ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೇತರಿಸಿಕೊಳ್ಳದ ನಿಂಬೆಯ ಕಣಜ!

Last Updated 15 ಸೆಪ್ಟೆಂಬರ್ 2017, 6:03 IST
ಅಕ್ಷರ ಗಾತ್ರ

ವಿಜಯಪುರ: ಭೀಕರ ಬರ, ಜಲ ಕ್ಷಾಮಕ್ಕೆ ತುತ್ತಾಗಿದ್ದ ‘ನಿಂಬೆಯ ಕಣಜ’ ಇದುವರೆಗೂ ಚೇತರಿಕೆಯ ಹಾದಿಗೆ ಮರಳಿಲ್ಲ. ಬೆಳೆಗಾರರು ಮತ್ತು ಮಾರುಕಟ್ಟೆ ಮೇಲೆ ಒಂದರ ಮೇಲೊಂದು ಹೊಡೆತ ಬಿದ್ದಿದ್ದು, ಒಟ್ಟಾರೆ ಪರಿಣಾಮವನ್ನು ರೈತರೇ ಅನುಭವಿಸುತ್ತಿದೆ.

‘ಮೂರ್ನಾಲ್ಕು ವರ್ಷದ ಸತತ ಬರಕ್ಕೆ ನಿಂಬೆ ತೋಟಗಳೇ ಬಲಿಯಾಗಿವೆ. ಹರಸಾಹಸ ನಡೆಸಿ, ಸಾಲ ಮಾಡಿ ಟ್ಯಾಂಕರ್‌ ಮೂಲಕ ನೀರು ಹಾಯಿಸಿ ದವರ ತೋಟಗಳಲ್ಲೂ ನಿಂಬೆಯ ಇಳುವರಿ ಅಷ್ಟಕ್ಕಷ್ಟೇ ಇದೆ. ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಮಾರುಕಟ್ಟೆಗೆ ಆವಕವಾಗುವ ಪ್ರಮಾಣವೂ ಬಹಳ ಕಡಿಮೆಯಿದೆ. ಆದರೂ ಬೆಳೆಗಾರರಿಗೆ ಬೆಳೆಗೆ ವೆಚ್ಚ ಮಾಡಿದಷ್ಟು ಹಣವೂ ಕೈ ಸೇರುತ್ತಿಲ್ಲ’ ಎಂದು ವಿಜಯಪುರ ತಾಲ್ಲೂಕು ಅಡವಿ ಸಂಗಾಪುರದ ಸಂಜಯ ಕಳವಳ ವ್ಯಕ್ತಪಡಿಸಿದರು.

‘ಪ್ರಸ್ತುತ ಮಾರುಕಟ್ಟೆಯಲ್ಲಿ ನಿಂಬೆಯ ಧಾರಣೆ ಕೊಂಚ ಏರುಮುಖಿಯಾಗಿದೆ. ಆದರೆ ಈಗ ಬೆಳೆಗಾರರ ಬಳಿ ಉತ್ಪನ್ನವೇ ಇಲ್ಲ. ಜುಲೈ– ಆಗಸ್ಟ್‌ನಲ್ಲಿ ಸಾಕಷ್ಟು ಉತ್ಪನ್ನವಿತ್ತು. ಆಗ ಒಂದು ಡಾಗ್‌ (ಒಂದು ಸಾವಿರ ನಿಂಬೆಹಣ್ಣು)ಗೆ ₹300ರಿಂದ ₹ 600ರವರೆಗೆ ದರ ಇತ್ತು.  ಸಂಗ್ರಹಿಸಿ ಇಟ್ಟುಕೊಳ್ಳುವ ವ್ಯವಸ್ಥೆ ಇಲ್ಲದಿದ್ದುದರಿಂದ ಅನಿವಾರ್ಯವಾಗಿ ಅತ್ಯಂತ ಕಡಿಮೆ ಬೆಲೆಗೆ ಮಾರಬೇಕಾಯಿತು’ ಎಂದು ಇಂಡಿ ತಾಲ್ಲೂಕಿನ ತಾಂಬಾ ಗ್ರಾಮದ ಅಡಿವೆಪ್ಪ ರೊಟ್ಟಿ ಬೇಸರ ವ್ಯಕ್ತಪಡಿಸಿದರು.

800 ಡಾಗ್ ಆವಕ: ‘ವಿಜಯಪುರದ ನಿಂಬೆ ಮಾರುಕಟ್ಟೆಗೆ ಭಾನುವಾರ 800 ಡಾಗ್‌ ಉತ್ಪನ್ನ ಆವಕವಾಗಿತ್ತು. ₹ 500ರಿಂದ ₹ 1600ವರೆಗೂ ಹರಾಜಿ ನಲ್ಲಿ ಬಿಕರಿಯಾಯ್ತು. ಎರಡು ವಾರಗಳ ಹಿಂದೆ ಧಾರಣೆ ಕಡಿಮೆ ಇದ್ದಾಗ, ಬಹುತೇಕ ಉತ್ಪನ್ನ ₹ 500 ರಿಂದ ₹ 800ರ ದರಕ್ಕೆ ಮಾರಾಟ ವಾಯ್ತು’ ಎಂದು ಕೃಷಿ ಮಾರಾಟ ಇಲಾಖೆಯ ತರಕಾರಿ ವಿಭಾಗದ ಸೂಪರ್‌ವೈಸರ್‌ ನವೀನ್‌ ಪಾಟೀಲ ತಿಳಿಸಿದರು.

ರಫ್ತು ಕುಸಿತ: ‘ದುಬೈ, ಸೌದಿ ಅರೇಬಿಯಾ ಸೇರಿದಂತೆ ಏಷ್ಯಾ ಖಂಡದ ಅನೇಕ ರಾಷ್ಟ್ರಗಳಿಗೆ, ನವದೆಹಲಿ, ಬೆಂಗಳೂರು, ಮುಂಬೈ, ಹೈದರಾಬಾದ್, ಚೆನ್ನೈ ನಗರಕ್ಕೆ ವಿಜಯಪುರ ಮಾರುಕಟ್ಟೆ ಯಿಂದಲೇ ನಿಂಬೆಹಣ್ಣು ಕಳುಹಿಸಲಾ ಗುತ್ತಿತ್ತು. ಇದರಿಂದ ಮಾರುಕಟ್ಟೆ ಯಲ್ಲಿಯೂ ಒಳ್ಳೆಯ ದರ ಸಿಗುತ್ತಿತ್ತು. ಆದರೆ ಈಚೆಗೆ ಎಂಟತ್ತು ತಿಂಗಳಿಂದ ರಫ್ತು ಪ್ರಮಾಣ ಕುಸಿದಿದೆ. ದೇಶದ ಇತರೆಡೆ ಹೋಗುತ್ತಿದ್ದ ನಿಂಬೆಹಣ್ಣಿನ ಪ್ರಮಾಣವೂ ಕಡಿಮೆಯಾಗಿದೆ. ಇದ ರಿಂದಾಗಿ ದರವೂ ಕಡಿಮೆ ಯಾಗುತ್ತಿದೆ’ ಎಂದು ನವೀನ ಪಾಟೀಲ ಹೇಳಿದರು.

ನೋಟು ರದ್ದತಿ: ‘₹500, ₹1000 ಮೌಲ್ಯದ  ನೋಟುಗಳು ರದ್ದಾದ ಬಳಿಕ ನಿಂಬೆ ಮಾರುಕಟ್ಟೆ ತತ್ತರಿಸಿತ್ತು. ಚೇತರಿಸಿಕೊಂಡು ವಹಿವಾಟಿನ ಹಳಿಗೆ ಮರಳುವಷ್ಟರಲ್ಲಿ ಕಳೆದ ಜುಲೈ 1ರಿಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೊಂಡಿದೆ. ಇದು ಮಾರುಕಟ್ಟೆ ಮೇಲೆ ತೀವ್ರ ದುಷ್ಪರಿಣಾಮ ಬೀರಿದೆ’ ಎಂದು ಹೆಸರು ಬಹಿರಂಗಗೊಳಿಸಲು ಇಚ್ಛಿಸದ ವ್ಯಾಪಾರಿಯೊಬ್ಬರು ಮಾಹಿತಿ ನೀಡಿದರು.

‘ನಿಂಬೆಗೆ ಜಿಎಸ್‌ಟಿ ನಿಗದಿ ಪಡಿಸಿಲ್ಲ. ಆದರೆ, ಇದೀಗ ಎಲ್ಲ ವಹಿವಾಟು ಬ್ಯಾಂಕ್‌ ಮೂಲಕವೇ ನಡೆಯಬೇಕು. ನಮ್ಮ ವಹಿವಾಟಿಗೆ ಜಿಎಸ್‌ಟಿ ಅನ್ವಯ ವಾಗುವುದರಿಂದ ರಫ್ತಿನ ವಹಿವಾಟಿ ನಿಂದ ಬಹುತೇಕ ವರ್ತಕರು ದೂರವೇ ಉಳಿದಿದ್ದೇವೆ. ಪರಿಸ್ಥಿತಿ ನೋಡಿಕೊಂಡು ಮುಂದಿನ ನಿರ್ಧಾರ ತೆಗೆದು ಕೊಳ್ಳುತ್ತೇವೆ’ ಎಂದು ಅವರು ತಿಳಿಸಿದರು.

* * 

ನಿಂಬೆ ಅಭಿವೃದ್ಧಿ ಮಂಡಳಿ ಆದಷ್ಟು ಬೇಗ ಆರಂಭವಾಗಬೇಕು. ರೈತರ ಉತ್ಪನ್ನ ಕಾಪಿಡುವ ಅತ್ಯಾಧುನಿಕ ವ್ಯವಸ್ಥೆ ಜಾರಿಗೊಂಡರೆ ಅನುಕೂಲವಾಗುತ್ತದೆ
ರಾಜಶೇಖರ ನಿಂಬರಗಿ
ನಿಂಬೆ ಬೆಳೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT