ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎತ್ತಿನಹೊಳೆ; ತಾಲ್ಲೂಕಿಗೂ ನೀರು ಹರಿಯಲಿ’

Last Updated 19 ಸೆಪ್ಟೆಂಬರ್ 2017, 6:36 IST
ಅಕ್ಷರ ಗಾತ್ರ

ಬೇಲೂರು: ‘ಎತ್ತಿನಹೊಳೆ ಯೋಜನೆ ತಾಲ್ಲೂಕಿನ ಮೂಲಕ ಹಾದು ಹೋಗುತ್ತಿದ್ದರೂ, ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸುವ ವಿಚಾರದಲ್ಲಿ ಶಾಸಕ ವೈ.ಎನ್‌.ರುದ್ರೇಶ್‌ಗೌಡ ಕ್ರಮಕೈಗೊಳ್ಳದೆ, ಜಾಣ ಮೌನ ವಹಿಸಿದ್ದಾರೆ, ಇತ್ತ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಶಿವರಾಂ ಕೆರೆಗಳಿಗೆ ನೀರು ಹರಿಸಲಾಗಿದೆ ಎಂದು ಸುಳ್ಳು ಹೇಳಿಕೆ ನೀಡಿದ್ದಾರೆ’ ಎಂದು ಜೆಡಿಎಸ್‌ ಮುಖಂಡರಾದ ಹಗರೆ ದಿಲೀಪ್‌ ಮತ್ತು ಈಶ್ವರ್‌ ಪ್ರಸಾದ್‌ ಆರೋಪಿಸಿದರು.

‘ಚಿಕ್ಕಬಳ್ಳಾಪುರ, ಕೋಲಾರ ಸೇರಿದಂತೆ ಬಯಲುಸೀಮೆ ಪ್ರದೇಶಗಳಿಗೆ ನೀರು ಹರಿಸುವ ಎತ್ತಿನಹೊಳೆ ಯೋಜನೆ ತಾಲ್ಲೂಕಿನ ಮೂಲಕ ಹಾದು ಹೋಗಲಿದೆ. ತಾಲ್ಲೂಕಿನ ಬರಗಾಲ ಪೀಡಿತ ಪ್ರದೇಶಗಳ ಕೆರೆಗಳಿಗೆ ಈ ಯೋಜನೆಯ ಮೂಲಕ ನೀರು ಹರಿಸಬಹುದು. ಆದರೆ, ಶಾಸಕ ವೈ.ಎನ್‌.ರುದ್ರೇಶ್‌ಗೌಡರು ಈ ಬಗ್ಗೆ ಗಮನಹರಿಸುತ್ತಿಲ್ಲ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಬಿ.ಶಿವರಾಂ ಅವರು ಎತ್ತಿನಹೊಳೆ ಯೋಜನೆಯಿಂದ ಬೇಲೂರು ತಾಲ್ಲೂಕಿನ ಕೆರೆಗಳಿಗೆ ನೀರು ಹರಿಸಲು ಸರ್ಕಾರ ಅನುಮೋದನೆ ನೀಡಿದೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ. ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಯಾವುದೇ ಪ್ರಸ್ತಾಪ ಇಲ್ಲ. ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಶಿವರಾಂ ಅವರು ಸುಳ್ಳು ಮಾಹಿತಿಗಳನ್ನು ನೀಡುತ್ತಿದ್ದಾರೆ. ಯೋಜನೆಗೆ ಮಂಜೂರಾತಿ ಕೊಡಿಸಿದ್ದರೆ, ಶಿವರಾಂ ಅವರು ದಾಖಲಾತಿಗಳನ್ನು ತೋರಿಸಲಿ’ ಎಂದು ಸವಾಲು ದಿಲೀಪ್‌
ಹಾಕಿದರು.

‘ಯೋಜನೆಯನ್ನು ಯಾರಾದರೂ ಕಾರ್ಯರೂಪಕ್ಕೆ ತರಲಿ ಅದನ್ನು ಸ್ವಾಗತಿಸುತ್ತೇವೆ. ಬೇಲೂರು ತಾಲ್ಲೂಕಿನ ಬಯಲು ಸೀಮೆ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಸಿಗಬೇಕೆಂಬುದಷ್ಟೇ ತಮ್ಮ ಉದ್ದೇಶವಾಗಿದೆ. ಎತ್ತಿನಹೊಳೆ ಯೋಜನೆಯಿಂದ ಜಮೀನು ಕಳೆದುಕೊಳ್ಳುವ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಬೇಲೂರು ತಾಲ್ಲೂಕಿಗೆ ನೀರು ಹರಿಸದಿದ್ದರೆ, ಈ ತಾಲ್ಲೂಕಿನಲ್ಲಿ ಕಾಮಗಾರಿ ನಡೆಸಲು ಅವಕಾಶ ನಿಡುವುದಿಲ್ಲ’ ಎಂದು ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಅಂಗಡಿಹಳ್ಳಿ ಲೋಕಕುಮಾರ್, ಚಂದ್ರಶೇಖರ್, ದೇವರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT