ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕ್ಸಲರ ಗುಪ್ತ ಸಭೆ: ‘ಎಸ್‌ಐಟಿ’ ಅನುಮಾನ

Last Updated 18 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಅಜ್ಞಾತ ಸ್ಥಳವೊಂದರಲ್ಲಿ ಮೂರು ತಿಂಗಳ ಹಿಂದೆ ನಕ್ಸಲರು ನಡೆಸಿದ್ದ ಗುಪ್ತ ಸಭೆಯಲ್ಲಿ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಹಾಗೂ ಅವರ ಆಪ್ತರು ಪಾಲ್ಗೊಂಡಿದ್ದರು’ ಎಂಬ ಮಾಹಿತಿ ಕಲೆಹಾಕಿರುವ ವಿಶೇಷ ತನಿಖಾ ದಳ (ಎಸ್‌ಐಟಿ) ಅಧಿಕಾರಿಗಳು, ಆ ಸಭೆಗೂ ಹತ್ಯೆಗೂ ಏನಾದರೂ ಸಂಬಂಧವಿರಬಹುದು ಎಂಬ ಶಂಕೆ ವ್ಯಕ್ತಪಡಿಸಿ ತನಿಖೆ ಮುಂದುವರಿಸಿದ್ದಾರೆ.

‘ನಕ್ಸಲ್‌ ಚಳವಳಿಯಲ್ಲಿರುವ ಬಿ.ಜಿ.ಕೃಷ್ಣಮೂರ್ತಿ (ಬಿಜಿಕೆ), ಹೊಸಗದ್ದೆ ಪ್ರಭಾ ಹಾಗೂ ಮುಂಡಗಾರು ಲತಾ ಅವರನ್ನು ಸಮಾಜದ ಮುಖ್ಯವಾಹಿನಿಗೆ ಕಳುಹಿಸುವ ಸಂಬಂಧ ಚರ್ಚೆ ನಡೆಸಲು ನಕ್ಸಲ್‌ ಮುಖಂಡರು ಸಭೆ ಕರೆದಿದ್ದರು. ಶರಣಾದ ನಕ್ಸಲರಿಗೆ ಸರ್ಕಾರದಿಂದ ಸಿಗುವ ಸಲವತ್ತುಗಳ ಬಗ್ಗೆ ಗೌರಿ ಲಂಕೇಶ್‌ ಮಾತನಾಡಿದ್ದರು. ಅವರ ಮಾತಿಗೆ ಹಲವರು ವಿರೋಧ ವ್ಯಕ್ತಪಡಿಸಿದ್ದರು ಎಂದು ಗೊತ್ತಾಗಿದೆ’ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಗೌರಿ ಲಂಕೇಶ್ ಅವರ ಇಬ್ಬರು ಆಪ್ತರು, ಗುಪ್ತ ಸಭೆ ನಡೆದಿರುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಅದರ ಅನ್ವಯ ಅಧಿಕಾರಿಗಳ ಪ್ರತ್ಯೇಕ ತಂಡ ರಚಿಸಿ, ಆ ಸಭೆಯ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ’ ಎಂದರು.

ಸಭೆಯಲ್ಲಿ ಬೇಡಿಕೆ ಪಟ್ಟಿ ಸಿದ್ಧ: ‘ಅರ್ಧ ದಿನ ನಡೆದಿದ್ದ ಸಭೆಯಲ್ಲಿ, ಶರಣಾದ ನಕ್ಸಲರಿಗೆ ಸರ್ಕಾರವು ನೀಡಬೇಕಾದ ಸಲವತ್ತುಗಳ ಬೇಡಿಕೆ ಪಟ್ಟಿಯನ್ನು ಸಿದ್ಧಪಡಿಸಲಾಗಿತ್ತು. ಅದನ್ನು ಗೌರಿ ಅವರಿಗೆ ಹಸ್ತಾಂತರಿಸಲಾಗಿತ್ತು. ಆ ಪಟ್ಟಿಯ ಸಮೇತ ಮುಖ್ಯಮಂತ್ರಿ ಅವರನ್ನು ಭೇಟಿ
ಯಾಗಲು ಗೌರಿ ಅವರು ದಿನಾಂಕ ಪಡೆದುಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ’ ಎಂದು ಅಧಿಕಾರಿ ಹೇಳಿದರು.

ಶರಣಾಗತಿಗೆ ನಕ್ಸಲರ ಆಕ್ರೋಶ: ‘ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ಕರೆಸಿಕೊಳ್ಳುತ್ತಿರುವ ಸರ್ಕಾರ, ಶರಣಾದ ನಕ್ಸಲರಿಗೆ ಪುನರ್ವಸತಿ ಕಲ್ಪಿಸಲು ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿ ಸಭೆಯಲ್ಲಿ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು.’

‘ಚಳವಳಿಯಲ್ಲಿದ್ದ ರಮೇಶ್‌, ಕನ್ಯಾಕುಮಾರಿ ಸೇರಿ ಹಲವರು ಇಂದಿಗೂ ಜೈಲಿನಲ್ಲಿದ್ದಾರೆ. ಇದುವರೆಗೂ ಅವರಿಗೆ ನ್ಯಾಯ ಸಿಕ್ಕಿಲ್ಲ. ಪ್ಯಾಕೇಜ್‌ ನೀಡುವ ನೆಪದಲ್ಲಿ ಸರ್ಕಾರವು ಚಳವಳಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಮುಖ್ಯವಾಹಿನಿಯ ಹೆಸರಿನಲ್ಲಿ ಜೈಲಿಗೆ ಕಳುಹಿಸುತ್ತಿದೆ. ಹೀಗಾಗಿ ಈ ಬಾರಿ ಚಳವಳಿಯಲ್ಲಿ ಇರುವವರನ್ನು ಶರಣಾಗಲು ಬಿಡುವುದಿಲ್ಲ ಎಂದು ಕೆಲ ಮುಖಂಡರು ವಾದಿಸಿದ್ದರು ಎಂಬುದಾಗಿ ಗೌರಿ ಅವರ ಆಪ್ತರು ಹೇಳಿಕೊಂಡಿದ್ದಾರೆ’ ಎಂದು ಎಸ್‌ಐಟಿ ಅಧಿಕಾರಿ ವಿವರಿಸಿದರು.

‘ಅಸಮಾಧಾ ಗೊಂಡಿದ್ದ ಮುಖಂಡರ ಮನವೊಲಿಸಲು ಪ್ರಯತ್ನಿಸಿದ್ದ ಗೌರಿ ಲಂಕೇಶ್‌, ಈಗಾಗಲೇ ಶರಣಾದವರಿಗೆ ಸಿಗಬೇಕಾದ ಎಲ್ಲ ಸವಲತ್ತುಗಳನ್ನು ಕೊಡಿಸಲು ಮುಖ್ಯಮಂತ್ರಿ ಜತೆ ಮಾತನಾಡುತ್ತೇನೆ. ಹೊಸದಾಗಿ ಶರಣಾಗುವ ಮೂವರಿಗೂ ಸೂಕ್ತ ಪುನರ್ವಸತಿ ಕಲ್ಪಿಸುವಂತೆ ಒತ್ತಾಯಿಸುತ್ತೇನೆ ಎಂದು ಹೇಳಿದ್ದರು. ಅದಕ್ಕೂ ಆಕ್ರೋಶ ವ್ಯಕ್ತಪಡಿಸಿದ್ದ ಆ ಮುಖಂಡರು, ಈ ಬಾರಿ ಶರಣಾಗುವ ಮಾತೇ ಇಲ್ಲ. ಇದರಲ್ಲಿ ಹೆಚ್ಚು ಆಸಕ್ತಿ ತೋರಿಸಬೇಡಿ. ಆ ರೀತಿ ಮಾಡಿದರೆ ಪರಿಣಾಮ ಎದುರಿಸಬೇಕಾಗುತ್ದೆ ಎಂದು ಗೌರಿ ಅವರಿಗೆ ಬೆದರಿಕೆ ಹಾಕಿದ್ದರು.’

‘ಸಭೆಯಲ್ಲಿ ಹಲವರು, ಶರಣಾಗತಿ ಪರ ಮಾತನಾಡಿದ್ದಾರೆ. ಕೆಲವರು ಅದರ ವಿರುದ್ಧ ಮಾತನಾಡಿದ್ದಾರೆ. ಇದರಿಂದಾಗಿ ಗೊಂದಲದಲ್ಲಿ ಸಭೆ ಮುಕ್ತಾಯವಾಗಿತ್ತು. ಅದರ ಬಳಿಕವೂ ಗೌರಿ ಲಂಕೇಶ್‌, ಚಳವಳಿಯಲ್ಲಿದ್ದ ಮೂವರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸುತ್ತಿದ್ದರು’ ಎಂದು ಅಧಿಕಾರಿ ವಿವರಿಸಿದರು.

ರಾಮೇಶ್ವರಕ್ಕೆ ಎಸ್‌ಐಟಿ ತಂಡ: ತಮಿಳುನಾಡಿನ ರಾಮೇಶ್ವರದಲ್ಲಿ ಸಕ್ರಿಯವಾಗಿರುವ ಅಕ್ರಮ ಶಸ್ತ್ರಾಸ್ತ್ರ ತಯಾರಿಕಾ ತಂಡಗಳಿಂದ ಹಂತಕರು ಪಿಸ್ತೂಲ್‌ ಖರೀದಿ ಮಾಡಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿರುವ ಎಸ್‌ಐಟಿ ಅಧಿಕಾರಿಗಳ ತಂಡ, ರಾಮೇಶ್ವರಕ್ಕೆ ಹೋಗಿದೆ.

‘ಹತ್ಯೆ ನಡೆದ ಸ್ಥಳ ಹಾಗೂ ಗೌರಿ ಅವರ ದೇಹದಲ್ಲಿ ಸಿಕ್ಕ ಗುಂಡುಗಳನ್ನು ಪರಿಶೀಲಿಸಿದಾಗ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಹತ್ಯೆಗೆ ಬಳಸಿರುವ ಗುಂಡು ಹಾಗೂ ಪಿಸ್ತೂಲ್‌ ಮೂಲಕ ಅವರ ಜಾಡು ಪತ್ತೆ ಮಾಡಲು ಪ್ರಯತ್ನಿಸುತ್ತಿದ್ದೇವೆ. ರಾಮೇಶ್ವರಕ್ಕೆ ಹೋಗಿರುವ ತಂಡವು ನಿತ್ಯವೂ ಮಾಹಿತಿ ರವಾನಿಸುತ್ತಿದೆ’ ಎಂದರು.

ಹಂತಕರ ಬೈಕ್‌ ಹಿಂದೆಯೇ ಹೋಗಿದ್ದ ಜಿಮ್‌ ಮಾಲೀಕ
ಗೌರಿ ಅವರನ್ನು ಹತೈಗೈದು ಪರಾರಿಯಾದ ಹಂತಕರ ಬೈಕ್‌ ಹಿಂದೆಯೇ ಮತ್ತೊಂದು ಬೈಕ್‌ನಲ್ಲಿ ಸ್ಥಳೀಯ ಜಿಮ್‌ ಮಾಲೀಕರೊಬ್ಬರು ಹೋಗಿದ್ದರು ಎಂಬ ಮಾಹಿತಿ ಎಸ್‌ಐಟಿ ಅಧಿಕಾರಿಗಳಿಗೆ ಲಭ್ಯವಾಗಿದೆ.

‘ರಾಜರಾಜೇಶ್ವರಿನಗರದ ಗೌರಿ ಅವರ ಮನೆಗೆ ಬಂದಿದ್ದ ಹಂತಕರು, ಕೃತ್ಯ ಎಸಗಿದ ಬಳಿಕ ಮನೆ ಸಮೀಪದ ಉದ್ಯಾನ ರಸ್ತೆ ಮೂಲಕ ಹೊರಟು ಹೋಗಿದ್ದಾರೆ. ಅವರ ಬೈಕ್‌ ಹೋದ ಕೆಲ ನಿಮಿಷದಲ್ಲಿ, ಅದೇ ರಸ್ತೆಯಲ್ಲಿ ಮತ್ತೊಂದು ಬೈಕ್‌ನಲ್ಲಿ ಜಿಮ್‌ ಮಾಲೀಕರೊಬ್ಬರು ಹೋಗಿದ್ದರು. ಈ ದೃಶ್ಯ ಸ್ಥಳದಲ್ಲಿದ್ದ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆೆರೆಯಾಗಿತ್ತು’ ಎಂದು ಎಸ್‌ಐಟಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

‘ಮನೆ ಹಾಗೂ ಸುತ್ತಮುತ್ತಲ ಸಿ.ಸಿ.ಟಿ.ವಿ ಕ್ಯಾಮೆರಾಗಳ ಡಿವಿಆರ್‌ ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ, ಹತ್ಯೆಯ ಸಮಯದಲ್ಲಿ ಎರಡು ಬೈಕ್‌ಗಳು ಒಂದೇ ಮಾರ್ಗವಾಗಿ ಹೋಗಿದ್ದು ಗೊತ್ತಾಗಿತ್ತು. ಅವುಗಳ ನೋಂದಣಿ ಸಂಖ್ಯೆ ಅಸ್ಪಷ್ಟವಾಗಿತ್ತು. ತಾಂತ್ರಿಕ ಪರಿಣಿತರ ಸಹಾಯದಿಂದ ನೋಂದಣಿ ಸಂಖ್ಯೆ ಪತ್ತೆ ಹಚ್ಚಲು ಪ್ರಯತ್ನಿಸಿದ್ದೆವು. ಮೊದಲಿಗೆ ಹೋದ ಬೈಕ್‌ ನಂಬರ್‌ ಸಿಗಲಿಲ್ಲ. ಬದಲಿಗೆ ಅದರ ಹಿಂದೆ ಹೋಗಿದ್ದ ಮತ್ತೊಂದು ಬೈಕ್‌ ನಂಬರ್‌ ಮಾತ್ರ ಲಭ್ಯವಾಗಿತ್ತು.’

‘ಆ ಸುಳಿವು ಮೂಲಕ ತನಿಖೆ ಮುಂದುವರಿಸಿದ ಅಧಿಕಾರಿಗಳ ತಂಡ, ಮೈಸೂರು ರಸ್ತೆಯಲ್ಲಿ ಜಿಮ್‌ ನಡೆಸುತ್ತಿರುವ ವ್ಯಕ್ತಿಯೊಬ್ಬರನ್ನು ಪತ್ತೆ ಹಚ್ಚಿ ಒಂದು ದಿನ ವಿಚಾರಣೆಗೆ ಒಳಪಡಿಸಿತ್ತು’ ಎಂದು ಹಿರಿಯ ಅಧಿಕಾರಿ ವಿವರಿಸಿದರು.

‘ಮುಂದೆ ಹೋದ ಬೈಕ್‌ನವರಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಜಿಮ್‌ ಮಾಲೀಕ ಹೇಳಿದ್ದರು. ಅವರ ಪೂರ್ವಾಪರ ಪರಿಶೀಲನೆ ನಡೆಸಿದಾಗ, ಅಮಾಯಕರು ಎಂಬುದು ಗೊತ್ತಾಯಿತು. ಬಳಿಕ ಬಿಟ್ಟು ಕಳುಹಿಸಿದೆವು’ ಎಂದು ಅವರು ವಿವರಿಸಿದರು.

ನನ್ನ ಪಾಡಿಗೆ ನಾನು ಹೊರಟಿದ್ದೆ: ಅಧಿಕಾರಿಗಳಿಗೆ ಹೇಳಿಕೆ ನೀಡಿರುವ ಜಿಮ್‌ ಮಾಲೀಕ, ‘ಸುಮಾರು ವರ್ಷಗಳಿಂದ ಜಿಮ್‌ ನಡೆಸುತ್ತಿದ್ದೇನೆ. ನಿತ್ಯವೂ ಬೆಳಿಗ್ಗೆ ಹಾಗೂ ಸಂಜೆ ಜಿಮ್‌ಗೆ ಹೋಗಿ ವಾಪಸ್‌ ಬೈಕ್‌ನಲ್ಲೇ ಮನೆಗೆ ಹೋಗುತ್ತೇನೆ. ಸೆಪ್ಟೆಂಬರ್‌ 5ರಂದು ರಾತ್ರಿಯೂ ಜಿಮ್‌ನಿಂದ ಮನೆಗೆ ಹೋಗುತ್ತಿದ್ದೆ’ ಎಂದಿದ್ದಾರೆ.

‘ಉದ್ಯಾನ ಬಳಿ ನನ್ನ ಪಾಡಿಗೆ ನಾನು ಹೊರಟಿದ್ದೆ. ಮುಂದೆ ಹಾಗೂ ಅಕ್ಕ–ಪಕ್ಕದಲ್ಲಿ ಯಾರ‍್ಯಾರು ಹೋಗುತ್ತಿದ್ದರು ಎಂಬುದನ್ನು ಗಮನಿಸಿಲ್ಲ. ನಾನು ಹೋಗಬೇಕಾದ ರಸ್ತೆಯಲ್ಲೇ ಹಂತಕರದ್ದು ಎನ್ನಲಾದ ಬೈಕ್‌ ಹೋಗಿರುವುದಕ್ಕೂ ನನಗೂ ಸಂಬಂಧವಿಲ್ಲ’ ಎಂದು ಹೇಳಿಕೊಂಡಿರುವುದಾಗಿ ಎಸ್‌ಐಟಿ ಮೂಲಗಳು ತಿಳಿಸಿವೆ.

ಎಸ್‌ಐಟಿ ಹಿರಿಯ ಅಧಿಕಾರಿ, ‘ತನಿಖೆ ನಡೆಸುವ ನಾವು ಎಲ್ಲರನ್ನೂ ಅನುಮಾನದಿಂದ ನೋಡುತ್ತೇವೆ. ವಿಚಾರಣೆ ನಡೆಸಿ ಹೇಳಿಕೆ ಪಡೆಯುತ್ತೇವೆ. ಜಿಮ್‌ ಮಾಲೀಕನ ಮೇಲೂ ಅನುಮಾನವಿತ್ತು. ಕರೆಸಿ ಮಾಹಿತಿ ಪಡೆದೆವು. ಮಾಧ್ಯಮಗಳಲ್ಲಿ ಸುಖಾಸುಮ್ಮನೇ ಸುದ್ದಿಯಾದರೆ, ಅವರ ಘನತೆಗೆ ಧಕ್ಕೆ ಬರುತ್ತದೆ. ಹೀಗಾಗಿ ಹೆಸರನ್ನು ಗೋಪ್ಯವಾಗಿರಿಸಿದ್ದೇವೆ’ ಎಂದು ಹಿರಿಯ ಅಧಿಕಾರಿ ತಿಳಿಸಿದರು.

ರಾಮಚಂದ್ರಾಪುರ ಮಠದ ಸದಸ್ಯರಿಂದ ಎಸ್‌ಐಟಿಗೆ ಹೇಳಿಕೆ
‘ಗೌರಿ ಲಂಕೇಶ್‌ ಹತ್ಯೆ ಪ್ರಕರಣಕ್ಕೂ ರಾಘವೇಶ್ವರ ಸ್ವಾಮೀಜಿ ಅವರಿಗೂ ಯಾವುದೇ ಸಂಬಂಧವಿಲ್ಲ. ಮಠದ ವಿರೋಧಿಗಳು ಅವರ ಬಗ್ಗೆ ಅಪಪ್ರಚಾರ ಮಾಡಿ, ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ’ ಎಂದು ರಾಮಚಂದ್ರಾಪುರ ಮಠದ ಆಡಳಿತ ಮಂಡಳಿ ಸದಸ್ಯರು ಎಸ್‌ಐಟಿ ಅಧಿಕಾರಿಗಳಿಗೆ ಹೇಳಿಕೆ ನೀಡಿದ್ದಾರೆ.

ಎಸ್‌ಐಟಿ ಕಚೇರಿಗೆ ಸೋಮವಾರ ಬಂದಿದ್ದ ಮಠದ ಕಾರ್ಯನಿರ್ವಾಹಕ ಅಧಿಕಾರಿ ಕೆ.ಜಿ.ಭಟ್, ಮಹಾಮಂಡಲದ ಅಧ್ಯಕ್ಷೆ ಈಶ್ವರಿ, ಕಾರ್ಯದರ್ಶಿ ವೇಣು ವಿಘ್ನೇಶ್ ಹಾಗೂ ಕಾನೂನು ಸಲಹೆಗಾರ ಅರುಣ ಶ್ಯಾಮ್ ಹೇಳಿಕೆ ದಾಖಲಿಸಿದರು.

‘ಸ್ವಾಮೀಜಿ ವಿರುದ್ಧ ನಡೆಯುತ್ತಿರುವ ಷಡ್ಯಂತ್ರದ ಮುಂದುವರೆದ ಭಾಗವಾಗಿ ಪ್ರೇಮಲತಾ ದಂಪತಿ ಸುಳ್ಳು ಹೇಳಿಕೆ ನೀಡಿದ್ದಾರೆ. ತನಿಖೆಯ ದಿಕ್ಕು ತಪ್ಪಿಸುತ್ತಿದ್ದಾರೆ. ಅವರ ವಿರುದ್ಧವೇ ತನಿಖೆ ಕೈಗೊಂಡು ಅವರು ದುರುದ್ದೇಶವನ್ನು ಬಯಲು ಮಾಡಬೇಕು’ ಎಂದು ಅವರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT