ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗನಿಗೆ ಕ್ಷೇತ್ರ ಬಿಟ್ಟುಕೊಡಲು ಬಿಎಸ್‌ವೈ ತಂತ್ರ: ಉಗ್ರಪ್ಪ

Last Updated 19 ಸೆಪ್ಟೆಂಬರ್ 2017, 6:14 IST
ಅಕ್ಷರ ಗಾತ್ರ

ರಾಯಚೂರು: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಮಗನಿಗೆ ಶಿಕಾರಿಪುರ ಕ್ಷೇತ್ರ ಬಿಟ್ಟು ಕೊಡುವ ಉದ್ದೇಶದಿಂದ ಉತ್ತರ ಕರ್ನಾಟಕದಲ್ಲಿ ಸ್ಪರ್ಧಿಸುತ್ತೇನೆ ಎಂದು ಮುಖ್ಯವಿಷಯ ಮರೆಮಾಚಿ ಹೇಳುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ವಿ.ಎಸ್‌.ಉಗ್ರಪ್ಪ ಹೇಳಿದರು.

ನಗರದಲ್ಲಿ ಸೋಮವಾರ ಆಯೋಜಿಸಿದ್ದ ವಾಲ್ಮೀಕಿ ಸಮಾಜದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ‘ಬಿಜೆಪಿ ಹೈಕಮಾಂಡ್‌ ಸೂಚನೆಯ ಹೆಸರಿನಲ್ಲಿ ಮಗನಿಗೆ ಕ್ಷೇತ್ರ ಬಿಟ್ಟುಕೊಡುವ ನಾಟಕ ಆಡುತ್ತಿದ್ದಾರೆ. ಶಿಕಾರಿಪುರದಲ್ಲಿ ಯಡಿಯೂರಪ್ಪ ಜನಬೆಂಬಲ ಕಳೆದುಕೊಂಡಿದ್ದಾರೆ’ ಎಂದು ಟೀಕಿಸಿದರು.

ರಾಜ್ಯದಲ್ಲಿ ಬಿಜೆಪಿ ಕುಂಭಕರ್ಣನ ನಿದ್ರಾವಸ್ಥೆಯಲ್ಲಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರು ಬಂದು ಕೀ ತಿರುಗಿಸಿ ಹೋಗಿದ್ದಾರೆ. ಅದರಿಂದಾಗಿ ಹೋರಾಟಗಳು ನಡೆಯುತ್ತಿವೆ. ಏನೂ ವಿಷಯ ಇಲ್ಲದಕ್ಕಾಗಿ ಉಡಾಫೆ ಹೊಡೆಯುತ್ತಿದ್ದಾರೆ.

ನಾಲ್ಕು ಜನ ಸಚಿವರು ರಾಜೀನಾಮೆ ಕೊಡುತ್ತಾರೆ ಎಂದು ಯಡಿಯೂರಪ್ಪ ಅವರು ಘೋಷಿಸಿ ನಾಲ್ಕು ತಿಂಗಳಾಯಿತು. ಭ್ರಷ್ಟಾಚಾರದ ಮಾಹಿತಿ ಗೊತ್ತಿದ್ದು ಸುಮ್ಮನಿರುವುದು ಕೂಡಾ ಒಂದು ಅಪರಾಧ. ಭ್ರಷ್ಟಾಚಾರದ ದಾಖಲೆಗಳು ಏನಾದರೂ ಇದ್ದರೆ ಕೂಡಲೇ ಬಹಿರಂಗಪಡಿಸಬೇಕು ಎಂದು ಸವಾಲು ಹಾಕಿದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಒಂದೇ ಒಂದು ಪ್ರಕರಣವನ್ನು ಸಿಬಿಐಗೆ ವಹಿಸಿರಲಿಲ್ಲ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಐದು ಪ್ರಕರಣಗಳು ಸಿಬಿಐಗೆ ಹೋಗಿವೆ. ಸೂರ್ಯ ಪೂರ್ವದಲ್ಲಿ ಹುಟ್ಟುವುದು ಎಷ್ಟು ಸತ್ಯವೋ; ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ. ಇದು ಗೋಡೆ ಬರಹದಂತೆ ಬಿಜೆಪಿಯವರಿಗೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಅದಕ್ಕಾಗಿ ಬಿಜೆಪಿಯವರು ಏನೆಲ್ಲಾ ಕಸರತ್ತು ಆರಂಭಿಸಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT