ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

21ರಿಂದ ಬಳ್ಳಾರಿಯಿಂದ ಹೈದರಾಬಾದ್‌ಗೆ ವಿಮಾನ

Last Updated 16 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಬಳ್ಳಾರಿ: ಹಲವು ವರ್ಷಗಳ ನಂತರ ಜಿಲ್ಲೆಯಿಂದ ಹೈದರಾಬಾದ್‌ಗೆ ಮತ್ತೆ ಸಾರ್ವಜನಿಕರ ವಿಮಾನಯಾನ ಆರಂಭವಾಗಲಿದೆ.

ಕೇಂದ್ರದ ಪ್ರಾದೇಶಿಕ ಸಂಪರ್ಕ ಯೋಜನೆ ‘ಉಡಾನ್‌’ ಅಡಿಯಲ್ಲಿ ಟ್ರೂ ಜೆಟ್‌ ಸಂಸ್ಥೆಯ ಎಟಿಆರ್‌–600 ವಿಮಾನ ಇದೇ 21ರಿಂದ ಸಂಡೂರಿನ ಜೆಎಸ್‌ಡಬ್ಲ್ಯು ಸಂಸ್ಥೆಯ ವಿದ್ಯಾನಗರ – ಹೈದರಾಬಾದ್‌ ನಡುವೆ ನಿತ್ಯ ಎರಡು ಬಾರಿ ಸಂಚರಿಸಲಿದೆ. ಟಿಕೆಟ್‌ ದರ ₹ 999 ಇದ್ದು, ತೆರಿಗೆ ಪ್ರತ್ಯೇಕವಾಗಿದೆ.

ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದಾದ ಹಂಪಿ, ಸಂಡೂರು, ದರೋಜಿ ಕರಡಿಧಾಮ, ಸೇರಿದಂತೆ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳು ಇಲ್ಲಿಂದ ಸುಮಾರು 30 ಕಿ.ಮೀ ದೂರದಲ್ಲಿರುವುದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೂ ಇದು ಹೆಚ್ಚಿನ ಅನುಕೂಲ ಕಲ್ಪಿಸಲಿದೆ ಎಂಬ ನಿರೀಕ್ಷೆ ಇದೆ.

‘72 ಆಸನಗಳುಳ್ಳ ವಿಮಾನವು ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಹೈದರಾಬಾದ್‌ನಿಂದ ಹೊರಟು 7.05ಕ್ಕೆ ವಿದ್ಯಾನಗರಕ್ಕೆ ಬರಲಿದೆ. ಅಲ್ಲಿಂದ 7.30ಕ್ಕೆ ಹೊರಟು 8.35ಕ್ಕೆ ಹೈದರಾಬಾದ್‌ ತಲುಪಲಿದೆ’ ಎಂದು ಸಂಸ್ಥೆಯ ಅಧಿಕೃತ ಟಿಕೆಟ್‌ ಬುಕಿಂಗ್‌ ಏಜೆನ್ಸಿ ‘ಮ್ಯಾಟ್ರಿಕ್ಸ್‌ ಹಾಲಿಡೇಸ್‌’ ಪ್ರತಿನಿಧಿ ವಿ.ಕೆ.ಎಲ್‌.ದೀಪಕ್‌ ‘ಪ್ರಜಾವಾಣಿ’ಗೆ  ತಿಳಿಸಿದರು.

400 ಮಂದಿ ಸಿದ್ಧ: ಈಗಾಗಲೇ 400 ಮಂದಿ ಮುಂಗಡ ಟಿಕೆಟ್ ಪಡೆದಿದ್ದಾರೆ. ಈ ಸಂಖ್ಯೆ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ’ ಎಂದರು.

‘ವಾಯುಯಾನ ನಕ್ಷೆಯಲ್ಲಿ ಜಿಲ್ಲೆ ದಶಕಗಳ ಹಿಂದಿನಿಂದಲೂ ಇದೆ. ಆದರೆ, ಜಿಲ್ಲೆಯಲ್ಲಿ ವಿಮಾನಯಾನವು 90ರ ದಶಕದಲ್ಲಿ ಆರಂಭವಾಗಿತ್ತು. ಆಗ ಇಂಡಿಯನ್‌ ಏರ್‌ಲೈನ್ಸ್‌ ವಿಮಾನ ಬೆಂಗಳೂರು –ಬಳ್ಳಾರಿ –ಹೈದರಾಬಾದ್‌ ನಡುವೆ ಸಂಚರಿಸುತ್ತಿತ್ತು. ನಗರದ ಕೊಳಗಲ್‌ ರಸ್ತೆಯಲ್ಲಿರುವ ವಿಮಾನ ನಿಲ್ದಾಣದಿಂದ ವಿಮಾನಗಳು ಹೊರಡುತ್ತಿದ್ದವು. ಕೆಲವು ವರ್ಷಗಳ ಬಳಿಕ ಸೇವೆ ಸ್ಥಗಿತಗೊಂಡಿತು’ ಎಂದು ನಗರದ ಹಿರಿಯರೊಬ್ಬರು ಸ್ಮರಿಸಿದರು.

‘ತೋರಣಗಲ್‌ನಲ್ಲಿ ಜೆಎಸ್‌ಡಬ್ಲ್ಯು ಸ್ಟೀಲ್ಸ್‌ ಸ್ಥಾಪನೆಯಾದ ಬಳಿಕ ಸಂಸ್ಥೆಯು 2003–04ರಲ್ಲಿ ತನ್ನ ಅನುಕೂಲಕ್ಕಾಗಿ ವಿದ್ಯಾನಗರದಲ್ಲಿ ವಿಮಾನ ನಿಲ್ದಾಣ ನಿರ್ಮಿಸಿತ್ತು. ವಾಣಿಜ್ಯ ಉದ್ದೇಶದ ಬಳಕೆಗೆ ಅದನ್ನು ತೆರೆದ ಬಳಿಕ ಏರ್‌ ಡೆಕ್ಕನ್‌ ಸಂಸ್ಥೆಯ ವಿಮಾನ ಬೆಂಗಳೂರು– ಬಳ್ಳಾರಿ – ಗೋವಾ ನಡುವೆ ವಾರಕ್ಕೆ ಎರಡು ಬಾರಿ ಸಂಚರಿಸುತ್ತಿತ್ತು. ನಂತರ ಅದರ ವಹಿವಾಟು ವಹಿಸಿಕೊಂಡ ಕಿಂಗ್‌ಫಿಷರ್ ಸಂಸ್ಥೆಯ ವಿಮಾನ ವಾರಕ್ಕೊಮ್ಮೆ ವಿದ್ಯಾನಗರ– ಬೆಂಗಳೂರು ನಡುವೆ ಸಂಚರಿಸುತ್ತಿತ್ತು. ನಂತರ ಅದೂ ಸ್ಥಗಿತಗೊಂಡಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT