ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ರಾಜಕೀಯ ವೇದಿಕೆಗೆ ವಾಘೆಲಾ ಬೆಂಬಲ

Last Updated 19 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಅಹಮದಾಬಾದ್‌ : ರಾಜ್ಯದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ‘ಜನ ವಿಕಲ್ಪ ಮೋರ್ಚಾ’ ಎಂಬ ರಾಜಕೀಯ ವೇದಿಕೆಯನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬೆಂಬಲಿಸುವುದಾಗಿ ಕಾಂಗ್ರೆಸ್‌ ವಿರುದ್ಧ ಬಂಡಾಯ ಎದ್ದಿರುವ ಮುಖಂಡ, ಗುಜರಾತ್‌ನ ಮಾಜಿ ಮುಖ್ಯಮಂತ್ರಿ ಶಂಕರ ಸಿಂಹ ವಾಘೆಲಾ ಮಂಗಳವಾರ ಘೋಷಿಸಿದ್ದಾರೆ.

1990ರ ದಶಕದ ಕೊನೆಯಲ್ಲಿ ರಾಷ್ಟ್ರೀಯ ಜನತಾ ಪಾರ್ಟಿ ಎಂಬ ಪಕ್ಷ ಸ್ಥಾಪಿಸಿ ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮಲು ಅವರು ಯತ್ನಿಸಿದ್ದರು. ಆದರೆ, ಚುನಾವಣೆಯಲ್ಲಿ ದೊಡ್ಡ ಸಾಧನೆ ಮಾಡಲು ಅವರ ಪಕ್ಷಕ್ಕೆ ಸಾಧ್ಯವಾಗಿರಲಿಲ್ಲ. ಹಾಗಾಗಿ ಈ ಬಾರಿ ಅವರು ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದಾರೆ.

‘ಜನ ವಿಕಲ್ಪ ಮೋರ್ಚಾವು ಒಂದು ರಾಜಕೀಯ ವೇದಿಕೆಯೇ ಹೊರತು, ಪಕ್ಷವಲ್ಲ. ನಾವು 2017ರ ಚುನಾವಣೆಗೆ ಮಾತ್ರ ಯೋಜನೆ ರೂಪಿಸುತ್ತಿಲ್ಲ. ಅದರಾಚೆಯೂ ಗಮನ ಹರಿಸಿದ್ದೇವೆ’ ಎಂದು ವಾಘೆಲಾ ಹೇಳಿದ್ದಾರೆ.

‘ಆಡಳಿತರೂಢ ಬಿಜೆಪಿ ಮತ್ತು ನಿಷ್ಕ್ರಿಯವಾಗಿರುವ ಕಾಂಗ್ರೆಸ್‌ ಬಗ್ಗೆ ಜನರಲ್ಲಿರುವ ಆಕ್ರೋಶದ ಲಾಭ ಪಡೆದು ಪರ್ಯಾಯ ಶಕ್ತಿಯಾಗಿ ‘ಜನ ವಿಕಲ್ಪ’ ಕೆಲಸ ಮಾಡಲಿದೆ. ಜನರ ಸೇವೆ ಮಾಡಬೇಕು ಎಂದು ಬರುವ ಎಲ್ಲರಿಗೂ ಈ ವೇದಿಕೆ ಅವಕಾಶ ನೀಡಲಿದೆ. ಆಮ್‌ ಆದ್ಮಿ ಪಕ್ಷ, ಜೆಡಿಯು ಕೂಡ ಬಂದರೆ ಅವರನ್ನು ಮುಕ್ತವಾಗಿ ಸ್ವಾಗತಿಸುತ್ತೇವೆ. 182 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಯತ್ನಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.

ವಾಘೆಲಾ ಅವರ ಈ ನಿರ್ಧಾರದಿಂದ ಬಿಜೆಪಿಗೆ ಲಾಭವಾಗಲಿದೆ ಎಂದು ಹೇಳಲಾಗುತ್ತಿದೆ. ಹೊಸ ರಾಜಕೀಯ ವೇದಿಕೆಯು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ವಿರೋಧ ಪಕ್ಷಗಳ ಮತಗಳನ್ನು ಸೆಳೆಯಲು ಅದು ಯಶಸ್ವಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಹಿಂದೆ ಮತ್ತು ಇತ್ತೀಚೆಗೆ ವಾಘೆಲಾ ಅವರಿಗೆ ಆನ್‌ಲೈನ್‌ ಸಲಹೆಗಾರರಾಗಿದ್ದ ಪಾರ್ಥೇಶ್ ಪಟೇಲ್‌ ಅವರು ಈ ವೇದಿಕೆ ಸ್ಥಾಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT