ಸಿಡಿಸ್‌ ಬೆಂಜ್‌, ಲ್ಯಾಂಡ್‌ ರೋವರ್‌ ಆಂಡ್‌ ಜಾಗ್ವಾರ್‌ ಅಸಮಾಧಾನ ವ್ಯಕ್ತಪಡಿಸಿವೆ.

‘ಮತ್ತೆ ಶೇ 10ರಷ್ಟು ಸೆಸ್ ಹೇರಲಾಗುತ್ತದೆ ಎಂಬ ವದಂತಿಗಳಿಗೆ ಅಂತ್ಯ ಹಾಡಿದ್ದರೂ ಕಾರುಗಳ ಬೆಲೆ ಭಾರಿ ಏರಿಕೆಯಾಗುತ್ತದೆ ಎಂಬುದೇ ಬೇಸರದ ಸಂಗತಿ. ಇದು ಗ್ರಾಹಕರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕು’ ಎಂದು ಔಡಿ ಇಂಡಿಯಾ ಸಂಸ್ಥೆ ಹೇಳಿದೆ.

‘ವಾಹನ ಉದ್ಯಮಕ್ಕೆ ಮತ್ತು ದೇಶದ ಆರ್ಥಿಕತೆಗೆ ಐಷಾರಾಮಿ ಕಾರು ತಯಾರಕ ಕಂಪೆನಿಗಳ ಕೊಡುಗೆಯನ್ನು ಜಿಎಸ್‌ಟಿ ಮಂಡಳಿ ಗಂಭೀರವಾಗಿ ಪರಿಗಣಿಸಬೇಕಿತ್ತು. ಈ ವರ್ಗದ ವಾಹನಗಳ ಮೇಲೆ ತೆರಿಗೆ ಹೊರೆ ಹೆಚ್ಚಾದಂತೆ ಬೇಡಿಕೆ ಕುಗ್ಗುತ್ತದೆ ಮತ್ತು ಆದಾಯವೂ ಇಳಿಯುತ್ತದೆ’ ಎಂದು ಮರ್ಸಿಡಿಸ್ ಬೆಂಜ್ ಹೇಳಿದೆ.

‘ಸೆಸ್‌ ಏರಿಕೆಯಿಂದ ಕಾರುಗಳ ಬೆಲೆ ಜಿಎಸ್‌ಟಿ ಪೂರ್ವದಲ್ಲಿದ್ದಷ್ಟೇ ಆಗುತ್ತದೆ. ಇದು ಬೇಡಿಕೆ, ಈ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ, ಉದ್ಯೋಗ ಸೃಷ್ಟಿ ಎಲ್ಲವನ್ನೂ ಬಾಧಿಸುತ್ತದೆ. ನಮ್ಮ ಈ ಕಳವಳವನ್ನು ಜಿಎಸ್‌ಟಿ ಮಂಡಳಿ ಮತ್ತು ಸರ್ಕಾರ ಪರಿಶೀಲಿಸುತ್ತದೆ ಎಂದು ಭಾವಿಸಿದ್ದೇವೆ’ ಎಂದು ಲ್ಯಾಂಡ್‌ ರೋವರ್ ಆಂಡ್ ಜಾಗ್ವಾರ್‌ ಅಭಿಪ್ರಾಯ ಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT