ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗೆ ಭರ್ತಿಯಾಗುತ್ತಿರುವ ಕೆರೆ, ಕಟ್ಟೆ

Last Updated 10 ಸೆಪ್ಟೆಂಬರ್ 2017, 6:49 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಕಾಡಂಚಿನ ಪ್ರದೇಶಗಳಲ್ಲಿನ ಕೆರೆ, ಕಟ್ಟೆಗಳು ಭರ್ತಿಯಾಗುತ್ತಿವೆ. ಮಂಚಹಳ್ಳಿ, ಆಲತ್ತೂರು, ಗೋಪಾಲಪುರ, ದೇವರಹಳ್ಳಿ, ಕಳ್ಳಿಪುರ, ಬೆಂಡರವಾಡಿ, ಚೆನ್ನಮಲ್ಲಿಪುರ, ಬಂಡೀಪುರದ ಯಲಚೆಟ್ಟಿ, ಮಂಗಲ, ವಡ್ಡಗೆರೆ, ಯರಿಯೂರು, ಕುಂದಕೆರೆ ಭಾಗದ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ.

ತಾಲ್ಲೂಕಿನಲ್ಲಿ ನಾಲ್ಕು ದಿನಗಳಿಂದ 87 ಮಿ.ಮೀ. ಮಳೆಯಾಗಿದ್ದು, ಶುಕ್ರವಾರ ರಾತ್ರಿ ಸುರಿದ ಮಳೆಯಿಂದ ಪಟ್ಟಣದ ವಿಜಯಪುರ ಕೆರೆಗೆ ಹೆಚ್ಚಿನ ನೀರು ಹರಿದು ಬರುತ್ತಿದೆ. ಹಲವು ವರ್ಷಗಳಿಂದ ತುಂಬದ ಕೆರೆಗಳು ಮಳೆಗೆ ಭರ್ತಿಯಾಗುತ್ತಿದೆ.

ಬಂಡಿಪುರ ಅರಣ್ಯದೊಳಗಿರುವ ಹಲವು ಕೆರೆಗಳಲ್ಲಿ ನೀರು ಸಂಗ್ರಹವಾಗಿದೆ. ಕಾಡು ಪ್ರಾಣಿಗಳಿಗೆ ಮೇವು ಮತ್ತು ನೀರಿಗೆ ಈ ಮಳೆಯಿಂದ ಹೆಚ್ಚು ಉಪಯೋಗವಾಗುತ್ತಿದೆ.
‘ಮಳೆಯು ಸಕಾಲದಲ್ಲಿ ಆಗದ ಕಾರಣ ಸೂರ್ಯಕಾಂತಿ, ಜೋಳ, ಕಡ್ಲೆಕಾಯಿ ಬೆಳೆಗಳು ಕಾಳು ಕಟ್ಟುವ ಹಂತದಲ್ಲಿ ಒಣಗಿದವು. ಈಗ ಉತ್ತಮ ಮಳೆಯಾಗುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ’ ಎಂದು ರೈತರು ಬೇಸರ ವ್ಯಕ್ತಪಡಿಸಿದರು.

ಗೋಡೆ ಕುಸಿತ: ಮನೆಗಳಿಗೆ ಹಾನಿ ಚಾಮರಾಜನಗರ: ಜಿಲ್ಲೆಯ ವಿವಿಧೆಡೆ ಶುಕ್ರವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಹರದನಹಳ್ಳಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಮನೆಗಳಿಗೆ ಹಾನಿಯಾಗಿದೆ. ಚಾಮರಾಜನಗರ, ಮಂಗಲ, ಕಾಗಲವಾಡಿ, ಪುಣಜನೂರು, ಕುದೇರು ಮುಂತಾದೆಡೆ ರಾತ್ರಿ ಗುಡುಗು ಸಹಿತ ಬಿರುಸಿನ ಮಳೆ ಸುರಿದಿದೆ.

ದೊಡ್ಡಮೋಳೆ, ಅಮಚವಾಡಿ ಗ್ರಾಮಗಳಲ್ಲಿ ಮಳೆ ರಭಸಕ್ಕೆ ಕೆಲವು ಮನೆಗಳ ಗೋಡೆ ಕುಸಿದಿದ್ದು, ಶಾಸಕ ಸಿ. ಪುಟ್ಟರಂಗಶೆಟ್ಟಿ ಶನಿವಾರ ಈ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶಿಥಿಲವಾಗಿರುವ ಮನೆಗಳಲ್ಲಿ ವಾಸಿಸದಂತೆ ನಿವಾಸಿಗಳಿಗೆ ಸಲಹೆ ನೀಡಿದ ಶಾಸಕರು, ಈ ಮನೆಗಳನ್ನು ತೆರವುಗೊಳಿಸಿ ಹೊಸ ಮನೆ ನಿರ್ಮಿಸಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮಳೆಯಿಂದ ಹಾನಿಗೊಳಗಾದ ಮನೆಗಳ ಮಾಲೀಕರಿಗೆ ಸರ್ಕಾರದಿಂದ ಶೀಘ್ರ ಪರಿಹಾರ ಒದಗಿಸುವ ಭರವಸೆ ನೀಡಿದರು.

ಅಮಚವಾಡಿ ಗ್ರಾಮದ ಹೊಸ ಬಡಾವಣೆಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಕೊಳಚೆ ನೀರು ತುಂಬಿ ಹರಿದು ರಸ್ತೆಗೆ ಹಾನಿಯಾಗಿರುವುದನ್ನು ಗಮನಿಸಿದ ಶಾಸಕರು, ನೂತನ ರಸ್ತೆ ಮಾಡಿಕೊಡುವ ಆಶ್ವಾಸನೆ ನೀಡಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯ ಪುಟ್ಟಸ್ವಾಮಿ, ಸಿದ್ದರಾಜು, ನಾಗರಾಜು, ಮುಖಂಡರಾದ ದೊರೆಸ್ವಾಮಿ, ಮಹೇಶ್, ರಾಜಸ್ವ ನಿರೀಕ್ಷಕ ಮಹೇಶ್, ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT