ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ಹೊಸಕೋಟೆ ಗ್ರಾಮದಲ್ಲಿ ಮತ್ತೆ ಆರು ಮಂದಿಗೆ ಕಚ್ಚಿದ ಹಾವು

Last Updated 17 ಸೆಪ್ಟೆಂಬರ್ 2017, 14:17 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಹೊಸಕೋಟಿ ಗ್ರಾಮದಲ್ಲಿ ಶನಿವಾರ ರಾತ್ರಿ ಮತ್ತೆ ಆರು ಮಂದಿಗೆ ಹಾವು ಕಚ್ಚಿದೆ. ನಾಟಿ ಔಷಧಿ ಪಡೆದುಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರಾತ್ರಿ ಮಲಗಿದ್ದ ವೇಳೆ ಮಂಜು ಬೋರಪ್ಪ ತಳವಾರ, ಕೆಂಚವ್ವಾ ಮಲ್ಲಪ್ಪ ಕಾಕಿ, ಫಕೀರಪ್ಪ ನಾಗಪ್ಪ ಕರಡಿಗುದ್ದಿ, ಭೀಮಪ್ಪ ಕಾಕಿ, ಯಲ್ಲಪ್ಪ ಮಲ್ಲಪ್ಪ ಕಾಕಿ, ದೇಮಪ್ಪ ಮಲ್ಲಪ್ಪ ಮುಂಡಗಿ ಎನ್ನುವವರಿಗೆ ಹಾವು ಕಚ್ಚಿವೆ ಎಂದು ಸ್ಥಳೀಯರು ತಿಳಿಸಿದರು.

‘ಗ್ರಾಮದಲ್ಲಿ ತಿಂಗಳಿಂದ ವಿಷಜಂತುಗಳ ಹಾವಳಿ ಜಾಸ್ತಿಯಾಗಿದೆ. ಈಗಾಗಲೇ ಮೂವರು ಮೃತಪಟ್ಟಿದ್ದಾರೆ. 20 ಮಂದಿ, ನಾಟಿ ಔಷಧಿ ಪಡೆದಿದ್ದಾರೆ’ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. 

‘ಹಾವುಗಳ ಭೀತಿಯಿಂದ ಕಂಗೆಟ್ಟಿರುವ ನಾವು ದೇವರ ಮೊರೆ ಹೋಗಿದ್ದೇವೆ. ನಾಗರಮೂರ್ತಿಗೆ ಅಭಿಷೇಕ ನೆರವೇರಿಸಿದ್ದೇವೆ. ಗ್ರಾಮದೇವರ ಜಾತ್ರೆಯನ್ನೂ ನಡೆಸಿದ್ದೇವೆ. ಆದರೂ ಪ್ರಯೋಜನ ಆಗಿಲ್ಲ. ಬೆಳಗಾದರೆ ಹಾವು ಕಡಿತದ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದರಿಂದಾಗಿ ಎಲ್ಲರೂ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ’ ಎಂದು ಗ್ರಾಮದ ರಾಮಚಂದ್ರ ತಳವಾರ ತಿಳಿಸಿದರು.

ಘಟನೆ ಕುರಿತು ‘ಪ್ರಜಾವಾಣಿ’ಯಲ್ಲಿ ಮೂರು ದಿನಗಳಿಂದಲೂ ಪ್ರಕಟವಾದ ಸರಣಿ ವರದಿಗಳನ್ನು ಗಮನಿಸಿದ ಬೈಲಹೊಂಗಲ ತಾಲ್ಲೂಕು ತಹಶೀಲ್ದಾರ್‌ ಪ್ರಕಾಶ್‌ ಗಾಯಕವಾಡ ಅವರು ಗ್ರಾಮ ಲೆಕ್ಕಾಧಿಕಾರಿ ಬಸವರಾಜ ಕೆರಕನವರ ಜತೆ ಭಾನುವಾರ ಭೇಟಿ ನೀಡಿದ್ದರು. ಗ್ರಾಮಸಭೆ ನಡೆಸಿ, ಗ್ರಾಮಸ್ಥರಿಂದ ಮಾಹಿತಿ ಪಡೆದರು.

‘ಈ ಗ್ರಾಮವು ಅರಣ್ಯ ಪ್ರದೇಶದ ಅಂಚಿನಲ್ಲಿದೆ. ಇದರಿಂದ ವಿಷಜಂತುಗಳು ಕಾಣಿಸಿಕೊಳ್ಳುತ್ತಿರಬಹುದು. ಹಾವು ಕಚ್ಚಿದ್ದರಿಂದ ಮೂವರು ಮೃತಪಟ್ಟಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಅವರಲ್ಲಿ ಇಬ್ಬರ ಮರಣೋತ್ತರ ಪರೀಕ್ಷೆಯಷ್ಟೇ ಆಗಿದೆ. ಒಬ್ಬರು ಹಾವು ಕಚ್ಚಿ ಮೃತಪಟ್ಟಿರುವುದು ದೃಢಪಟ್ಟಿದೆ. ಇನ್ನೊಬ್ಬರ ವರದಿ ಬರಬೇಕಿದೆ. ಜನರಲ್ಲಿರುವ ಭಯ ಹೋಗಲಾಡಿಸಲು ಸಮಾಲೋಚನೆ ನಡೆಸಿದ್ದೇನೆ’ ಎಂದು ತಹಶೀಲ್ದಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮನೆಗಳ ಸುತ್ತಮುತ್ತ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದ್ದೇನೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಗ್ರಾಮ ಪಂಚಾಯ್ತಿಯವರಿಗೂ ಸೂಚಿಸಿದ್ದೇನೆ. ಹಾವು ನೋಡಿದ್ದೇವೆ ಎನ್ನುವವರು ಕಡಿಮೆ ಇದ್ದಾರೆ. ಆದರೂ ಹಾವು ಹಿಡಿಸುವುದಕ್ಕೆ ಕ್ರಮ ಕೈಗೊಳ್ಳುವಂತೆ ಆರ್‌ಎಫ್‌ಒಗೆ ನಿರ್ದೇಶನ ನೀಡಿದ್ದೇನೆ. ಪ್ರಾಥಮಿಕ ಚಿಕಿತ್ಸೆಗಾಗಿ ಸಿಬ್ಬಂದಿ ನಿಯೋಜಿಸಿ, ತಾತ್ಕಾಲಿಕ ವ್ಯವಸ್ಥೆ ಮಾಡಬೇಕು ಎಂದು ಆರೋಗ್ಯ ಇಲಾಖೆಯವರಿಗೂ ಸೂಚಿಸಲಾಗುವುದು’ ಎಂದು ಹೇಳಿದರು.

‘ಹಾವು ಕಚ್ಚಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT