ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೀಗಿವೆ ನೋಡಿ ತಂಗುದಾಣಗಳು

Last Updated 20 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರಿಗೆ ಮೆಟ್ರೊ ಬಂತು. ಆದರೆ ನಮ್ ಏರಿಯಾ ಶೆಲ್ಟರ್‌ನಲ್ಲಿ ನಿಲ್ಲೋಕೂ ಜಾಗ ಇಲ್ಲ. ಹಾಳಾದೋರು ಎಲ್ಲಾ ಕಡೆ ಗುಂಡಿ ತೋಡಿದ್ದಾರೆ. ಬಸ್‌ ಶೆಲ್ಟರ್‌ ಅನ್ನಿಸಿಕೊಂಡಿದ್ದೂ ನೆಟ್ಟಗಿಲ್ಲ...’

ಶಾಂತಿನಗರ ಸಮೀಪದ ಅಕ್ಕಿತಿಮ್ಮನಹಳ್ಳಿ ಬಸ್ ತಂಗುತಾಣದಲ್ಲಿ ಮಧ್ಯವಯಸ್ಕ ಮಹಿಳೆಯೊಬ್ಬರು ಮೊಬೈಲ್‌ನಲ್ಲಿ ನಡೆಸುತ್ತಿದ್ದ ಸಂಭಾಷಣೆ ಕಿವಿಗೆ ಅಪ್ಪಳಿಸಿತು.

ಬೆಂಗಳೂರಿಗೆ ಯಾವ ದಿಕ್ಕಿನಿಂದ ಬಂದರೂ ಮೊದಲು ಕಣ್ಣಿಗೆ ಬೀಳುವುದು ಬಸ್ ತಂಗುದಾಣಗಳು. ಇವನ್ನು ನೋಡಿ ಬೆಂಗಳೂರಿನ ಬಗ್ಗೆ ಚಿತ್ರಣ ಕಟ್ಟಿಕೊಳ್ಳುವವರಿಗೆ ಖಂಡಿತ ಸದಭಿಪ್ರಾಯ ಬರಲು ಸಾಧ್ಯವೇ ಇಲ್ಲ. ಪ್ರಯಾಣಿಕರ ಅನುಕೂಲಕ್ಕೆ ಇರಬೇಕಿದ್ದ ತಂಗುದಾಣಗಳು ಇದೀಗ ಜಾಹೀರಾತುದಾರರ ವ್ಯಾಪಾರಿ ಹಿತಾಸಕ್ತಿಗಷ್ಟೇ ಬಳಕೆಯಾಗುವ ತಾಣಗಳಾಗಿವೆ. ಹಾಳು ಸುರಿಯುವ ತಂಗುದಾಣಗಳು ಬಿಬಿಎಂಪಿ, ಬಿಎಂಟಿಸಿ ಅಧಿಕಾರಿಗಳ ಸೌಂದರ್ಯಪ್ರಜ್ಞೆಗೆ ಕನ್ನಡಿಯನ್ನೂ ಹಿಡಿಯುತ್ತಿವೆ.

ನಿರ್ದಿಷ್ಟ ಮಾರ್ಗದ ಬಸ್‌ಗಾಗಿ ಬಹುಕಾಲ ಕಾಯುವ ಅನಿವಾರ್ಯ ಶಿಕ್ಷೆಯನ್ನು ಬಹುಕಾಲದಿಂದ ಅನುಭವಿಸುತ್ತಿರುವ ಬಿಎಂಟಿಸಿ ಪ್ರಯಾಣಿಕರು ಮಳೆಗೆ ನೆನೆಯುವ, ಬಿಸಿಲಿಗೆ ಒಣಗುವ ಸಹನೆಯನ್ನು ಸಹಜ ಎಂಬಂತೆ ರೂಢಿಸಿಕೊಂಡಿದ್ದಾರೆ. ಇದೆಲ್ಲದರ ಜೊತೆಗೆ ಕಸ ಮತ್ತು ಬಯಲು ಶೌಚಾಲಯಗಳಾಗಿ ಬಳಕೆಯಾಗುವ ತಂಗುದಾಣಗಳ ಅಕ್ಕಪಕ್ಕದ ಸ್ಥಳಗಳಿಂದ ಹೊಮ್ಮುವ ದುರ್ವಾಸನೆಯೂ ಅವರ ಸಹನೆಯನ್ನು ಹೆಚ್ಚಿಸಿದೆ.

ನಿಂತೂ ನಿಂತು ಸಾಕಾದರೆ ನೀವು ಫುಟ್‌ಪಾತ್‌ ಕಲ್ಲಿನ ಮೇಲೆಯೇ ಕೂರಬೇಕು. ಏಕೆಂದರೆ ತಂಗುದಾಣಗಳಲ್ಲಿ ಆಸನಗಳು ಕಿತ್ತು ಹೋಗಿವೆ. ಕತ್ತಲಲ್ಲಿ ಬೆಳಕು ಹುಡುಕದಿರಿ. ತಂಗುದಾಣಗಳಿಗೆ ಅಳವಡಿಸಿರುವ ಫ್ಲೆಕ್ಸ್‌ಗಳ ಕವರ್‌ ನಾಪತ್ತೆಯಾಗಿದ್ದು, ಟ್ಯೂಬ್‌ಲೈಟ್ ಮತ್ತು ವೈರ್‌ಗಳು ಇಳಿಬಿದ್ದು ನೇತಾಡುತ್ತಿವೆ. ಇದ್ದಕ್ಕಿದ್ದಂತೆ ಮಳೆ ಶುರುವಾಯಿತೇ, ತಕ್ಷಣ ಯಾವುದಾದರೂ ಕಟ್ಟಡದ ಆಸರೆಗೆ ಓಡಿಬಿಡಿ. ತಂಗುದಾಣಗಳು ಸೋರುತ್ತವೆ. ಅಪ್ಪಿತಪ್ಪಿ ಬಿದ್ದರೆ ಪ್ರಾಣಕ್ಕೇ ಆಪತ್ತು.

ಇಲ್ಲೆಲ್ಲಾ ಹೀಗಿವೆ...

ಸೆಂಟ್ರಲ್ ಕಾಲೇಜು ಎದುರಿನ ತಂಗುದಾಣಕ್ಕೆ ಬೀದಿದೀಪದ ಆಸರೆಯೂ ಇಲ್ಲ. ಸುಲ್ತಾನ್‌ಪಾಳ್ಯ, ಯಲಹಂಕ, ಹೆಬ್ಬಾಳ ಕಡೆಗೆ ಹೋಗುವ ನೂರಾರು ಪ್ರಯಾಣಿಕರು ಇಲ್ಲಿಂದಲೇ ಬಸ್‌ ಹತ್ತುತ್ತಾರೆ. ಸಿಟಿ ಸೆಷನ್ಸ್‌ ಕೋರ್ಟ್‌ ಎದುರಿನ ತಂಗುದಾಣವಂತೂ ದುರಸ್ತಿ ಕಂಡು ಎಷ್ಟೋ ವರ್ಷಗಳಾದಂತೆ ಭಾಸವಾಗುತ್ತದೆ. ಅದನ್ನು ಬಳಸಲು ಜನರಿಗೆ ಧೈರ್ಯ ಸಾಲುತ್ತಿಲ್ಲ.

ಹೊಸೂರು ರಸ್ತೆಯ ಆನೇಪಾಳ್ಯ ಸಮೀಪ ಒಂದೇ ಸ್ಥಳದಲ್ಲಿ ಸರ್ಕಾರದ ಹಾಗೂ ವಿವಿಧ ಕಂಪೆನಿಗಳ ಜಾಹೀರಾತು ಒಳಗೊಂಡ ನಾಲ್ಕು ತಂಗುದಾಣಗಳನ್ನು ನಿರ್ಮಿಸಲಾಗಿದೆ. ಆದರೆ, ಇಲ್ಲಿ ಬಸ್‌ಗಾಗಿ ಕಾಯುವ ಪ್ರಯಾಣಿಕರ ಸಂಖ್ಯೆ ವಿರಳ. ಇನ್ನು ನಗರದ ಮೈಸೂರು ರಸ್ತೆ, ಜೆ.ಪಿ.ನಗರ, ಕೆ.ಆರ್.ಪುರ, ಯಲಹಂಕ, ಮಾಗಡಿ ರಸ್ತೆಯ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಈ ರೀತಿಯ ತಂಗುದಾಣಗಳನ್ನು ಕಾಣಬಹುದು. ಇವುಗಳ ಚಾವಣಿಯನ್ನು ತುಂತುರು ಮಳೆ ಬಂದರೂ ತಡೆಯಲಾರದಷ್ಟು ಕಳಪೆ ಹೊದಿಕೆಯಿಂದ ನಿರ್ಮಿಸಲಾಗಿದೆ.

ಈ ಹಿಂದೆ ಕಬ್ಬನ್ ಪಾರ್ಕ್‌ ಸಮೀಪದ ತಂಗುದಾಣವೊಂದರಲ್ಲಿ ಹವಾನಿಯಂತ್ರಣ ವ್ಯವಸ್ಥೆ ಮಾಡಲಾಗಿತ್ತು. ಆದರೆ ಈ ಜಾಗ ಈಗ ಸಂಪೂರ್ಣ ಹದಗೆಟ್ಟಿದೆ. ಮದ್ಯದ ಬಾಟಲಿಗಳು, ಸಿಗರೇಟ್ ಹಾಗೂ ಕಾಂಡೋಮ್‌ಗಳು ಎಲ್ಲೆಂದರಲ್ಲಿ ಬಿದ್ದಿವೆ. ಕಾಲೇಜುಗಳಿಗೆ ಸಮೀಪ ಇರುವ ತಂಗುದಾಣಗಳಲ್ಲಿ ಪ್ರೇಮ ನಿವೇದನೆ ಕೆತ್ತನೆಗಳು, ಜನರು ಕಡಿಮೆ ಬರುವ ತಾಣಗಳಲ್ಲಿ ಅಸಭ್ಯ ಚಿತ್ರಗಳು ಸಾಮಾನ್ಯ.

ಮೆಜೆಸ್ಟಿಕ್ ಸುತ್ತಮುತ್ತಲ ಪ್ರದೇಶದ ತಂಗುದಾಣಗಳ ಬೋರ್ಡ್‌ಗಳು ಮತ್ತು ಕಬ್ಬಿಣದ ಸರಳುಗಳ ಮೇಲೆ ಹಲವು ಮೊಬೈಲ್‌ ನಂಬರ್‌ಗಳನ್ನು ಗೀಚಲಾಗಿದೆ. ಇವು ಯಾರ ಸಂಖ್ಯೆಗಳು ಎನ್ನುವುದು ಬಹಿರಂಗ ಸತ್ಯ.

ಆನೇಪಾಳ್ಯ, ವಿವೇಕನಗರ ಸೇರಿದಂತೆ ನಗರದ ಇನ್ನಿತರ ಪ್ರದೇಶಗಳ ತಂಗುದಾಣಗಳಲ್ಲಿ ರೌಡಿಶೀಟರ್‌ಗಳು, ಸರಗಳ್ಳರ ಪೊಲೀಸ್ ಪ್ರಕಟಣೆಗಳು, ಕಿರುಕುಳ ನೀಡುವ ವೈರಿಗಳ ಮೊಬೈಲ್ ನಂಬರ್‌ಗಳು ಕಾಣ ಸಿಗುತ್ತವೆ. ಮೊಬೈಲ್‌ನಲ್ಲಿ ಪಿಸುಗುಡುವ ಪ್ರೇಮಿಗಳು, ಪಾನ್ ಜಿಗಿಯುತ್ತಾ ನಿಲ್ಲೋ ಬೀದಿ ಕಾಮಣ್ಣರ ಉಪಟಳವೂ ಇಲ್ಲಿ ಸರ್ವೇ ಸಾಮಾನ್ಯ. ಕೆ.ಆರ್.ಮಾರುಕಟ್ಟೆ ಸುತ್ತ ಮುತ್ತಲಿನ ತಂಗುದಾಣಗಳು ಬಿಡಾಡಿ ದನಗಳಿಗೆ ಆಶ್ರಯ ತಾಣಗಳಾಗಿವೆ.

ನಾಗರಿಕ ಪ್ರಜ್ಞೆ ಮೂಡಬೇಕು

‘ಪ್ರಯಾಣಿಕರ ತಂಗುದಾಣಗಳು ಬಿಬಿಎಂಪಿ ಹಾಗೂ ಬಿಎಂಟಿಸಿಗಳ ನಿಯಂತ್ರಣದಲ್ಲಿವೆ. ಒಪ್ಪಂದದ ಮೇರೆಗೆ ಖಾಸಗಿ ಏಜೆನ್ಸಿಗಳ ಮೂಲಕ ನಿರ್ವಹಿಸಲಾಗುತ್ತದೆ. ಜಾಹೀರಾತು ಪ್ರಚಾರಕ್ಕೆ ಬಳಸಿಕೊಳ್ಳುವ ತಂಗುದಾಣಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಬಾಳಿಕೆ ಕಡಿಮೆ. ಕಿಡಿಗೇಡಿಗಳು ಜಾಹೀರಾತು ಬೋರ್ಡ್, ವಿದ್ಯುತ್ ದೀಪ, ಕಬ್ಬಿಣದ ಕುರ್ಚಿ ಹಾಳುಗೆಡವಿ ವಿರೂಪಗೊಳಿಸುತ್ತಾರೆ. ಇಷ್ಟಾದರೂ ಕೆಲ ತಂಗುದಾಣಗಳನ್ನು ದುರಸ್ತಿಗೊಳಿಸುವ ಕೆಲಸವನ್ನು ಬಿಬಿಎಂಪಿ ಮಾಡುತ್ತದೆ. ಸಾರ್ವಜನಿಕರಲ್ಲೂ  ಪ್ರಜ್ಞೆ ಮೂಡಬೇಕಿದೆ’ ಎನ್ನುತ್ತಾರೆ ಮಹಾನಗರಪಾಲಿಕೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸುರೇಶ್.

***

ದೂರು ನೀಡಿ...

ಬಿಬಿಎಂಪಿ ವ್ಯಾಪ್ತಿಯ 1600 ಸ್ಥಳಗಳಲ್ಲಿ ಬಸ್ ತಂಗುದಾಣಗಳ ನಿರ್ಮಾಣಕ್ಕೆ ಟೆಂಡರ್ ಆಹ್ವಾನಿಸಲಾಗಿದೆ. ಈಗಾಗಲೇ ಹಾಳಾಗಿರುವ ತಂಗುದಾಣಗಳ ದುರಸ್ತಿಗೂ ಕ್ರಮ ಕೈಗೊಳ್ಳಲಾಗುವುದು. ನಿಮ್ಮ ಬಡಾವಣೆ ವ್ಯಾಪ್ತಿಯಲ್ಲಿ ಬಸ್ ತಂಗುದಾಣಗಳು ಹಾಳಾಗಿದ್ದರೆ ಬಿಬಿಎಂಪಿಯ ಟ್ರಾಫಿಕ್ ನಿರ್ವಹಣೆ ಘಟಕಕ್ಕೆ
(ಮೊ 9739520995) ಮಾಹಿತಿ ನೀಡಬಹುದು.

***

ಹಿಂದೆ ಚೆನ್ನಾಗಿತ್ತು

ಕಾಂಕ್ರಿಟ್‌ನಿಂದ ನಿರ್ಮಿಸಿರುವ ಹಳೆಯ ತಂಗುದಾಣಗಳು ಇಂದಿಗೂ ಗಟ್ಟಿಮುಟ್ಟಾಗಿವೆ. ತಂಗುದಾಣಗಳ ಮೇಲೆ ಆ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳ ಸಂಖ್ಯೆ ಮತ್ತು ವೇಳಾಪಟ್ಟಿ ಇರುತ್ತಿತ್ತು. ಅದು ಯಾವ ಏರಿಯಾ ಎಂದು ಸೂಚಿಸುವ ಬರಹ ದೊಡ್ಡದಾಗಿ, ಎದ್ದು ಕಾಣುವಂತೆ ಇರುತ್ತಿತ್ತು. ಆದರೆ ಈಗ ಒಂದೋ ನಿಲ್ದಾಣಗಳು ಹಾಳು ಸುರಿಯುತ್ತಿರುತ್ತವೆ ಅಥವಾ ಜಾಹೀರಾತು ಫಲಕಗಳು ರಾರಾಜಿಸುತ್ತಿರುತ್ತವೆ. ಬಸ್ ಯಾವ ನಿಲ್ದಾಣದಕ್ಕೆ ಬಂದಿದೆ ಎಂಬ ಮಾಹಿತಿ ಎಲ್ಲಿಯೂ ಸಿಗುವುದಿಲ್ಲ.

***

ನಗರದ ಹೊರವಲಯದಲ್ಲಿರುವ ತಂಗುತಾಣಗಳು ಪಡ್ಡೆ ಹುಡುಗರ ಹರಟೆ ಕಟ್ಟೆಗಳಾಗಿವೆ. ಹೆಣ್ಣುಮಕ್ಕಳು ಇಂಥ ಸ್ಥಳಗಳಲ್ಲಿ ಹಗಲು ಹೊತ್ತು ಓಡಾಡುವುದೂ ಕಷ್ಟ. ಕೆಲಸವಿಲ್ಲದೆ ತಂಗುದಾಣಗಳಲ್ಲಿ ಠಿಕಾಣಿ ಹೂಡುವವರಿಗೆ ಪೊಲೀಸರು ಬುದ್ಧಿ ಕಲಿಸಬೇಕು.
–ಸತೀಶ್‌ಬಾಬು, ಹರಳೂರು

***

ಬಿಸಿಲಿನಿಂದ ರಕ್ಷಣೆ ಪಡೆಯಲು ಶೆಲ್ಟರ್‌ಗಳಿಗೆ ಸೂರಿಲ್ಲ. ರಾತ್ರಿ ವೇಳೆ ನಿರ್ಭ ಯವಾಗಿ ಓಡಾಡಲು ಬೀದಿದೀಪಗಳಿಲ್ಲ. ಕುಳಿತು ದಣಿವಾರಿಸಿಕೊಳ್ಳಲು ಆಸನಗಳು ಇಲ್ಲ.
ಜಂಗಮಪ್ಪ, ಜಕ್ಕಸಂದ್ರ (ಕೋರಮಂಗಲ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT