ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುರಸಗುಂಡಗಿ ಗ್ರಾಮಕ್ಕೆ ಹಿನ್ನೀರಿನ ಭೀತಿ

Last Updated 14 ಸೆಪ್ಟೆಂಬರ್ 2017, 7:39 IST
ಅಕ್ಷರ ಗಾತ್ರ

ಯಾದಗಿರಿ: ಭೀಮಾ ನದಿ ಉಕ್ಕಿ ಹರಿಯುತ್ತಿರುವ ಕಾರಣ ಸನ್ನತಿ ಬ್ಯಾರೇಜ್‌ ಭರ್ತಿಯಾಗಿದೆ. ಇದರಿಂದ ಜಿಲ್ಲೆಯ ಶಹಾಪುರ ತಾಲ್ಲೂಕಿನ ಹುರಸಗುಂಡಗಿ ಗ್ರಾಮಕ್ಕೆ ಮುಳುಗಡೆ ಭೀತಿ ಎದುರಾಗಿದೆ. ಮಹಾರಾಷ್ಟ್ರ ಮತ್ತು ರಾಜ್ಯದ ಉತ್ತರ ಕರ್ನಾಟಕದಲ್ಲಿ ನಿರಂತರ ಮಳೆಯಾಗುತ್ತಿದ್ದು, ಭೀಮಾಗೆ ನೀರು ಹರಿದು ಬರುತ್ತಿದ್ದು, 4 ಟಿಎಂಸಿ ಸಾಮರ್ಥ್ಯದ ಸನ್ನತಿ ಬ್ಯಾರೇಜ್ ಸಂಪೂರ್ಣ ಭರ್ತಿಯಾಗಿದೆ.

ಬ್ಯಾರೇಜಿನ ಹಿನ್ನೀರು ಪ್ರದೇಶದಲ್ಲೇ ಇರುವ ಹುರಸಗುಂಡಗಿ ಗ್ರಾಮದಲ್ಲಿ 14ಕ್ಕೂ ಹೆಚ್ಚು ಮನೆಗಳನ್ನು ಹಿನ್ನೀರು ಆಪೋಷನ ತೆಗೆದುಕೊಂಡಿದೆ. ಮುಳುಗಡೆ ಭೀತಿಗೊಳಗಾಗಿರುವ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಹಾಹಾಕಾರ ಎದ್ದಿದೆ. ಗ್ರಾಮಕ್ಕೆ ಹಾಗೂ ರೈತರ ಹೊಲಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಿನ್ನೀರಿನಲ್ಲಿ ಮುಳುಗಡೆಗೊಂಡಿವೆ. ಇದರಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

ಪುನರ್ವಸತಿ ಕಲ್ಪಿಸಿದರೂ ಸ್ಥಳ ಬಿಡದ ಜನ: ಸನ್ನತಿ ಬ್ಯಾರೇಜ್‌ ನಿರ್ಮಾಣ ಕಾಲಕ್ಕೆ ಹಿನ್ನೀರು ಪ್ರದೇಶದಲ್ಲಿ ಮುಳುಗಡೆಯಾಗಲಿರುವ  ಗ್ರಾಮಸ್ಥರನ್ನು ಸ್ಥಳಾಂತರಿಸಿದ್ದು, ಕೆಬಿಜೆಎನ್‌ಎಲ್‌ 2 ಕಿ.ಮೀ. ದೂರದಲ್ಲಿ 35 ಎಕರೆ ಪ್ರದೇಶದಲ್ಲಿ ಪುನರ್ವಸತಿ ಕಲ್ಪಿಸಿದೆ. ಆದರೆ, ಪರಿಹಾರ ವಿತರಣೆ ವೈಜ್ಞಾನಿಕವಾಗಿದೆ ಎಂದು ಆರೋಪಿಸಿರುವ ಗ್ರಾಮಸ್ಥರು ಪುನರ್ವಸತಿ ಕೇಂದ್ರಕ್ಕೆ ಹೋಗಿಲ್ಲ.

ಅಧಿಕಾರಿಗಳು ಬಡವರಿಗೆ ಕೇವಲ ₹2.50ಲಕ್ಷ ಪರಿಹಾರ ನೀಡಿದ್ದಾರೆ. ಇದರಿಂದ ಮನೆ ಬುನಾದಿಯೂ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಕನಿಷ್ಠ 10 ಅಡಿ ಆಳ ಬುನಾದಿ ತೆಗೆದು ನಿರ್ಮಿಸಬೇಕಿದೆ. ಇದಕ್ಕೆ ಕನಿಷ್ಠ ₹4ರಿಂದ 5ಲಕ್ಷ ಬೇಕಾಗುತ್ತದೆ. ಕನಿಷ್ಠ ಎಕರೆಗೆ ₹15ಲಕ್ಷವಾದರೂ ಪರಿಹಾರ ನೀಡಬೇಕು ಎಂದು ಒತ್ತಾಯಿಸಿರುವ ಗ್ರಾಮಸ್ಥರು, ಸರ್ಕಾರದ ಇಂಥ ಅವೈಜ್ಞಾನಿಕ ಪರಿಹಾರ ವಿತರಣೆ ವಿರುದ್ಧ ಸಂತ್ರಸ್ತರು ಹೈಕೋರ್ಟ್‌ ಮೆಟ್ಟಿಲು ಏರಿದ್ದಾರೆ.

14 ಮನೆಗಳಿಗೆ ಭೀತಿ: ಸದ್ಯ ಹಿನ್ನೀರಿನಲ್ಲಿ ಈರಮ್ಮ, ನಾಗರಾಜ, ತಾಯಪ್ಪ ತುಕನರ, ಚಂದಪ್ಪ ಮೇಲಗಿರಿ, ಚಂದ್ರಪ್ಪ ನಾಲ್ವರ, ದೇವಪ್ಪ ಚಂದ್ರಪ್ಪ ತುಕನರ, ಸೋಮಪ್ಪ ತುಕನರ, ಸಾಬಣ್ಣ ನಾಲ್ವರ, ಹಣಮಂತ, ಶಿವಪ್ಪ, ಚಂದ್ರಪ್ಪ ಅವರ ಮನೆಗಳುಮುಳುಗಿವೆ. ಗ್ರಾಮ ಮುಳುಗಡೆ ಭೀತಿ ಎದುರಾಗುತ್ತಿದ್ದಂತೆ ಸನ್ನತಿ ಬ್ಯಾರೇಜ್‌ನ ಎರಡು ಕ್ರೆಸ್ಟ್‌ ಗೇಟ್‌ ತೆರೆದಿದ್ದು, ನಿಧಾನವಾಗಿ ಹಿನ್ನೀರಿನ ತೀವ್ರತೆ ಕಡಿಮೆಯಾಗುತ್ತಿದೆ.

ಸಾಮಾಜಿಕ ನ್ಯಾಯ ಕಲ್ಪಿಸಿ: ‘ಈ ಊರಿನಲ್ಲಿ ನಮ್ಮ ಹಿರಿಯರು ಬಾಳಿ ಬದುಕಿದ್ದರಿಂದ ಭಾವನಾತ್ಮಕ ನಂಟು ಇದೆ. ಸರ್ಕಾರದ ಅವೈಜ್ಞಾನಿಕ ಪರಿಹಾರದಿಂದ ಊರು ಬಿಟ್ಟಿಲ್ಲ. ಸಮರ್ಪಕ ಪರಿಹಾರ ಕಲ್ಪಿಸಿದರೆ ನಾವು ಪುನರ್ವಸತಿ ಕೇಂದ್ರದತ್ತ ಹೋಗುತ್ತೇವೆ. ಮೊದಲು ಸರ್ಕಾರ ಪರಿಹಾರ ವಿತರಣೆಯಲ್ಲಿ ಸಾಮಾಜಿಕ ನ್ಯಾಯ ಕಲ್ಪಿಸಲಿ’ ಎಂದು ಗ್ರಾಮಸ್ಥರಾದ ಸಾಬಣ್ಣ ನಾಲ್ವರ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT