ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾ ಮಾದರಿ ಯೋಜನೆ ರೂಪಿಸಿ

Last Updated 19 ಸೆಪ್ಟೆಂಬರ್ 2017, 7:25 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಬಯಲು ಸೀಮೆಯ 72 ತಾಲ್ಲೂಕುಗಳಲ್ಲಿ ಕೂಡ ಶಿರಾ ಮಾದರಿಯಲ್ಲಿ ಶ್ವಾಶತ ನೀರಾವರಿ ಯೋಜನೆ ಅನುಷ್ಠಾನಕ್ಕೆ ತರಲು ಯೋಜನೆ ರೂಪಿಸಿ ಮುಖ್ಯಮಂತ್ರಿ ಅವರಿಗೆ ಸಲ್ಲಿಸಬೇಕು’ ಎಂದು ಸಂಸದ ಕೆ.ಎಚ್.ಮುನಿಯಪ್ಪ ಅವರು ಸಣ್ಣ ನೀರಾವರಿ ಸಚಿವ ಟಿ.ಬಿ.ಜಯಚಂದ್ರ ಅವರಿಗೆ ಮನವಿ ಮಾಡಿಕೊಂಡರು.

ನಗರದಲ್ಲಿ ಸೋಮವಾರ ನಡೆದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಮುಖ್ಯಮಂತ್ರಿ ಅವರು ಚಾಲನೆ ನೀಡುವ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಜಯಚಂದ್ರ ಅವರು ತಮ್ಮ ಸ್ವಕ್ಷೇತ್ರ ಶಿರಾ ತಾಲ್ಲೂಕಿನಲ್ಲಿ ಬ್ಯಾರೇಜ್‌ಗಳನ್ನು ಕಟ್ಟಿಸಿ, ಶಾಶ್ವತ ನೀರಾವರಿ ಮಾಡಿ ಮಾದರಿಯಾಗಿದ್ದಾರೆ. ಅವರು ಇನ್ನುಳಿದ ತಮ್ಮ ಅವಧಿಯಲ್ಲಿ ಅದೇ ಮಾದರಿಯಲ್ಲಿ ಅವರು ಬಯಲು ಸೀಮೆ ಜಿಲ್ಲೆಗಳಿಗೆ ಕೂಡ ಯೋಜನೆ ರೂಪಿಸಿದರೆ ಅವರು ಸಣ್ಣ ನೀರಾವರಿ ಸಚಿವರಾಗಿರುವುದು ಸಾರ್ಥಕವಾಗುತ್ತದೆ’ ಎಂದು ಹೇಳಿದರು.

‘ಕಳೆದ 25 ವರ್ಷಗಳಲ್ಲಿ ಆಡಳಿತ ನಡೆಸಿದ ಮುಖ್ಯಮಂತ್ರಿಗಳ ಪೈಕಿ ಬಯಲು ಸೀಮೆ ಜಿಲ್ಲೆಗಳಿಗೆ ಏನಾದರೂ ಕೊಡುಗೆ ಕೊಟ್ಟವರು ಇದ್ದರೆ ಅದು ಸಿದ್ದರಾಮಯ್ಯ ಅವರು. ನಮ್ಮ ಭಾಗದ ಜನರಿಗೆ ನೀರು ಕೊಟ್ಟರೆ ಸಾಕು ಸ್ವಂತ ಬದುಕಿಕೊಳ್ಳುತ್ತಾರೆ. ಅಂತಹ ಭಗಿರಥ ಪ್ರಯತ್ನದಲ್ಲಿ ಸಿದ್ದರಾಮಯ್ಯ ಅವರು ಯಶಸ್ವಿಯಾಗಿದ್ದಾರೆ. ಮುಂದೆ ಕೂಡ ಅವರು ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿಯಾಗಬೇಕು ಎಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ’ ಎಂದು ತಿಳಿಸಿದರು.

ಸಚಿವ ಟಿ.ಬಿ. ಜಯಚಂದ್ರ ಮಾತನಾಡಿ, ‘ಈ ಏತ ನೀರಾವರಿ ಯೋಜನೆ ಕಾಮಗಾರಿ ಈ ವಾರದಲ್ಲಿ ಆರಂಭವಾಗಲಿದೆ. ಸುಮಾರು ಎಂಟು ಹತ್ತು ತಿಂಗಳಲ್ಲಿ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಸಂಸ್ಕ ರಿಸಿದ ನೀರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಅದರಿಂದ ಯಾವುದೇ ರೀತಿಯ ದುಷ್ಪರಿಣಾಮ ಉಂಟಾಗುವುದಿಲ್ಲ. ಆ ಕುರಿತಾದ ತಪ್ಪು ಕಲ್ಪನೆಗಳನ್ನು ಜನರು ತೆಗೆದು ಹಾಕಬೇಕು’ ಎಂದರು.

ಸಂಸದ ವೀರಪ್ಪ ಮೊಯಿಲಿ ಮಾತನಾಡಿ, ‘ಇವತ್ತು ವಿರೋಧ ಪಕ್ಷಗಳು ಸತ್ಯ ಹೇಳುವುದನ್ನು ಕಲಿಯಬೇಕು. ಅವರು ಅಧಿಕಾರದಲ್ಲಿ ಇದ್ದಾಗ ಸಾಲ ಮನ್ನಾ ಮಾಡಲಿಲ್ಲ. ನೀರಾವರಿ ಯೋಜನೆಗಳ ಬಗ್ಗೆ ಆಲೋಚನೆಗಳನ್ನು ಕೂಡ ಮಾಡಲಿಲ್ಲ. ಇಂತಹ ಕಾರ್ಯಕ್ರಮಗಳು ಈ ಭಾಗಕ್ಕೆ ಹೊಸ ಹುರುಪು, ಹೊಸ ಬದುಕು ತರುತ್ತವೆ. ಇನ್ನು ಎರಡೂವರೆ ವರ್ಷಗಳ ಒಳಗೆ ಈ ಭಾಗಕ್ಕೆ ಕುಡಿಯುವ ನೀರು ದೊರೆಯುತ್ತದೆ. ಮುಂಬರುವ ದಿನಗಳಲ್ಲಿ ಅವಳಿ ಜಿಲ್ಲೆಗಳು ನಿಜವಾದ ಚಿನ್ನ, ರೇಷ್ಮೆಯ ನಾಡಾಗಲಿವೆ’ ಎಂದು ಅಭಿಪ್ರಾಯಪಟ್ಟರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ ಮಾತನಾಡಿ, ‘ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ ಅನೇಕ ಜನಪರ ಕಾರ್ಯಕ್ರಮಗಳನ್ನು ನೋಡಿ ವಿರೋಧ ಪಕ್ಷಗಳು ಹೊಟ್ಟೆ ಉರಿದುಕೊಳ್ಳುತ್ತಿವೆ. ದೇಶದ ಭವಿಷ್ಯದ ಬಗ್ಗೆ ಯೋಚನೆ ಇಲ್ಲದ ಕೇಂದ್ರ ಸರ್ಕಾರ ರಾಜ್ಯದ ವಿಚಾರದಲ್ಲಿ ಮಲತಾಯಿ ಧೋರಣೆ ಹೊಂದಿದೆ. ಕೇಂದ್ರ ಸರ್ಕಾರ ಈವರೆಗೂ ರೈತರ ಸಾಲ ಮನ್ನಾ ಮಾಡಿಲ್ಲ. ಆದ್ದರಿಂದ ಅಮಿತ್‌ ಶಾ ಅವರಿಗೆ ನಮ್ಮ ಬಗ್ಗೆ ಮಾತನಾಡಲು ಯಾವುದೇ ನೈತಿಕ ಹಕ್ಕಿಲ್ಲ. ನಮ್ಮ ಜನಪರ ಕಾರ್ಯಕ್ರಮಗಳನ್ನು ನೋಡಿ ಮತದಾರರು ಮುಂದಿನ ದಿನಗಳಲ್ಲಿ ನಮ್ಮ ಕೈ ಇನ್ನಷ್ಟು ಬಲಪಡಿಸಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT