ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಳೆಯ ನರಳಿಕೆಗೆ ಚಿಕಿತ್ಸೆ

Last Updated 18 ಸೆಪ್ಟೆಂಬರ್ 2017, 19:51 IST
ಅಕ್ಷರ ಗಾತ್ರ

‘ಭೂಮಿ, ಮನುಷ್ಯ ಮತ್ತು ನರಳಿಕೆ’ ಶೀರ್ಷಿಕೆಯಡಿ ಕೆ.ಟಿ. ಗಟ್ಟಿ ಬರೆದಿರುವ ಲೇಖನ (ಪ್ರ.ವಾ., ಸಂಗತ, ಸೆ. 11) ಹೊಸ ಚಿಂತನೆಗಳಿಗೆ ಅನುವು ಮಾಡಿಕೊಡುತ್ತದೆ. ಪಿ.ಯು. ಗಣಿತ ಉತ್ತರ ಪ್ರತಿಕೆಗಳ ಮೌಲ್ಯಮಾಪನ ಕರ್ತವ್ಯ ನಿರ್ವಹಿಸುವಾಗಿನ ಸಂದರ್ಭ ನೆನಪಾಯಿತು. ಒಮ್ಮೆ ದಿಢೀರನೆ ಕೆಂಪು ಮಸಿ ರೀಫಿಲ್ ತೀರಿ ನನ್ನ ಸಹೋದ್ಯೋಗಿಯನ್ನು ಅವಲಂಬಿಸಬೇಕಾಯಿತು.

‘ನಂಗೆ ಗೊತ್ತು. ನೀವು ನಾಳೆ ಅರ್ಧ ಡಜನ್ನಾದ್ರೂ ಕೆಂಪು ರೀಫಿಲ್ ತರುವಿರಿ. ಬಂದೊಡನೆ, ನಾನೀಗ ಕೊಟ್ಟಿರುವುದನ್ನು ವಾಪಸು ಮಾಡಿ. ಅದಿನ್ನೂ ಐದಾರು ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಬರುತ್ತೆ. ನೀವು ಬಿಸಾಡಬಾರದು ನೋಡಿ’ ಎಂದರು!

ಮೊದಲು, ನನಗೆ ಅವರ ಮೇಲೆ ಕೋಪ ಬಂತು. ನಂತರ ಅವರ ನಿಲುವು ಸರಳವಾದರೂ ಅದರಲ್ಲಿ ಅಡಕವಾಗಿರುವ ಬದ್ಧತೆ, ಕಾಳಜಿ ಅದೆಷ್ಟು ಮೌಲಿಕ ಎನಿಸಿತು. ಗಟ್ಟಿಯವರು ತಮ್ಮ ಲೇಖನದಲ್ಲಿ ವ್ಯಕ್ತಗೊಳಿಸಿರುವ ‘ಮನುಷ್ಯನ ವಿಕೃತ ಕೃತ್ಯಗಳ ಮೂಲ’ ಅವನ ಆಡಂಬರ, ಆಟೋಪಗಳು. ಮನುಷ್ಯನ ಉದರ ವಿಶೇಷ ಆಹಾರವನ್ನೇನೂ ಬಯಸದು. ಆದರೆ ಮನುಷ್ಯ ಬಯಸುತ್ತಾನೆ! ಈ ವಾಸ್ತವ ಉಪಮೆಯಾಗಿ ಅವನ ಸಕಲ ದುರಾಸೆ, ಭ್ರಮೆ, ಬಾಚುತನ, ಪ್ರಗತಿದಾಹ ಮುಂತಾದ ಕ್ರೌರ್ಯಗಳಿಗೂ ಅನ್ವಯ.

ನಮಗಿರುವುದು ಒಂದೇ ಭೂಮಿ. ಅದನ್ನು ಸೊರಗಿಸಿದರೆ ಬಳಲುವವರು ನಾವೇ ಎನ್ನುವ ಪ್ರಜ್ಞೆ ಮೂಡುವವರೆಗೆ ನರಳಿಕೆ ತಪ್ಪಿದ್ದಲ್ಲ. ತನ್ನ ಸ್ವಯಂಕೃತ ತೊಡಕಿಗೆ ಅವನು ಅನುಸರಿಸಬೇಕಾದ ಮಾರ್ಗ ಸ್ಪಷ್ಟವೇ ಇದೆ. ಅದುವೇ ಸರಳತೆ. ಮಹಾತ್ಮ ಗಾಂಧಿ ಅವರ ‘ಸರಳ ಜೀವನ, ಉದಾತ್ತ ಚಿಂತನೆ’ ಎಂಬ ಸಂದೇಶದಲ್ಲಿ ಮನುಷ್ಯ ಮತ್ತು ಪ್ರಕೃತಿ ನಡುವೆ ಇರಬೇಕಾದ ಯುಕ್ತ ಅನುಸಂಧಾನ ಸಾಂದ್ರಗೊಂಡಿದೆ.

ನಾವು ಎದುರಿಸುವ ಅತಿ ದೊಡ್ಡ ಸವಾಲೆಂದರೆ ಈಗಾಗಲೇ ನಮ್ಮಲ್ಲಿರುವ ವಸ್ತು ವೈವಿಧ್ಯಗಳನ್ನು ಬಳಸಿಕೊಂಡು ಸಂತೃಪ್ತಿಯ ಬದುಕನ್ನು ಕಾಣುವುದು. ಇಳೆ ಬರಿದಾಗಿ ಕಳೆಗುಂದುತ್ತಿರುವುದಕ್ಕೆ ಕೊಳ್ಳುಬಾಕತನವೆಂಬ ಮೃಗತೃಷ್ಣೆ ಕಾರಣ.

ಕಿಸೆಯಲ್ಲಿ ನಗದು ಸೇರುವುದೇ ತಡ ಇಂಥದ್ದು ಖರೀದಿಸುವುದು ಅಗತ್ಯವೇ, ಅನಗತ್ಯವೇ ಎಂದು ಪರ್ಯಾಲೋಚಿಸದೆ ಮಾರುಕಟ್ಟೆಯತ್ತ ದಾಪುಗಾಲಿಡುವ ಪ್ರವೃತ್ತಿಗೆ ಕಡಿವಾಣ ಬೇಕಿದೆ. ಈಗಾಗಲೇ ಹಣ ಕೊಟ್ಟು ಕೊಂಡು ತಂದ ಅಂಥದ್ದೇ ಪದಾರ್ಥಗಳು ಮನೆಯಲ್ಲಿ ಇವೆಯಲ್ಲ ಅಂತ ಯೋಚಿಸದಿರುವುದು ವಿಪರ್ಯಾಸ.

ನಿಜವೇನೆಂದರೆ ನಾವು ಯಾವುದೇ ವಸ್ತುವನ್ನು ಪೂರ್ಣವಾಗಿ ಬಳಸುವುದೇ ಇಲ್ಲ. ಒಂದು ಕಾಲವಿತ್ತು. ಬಂದ ಆಪ್ತೇಷ್ಟರಲ್ಲಿ ‘ನೋಡಿ, ನಾವು ಇವೊತ್ತಿಗೂ ಉಪಯೋಗಿಸ್ತಿರೋದು ಅಜ್ಜ, ಅಜ್ಜಿ ಉಪಯೋಗಿಸುತ್ತಿದ್ದ ಈ ಲಟ್ಟಣಿಗೆ, ಈಳಿಗೆ ಮಣೆ, ತುರಿಯುವ ಮಣೆ, ಕತ್ತರಿ, ಬೈಸಿಕಲ್, ಕುರ್ಚಿ, ಮೇಜು’ ಅಂತ ಮನೆಯವರು ಹೆಮ್ಮೆಯಿಂದ ಬೀಗುತ್ತಿದ್ದರು. ಆದರೆ ಇಂದು? ಹಳೆಯದೆಂಬ ಹಣೆಪಟ್ಟಿ ಕಟ್ಟಿ ಹೊಸದನ್ನು ಅರಸುವ ಧಾವಂತ. ಆಯಸ್ಸನ್ನು ಮೊಟಕುಗೊಳಿಸುವುದರಲ್ಲೇ ರೋಚಕತೆ. ಇನ್ನೂ ಉಪಯೋಗಕ್ಕೆ ಬರುತ್ತಿರುವಾಗಲೇ ಅವಕ್ಕೆ ಮೂಲೆ, ಅಟ್ಟ ತೋರಿಸುವುದರಲ್ಲೇ ನಮ್ಮ ಘನತೆಯ ಅನಾವರಣ. ಇದರ ಫಲಶ್ರುತಿ ಗೊತ್ತೇ ಇದೆ. ನಿಸರ್ಗದ ಮೇಲೆ ಗದಾಪ್ರಹಾರ.

ತೊಡುವ ದಿರಸಿಗೆ ಗುಂಡಿ ಸಡಿಲಗೊಂಡರೆ, ಹೊಲಿಗೆ ಬಿಟ್ಟರೆ ಇಡಿಯಾಗಿ ಅದನ್ನು ರದ್ದಿಯಾಗಿಸುವುದು! ಬಟ್ಟೆ ನೇಯುವ, ದಿರಸು ಹೊಲಿದು ಸಿದ್ಧಪಡಿಸುವ ಪರಿಶ್ರಮ ಮನವರಿಕೆಯಾದರೆ, ಕೊಂಡದ್ದು ಎಷ್ಟು ಅಮೂಲ್ಯ ಎಂಬುದು ಅರ್ಥವಾಗುತ್ತದೆ. ಒಂದು ಅರ್ಥದಲ್ಲಿ ಮನುಷ್ಯ ಸಾತ್ವಿಕ ಜಿಪುಣನಾಗಬೇಕಿದೆ.

ಖರೀದಿಸಿದ್ದನ್ನು ಬಹು ಜತನದಿಂದ ವ್ಯಯಿಸುವ ಜಾಯಮಾನ ಅಗತ್ಯವಿದೆ. ದುಂದುಗಾರಿಕೆಯು ಪರೋಕ್ಷವಾಗಿ ವ್ಯಾಪಾರೋದ್ಯಮದ ಲಾಭದಾಹವನ್ನೂ ಹೆಚ್ಚಿಸುತ್ತದೆ. ಮತ್ತೆ ನಿಸರ್ಗದ ಮೇಲೆ ಒತ್ತಡ. ಬಟ್ಟೆ ಹರಿದಿದ್ದರೆ ಸೂಜಿ ದಾರ ಬಳಸಿ ಹೊಲಿದುಕೊಂಡರೆ ಅದರ ಆಯುಷ್ಯ ವೃದ್ಧಿ, ಜೊತೆಗೆ ಆತ್ಮಾನಂದ. ಪುನರ್ಬಳಕೆಯಲ್ಲಿ ಅನಿರ್ವಚನೀಯ ಸಂತಸವಿದೆ. ಧರಿಸಲಾಗದಷ್ಟು ಹರಿದಿದ್ದರೂ ಅಂಥವನ್ನು ಫುಟ್ ರಗ್, ಕರ್ಟನ್, ಕವರ್ ಆಗಿಸಿಕೊಳ್ಳಬಹುದು. ಸದುಪಯೋಗ, ಪರಿಸರ ರಕ್ಷಣೆಯ ಸಂಕಲ್ಪವಿದ್ದರೆ ರದ್ದಿಯೆಲ್ಲ ಸಿದ್ಧಿಯೇ.

ಶಕ್ತಿ ಸಂಪನ್ಮೂಲಗಳ ಎಗ್ಗಿಲ್ಲದ ಬಳಕೆ ನಿಸರ್ಗಕ್ಕೆ ಕೊಡಲಿ ಪೆಟ್ಟು. ಅಗತ್ಯ ಇಲ್ಲದಿದ್ದರೂ ಕೊಳ್ಳುವ ವ್ಯಾಮೋಹವನ್ನು ಬಗ್ಗು ಬಡಿಯದಿದ್ದರೆ ಮುಂದಿನ ಪೀಳಿಗೆಗಳಿಗೆ ಭುವಿಯಲ್ಲಿರಲಾಗದ ಅಸಹನೀಯ ಸ್ಥಿತಿ ಕಟ್ಟಿಟ್ಟ ಬುತ್ತಿ. ಮಳೆ ನೀರು ಸಂಗ್ರಹದಂತೆ ಸೌರಶಕ್ತಿ ಬಳಕೆ ಇನ್ನಷ್ಟು ವ್ಯಾಪಕವಾಗಿ ಮನೆ ಮನೆಯಲ್ಲೂ ರೂಢಿಗತವಾದರೆ ಸ್ವಲ್ಪಮಟ್ಟಿಗಾದರೂ ಸವಾಲು ಹಗುರವಾದೀತು.

ಒಂದು ವೇಳೆ ಸೂರ್ಯ ಮೂರು ದಿನ ರಜೆ ಹೋದ ಅನ್ನಿ. ಭೂಮಿಯ ಮೇಲಿರುವ ಕಟ್ಟಿಗೆ, ಕಲ್ಲಿದ್ದಲು, ಪೆಟ್ರೋಲು, ನೈಸರ್ಗಿಕ ಅನಿಲ- ಎಲ್ಲ ಉರುವಲನ್ನೂ ಪೇರಿಸಿ ದಹಿಸಿದರೂ ಅವನ ಅನುಪಸ್ಥಿತಿಯಲ್ಲಿ ಭೂಮಿಯನ್ನು ಬೆಚ್ಚಗಿಡಲು ಅಸಾಧ್ಯ. ಸೂರ್ಯ ಎಷ್ಟು ಪ್ರಖರವೆನ್ನಲು ಈ ಉದಾಹರಣೆಯಷ್ಟೆ.

ಮಾತೆತ್ತಿದರೆ ‘ಮನುಷ್ಯನಿಗೆ ಭೂಮಿಯ ವಾಸ ಸಾಕಾಗಿದೆ, ನೆರೆಯ ಮಂಗಳನಿಗೋ ಶುಕ್ರನಿಗೋ ಹಾರಿಕೊಳ್ಳುವ ಕಾಲ ಬರುತ್ತದೆ’ ಎನ್ನಲಾಗುತ್ತದೆ. ಬದುಕಲು ಇನ್ನೊಂದು ಭೂಮಿಯಿದೆ ಎನ್ನುವಂತೆ ನಾವು ದಿನಗಳನ್ನು ಉಡಾಯಿಸುತ್ತಿದ್ದೇವೆ. ಆದರೆ ಸದ್ಯದ ಭವಿಷ್ಯದಲ್ಲಿ ನಿಜಕ್ಕೂ ಹಿಡಿ ಮಂದಿಗಾದರೂ ಸರಿ, ಅಂಥ ಗುಳೆ ಸಾಧ್ಯವೇ? ಆಲೋಚಿಸಬೇಕಿದೆ.

ಪರಿಸರ ರಕ್ಷಣೆಗೆ ಎಲ್ಲರ ಕಾಳಜಿ ಬೇಕು. ಮನೆಯಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವುದರಿಂದ ಆಹಾರ ಪದೇ ಪದೇ ಬಿಸಿ ಮಾಡುವುದು ತಪ್ಪುತ್ತದೆ. ಕಾರ್‌ ಪೂಲಿಂಗ್‌ನಿಂದ ಇಂಧನ ಉಳಿತಾಯ, ಮಾಲಿನ್ಯದ ತೀವ್ರತೆಯೂ ಕಡಿಮೆ. ಕೆಲ ಸಂದರ್ಭಗಳನ್ನು ಹೊರತುಪಡಿಸಿ ಕಾಗದದ ಎರಡೂ ಬದಿಗಳಲ್ಲೂ ಬರೆದರೆ ಸಸ್ಯ ಸಂಪತ್ತಿನ ಮಿತಬಳಕೆಯಾಗುವುದು.

ಮಹಡಿ ಏರಿಳಿಯಲು ಲಿಫ್ಟ್, ಬಟ್ಟೆ ಒಣಗಿಸಲು ಡ್ರೈಯರ್, ಹುಲ್ಲನ್ನು ಟ್ರಿಮ್ ಮಾಡಲು ಮೂವರ್ ಅನಗತ್ಯ. ಬಿಸಿಲಿದೆ. ನಮ್ಮ ಸ್ನಾಯು ಬಲವಿದೆ. ಇಚ್ಛಾಶಕ್ತಿ ಮುಂದೆ ಯಾವುದಿದೆ? ತಾಪಮಾನ ಏರಿಕೆ ಎಂಬ ಭೂತ ಮಣಿಸುತ್ತವೆ ಈ ದೃಢ ನಿರ್ಧಾರಗಳು.

ಇಳೆಯ ನರಳಿಕೆಗೆ ಪರಿಣಮಕಾರಿ ಚಿಕಿತ್ಸೆ ಯೆಂದರೆ ನಮ್ಮ ಜೀವನ ಶೈಲಿಯ ಮಾರ್ಪಾಡು. ಭೂಮಿ ರೋಗಿಷ್ಟವಾಗಿದೆ, ಮನುಜರೇ ರೋಗಾಣುಗಳು ಎಂದಾಗಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT