ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ಗೆ ಕೈಲಾಶ ಸತ್ಯಾರ್ಥಿ ಭೇಟಿ

Last Updated 11 ಸೆಪ್ಟೆಂಬರ್ 2017, 6:48 IST
ಅಕ್ಷರ ಗಾತ್ರ

ಬೀದರ್: ‘ಜಿಲ್ಲೆಯಲ್ಲಿ ಸೆಪ್ಟೆಂಬರ್‌ 23 ಮತ್ತು 24 ರಂದು ನೊಬೆಲ್‌ ಪುರಸ್ಕೃತ ಕೈಲಾಶ ಸತ್ಯಾರ್ಥಿ ಅವರ ನೇತೃತ್ವದಲ್ಲಿ ‘ಭಾರತ ಯಾತ್ರೆ’ ನಡೆಯಲಿದ್ದು, ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಡಾ. ಎಚ್.ಆರ್. ಮಹಾದೇವ ತಿಳಿಸಿದರು. ಇಲ್ಲಿ ಈಚೆಗೆ ನಡೆದ ಭಾರತ ಯಾತ್ರೆ ಕಾರ್ಯಕ್ರಮದ ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು.

‘ಕೈಲಾಶ ಸತ್ಯಾರ್ಥಿ ಅವರು ಮಕ್ಕಳ ಸಂರಕ್ಷಣೆ ಕುರಿತು ಸೆ.23 ರಂದು ನಡೆಸುವ ಸಂವಾದದಲ್ಲಿ ಆಯ್ದ ಕೆಲವು ಶಾಲೆಗಳ ಮಕ್ಕಳು ಸೇರಿದಂತೆ ಗ್ರಾಮೀಣ ಮಕ್ಕಳಿಗೂ ಅವಕಾಶ ಕಲ್ಪಿಸಬೇಕು. ಶಾಲೆಗಳಿಗೆ ಸುತ್ತೋಲೆ ಕಳುಹಿಸಿ, ಸಂವಾದಕ್ಕೆ ವಿದ್ಯಾರ್ಥಿಗಳ ಪ್ರಶ್ನೆಗಳನ್ನು ಆಹ್ವಾನಿಸಿ, ಆಯ್ದ ಪ್ರಶ್ನೆಗಳು ಇರುವ ವ್ಯವಸ್ಥೆ ಮಾಡಬೇಕು. ಮಕ್ಕಳಿಗೆ ಮಾರ್ಗದರ್ಶನ ನೀಡಿ ಸಂವಾದವು ಗಂಭೀರವಾಗಿ ನಡೆಯುವಂತೆ ನೋಡಿಕೊಳ್ಳಬೇಕು’ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

‘ಕೈಲಾಶ ಸತ್ಯಾರ್ಥಿ ಅವರನ್ನು ಶಹಾಪುರ ಗೇಟ್ ಬಳಿ ಸ್ವಾಗತಿಸಲಾಗುವುದು. ಬಳಿಕ ಭಾರತ ಯಾತ್ರೆಯು ಗುಂಪಾ ರಿಂಗ್ ರೋಡ್, ಕುಂಬರವಾಡ ಕ್ರಾಸ್, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಜಿಲ್ಲಾಧಿಕಾರಿ ಕಚೇರಿ, ಪ್ರಮುಖ ರಸ್ತೆಗಳ ಮೂಲಕ ನೆಹರೂ ಕ್ರೀಡಾಂಗಣಕ್ಕೆ ತಲುಪಲಿದೆ’ ಎಂದು ತಿಳಿಸಿದರು.

‘ಯಾತ್ರೆಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ, ಮಕ್ಕಳ ಕಲ್ಯಾಣ ಸಮಿತಿ, ಬಾಲ ನ್ಯಾಯ ಮಂಡಳಿ, ಬಾಲ ವಿಕಾಸ ಅಕಾಡೆಮಿ, ಜಿಲ್ಲಾ ಬಾಲಭವನ, ಮಕ್ಕಳ ಸಹಾಯವಾಣಿ, ವಿವಿಧ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರುಗಳು, ಸ್ವಯಂ ಸೇವಾ ಸಂಸ್ಥೆಯ ಪದಾಧಿಕಾರಿಗಳು ಪಾಲ್ಗೊಳ್ಳುವರು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಸಭೆಗೆ ತಿಳಿಸಿದರು.

‘ಮೆರವಣಿಗೆಯಲ್ಲಿ ಜಿಲ್ಲೆಯ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಕಲಾ ತಂಡಗಳಿರಬೇಕು. ಸಂಪೂರ್ಣ ಮಕ್ಕಳ ಕಾರ್ಯಕ್ರಮಗಳಿಗೆ ಅವಕಾಶ ನೀಡಬೇಕು. ಇದಕ್ಕೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಬೇಕು’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಕಾರ್ಮಿಕ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಉತ್ತಮ ವಿಷಯ ವಸ್ತುಗಳನ್ನು ಹೊಂದಿರುವ ಕನಿಷ್ಠ 10 ಸ್ತಬ್ಧ ಚಿತ್ರಗಳನ್ನು ಸಿದ್ಧಪಡಿಸಬೇಕು ಎಂದು ಸೂಚನೆ ನೀಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಸಂಚಾರಿ ಶೌಚಾಲಯಗಳ ವ್ಯವಸ್ಥೆ ಮಾಡಬೇಕು ಎಂದು ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು. ಕಾರ್ಯಕ್ರಮದಲ್ಲಿ ಅಗತ್ಯ ಪೊಲೀಸ್ ಬಂದೋಬಸ್ತ್ ಕಲ್ಪಿಸಲು ಪೊಲೀಸ್ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.

ವೇದಿಕೆ ಕಾರ್ಯಕ್ರಮದಲ್ಲಿ ಬಾಲ್ಯ ವಿವಾಹ, ಬಾಲ ಕಾರ್ಮಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಎರಡು ನಾಟಕಗಳು ಮತ್ತು ಒಂದು ನೃತ್ಯ ಕಾರ್ಯಕ್ರಮ ಪ್ರದರ್ಶಿಸುವುದಾಗಿ ಸ್ವಯಂ ಸೇವಾ ಸಂಸ್ಥೆ ಹಾಗೂ ಖಾಸಗಿ ಕಾಲೇಜು ಅಧಿಕಾರಿಗಳು ತಿಳಿಸಿದರು. ಅಲ್ಲದೇ ಮಕ್ಕಳಿಂದಲೇ ವಿಭಿನ್ನ ಸಾಂಸಂಸ್ಕೃತಿ ಕಾರ್ಯಕ್ರಮಗಳನ್ನು ಆಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಂಸದ ಭಗವಂತ ಖೂಬಾ ಮಾತನಾಡಿ, ‘ಕೈಲಾಶ ಸತ್ಯಾರ್ಥಿ ಅವರ ಕಾರ್ಯಕ್ರಮದಲ್ಲಿ ಮಕ್ಕಳ ಪ್ರತಿಭೆ ಅನಾವರಣವಾಗಲಿ. ಮೆರವಣಿಗೆಯಲ್ಲಿ ನಗರದ ಎಲ್ಲಾ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತ ಅಗತ್ಯ ವ್ಯವಸ್ಥೆ ಮಾಡಬೇಕು’ ಎಂದು ಸಲಹೆ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಗೌರಿಶಂಕರ್ ಪರ್ತಾಪುರೆ ಮಾತನಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಡಿ.ಷಣ್ಮುಖ, ಉಪವಿಭಾಗಾಧಿಕಾರಿ ಶಿವಕುಮಾರ ಶೀಲವಂತ್ ಇದ್ದರು. ವಿವಿಧ ಇಲಾಖೆ ಅಧಿಕಾರಿಗಳು, ಮಕ್ಕಳ ಕಲ್ಯಾಣ ಸಮಿತಿ, ಬಾಲ ನ್ಯಾಯ ಮಂಡಳಿ, ಬಾಲವಿಕಾಸ ಅಕಾಡೆಮಿ, ಜಿಲ್ಲಾ ಬಾಲಭವನ, ಮಕ್ಕಳ ಸಹಾಯವಾಣಿ, ವಿವಿಧ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರುಗಳು, ಸ್ವಯಂ ಸೇವಾ ಸಂಸ್ಥೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT