ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೇಳುವುದು ಒಂದು, ಮಾಡುವುದು ಮತ್ತೊಂದು

Last Updated 13 ಸೆಪ್ಟೆಂಬರ್ 2017, 9:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲಾಡಳಿತ ಕೇಂದ್ರದಲ್ಲಿ ₨ 4.50 ಕೋಟಿ ವೆಚ್ಚದಲ್ಲಿ ತಾಯಿ ಮತ್ತು ಮಗು ಆರೈಕೆ ಕೇಂದ್ರ ನಿರ್ಮಿಸುವ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸಿ ಒಂದು ವರ್ಷ, ಎರಡು ತಿಂಗಳು ಕಳೆದಿವೆ. ಈವರೆಗೆ ಆರೈಕೆ ಕೇಂದ್ರ ಎಲ್ಲಿ ತಲೆ ಎತ್ತುತ್ತಿದೆ ಎನ್ನುವ ಸುಳಿವೂ ಸಾರ್ವಜನಿಕರಿಗೆ ಸಿಕ್ಕಿಲ್ಲ.

ಅದ್ದೂರಿಯಾಗಿ ನಡೆದ ಮುಖ್ಯಮಂತ್ರಿ ಅವರ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತದ ವತಿಯಿಂದ ‘ಮುನ್ನಡೆಯತ್ತ ಚಿಕ್ಕಬಳ್ಳಾಪುರ’ ಎಂಬ ಹೊತ್ತಿಗೆಯನ್ನು ಹಂಚಲಾಗಿತ್ತು. ಅದರಲ್ಲಿ ‘ಮುಂದಿನ ಹೆಜ್ಜೆಗಳು’ ಎಂಬ ಶೀರ್ಷಿಕೆಯಡಿ ಗ್ರಾಫಿಕ್ಸ್‌ನಲ್ಲಿ ಸಿದ್ಧಪಡಿಸಿದ ‘ಅಂದ’ವಾದ ಕಟ್ಟಡದ ಚಿತ್ರ ಮುದ್ರಿಸಿ, ₨ 4.50 ಕೋಟಿ ವೆಚ್ಚದ ತಾಯಿ ಮತ್ತು ಮಗು ಆರೈಕೆ ಕೇಂದ್ರದ ಶಂಕುಸ್ಥಾಪನೆ ಕಾಮಗಾರಿ ಎಂದು ತೋರಿಸಲಾಗಿತ್ತು. ಸದ್ಯ ಆ ಕಾಮಗಾರಿ ಎಲ್ಲಿ ನಡೆದಿದೆ ಎನ್ನುವುದು ನಾಗರಿಕರ ಪ್ರಶ್ನೆ.

ಈ ಕುರಿತು ಆರೋಗ್ಯ ಇಲಾಖೆಯ ಅಧಿಕಾರಿಗಳನ್ನು ವಿಚಾರಿಸಿದರೆ ತಾಯಿ ಮತ್ತು ಮಗು ಆರೈಕೆ ಕೇಂದ್ರಕ್ಕಾಗಿ ಹೊಸ ಕಟ್ಟಡ ಕಟ್ಟುವುದಿಲ್ಲ. ಬದಲು ಜಿಲ್ಲಾ ಆಸ್ಪತ್ರೆಯ ಹಳೆಯ ಕಟ್ಟಡವನ್ನೇ ₨ 1.50 ಕೋಟಿ ವೆಚ್ಚದಲ್ಲಿ ನವೀಕರಿಸಿ, ಅದರಲ್ಲಿಯೇ ‌‌//‌‌‌ ಒಳಗೆ 135 ಹಾಸಿಗೆಯುಳ್ಳ ಆರೈಕೆ ಕೇಂದ್ರ ಕಾರ್ಯಾರಂಭ ಮಾಡುತ್ತೇವೆ ಎನ್ನುತ್ತಾರೆ.
ಒಂದೇ ಒಂದು ಆಸನ ಕೂಡ ಇಲ್ಲದ ಜಿಲ್ಲಾ ಆಸ್ಪತ್ರೆಯ ‘ಖಾಲಿ’ ಹೊಸ ಕಟ್ಟಡವನ್ನು ಮುಖ್ಯಮಂತ್ರಿ ಅವರು ತರಾತುರಿಯಲ್ಲಿ ಉದ್ಘಾಟಿಸಿ ಹೋಗಿದ್ದರು. ಉದ್ಘಾಟನೆಗೊಂಡ ಬಳಿಕ ಆ ಕಟ್ಟಡದಲ್ಲಿ ಆಸ್ಪತ್ರೆ ಕಾರ್ಯಾರಂಭ ಮಾಡಲು ಬರೋಬರಿ// ಒಂಬತ್ತು ತಿಂಗಳು ಕಳೆದಿತ್ತು. ಹಳೆ// ಕಟ್ಟಡದಿಂದ ಆಸ್ಪತ್ರೆಯನ್ನು ಸಂಪೂರ್ಣವಾಗಿ ಸ್ಥಳಾಂತರಿಸುವ ಹೊತ್ತಿಗೆ ವರ್ಷವೇ ಕಳೆದಿತ್ತು.

ತಾಯಿ ಮತ್ತು ಮಗು ಆರೈಕೆ ಕೇಂದ್ರ ತೆರೆಯಲು ಉದ್ದೇಶಿಸಿರುವ ಜಿಲ್ಲಾ ಆಸ್ಪತ್ರೆಯ ಹಳೆ ಕಟ್ಟಡ ಸದ್ಯ ಕಳೆದ ಮೂರು ತಿಂಗಳಿಂದ ಧೂಳು// ತಿನ್ನುತ್ತಿದೆ. ಸದ್ಯ ಆ ಕಟ್ಟಡದ ಸ್ಥಿತಿ ‘ಹೇಳುವವರಿಲ್ಲದ ಮನೆ ಹಾಳು ಬಿತ್ತು’ ಎನ್ನುವಂತಾಗಿದೆ. ಶಂಕುಸ್ಥಾಪನೆಗೊಂಡು ವರ್ಷ ಕಳೆದ ಆರೈಕೆ ಕೇಂದ್ರದ ಯೋಜನೆಯ ಪ್ರಸ್ತಾವವನ್ನು ಜಿಲ್ಲಾಡಳಿತ ಇತ್ತೀಚೆಗಷ್ಟೇ ಸರ್ಕಾರಕ್ಕೆ ಕಳುಹಿಸಿಕೊಟ್ಟಿದೆ! ಹೀಗಾಗಿ ಆರೋಗ್ಯ ಇಲಾಖೆಯವರು ಏನೂ ಕೇಳಿದರೂ ಸದ್ಯ ಜಿಲ್ಲಾಡಳಿತದತ್ತ ಬೊಟ್ಟು ತೋರಿಸುತ್ತಿದ್ದಾರೆ.

ಕಳೆದ ಏಪ್ರಿಲ್‌ನಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಡಿ.ರವಿಶಂಕರ್, ‘ಮೇ ಅಂತ್ಯದೊಳಗೆ ಹಳೆ ಜಿಲ್ಲಾಸ್ಪತ್ರೆಯನ್ನು ನವೀಕರಿಸಲು ಹಸ್ತಾಂತರಿಸಬೇಕಿದೆ. ಅದು ಮುಂದಿನ ವರ್ಷದ ಒಳಗೆ 135 ಹಾಸಿಗೆಯುಳ್ಳ ತಾಯಿ ಮತ್ತು ಮಗು ಆರೈಕೆ ಕೇಂದ್ರವಾಗಿ ಬದಲಾಗಲಿದೆ. ಅದಕ್ಕಾಗಿಯೇ ಹೆಚ್ಚುವರಿ ಪ್ರಸೂತಿ ತಜ್ಞರನ್ನು ಅರವಳಿಕೆ, ಮಕ್ಕಳ ತಜ್ಞರು ನೇಮಕ ಮಾಡಿಕೊಳ್ಳಲಾಗುತ್ತದೆ’ ಎಂದು ತಿಳಿಸಿದ್ದರು.

ಮುಂದಿನ ವರ್ಷ ಬರಲು ಇನ್ನು ಮೂರು ತಿಂಗಳು ಮಾತ್ರ ಬಾಕಿ ಇದೆ. ಈವರೆಗೆ ನವೀಕರಣ ಕಾಮಗಾರಿಗೆ ಅನುಮೋದನೆ ದೊರೆತಿಲ್ಲ. ಅದು ದೊರೆತು, ಕಾಮಗಾರಿ ಪೂರ್ಣಗೊಂಡು ಕೇಂದ್ರ ಸಿದ್ಧವಾಗಬೇಕಾದರೆ ಇನ್ನೂ ಒಂದು ವರ್ಷ ಬೇಕಾಗುತ್ತದೆ. ಈ ವಿಳಂಬಕ್ಕೆ ಯಾರು ಹೊಣೆ ಎನ್ನುವ ಪ್ರಶ್ನೆಗೆ ಆರೋಗ್ಯ ಇಲಾಖೆಯಾಗಲಿ, ಜಿಲ್ಲಾಡಳಿತವಾಗಲಿ ಯಾರ ಬಳಿಯೂ ಉತ್ತರ ಸಿಗುತ್ತಿಲ್ಲ.

‘ಜಿಲ್ಲಾ ಆಸ್ಪತ್ರೆ ಹಳೆ ಕಟ್ಟಡ ನವೀಕರಣ ಕಾಮಗಾರಿ ಪ್ರಸ್ತಾವವನ್ನು ಜಿಲ್ಲಾಧಿಕಾರಿ ಅವರ ಮೂಲಕ ಯೋಜನಾ ಇಲಾಖೆಗೆ ಕಳುಹಿಸಿದ್ದೇವೆ. ಅನುಮೋದನೆ ಸಿಕ್ಕ ಬಳಿಕ ಕಾಮಗಾರಿ ಆರಂಭಗೊಳ್ಳಲಿದೆ. ಸದ್ಯ ನಮಗೆ ನವೀಕರಣ ಕಾಮಗಾರಿಗಾಗಿ ₨ 1.50 ಕೋಟಿ ಕೊಟ್ಟಿದ್ದಾರೆ. ಅಗತ್ಯ ಬಿದ್ದರೆ ಕೊಡುವುದಾಗಿ ಹೇಳಿದ್ದಾರೆ’ ಎನ್ನುತ್ತಾರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ವಿಜಯಕುಮಾರ್‌.

‘ಈ ಸರ್ಕಾರ ಬರೀ ಉದ್ಘಾಟನೆ, //ಘೋಷಣೆ.// ಶಂಕುಸ್ಥಾಪನೆ ಅಷ್ಟಕ್ಕೇ ಸೀಮಿತವಾಗಿದೆ. ಈ ಮೂರು ಪದಗಳ ಅರ್ಥ ಸರ್ಕಾರ ನಡೆಸುವವರಿಗೆ ಗೊತ್ತಿಲ್ಲದಂತೆ ಕಾಣುತ್ತಿದೆ. ಉದ್ಘಾಟನೆ ಎಂದರೆ ಆ ದಿನದಿಂದ ಕಾರ್ಯಾರಂಭ ಮಾಡಬೇಕು ಎಂದರ್ಥ. ಆದರೆ ಹೊಸ ಕಟ್ಟಡದಲ್ಲಿ ಜಿಲ್ಲಾ ಆಸ್ಪತ್ರೆ ಕಾರ್ಯಾರಂಭ ಮಾಡಲು ವರ್ಷ ಕಳೆಯಿತು. ಶಂಕುಸ್ಥಾಪನೆ ಎಂದರೆ ಆ ದಿನದಿಂದ ಕಾಮಗಾರಿಗೆ ಚಾಲನೆ ದೊರೆತಿದೆ ಎಂದರ್ಥ. ಆದರೆ ಇಲ್ಲಿ ಈವರೆಗೆ ಆರೈಕೆ ಕೇಂದ್ರದ ಕಾಮಗಾರಿಯೇ ಆರಂಭಗೊಂಡಿಲ್ಲ. ಇವೆಲ್ಲ ಏನು ಸೂಚಿಸುತ್ತವೆ’ ಎಂದು ಪ್ರಶ್ನಿಸುತ್ತಾರೆ ಸಾಮಾಜಿಕ ಹೋರಾಟಗಾರ ಯಲುವಹಳ್ಳಿ ಸೊಣ್ಣೇಗೌಡ.
‘ಜನರಿಗೆ ಬಣ್ಣ ಬಣ್ಣ ಗ್ರಾಫಿಕ್ಸ್‌ ಚಿತ್ರಗಳನ್ನು ತೋರಿಸಿ, ಮರುಳು ಮಾಡಿ, ವ್ಯವಸ್ಥಿತವಾಗಿ ವಂಚಿಸುವ ಕೆಲಸ ನಡೆಯುತ್ತಿದೆ. ಘೋಷಣೆಗಳಲ್ಲಿರುವ ಯೋಜನೆಗಳೆಲ್ಲ ಅನುಷ್ಠಾನಕ್ಕೆ ಬಂದಿದ್ದರೆ ಇಷ್ಟು ಹೊತ್ತಿಗೆ ಜಿಲ್ಲೆ ರಾಮರಾಜ್ಯವಾಗುತ್ತಿತ್ತು. ಇಂತಹ ಸೂಕ್ಷ್ಮಗಳೆಲ್ಲವನ್ನು ಜನರು ಅರ್ಥ ಮಾಡಿಕೊಳ್ಳಬೇಕಿದೆ’ ಎಂದು ಹೇಳಿದರು.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT