ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲಸೌಲಭ್ಯ ವಂಚಿತ ಮಂಗಲ ಗ್ರಾಮ

Last Updated 10 ಸೆಪ್ಟೆಂಬರ್ 2017, 6:45 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಬಂಡಿಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ಅಂಚಿನಲ್ಲಿರುವ ತಾಲ್ಲೂಕಿನ ಮಂಗಲ ಗ್ರಾಮದ ದಲಿತಕೇರಿಯು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ಇಲ್ಲಿ ಶುದ್ಧ ಕುಡಿಯವ ನೀರು ಮತ್ತು ಸ್ವಚ್ಛತೆ ಮರಿಚಿಕೆಯಾಗಿದೆ. ಸೌಕರ್ಯಗಳ ಕೊರತೆಯ ನಡುವೆಯೇ ಇಲ್ಲಿನ ಜನರು ಬದುಕು ಸಾಗಿಸುವಂತಾಗಿದೆ.

ಈ ಗ್ರಾಮದಲ್ಲಿ 250ಕ್ಕೂ ಹೆಚ್ಚಿನ ಕುಟುಂಬಗಳಿದ್ದು, ಸಾವಿರಕ್ಕೂ ಅಧಿಕ ಜನಸಂಖ್ಯೆ ಇದೆ. ಲಿಂಗಾಯತ ಸಮುದಾಯ ಮತ್ತು ಪರಿಶಿಷ್ಟ ಜಾತಿಯ ಜನರ ಪ್ರಮಾಣ ಹೆಚ್ಚು.
ಗ್ರಾಮವು ಕಾಡಂಚಿನಲ್ಲಿರುವುದರಿಂದ ಯಾವ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಭೇಟಿ ನೀಡುತ್ತಿಲ್ಲ. ಈ ಕಾರಣದಿಂದಲೇ ಇಲ್ಲಿನ ಗ್ರಾಮ ಪಂಚಾಯಿತಿಯ ಅಧಿಕಾರಿ ಕೂಡ ಅಭಿವೃದ್ಧಿ ಚಟುವಟಿಕೆಗಳ ಬಗ್ಗೆ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ ಎಂದು ಗ್ರಾಮಸ್ಥರು ದೂರುತ್ತಾರೆ.

ಸಮಸ್ಯೆಗಳನ್ನು ತಿಳಿಸಿದರೆ ಪಿಡಿಒ ಸ್ಪಂದಿಸುವುದಿಲ್ಲ. ಪಂಚಾಯಿತಿಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಸರಿಯಾದ ಮಾಹಿತಿ ನೀಡುವುದಿಲ್ಲ. ಯೋಜನೆ ಮತ್ತು ಸವಲತ್ತುಗಳ ಕುರಿತು ಸೂಚನಾ ಫಲಕದಲ್ಲಿ ಪ್ರಕಟಿಸುವುದಿಲ್ಲ ಎಂದು ಆರೋಪಿಸುತ್ತಾರೆ.

ಉಪಚುನಾವಣೆಯ ಸಂದರ್ಭದಲ್ಲಿ ಮತಯಾಚನೆಗೆ ಬಂದಿದ್ದ ಜನಪ್ರತಿನಿಧಿಗಳು ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸುವ ಭರವಸೆ ನೀಡಿದ್ದರು. ಚುನಾವಣೆ ಮುಗಿದ ಬಳಿಕ, ಯಾರೂ ಈ ಭಾಗಕ್ಕೆ ಬಂದು ಸಮಸ್ಯೆಯನ್ನು ಆಲಿಸಿಲ್ಲ. ಅಧಿಕಾರಿಗಳೂ ಇಲ್ಲಿಗೆ ಬರುವುದು ತೀರಾ ಅಪರೂಪ ಎಂದು ಗ್ರಾಮದ ಹಿರಿಯರೊಬ್ಬರು ತಿಳಿಸಿದರು.

ಚರಂಡಿ ಮತ್ತು ನೀರಿನ ಸಮಸ್ಯೆ: ‘ಸಮಯಕ್ಕೆ ಸರಿಯಾಗಿ ಕುಡಿಯುವ ನೀರು ಬಿಡುತ್ತಿಲ್ಲ. ನೀರಿಗಾಗಿ ಅಕ್ಕಪಕ್ಕದ ಜಮೀನುಗಳನ್ನು ಆಶ್ರಯಿಸಬೇಕಿದೆ. ನೀರಿನ ಸಮಸ್ಯೆ ಕುರಿತು ಪಿಡಿಒ ಗಮನಕ್ಕೆ ತಂದಿದ್ದರೂ ಕ್ರಮ ಕೈಗೊಂಡಿಲ್ಲ’ ಎಂದು ನಿವಾಸಿ ಶಂಕರಯ್ಯ ತಿಳಿಸಿದರು.

‘ಚರಂಡಿ ಕಟ್ಟಿಕೊಂಡು ಸೊಳ್ಳೆಗಳು ಹೆಚ್ಚಾಗಿ ಗ್ರಾಮದ ಜನರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಕಸ ಕಡ್ಡಿಗಳು ತುಂಬಿಕೊಂಡು ದುರ್ನಾತ ಬೀರುತ್ತಿದೆ. ಇದನ್ನು ಸ್ವಚ್ಛ ಮಾಡಿಸುವಂತೆ ಮಾಡಿದ ಮನವಿಗಳಿಂದ ಪ್ರಯೋಜನವಾಗಿಲ್ಲ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕುಸಿಯುವ ಹಂತದಲ್ಲಿ ಟ್ಯಾಂಕ್: ಸುಮಾರು 40 ವರ್ಷದ ಹಿಂದೆ ನಿರ್ಮಿಸಿದ್ದ 25,000 ಲೀಟರ್ ಸಾಮರ್ಥ್ಯದ ವಾಟರ್ ಟ್ಯಾಂಕ್ ಕುಸಿದು ಬೀಳುವ ಹಂತದಲ್ಲಿದೆ. ಗ್ರಾಮದ ಹೃದಯ ಭಾಗದಲ್ಲಿರುವ ಈ ಟ್ಯಾಂಕ್ ಹಲವು ವರ್ಷಗಳಿಂದ ಬಳಕೆಯಾಗುತ್ತಿಲ್ಲ. ಶಿಥಿಲಗೊಂಡಿರುವ ಟ್ಯಾಂಕ್‌ ಯಾವಾಗ ಬೇಕಾದರೂ ಕುಸಿಯುವ ಅಪಾಯವಿದೆ. ಇಲ್ಲಿ ಜನರ ಓಡಾಟ ಹೆಚ್ಚು. ಶಾಲಾ ಮಕ್ಕಳು ಮತ್ತು ಸಾರ್ವಜನಿಕರು ಇದರ ಸಮೀಪದಲ್ಲಿಯೇ ಬಸ್‌ಗಾಗಿ ಕಾಯುತ್ತಾರೆ.

ಈ ಬಗ್ಗೆ ಗ್ರಾಮಸ್ಥರು ಹಿಂದಿನ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿಯ ಗಮನ ಸೆಳೆದಿದ್ದರು. ಇದಕ್ಕೆ ಸ್ಪಂದಿಸಿದ್ದ ಅವರು ಟ್ಯಾಂಕ್‌ಅನ್ನು ನೆಲಸಮ ಮಾಡುವಂತೆ ಸೂಚನೆ ನೀಡಿದ್ದರು. ಒಂದು ವಾರದಲ್ಲಿ ನೆಲಸಮ ಮಾಡುವುದಾಗಿ ತಿಳಿಸಿದ್ದ ಪಿಡಿಒ, ಆರು ತಿಂಗಳು ಕಳೆದರೂ ಕ್ರಮ ಕೈಗೊಂಡಿಲ್ಲ. ಮುಂದೆ ಏನಾದರೂ ದುರಂತ ಸಂಭವಿಸಿದರೆ ಯಾರು ಹೊಣೆ ಎಂಬ ಪ್ರಶ್ನೆ ಜನರದ್ದು.

ಪಂಚಾಯಿತಿಯಲ್ಲಿ ಸ್ಪಂದನೆ ಇಲ್ಲ: ‘ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಕಾರ್ಯನಿರ್ವಹಿಸುವ ಕಂಪ್ಯೂಟರ್ ಅಪರೇಟರ್‌ಗಳು ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸುವುದಿಲ್ಲ. ರೈತರ ಜೊತೆ ಒರಟಾಗಿ ನಡೆದುಕೊಳ್ಳುತ್ತಾರೆ. ಎಲ್ಲ ಕೆಲಸಗಳಿಗೂ ಹಣ ನೀಡುವಂತೆ ಪೀಡಿಸುತ್ತಾರೆ’ ಎಂದು ದಲಿತ ಮುಖಂಡ ಉಮೇಶ್ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT