ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ವಾರ್ಡ್‌ನಲ್ಲಿ ಸಮಸ್ಯೆಗಳದ್ದೇ ಕಾರುಬಾರು

Last Updated 19 ಸೆಪ್ಟೆಂಬರ್ 2017, 7:06 IST
ಅಕ್ಷರ ಗಾತ್ರ

ತುಮಕೂರು: ರಸ್ತೆಯಲ್ಲಿ ಕಾಣಸಿಗುವ ಸಾವಿರಾರು ಹೊಂಡಗಳು, ರಾಜಾರೋಷವಾಗಿ ಓಡಾಡುವ ಹಂದಿಗಳು, ಎಲ್ಲಿ ಬೇಕಾದಲ್ಲಿ ಕಸದ ಗುಡ್ಡೆಗಳು– ಇವು ನಗರದ 28ನೇ ವಾರ್ಡಿಗೆ ಭೇಟಿ ನೀಡಿದರೆ ಕಾಣಸಿಗುವ ದೃಶ್ಯಗಳು.‘ಇಲ್ಲಿ ಎಲ್ಲವೂ ಇದೆ ಎಂದು ಜನಪ್ರತಿನಿಧಿಗಳು ಹೇಳಿಕೊಳ್ಳಬಹುದು. ಆದರೆ ಇಲ್ಲಿ ಎಲ್ಲಕ್ಕಿಂತ ಹೆಚ್ಚು ಸಮಸ್ಯೆಗಳೇ ಇವೆ.

ಬಿಲ್‌ ಪಾಸ್‌ ಮಾಡುವ ಉದ್ದೇಶದಿಂದ ಮಾತ್ರ ಕಾಮಗಾರಿ ಪ್ರಾರಂಭ ಮಾಡುವ ಜನಪ್ರತಿನಿಧಿಗಳು ಅದರ ಗುಣಮಟ್ಟದ ಬಗ್ಗೆ ಯಾವ ಗಮನವನ್ನು ಹರಿಸುತ್ತಿಲ್ಲ. ರಸ್ತೆಗಳಲ್ಲಂತೂ ಹೊಂಡಗಳದ್ದೇ ಕಾರುಬಾರು. ಯಾವ ಯಾವುದೋ ಕಾರಣಕ್ಕಾಗಿ ರಸ್ತೆಯಲ್ಲಿ ಗುಂಡಿ ತೋಡಿ ಅದನ್ನು ಸರಿಯಾಗಿ ಮುಚ್ಚದೇ ಇರುವ ರಸ್ತೆಯನ್ನು ಹಾಳು ಮಾಡುತ್ತಿದ್ದಾರೆ’ ಎನ್ನುವ ದೂರು ಸ್ಥಳೀಯರದ್ದು.

ಇದು ಮರಳೂರು, ಅಮರಜ್ಯೋತಿ ನಗರ, ಸರಸ್ವತಿಪುರಂ ಪ್ರದೇಶಗಳ ಸದ್ಯದ ಸ್ಥಿತಿ. ಪ್ರದೇಶಕ್ಕೆ ಭೇಟಿ ನೀಡಿದಾಗ ಕಾಣ ಕಾಣುತ್ತಲೇ ಒಂದು ಲಾರಿ ರಸ್ತೆಯ ಕೆಸರಿನಲ್ಲಿ ಸಿಲುಕಿಕೊಂಡಿತು. ಇದಕ್ಕೆ ಪ್ರತಿಕ್ರಿಯಿಸಿದ ಸ್ಥಳೀಯರು ‘ಪ್ರತಿನಿತ್ಯ ಈ ರಸ್ತೆಗಳಲ್ಲಿ ಇಂತಹ ಸಾಹಸಗಳು ಕಾಣಿಸುತ್ತಲೇ ಇರುತ್ತವೆ. ಅದೇಷ್ಟೋ ದ್ವಿಚಕ್ರ ವಾಹನ ಸವಾರರು ಬಿದ್ದೆದ್ದು ಹೋಗಿದ್ದಾರೆ’ ಎನ್ನುತ್ತಾರೆ.

‘ಇಲ್ಲಿ ನಾಯಿ ಮತ್ತು ಹಂದಿಗಳ ಕಾಟ ವಿಪರೀತ. ಈ ಬಗ್ಗೆ ಹಲವಾರು ಬಾರಿ ಪಾಲಿಕೆ ಸದಸ್ಯರ ಗಮನಕ್ಕೆ ತಂದಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ರಾತ್ರಿಯಾದರಂತೂ ನಾಯಿಗಳು ರಸ್ತೆಯನ್ನೇ ತಮ್ಮದನ್ನಾಗಿ ಮಾಡಿಕೊಳ್ಳುತ್ತವೆ’ ಎನ್ನುತ್ತಾರೆ ಅಮರಜ್ಯೋತಿ ನಗರ ನಿವಾಸಿ ರಾಮಚಂದ್ರಪ್ಪ.

‘ಸರಸ್ವತಿಪುರಂ ಎರಡನೇ ಹಂತದ ರಸ್ತೆಯು ತೀರಾ ಹದಗೆಟ್ಟಿದೆ. ರಸ್ತೆಯು ಇನ್ನೂ ಡಾಂಬರು ಕಂಡಿಲ್ಲ. ಮಣ್ಣಿನ ರಸ್ತೆಯಲ್ಲಿಯೂ ಹೊಂಡಗಳೇ ತುಂಬಿವೆ. ಮಳೆ ಬಂದರೆ ಈ ಹದಗೆಟ್ಟ ರಸ್ತೆಯಲ್ಲಿ ಹೋಗುವುದಕ್ಕಿಂತ ಬೇರೆ ನರಕವಿಲ್ಲ’ ಎನ್ನುತ್ತಾರೆ ಸ್ಥಳೀಯ ರಮೇಶ್‌.

ಆರ್ಯಭಾರತಿ ಪಾಲಿಟೆಕ್ನಿಕ್‌, ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜು ಮತ್ತು ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಂತಹ ವಿದ್ಯಾಸಂಸ್ಥೆಗಳು ಇರುವ ಈ ವಾರ್ಡಿನಲ್ಲಿ ಸ್ವಚ್ಛತೆಗೆ ಮಾತ್ರ ಸ್ವಲ್ಪವೂ ಜಾಗವಿಲ್ಲ.

ಸರಸ್ವತಿಪುರಂ ಎರಡನೇ ಹಂತದ ರಸ್ತೆಯ ನಡುವೆಯೆ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ (ಟಿ.ಸಿ) ಒಂದು ನಿಂತುಕೊಂಡಿದ್ದು, ಪ್ರತಿನಿತ್ಯ ಸಂಚರಿಸುವ ವಾಹನ ಸವಾರರು, ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಹೊಂಡ, ಗುಂಡಿಗಳನ್ನು ತಪ್ಪಿಸಿ ವಾಹನ ಚಲಾಯಿಸಬೇಕಾದ ಅನಿವಾರ್ಯತೆಯ ಜೊತೆಗೆ ಈ ಟಿ.ಸಿ ಕಂಬವನ್ನು ತಪ್ಪಿಸಿ ಚಲಾಯಿಸಬೇಕಾದ ಸಂಕಷ್ಟವೂ ಇದೆ.

‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಶಾಸಕ ರಫೀಕ್‌ ಅಹಮದ್‌, ವಾರ್ಡಿನ ಅಭಿವೃದ್ಧಿಗಾಗಿ ಬಯಲುಸೀಮೆ ಅಭಿವೃದ್ಧಿ ಮಂಡಳಿಯಿಂದ ಮತ್ತು ಶಾಸಕರ ನಿಧಿಯಿಂದ ಅನುದಾನ ನೀಡಲಾಗಿದೆ ಎಂದರು. ‘ವಾರ್ಡಿನಲ್ಲಿ ₹ 30 ಲಕ್ಷ ವೆಚ್ಚದಲ್ಲಿ ಕೆಲಸಗಳು ನಡೆದಿವೆ. ರಸ್ತೆಗಳ ಸುಧಾರಣೆಗೂ ಕ್ರಮ ಕೈಗೊಳ್ಳುತ್ತಿದ್ದೇನೆ. ಆದಷ್ಟು ಬೇಗನೇ ನನ್ನ ವಾರ್ಡಿನ ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತೇನೆ’ ಎನ್ನುತ್ತಾರೆ ವಾರ್ಡ್‌ ಸದಸ್ಯೆ ಎಂ.ಆರ್.ಜಯಲಕ್ಷ್ಮಿ.

ಅಂಕಿ ಅಂಶ
₹ 20 ಲಕ್ಷ ವಾರ್ಡಿಗೆ ಬಯಲುಸೀಮೆ ಅಭಿವೃದ್ದಿ ಮಂಡಳಿಯ ಅನುದಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT