ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಯ್‌ ಸುಮ್ಮನಿರೋ...

Last Updated 17 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಅಕ್ವಾಗಾರ್ಡ್‌ನ ಪೆಟ್ಟಿಗೆಗೆ ಅಂಟಿಸಿದ್ದ ಗೋಂದಿನ ಪಟ್ಟಿಗಳನ್ನು ಇನ್ನೂ ಸೀಳಿರಲಿಲ್ಲ. ‘ಹುಷಾರಾಗಿ ಕತ್ತರಿಸಿ, ಆ ಪೆಟ್ಟಿಗೆ ನನಗೆ ಬೇಕು’ ಅಂತ ರಂಜು ಹತ್ತಾರು ಬಾರಿ ಹೇಳಿದ. ಅಪ್ಪನಿಗೆ ತಲೆ ಕೆಟ್ಟುಹೋದಂತಾಯ್ತು.

’ಏಯ್‌ ಸುಮ್ಮನಿರೋ... ಕಸವನ್ನೆಲ್ಲಾ ಮನೆಯಲ್ಲಿ ಗುಡ್ಡೆ ಹಾಕಿಕೊಂಡ್ರೆ ನಾವೆಲ್ಲಿ ಇರೋದು? ಪೆಟ್ಟಿಗೆ ಬೇಕಂತೆ ಪೆಟ್ಟಿಗೆ’ ಎಂದು ರೇಗಿದ ರವೀಂದ್ರ. ರಂಜುಗೆ ಇದೇನೂ ಹೊಸ ಅನುಭವವಲ್ಲ.

'ಅಪ್ಪಾ, ಅದರಲ್ಲಿ ನಾನೊಂದು ಮನೆ ಮಾಡ್ಕೋಬೇಕು. ಇನ್ನು ಮುಂದೆ ಅದರೊಳಗೇ ಕುಳಿತು ಟಿ.ವಿ ನೋಡ್ತೀನಿ, ಓದ್ತೀನಿ’ ಎಂದು ರಂಜು ವಿವರಿಸಿದ. ಅಪ್ಪನಿಗೆ ಅದರತ್ತ ಗಮನವಿಲ್ಲ. ಆದರೂ ರಂಜು ಕಾದು ಕುಳಿತ. ರವೀಂದ್ರ, ಪೆಟ್ಟಿಗೆಯನ್ನು ಮನೆ ಮುಂದಿನ ರಸ್ತೆಯ ವಿದ್ಯುತ್‌ ಕಂಬದ ಬುಡಕ್ಕೆ ಎಸೆದ. ಮೂರನೇ ತರಗತಿಯ ಬಾಲಕನಿಗೆ, ಕನಸಿನ ಸೌಧವೇ ಕಳಚಿಬಿದ್ದ ಅನುಭವ.

***

‘ಹೊಸ ಫೋನ್‌ ಕಣೇ ಹಾಳು ಮಾಡಿ ಹಾಕ್ಬೇಡ. ದೊಡ್ಡ ಫೋನು. ನಂಗಂತೂ ಸೆಟಿಂಗ್ಸ್‌ ಗೊತ್ತಾಗಲ್ಲ. ಮೊದ್ಲೇ ಹೇಳಿದ್ದೀನಿ’ ಎಂದು ಕಿರುಚಿದ ಸುಗುಣಾ, ಮಗಳು ದರ್ಪಣಾಳ ಕೈ ಮೇಲೊಂದು ಏಟನ್ನೂ ಹಾಕಿದಳು. ಐದನೇ ತರಗತಿಯ ಹುಡುಗಿ ದರ್ಪಣಾ, ಅಮ್ಮನ ಮಾತಿಗೆ ಕ್ಯಾರೇ ಅನ್ನದೆ, ಹೊಸ ಫೋನ್‌ನ ಫೀಚರ್‌ಗಳನ್ನೆಲ್ಲಾ ಜಾಲಾಡಿ ಸೆಟಿಂಗ್‌ ಮಾಡಿ ಅಮ್ಮನ ಕೈಗಿತ್ತಳು.

‘ಅರೆ, ಮಾಡೇಬಿಟ್ಯಾ? ಎಲ್ಲಿಂದ ಕಲಿತೆ ಇದನ್ನೆಲ್ಲ’ ಎಂದು ಬೆಪ್ಪಾದಳು. ಹೊಸ ಫೋನ್‌ನಿಂದ ಗಂಡನಿಗೆ ಕರೆ ಮಾಡಿ ಮಗಳ ಸಾಹಸವನ್ನು ವಿವರಿಸಿದಳು. ‘ಅವಳು ನನ್ನ ಮಗಳು ಕಣೇ, ನಿನ್ನಂತೆ ಬೆಪ್ಪಿ ಅಲ್ಲ’ ಎಂದು ಮಗಳ ಬುದ್ಧಿಮತ್ತೆಯನ್ನು ತನ್ನ ಖಾತೆಗೆ ಜಮಾ ಮಾಡಿಕೊಂಡ ಅವಳಪ್ಪ.

ತನ್ನ ಸ್ವಾಭಿಮಾನವನ್ನು ಕೆಣಕಿದ ಅಮ್ಮನನ್ನು ತರಾಟೆಗೆ ತೆಗೆದುಕೊಂಡಳು... ‘ನನಗೆ ಇನ್ನೂ ಏನೇನೋ ಗೊತ್ತು. ಅದೆಲ್ಲ ನಿನಗೆ ಅರ್ಥವಾಗಲ್ಲ ಬಿಡು’.

***

‘ನೋಡೇ ವೀಣಾ, ಇವ್ನು ನಮ್ಮನೇಲಿ ಬಾಯಿ ಬಿಚ್ಚಲ್ಲ. ಇಲ್ಲಿ ನೋಡಿದ್ರೆ ಹಾಡ್ತಾನೆ, ಕುಣೀತಾನೆ. ತನ್ನ ಮನೆಗಿಂತ ಬೇರೆಯವರ ಮನೇಲೇ ಖುಷಿಯಾಗಿರ್ತಾನೆ ಇವ್ನು’.

– ಹಿಂದೆಂದೂ ಕಾಣದ ಪ್ರತಿಭೆಗಳನ್ನು ತಂಗಿಯ ಮನೆಯಲ್ಲಿ ಪ್ರದರ್ಶಿಸುತ್ತಿದ್ದ ಮಗ ಕರ್ಣನ ‘ವರ್ತನೆ’ ಬಗ್ಗೆ ವಾಣಿ ದೂರಿಕೊಂಡಳು.

‘ಮನೆಯಲ್ಲಿ ಬಾಯಿ ಬಿಟ್ಟರೆ ‘ಕೋತಿ ಥರಾ ಕುಣೀತಿರ್ತೀಯಾ ಹೋಗಿ ಓದ್ಕೋ’ ಅಂತ ಹೊಡಿಯೋಕೇ ಬರ್ತಾರೆ. ಯಾರೋ ಬಂದಿದ್ದಾಗ ನಾನು ಮಾತನಾಡೋಕೂ ಬಿಡೋದಿಲ್ಲ. ನಾನು ಏನೇ ಮಾಡಿದ್ರೂ ತಪ್ಪು. ಅದಕ್ಕೆ ನನ್ನ ಪಾಡಿಗೆ ಇರ್ತೀನಿ. ಹೇಳಿ ತಪ್ಪು ನಂದಾ ಇವ್ರದ್ದಾ?’ ಎಂದು ಮನೆಯ ಪರಿಸ್ಥಿತಿಯನ್ನು ವಿವರಿಸಿದ.

***

ಮಕ್ಕಳ ಕ್ರಿಯಾಶೀಲತೆ, ಸೃಜನಶೀಲತೆ ಅಪ್ಪ ಅಮ್ಮಂದಿರು ಅಥವಾ ಮನೆಯ ಹಿರಿಯರ ಮಾತುಗಳಿಂದಾಗಿ ಹೇಗೆ ಮೊಗ್ಗಿನಲ್ಲೇ ಕಮರಬಹುದು ಎಂಬುದಕ್ಕೆ ಕೆಲವು ನಿದರ್ಶನಗಳಿವು. ಹೌದಲ್ಲ? ನಮ್ಮ ಒತ್ತಡಗಳನ್ನು, ಮಾನಸಿಕ ಸ್ಥಿತಿಯನ್ನು ನಾವು ಮಕ್ಕಳ ಮೇಲೆ ಹೇರುವುದರಿಂದ ಮಕ್ಕಳ ಮಾತಿಗೂ, ಕೃತಿಗೂ ಕಡಿವಾಣ ಬೀಳುತ್ತದೆ. ಕ್ರಿಯಾಶೀಲತೆಯಿಂದ ಪುಟಿಯಬೇಕಾದ ವಯಸ್ಸಿನಲ್ಲಿ ಅಲಕ್ಷ್ಯ, ರೇಗಾಟದ ಮಾತುಗಳು ಮಕ್ಕಳನ್ನು ಮಂಕಾಗಿಸುತ್ತಿವೆ.

ಮನೆಗೆ ನೆಂಟರು ಬಂದಾಗ ಕರ್ಣ ಹಾಡಿ ತೋರಿಸಿದ್ದ. ವೀಣಾ ತಡೆದಳು. ರಟ್ಟಿನ ಪೆಟ್ಟಿಗೆಯಿಂದ ಮನೆ ನಿರ್ಮಿಸುವ ಉಮೇದಿನಲ್ಲಿದ್ದ ರಂಜುಗೆ ಮನೆಯೊಳಗೆ ತನ್ನದೇ ಕಲ್ಪನಾ ಲೋಕವನ್ನು ಕಟ್ಟುವ ಅವಕಾಶವನ್ನು ಅಪ್ಪ ಕೊಡಲೇ ಇಲ್ಲ. ದರ್ಪಣಾಳ ಎಳೆಯ ಮನಸ್ಸಿನಲ್ಲಿ ಒಬ್ಬ ತಾಂತ್ರಿಕ ಅಡಗಿರುವುದು ಸುಗುಣಾಳಿಗೆ ಗೊತ್ತೇ ಇಲ್ಲ.

ಮಕ್ಕಳ ಮನಸ್ಸು ಕಾಣುವ ಕನಸು, ಹೆಣೆಯುವ ಕಲ್ಪನೆಗಳನ್ನು ನಾವು ಊಹಿಸಲೂ ಸಾಧ್ಯವಿರುವುದಿಲ್ಲ. ‘ದೊಡ್ಡ ಕನಸು ಕಾಣಿರಿ’ ಎಂದು ಡಾ.ಎ.ಪಿ.ಜೆ. ಅಬ್ದುಲ್‌ ಕಲಾಂ ಅವರು ಹೇಳಿದ್ದು ದೂರದೃಷ್ಟಿಯ ಮಾತು ಅಲ್ವೇ? ಕಲ್ಪನೆ, ಕನಸು ಸಾಕಾರಗೊಳಿಸುವ ಮನೋಬಲ, ಛಲವನ್ನು ಮಕ್ಕಳಲ್ಲಿ ಮೂಡಿಸುವುದು ಮನೆಯ ಹಿರಿಯರ ಕರ್ತವ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT