ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಲ್ಲಿ ಟಿಕೆಟ್‌ ಹಂಚಿಕೆಗೆ ಕಠಿಣ ಮಾನದಂಡ

ಗೆಲ್ಲುವ ಸಾಮರ್ಥ್ಯವಿದ್ದರೆ ವಲಸಿಗರಿಗೆ ಬಿಜೆಪಿಯಲ್ಲಿ ಟಿಕೆಟ್‌
Last Updated 20 ಸೆಪ್ಟೆಂಬರ್ 2017, 20:24 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಟಿಕೆಟ್‌ ಹಂಚುವಾಗ ಬೇರೆ ಪಕ್ಷಗಳಿಂದ ಬಂದವರೂ ಒಳಗೊಂಡಂತೆ ಎಲ್ಲರಿಗೂ ಒಂದೇ ರೀತಿಯ ಮಾನದಂಡ ಅನುಸರಿಸಲು ಬಿಜೆಪಿ ನಿರ್ಧರಿಸಿದೆ.

ಆರೋಪ ಮುಕ್ತ, ಉತ್ತಮ ಚಾರಿತ್ರ್ಯ, ಗೆಲ್ಲುವ ಸಾಮರ್ಥ್ಯವೇ ಟಿಕೆಟ್‌ ಹಂಚಿಕೆಗೆ ಪ್ರಮುಖ ಮಾನದಂಡ ಆಗಲಿದೆ. ಬೇರೆ ಪಕ್ಷಗಳಿಂದ ಬಂದವರಿಗೆ ಕಡೇ ಗಳಿಗೆವರೆಗೂ ಟಿಕೆಟ್‌ ಆಶ್ವಾಸನೆ ನೀಡದಿರಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

‘ಚುನಾವಣೆ ಸಮೀಪಿಸುತ್ತಿರುವಂತೆ ಇತರ ಪಕ್ಷಗಳಿಂದ ವಲಸೆ ಹೆಚ್ಚುವ ಸಾಧ್ಯತೆ ಇದೆ.  ಬರುವವರಿಗೆ ಟಿಕೆಟ್‌ ಆಶ್ವಾಸನೆ ನೀಡದಂತೆ ರಾಜ್ಯ ಘಟಕದ ನಾಯಕರಿಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತಾ ಷಾ ಸ್ಪಷ್ಟ ಸೂಚನೆ ನೀಡಿದ್ದಾರೆ’ ಎಂದು ಮೂಲಗಳು ಹೇಳಿವೆ.

‘ವಲಸೆ ಬರುವವರೂ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು. ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲೂ ಇದೇ ಕಠಿಣ ಮಾನದಂಡ ಅನುಸರಿಸಲಾಗಿತ್ತು. ಈ ಹಿಂದೆ ಭ್ರಷ್ಟಾಚಾರ, ಲೈಂಗಿಕ ಹಗರಣಗಳಲ್ಲಿ ಸಿಕ್ಕಿಕೊಂಡು ಪಕ್ಷಕ್ಕೆ ಮಸಿ ಬಳಿದವರಿಗೆ ಮತ್ತು ಅನಪೇಕ್ಷಿತ ಪ್ರಕರಣಗಳಲ್ಲಿ ಎಫ್‌ಐಆರ್‌ ದಾಖಲಾದವರಿಗೆ ಟಿಕೆಟ್‌ ಇಲ್ಲ. ಟಿಕೆಟ್‌ ಸಿಗದವರು ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸೂಚಿಸಲಾಗುವುದು ಎಂದೂ ಮೂಲಗಳು ತಿಳಿಸಿವೆ.

8–10 ಕೇಂದ್ರ ಸಚಿವರ ಉಸ್ತುವಾರಿ: ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಕ್ಕೆ ಅನುಕೂಲವಾಗಲು, ಕೇಂದ್ರ ಸಚಿವರಾದ ಪೀಯೂಷ್‌ ಗೋಯಲ್‌ ಮತ್ತು ಪ್ರಕಾಶ್‌ ಜಾವಡೇಕರ್ ರೀತಿಯಲ್ಲಿ ಕ್ರಿಯಾಶೀಲ 8– 10 ಕೇಂದ್ರ ಸಚಿವರು ಅಥವಾ ಹಿರಿಯ ಮುಖಂಡರನ್ನು ನಿಯೋಜಿಸಲಾಗುವುದು.

ಟಿಕೆಟ್‌ ಹಂಚಿಕೆ, ಪ್ರಚಾರ, ವಿವಿಧ ಸಮುದಾಯಗಳನ್ನು ಬಿಜೆಪಿಯತ್ತ ಸೆಳೆಯಲು ಪ್ರಮುಖ ಪಾತ್ರವಹಿಸುತ್ತಾರೆ. ಟಿಕೆಟ್‌ ನೀಡಿದ ಬಳಿಕ ಉಂಟಾಗಬಹುದಾದ ಅಸಮಾಧಾನ ಶಮನ ಮಾಡಲು ಪ್ರಯತ್ನಿಸಲಿದ್ದಾರೆ.

ರಾಜ್ಯವನ್ನು 8 ಅಥವಾ 10 ವಿಭಾಗಗಳನ್ನಾಗಿ ಮಾಡಿ, ಪ್ರತಿಯೊಬ್ಬ ನಾಯಕರಿಗೂ ನಾಲ್ಕರಿಂದ ಐದು ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿ ನೀಡಲಾಗುತ್ತದೆ. ಯಾರಿಗೆ ಎಷ್ಟು ಕ್ಷೇತ್ರ ಎಂಬುದು ಇನ್ನಷ್ಟೇ ನಿರ್ಧಾರ ಆಗಬೇಕು ಎಂದು ಮೂಲಗಳು ತಿಳಿಸಿವೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅಗತ್ಯವೆನಿಸಿದ ಸಂದರ್ಭದಲ್ಲಿ ಯಾವುದೇ ಬೂತ್‌ ಸಮಿತಿಯ ಜತೆ ನೇರ ಸಂಪರ್ಕಕ್ಕೆ ಬರಲಿದ್ದಾರೆ. ಈ ಮೂಲಕ ಟಿಕೆಟ್‌ ಯಾರಿಗೆ ನೀಡಿದರೆ ಪಕ್ಷಕ್ಕೆ ಲಾಭ ಆಗುತ್ತದೆ ಎಂಬುದರ ಬಗ್ಗೆ ತಾಜಾ ಮಾಹಿತಿ ಪಡೆಯುತ್ತಾರೆ. ಟಿಕೆಟ್‌ ನೀಡಿಕೆಗೆ ಮುನ್ನ ವ್ಯವಸ್ಥಿತ ರೀತಿಯಲ್ಲಿ ಆಯ್ಕೆ ಪ್ರಕ್ರಿಯೆ ಅನುಸರಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

*
ಅಮಿತ್‌ ಶಾ ವಿರುದ್ಧ ಅಪಪ್ರಚಾರ: ಕಮಿಷನ್‌ರಿಗೆ ದೂರು
ಬೆಂಗಳೂರು:
‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ವಿರುದ್ಧ ಅಂತರ್ಜಾಲದಲ್ಲಿ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ’ ಎಂದು ಆರೋಪಿಸಿ ಪಕ್ಷದ ರಾಜ್ಯದ ಮುಖಂಡರು, ನಗರ ಪೊಲೀಸ್‌ ಕಮಿಷನರ್‌ ಟಿ.ಸುನೀಲ್‌ ಕುಮಾರ್ ಅವರಿಗೆ ಬುಧವಾರ ದೂರು ಸಲ್ಲಿಸಿದರು.

ಕಮಿಷನರ್‌ ಕಚೇರಿಗೆ ಬಂದಿದ್ದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ನೇತೃತ್ವದ ನಿಯೋಗ, ‘ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕು’ ಎಂದು ಒತ್ತಾಯಿಸಿತು.

‘ನವೆಂಬರ್‌ 1ರಂದು ಕರ್ನಾಟಕದಲ್ಲಿ ಕನ್ನಡ ಧ್ವಜ ಹಾರಿಸುವ ಬದಲು ಬಿಜೆಪಿ ಧ್ವಜ ಹಾರಿಸುವಂತೆ ಅಮಿತ್‌ ಶಾ ಕರೆ ನೀಡಿದ್ದಾರೆ ಎಂದು 'mybengalooru.com' ಜಾಲತಾಣದಲ್ಲಿ ಸುಳ್ಳು ಸುದ್ದಿ ಪ್ರಕಟಿಸಲಾಗಿದೆ.

ಆ ಸುದ್ದಿಯನ್ನು 'namma nechchina mukhyamantri' ಫೇಸ್‌ಬುಕ್‌ ಗ್ರೂಪ್‌ ಮೂಲಕ ಶೇರ್‌ ಮಾಡಲಾಗಿದ್ದು, ಇದರಿಂದ ಅಮಿತ್‌ ಶಾ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಮನಸ್ಸಿಗೆ ನೋವಾಗಿದೆ’

‘ಚುನಾವಣೆಗಳು ಸಮೀಪಿಸುತ್ತಿರುವುದರಿಂದ ಬಿಜೆಪಿಯ ಬಗ್ಗೆ ಅಪಪ್ರಚಾರ ಮಾಡಲಾತ್ತಿದೆ. ಮುಖ್ಯಮಂತ್ರಿಗಳ ಆಪ್ತರೇ ಸೇರಿಕೊಂಡು ಈ ಜಾಲತಾಣ ಆರಂಭಿಸಿರುವ ಅನುಮಾನವಿದೆ. ಮಾನಹಾನಿ (ಐಪಿಸಿ 499) ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಳ್ಳಬೇಕು’ ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

ದೂರು ಪಡೆದ ಕಮಿಷನರ್‌ ಸುನೀಲ್‌ ಕುಮಾರ್‌, ಸೈಬರ್‌ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವುದಾಗಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT