ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟ್ಟಣದ ಹೃದಯಭಾಗದಲ್ಲಿ ನೈರ್ಮಲ್ಯ ಕೊರತೆ

Last Updated 16 ಸೆಪ್ಟೆಂಬರ್ 2017, 9:05 IST
ಅಕ್ಷರ ಗಾತ್ರ

ನರಸಿಂಹರಾಜಪುರ: ಪ್ರಸ್ತುತ ಸರ್ಕಾರ ಸ್ವಚ್ಛಭಾರತ್ ಅಭಿಯಾನ ಯೋಜನೆಯಡಿ ಸ್ವಚ್ಛತೆಗೆ ಆದ್ಯತೆಯನ್ನು ನೀಡುತ್ತಿದೆ. ಆದರೆ ಪಟ್ಟಣದ ಹೃದಯಭಾಗವಾಗಿರುವ ನೀರಿನ ಟ್ಯಾಂಕ್ ವೃತ್ತದ ವ್ಯಾಪ್ತಿಯಲ್ಲಿ ನೈರ್ಮಲ್ಯದ ಕೊರತೆ ಕಾಣುತ್ತಿದ್ದು ಸಾಂಕ್ರಾಮಿಕ ರೋಗಗಳ ಉಗಮ ಸ್ಥಾನವಾಗಿ ಪರಿಣಮಿಸಿದೆ ಎಂದು ಸ್ಥಳೀಯರು ದೂರಿದ್ದಾರೆ.

ಕಳೆದ ಕೆಲವು ವರ್ಷಗಳ ಹಿಂದೆ ಪಟ್ಟಣದ ನೀರಿನ ಟ್ಯಾಂಕ್ ವೃತ್ತದ ವ್ಯಾಪ್ತಿಯಲ್ಲಿದ್ದ ಹಳೆ ತಾಲ್ಲೂಕು ಕಚೇರಿಯ ಕಟ್ಟಡವನ್ನು ತೆರವುಗೊಳಿಸಿದ ನಂತರ ಆ ಸ್ಥಳದಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಸಮುದಾಯ ಭವನ ನಿರ್ಮಿಸಲಾಯಿತು. ಅದರ ಸುತ್ತಲೂ ಅಂಗಡಿ ಮಳಿಗೆಗಳನ್ನು ನಿರ್ಮಿಸಿ ಬಾಡಿಗೆಗೆ ನೀಡಲಾಯಿತು.

ಈ ಮಳಿಗೆಗಳ ಪೈಕಿ ಕ್ಯಾಂಟಿನ್ ಗಳೂ ಬಾಡಿಗೆ ಆಧಾರದಲ್ಲಿ ನಡೆಯುತ್ತಿದೆ. ಆದರೆ ಈ ಕ್ಯಾಂಟೀನ್‌ಗಳಲ್ಲಿ ಪಾತ್ರೆಗಳನ್ನು ತೊಳೆಯುವ ನೀರು ಸುಲಭವಾಗಿ ಹರಿದು ಹೋಗಲು ಯಾವುದೇ ಚರಂಡಿ ಸೌಲಭ್ಯವನ್ನು ಒದಗಿಸಿಲ್ಲ. ಈ ಅಂಗಡಿ ಮಳಿಗೆಗೆ ಹಿಂಭಾಗದಲ್ಲಿಯೇ ಸಮುದಾಯ ಭವನ ಬರುವುದರಿಂದ ನೀರು ಹರಿದು ಹೋಗದೆ ಈ ಸ್ಥಳ ಕೊಳಚೆ ಪ್ರದೇಶವಾಗಿ ನಿರ್ಮಾಣವಾಗಿ ಸೊಳ್ಳೆಗಳ ಉಗಮದ ಆವಾಸ ಸ್ಥಾನವಾಗಿಯೂ ಪರಿಣಮಿಸಿದೆ.

ಅಂಗಡಿ ಮಳಿಗೆಗಳು ಹಾಗೂ ಈ ಸಮುದಾಯ ಭವನದ ವ್ಯಾಪ್ತಿಯಲ್ಲಿ ಸೂಕ್ತ ಶೌಚಾಲಯದ ಸೌಲಭ್ಯವಿಲ್ಲ. ಹಾಗಾಗಿ ಇದು ಮಲ ,ಮೂತ್ರ ವಿಸರ್ಜನೆಯ ಸ್ಥಳವಾಗಿಯೂ ಪರಿಣಮಿಸಿದೆ ಎಂಬ ದೂರುಗಳು ಕೇಳಿಬಂದಿವೆ, ಸಮುದಾಯ ಭವನದ ವ್ಯಾಪ್ತಿಯ ಲ್ಲಿ ಮದ್ಯ ಸೇವನೆ ಮಾಡುವುದು, ಎಲ್ಲೆಂದರಲ್ಲಿ ಅದರ ಬಾಟಲಿ, ಪೌಚ್ ಹಾಕಲಾಗಿದೆ. ಪರಿಸರ ಅಕ್ಷರಶಃ ಕಸದ ತೊಟ್ಟಿಯಾಗಿ ದುರ್ನಾತ ಬೀರುತ್ತಿದೆ.

ಪಟ್ಟಣದ ವ್ಯಾಪ್ತಿಯಲ್ಲಿ ನಗರೋತ್ಥಾನ ಯೋಜನೆಯಡಿ ಕೋಟ್ಯಂತ ರೂಪಾಯಿಗಳ ಅನುದಾನವನ್ನು ವೆಚ್ಚ ಮಾಡಿ ಬೇರೆ ಬೇರೆ ಭಾಗಗಲ್ಲಿ ಚರಂಡಿ ನಿರ್ಮಾಣ ಮಾಡಿದ್ದರೂ ಪಟ್ಟಣದ ಹೃದಯ ಭಾಗವಾಗಿರುವ ಅರಣ್ಯ ಇಲಾಖೆಯ ಮುಂಭಾಗದಿಂದ ಹಳೆ ಪೇಟೆ ವ್ಯಾಪ್ತಿಯವರೆಗೆ ನೀರು ಹರಿದು ಹೋಗಲು ಚರಂಡಿಯನ್ನು ನಿರ್ಮಿಸದಿರುವುದರಿಂದ ಸಮಸ್ಯೆ ಸೃಷ್ಟಿಯಾಗಿದೆ. ಅಂಗಡಿಗಳ ಮುಂದೆ ಚರಂಡಿ ಹಾದು ಹೋದರೆ ತೊಂದರೆಯಾಗುತ್ತದೆ ಎಂದು ಕೆಲವರು ರಾಜಕೀಯ ಒತ್ತಡ ತಂದು ಚರಂಡಿ ನಿರ್ಮಾಣ ಮಾಡಲು ಬಿಟ್ಟಿಲ್ಲ ಎಂಬ ಆರೋಪ ಕೂಡ ಕೇಳಿ ಬಂದಿದೆ.

ಈ ವ್ಯಾಪ್ತಿಯಲ್ಲಿ ಕೊಳಚೆ ನೀರು ಸರಿಯಾಗಿ ಹರಿಯದೆ ದುರ್ನಾತವುಂಟಾಗಿದ್ದು ಬೆಳಿಗ್ಗೆ ವೇಳೆಯೇ ಸೊಳ್ಳೆಗಳ ಹಾವಳಿ ವಿಪರೀತ ವಾಗಿದೆ. ಈ ಬಗ್ಗೆ ಪಟ್ಟಣ ಪಂಚಾಯಿತಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಶ್ರೀಧರ್.

ನೀರಿನ ಟ್ಯಾಂಕ್ ಸದಾ ಜನನಿಬಿಡ ಸ್ಥಳವಾಗಿದ್ದು ಇದರ ಸಮೀಪದಲ್ಲಿಯೇ ಜನವಸತಿ ಪ್ರದೇಶ, ಪೊಲೀಸ್ ಠಾಣೆ, ಅರಣ್ಯ ಇಲಾಖೆ, ದೇವಸ್ಥಾನ, ಪ್ರಾರ್ಥನಾ ಮಂದಿರವೂ ಇದೆ. ಈ ಪ್ರದೇಶವನ್ನು ಸ್ವಚ್ಛಗೊಳಿಸದಿದ್ದರೆ ಸಾಂಕ್ರಾಮಿಕ ರೋಗಗಳು ಉಲ್ಬಣವಾಗು ವ ಸಾಧ್ಯತೆ ಹೆಚ್ಚಾಗಿರುವುದರಿಂದ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಗಮನಹರಿಸಿ ಸಮಸ್ಯೆ ಬಗೆಹರಿಸ ಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT