ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆವೆ ಮಣ್ಣಿನ ಕಲಾಕೃತಿಗಳು

Last Updated 11 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಶಿಥಿಲವಾದ ಕೋಟೆ, ಬೂಟಿನಿಂದ ಇಣುಕಿ ಹಾಕುತ್ತಿರುವ ಮೂಷಿಕ, ಚನ್ನಮಣೆ ಆಟದಲ್ಲಿ ತೊಡಗಿರುವ ಮಕ್ಕಳು, ಕೋಳಿ ಕಾಳಗ, ನಾಗಾರಾಧನೆ, ಯಕ್ಷಗಾನ ಪ್ರಸಂಗ, ನಾಗಮಂಡಲದ ರಸವತ್ತಾದ ಸನ್ನಿವೇಶ...

ಒಂದೇ ಸೂರಿನಲ್ಲಿ ಇಂತಹ ಸಾಂಸ್ಕೃತಿಕ ವೈವಿಧ್ಯವನ್ನೆಲ್ಲಾ ನೀವು ಕಾಣಬೇಕೇ? ಹಾಗಾದರೆ ಒಮ್ಮೆ ಬನ್ನಿ ಉಡುಪಿ ಜಿಲ್ಲೆಯ ಪಡುಬಿದ್ರಿಗೆ. ಅಲ್ಲಿನ ಅಡವೆ ಎಂಬ ಪ್ರದೇಶದಲ್ಲಿರುವ ‘ಚಿತ್ರಾಲಯ’ಕ್ಕೆ. ಈ ಆಲಯದಲ್ಲಿರುವ ಆವೆ ಮಣ್ಣಿನ ಕಲಾಕೃತಿಗಳು ಕಲಾಸಕ್ತನನ್ನು ಆಕರ್ಷಿಸಲು ಮತ್ತು ಸ್ವಾಗತಿಸಲು ತಾ ಮುಂದು, ತಾ ಮುಂದು ಎಂದು ಕಾಯುತ್ತಿವೆ.

ಅಂದಹಾಗೆ, ಕರಾವಳಿ ಹಲವು ವೈಶಿಷ್ಟ್ಯಗಳ ಸಂಗಮ. ಆ ವೈಶಿಷ್ಟ್ಯವನ್ನೆಲ್ಲ ಇಲ್ಲಿನ ಕಲಾಕೃತಿಗಳಲ್ಲಿ ಹಿಡಿದಿಡುವ ಯತ್ನ ಮಾಡಲಾಗಿದೆ. ಈ ಚಿತ್ರಾಲಯದಲ್ಲಿ ಸುಮಾರು ನೂರು ಶಿಲ್ಪಗಳಿವೆ. ಎಲ್ಲವೂ ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ಇಂತಹ ವಿಭಿನ್ನ ಕಲಾಲೋಕವನ್ನು ಸೃಷ್ಟಿಸಿದವರು ಕಲಾವಿದ ವೆಂಕಿ ಫಲಿಮಾರು. ಅವರಿಗೆ ಆವೆ ಮಣ್ಣಿನ ಕಲೆಯಲ್ಲಿ ಅಪಾರ ಆಸಕ್ತಿ.

ಕರಾವಳಿಯಲ್ಲಿ ಹೆಂಚನ್ನು ತಯಾರಿಸಲು ಹೆಚ್ಚಾಗಿ ಆವೆ ಮಣ್ಣನ್ನು ಬಳಸುತ್ತಾರೆ. ಇದೇ ಮಣ್ಣನ್ನು ಬಳಸಿ ಅತ್ಯದ್ಭುತವಾದ ಶಿಲ್ಪಗಳನ್ನು ರಚಿಸಿದ್ದಾರೆ ವೆಂಕಿ. ಈ ಮಣ್ಣಿನಲ್ಲಿ ರಚಿಸಿದ ಕಲಾಕೃತಿಗಳು ಬಹಳಷ್ಟು ನೈಜತೆಯಿಂದ ಕೂಡಿದ್ದು, ಗಟ್ಟಿಯಾಗಿರುತ್ತವೆ.

ಆವೆ ಮಣ್ಣಿನಲ್ಲಿ ಸುಂದರ ಕಲಾಕೃತಿಗಳನ್ನು ತಯಾರಿಸಬಹುದು ಎಂದು ತೋರಿಸುವುದು ಸಹ ಚಿತ್ರಾಲಯದ ಉದ್ದೇಶಗಳಲ್ಲಿ ಒಂದಾಗಿದೆ ಎಂದು ಅವರು ಹೇಳುತ್ತಾರೆ.

ತೆಂಗು, ಅಡಿಕೆ ತೋಟದ ಮುಂಭಾಗದಲ್ಲಿ ಚಿತ್ರಾಲಯ ನಿರ್ಮಾಣವಾಗಿದೆ. ‘ಹಲವಾರು ವರ್ಷಗಳಿಂದ ಇಂತಹ ಕಲಾತಾಣವೊಂದನ್ನು ನಿರ್ಮಿಸಬೇಕೆಂಬ ಉದ್ದೇಶವಿತ್ತು. ಮಣ್ಣಿನಲ್ಲೇ ಅದ್ಭುತ ಶಿಲ್ಪಗಳನ್ನು ರಚಿಸಬಹುದು ಎಂಬುದನ್ನು ತಿಳಿಸುವ ಕನಸು ಸಹ ಇತ್ತು. ಅದರಲ್ಲಿಯೂ ಕರಾವಳಿಯ ಆಚರಣೆ, ನಂಬಿಕೆ, ಜನ-ಜೀವನದ ಪರಿಚಯ ಮಾಡಿಕೊಡುವುದರ ಮೂಲಕ ಮುಂದಿನ ಪೀಳಿಗೆಗೆ ಇದನ್ನು ಬಳುವಳಿಯಾಗಿ ನೀಡುವುದು ನನ್ನ ಗುರಿಯಾಗಿತ್ತು. ಅದಕ್ಕೆ ತಕ್ಕಂತೆಯೇ ಈ ಕಲಾತಾಣವನ್ನು ನಿರ್ಮಿಸಿದ್ದೇನೆ’ ಎಂದು ಅವರು ಹೇಳುತ್ತಾರೆ.

ಪಡುಬಿದ್ರಿ ಕಾರ್ಕಳ ಮಾರ್ಗದಲ್ಲಿ ಫಲಿಮಾರು ಸಮೀಪ ಇರುವ ಅಡವೆಯಲ್ಲಿ ಈ ಸುಂದರ ಕಲಾತಾಣವಿದೆ. ರಜಾದಿನಗಳ ಪ್ರವಾಸದ ಪಟ್ಟಿಯಲ್ಲಿ ಇಲ್ಲಿಯ ಹೆಸರನ್ನೂ ಸೇರಿಸಿಕೊಳ್ಳಲು ಮರೆಯಬೇಡಿ.


ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT