ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ಪುಷ್ಕರ: ಸತ್ಸಂಗ, ಸಾಮೂಹಿಕ ಭಜನೆ

Last Updated 19 ಸೆಪ್ಟೆಂಬರ್ 2017, 6:51 IST
ಅಕ್ಷರ ಗಾತ್ರ

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ನಡೆಯುತ್ತಿರುವ ಕಾವೇರಿ ಮಹಾ ಪುಷ್ಕರ ಮೇಳದ ಅಂಗವಾಗಿ ಸಮೀಪದ ಗಂಜಾಂ ನಿಮಿಷಾಂಬ ದೇವಾಲಯ ಬಳಿ, ಕಾವೇರಿ ನದಿ ತೀರದಲ್ಲಿ ಸಾಧು, ಸಂತರ ಸತ್ಸಂಗ ನಡೆಯಿತು.

ಸಂಜೆ 5.30ಕ್ಕೆ ಆರಂಭವಾದ ಸತ್ಸಂಗದಲ್ಲಿ ಆದಿ ಶಂಕರ ಮಠದ ಗಣೇಶ ಸ್ವರೂಪಾನಂದಗಿರಿ ಸ್ವಾಮೀಜಿ, ಹರೇ ಕೃಷ್ಣ ಪಂಥದ ಗೋವರ್ಧನ ಗಿರಿ ಮಹಾರಾಜ್‌, ಸುಹಾಸಾನಂದ ಸ್ವಾಮೀಜಿ, ಮೈಸೂರು ಪುಟ್ಟಸ್ವಾಮಿ, ಕಾವೇರಿ ಕನ್ಯಾ ಗುರುಕುಲದ ಮುಖ್ಯಸ್ಥ ಡಾ.ಕೆ.ಕೆ.ಸುಬ್ರಮಣಿ, ವೆಂಕಟೇಶ್‌ ಭಾಗವಹಿಸಿದ್ದರು.

ಗೋವರ್ಧನ್ ಗಿರಿ ಮಹಾರಾಜ್‌ ಮಾತನಾಡಿ, ‘ಕಾವೇರಿ ನದಿ ಕಲುಷಿತವಾಗದಂತೆ ನೋಡಿಕೊಳ್ಳುವುದು ಎಲ್ಲರ ಕರ್ತವ್ಯ, ಪ್ರಕೃತಿಯ ಭಾಗವಾದ ನದಿ, ಸರೋವರ, ಸೂರ್ಯ, ಚಂದ್ರ, ಭೂಮಿ, ಮರ, ಗಿಡ, ಪ್ರಾಣಿ, ಪಕ್ಷಿಗಳನ್ನು ಆರಾಧಿಸುವ ಪದ್ಧತಿ ಶತಮಾನಗಳಿಂದಲೂ ಚಾಲ್ತಿಯಲ್ಲಿದೆ.

ಇವುಗಳಲ್ಲಿ ದೇವರನ್ನು ಕಾಣುವ ಮನೋಭಾವ ನಮ್ಮದು. ಆದರೆ ಈಚಿನ ವರ್ಷಗಳಲ್ಲಿ ಪ್ರಕೃತಿಯ ಮೇಲೆ ದೌರ್ಜನ್ಯ ನಡೆಯುತ್ತಿದೆ. ಪವಿತ್ರ ನದಿಗಳು ಕಲುಷಿತವಾಗುತ್ತಿವೆ. ಗಾಳಿ ಕೂಡ ಅಶುದ್ಧವಾಗುತ್ತಿದೆ. ಈ ಬಗ್ಗೆ ಜನ ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು. ಕಾವೇರಿ ನದಿಗೆ ಮಹಾ ಆರತಿ ಮತ್ತು ಲಲಿತಾಸಹಸ್ರ ನಾಮ ಪಠಣ ನಡೆಯಿತು.

ಕಾವೇರಿ ಪುಷ್ಕರ ಕಾರ್ಯಕ್ರಮಕ್ಕಾಗಿ ಉತ್ತರ ಕಾವೇರಿ ನದಿ ಬಳಿಯ ವೇದಿಕೆಯಲ್ಲಿ ಮೈಸೂರಿನ ಭಾಗೀಶ್ವರಿ ಮಹಿಳಾ ಭಜನಾ ಮಂಡಳಿಯ ಸದಸ್ಯರು ಸೋಮವಾರ 3 ತಾಸಿಗೂ ಹೆಚ್ಚು ಕಾಲ ಭಜನೆ ನಡೆಸಿಕೊಟ್ಟರು. ವಿವಿಧೆಡೆಗಳಿಂದ ಬಂದಿದ್ದ ಭಕ್ತರು ಕಾವೇರಿ ಸ್ತೋತ್ರ, ಕುಂಭ ಪೂಜೆ, ಪುಣ್ಯ ಸ್ನಾನ, ಅರ್ಘ್ಯ ಅರ್ಪಣೆ ನೀಡಿದರು. ವಿವಿಧೆಡೆಗಳಿಂದ ಬಂದವರು ಸೋಮವಾರ ಕೂಡ ಪುಣ್ಯ ಸ್ನಾನ ಮಾಡಿದರು.

ನೂರಾರು ವೈದಿಕರ ತಂಡದ ಜತೆಗೆ ಬೇಬಿ ಮಠದ ಪೀಠಾಧ್ಯಕ್ಷ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಕಾವೇರಿ ಪೂಜೆ ನೆರವೇರಿಸಿದರು. ಭಾನುವಾರ ಸಂಜೆ ರೈತರಿಂದ ಕಾವೇರಿ ಮಹಾ ಆರತಿ ನೆರವೇರಿತು. ಮೈಸೂರಿನ ನೃತ್ಯ ಕಲಾ ಶಾಲೆಯ ಕಲಾವಿದರಿಂದ ಭರತನಾಟ್ಯ ನಡೆಯಿತು. ಸೆ. 21ರಿಂದ 3 ದಿನಗಳ ಕಾಲ ಕಾವೇರಿ ಪುಷ್ಕರದಲ್ಲಿ ಪಾವಗಡ ಪ್ರಕಾಶ್‌ ಅವರು ಕಾವೇರಿ ನದಿ ಕುರಿತು ಪ್ರವಚನ ನೀಡುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT