ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮವಸ್ತ್ರ ಧರಿಸದ ಬಾಲಕಿಗೆ ಹುಡುಗರ ಶೌಚಾಲಯದಲ್ಲಿ ನಿಲ್ಲುವ ಶಿಕ್ಷೆ?

Last Updated 11 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಹೈದರಾಬಾದ್‌: ಶಾಲಾ ಸಮವಸ್ತ್ರ ಧರಿಸದ ಕಾರಣಕ್ಕೆ, ಐದನೇ ತರಗತಿಯಲ್ಲಿ ಓದುತ್ತಿರುವ 11 ವರ್ಷದ ತಮ್ಮ ಮಗಳಿಗೆ ಗಂಡು ಮಕ್ಕಳ ಶೌಚಾಲಯದಲ್ಲಿ ನಿಲ್ಲುವ ಶಿಕ್ಷೆಯನ್ನು ದೈಹಿಕ ಶಿಕ್ಷಕಿ ವಿಧಿಸಿದ್ದಾಗಿ ಬಾಲಕಿಯ ತಂದೆ ದೂರಿದ್ದಾರೆ.

‘ಶನಿವಾರ ಸಮವಸ್ತ್ರ ಧರಿಸದೇ ಹೋಗಿದ್ದ ನಮ್ಮ ಮಗಳನ್ನು ಶಿಕ್ಷಕಿ ಪ್ರಶ್ನಿಸಿದ್ದಾರೆ. ಸಮವಸ್ತ್ರವಿಲ್ಲದೇ ಒಂದು ದಿನ ತರಗತಿಗೆ ಅನುವು ಮಾಡಿಕೊಡಬೇಕೆಂದು ನಾವು ಮಗಳ ಡೈರಿಯಲ್ಲಿ ಬರೆದುಕೊಟ್ಟಿದ್ದೆವು. ಆದರೆ ಆಕೆಯಿಂದ ಆ ಕುರಿತ ವಿವರಣೆಯನ್ನು ಸಹ ಕೇಳಲು ಶಿಕ್ಷಕಿ ತಯಾರಿರಲಿಲ್ಲ. ಹಾಗಾಗಿ, ಅವರು ನನ್ನ ಮಗಳನ್ನು ಬಲವಂತವಾಗಿ ಎಳೆದೊಯ್ದು ಬಾಲಕರ ಶೌಚಾಲಯದಲ್ಲಿ ಐದು ನಿಮಿಷ ನಿಲ್ಲಿಸಿದ್ದಾರೆ. ಇಂತಹ ಕೃತ್ಯದಿಂದ ನನ್ನ ಮಗಳ ಮನಸ್ಸಿಗೆ ನೋವಾಗಿದೆ ಮಾತ್ರವಲ್ಲದೆ ಆಕೆಯ ಘನತೆಗೆ ಪೆಟ್ಟಾಗಿದೆ. ಅವಮಾನಿತಳಾಗಿರುವ ಆಕೆ ತನ್ನ ಸಹಪಾಠಿಗಳೊಂದಿಗೆ ಬೆರೆಯಲು ನಿರಾಕರಿಸುತ್ತಿದ್ದಾಳೆ’ ಎಂದು ವಿದ್ಯಾರ್ಥಿನಿಯ ತಂದೆ ಹೇಳಿದ್ದಾರೆ.

ಘಟನೆಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಶಾಲೆಯ ಬಳಿ ಸೋಮವಾರ ನೆರೆದಿದ್ದ ಬೃಹತ್‌ ಸಂಖ್ಯೆಯ ನಾಗರಿಕರು ಪ್ರತಿಭಟನೆ ನಡೆಸಿದರು. ಘಟನೆಯ ವಿಚಾರಣೆ ನಡೆಸಿ ವರದಿ ನೀಡಲು ಜಿಲ್ಲಾ ಶಿಕ್ಷಣ ಅಧಿಕಾರಿಗೆ ರಾಜ್ಯ ಸರ್ಕಾರ ಆದೇಶಿಸಿದೆ.

ತೆಲಂಗಾಣದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಕೆ.ಟಿ.ರಾಮರಾವ್‌ ಘಟನೆಯನ್ನು ಖಂಡಿಸಿದ್ದು, ಈ ವಿಷಯವನ್ನು ಉಪ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವ ಕದಿಯಂ ಶ್ರೀಹರಿ ಅವರ ಗಮನಕ್ಕೆ ತರುವುದಾಗಿ ಹೇಳಿದ್ದಾರೆ.

ತಮ್ಮ ಮೇಲಿನ ಆರೋಪವನ್ನು ದೈಹಿಕ ಶಿಕ್ಷಕಿ ನಿರಾಕರಿಸಿದ್ದಾರೆ. ‘ಸಮವಸ್ತ್ರ ಏಕೆ ಧರಿಸಿಲ್ಲ ಎಂದು ಮಾತ್ರ ವಿದ್ಯಾರ್ಥಿನಿಗೆ ಪ್ರಶ್ನಿಸಿದ್ದೇನೆ. ಆಕೆ ಗಂಡು ಮಕ್ಕಳ ಶೌಚಾಲಯದ ಸಮೀಪ ನಿಂತಿದ್ದಳು ಅಷ್ಟೆ. ಅದರ ಒಳಗೆ ನಿಲ್ಲಲು ನಾನು ಹೇಳಲಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT