ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ಯಾಕ್ಸಿ ಪ್ರಯಾಣ ದರ ದುಬಾರಿ ಸಾಧ್ಯತೆ

Last Updated 20 ಸೆಪ್ಟೆಂಬರ್ 2017, 20:27 IST
ಅಕ್ಷರ ಗಾತ್ರ

ಬೆಂಗಳೂರು: ಮೊಬೈಲ್‌ ಆ್ಯಪ್‌ ಆಧರಿತ ಕಂಪೆನಿಗಳ ಟ್ಯಾಕ್ಸಿಗಳಿಗೆ ಕನಿಷ್ಠ ಹಾಗೂ ಗರಿಷ್ಠ ಪ್ರಯಾಣದರವನ್ನು ನಿಗದಿಪಡಿಸಿ ಸಾರಿಗೆ ಇಲಾಖೆಯ ಆಯುಕ್ತರು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಹೊಸದೊಂದು ಪ್ರಸ್ತಾವ ಸಲ್ಲಿಸಿದ್ದು, ಅದಕ್ಕೆ ಒಪ್ಪಿಗೆ ಸಿಕ್ಕರೆ ಟ್ಯಾಕ್ಸಿಗಳ ಪ್ರಯಾಣ ದರ ದುಬಾರಿಯಾಗಲಿದೆ.

ನಗರದಲ್ಲಿ ಓಲಾ, ಉಬರ್‌, ಹೈ ಕಂಪೆನಿಗಳ ಟ್ಯಾಕ್ಸಿಗಳಿವೆ. ಸದ್ಯ ಕಿ.ಮೀಗೆ ₹6 ದರದಲ್ಲಿ ಪ್ರಯಾಣಿಕರಿಗೆ ಸೇವೆ ಲಭ್ಯವಾಗುತ್ತಿದೆ. ಕನಿಷ್ಠ ದರ  ₹12 ಹಾಗೂ ಗರಿಷ್ಠ ₹25 ಮಾಡಬೇಕು ಎಂದು ಪ್ರಸ್ತಾವದಲ್ಲಿ ತಿಳಿಸಲಾಗಿದೆ.

ಇದೇ ಮೊದಲ ಬಾರಿಗೆ ವಾಹನಗಳ ಮೌಲ್ಯದ ಆಧಾರದಲ್ಲಿ ಪ್ರಸ್ತಾವ ಸಿದ್ಧಪಡಿಸಲಾಗಿದೆ. ₹5 ಲಕ್ಷದ ಒಳಗಿನ, ₹5 ಲಕ್ಷದಿಂದ ₹10 ಲಕ್ಷ, ₹10 ಲಕ್ಷದಿಂದ 15 ಲಕ್ಷ ಹಾಗೂ ₹15 ಲಕ್ಷಕ್ಕಿಂತ ಹೆಚ್ಚು ಎಂಬ ಐದು ಪ್ರಕಾರದಲ್ಲಿ ವಾಹನಗಳಿಗೆ ಕನಿಷ್ಠ ಹಾಗೂ ಗರಿಷ್ಠ ದರವನ್ನು ನಿಗದಿಪಡಿಸಲಾಗಿದೆ. ಅದರಲ್ಲಿ ಕೆಲ ವಿಭಾಗದ ದರವು ಚಾಲ್ತಿಯಲ್ಲಿರುವ ದರಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ.

‘ಈ ಹಿಂದೆ ಗರಿಷ್ಠ ದರ ಮಾತ್ರ ಇತ್ತು. ಈಗ ಕನಿಷ್ಠ ಹಾಗೂ ಗರಿಷ್ಠ ಎರಡನ್ನೂ ನಿಗದಿಪಡಿಸಿದ್ದೇವೆ. ಪ್ರಸ್ತಾವದ ಬಗ್ಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ನೇತೃತ್ವದ ಸಮಿತಿ ತೀರ್ಮಾನ ಕೈಗೊಳ್ಳಲಿದೆ. ಬಳಿಕ ಹೊಸ ದರ ಜಾರಿಗೆ ಬರಲಿದೆ’ ಎಂದು ಇಲಾಖೆಯಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಓಲಾ ಮೈಕ್ರೊ ಹಾಗೂ ಉಬರ್‌ ಗೋ ಸೇವೆಗೆ ಈ ಹಿಂದೆ ಕಿ.ಮೀಗೆ ₹6 ದರವಿತ್ತು. ಈಗ ಕನಿಷ್ಠ ₹12 ಹಾಗೂ ಗರಿಷ್ಠ ₹23 ಮಾಡಲಾಗಿದೆ. ಓಲಾ ಮಿನಿ, ಉಬರ್‌ ಎಕ್ಸ್‌ ಸೇವೆಗೆ ಕಿ.ಮೀಗೆ ₹8 ಇದ್ದದ್ದು, ಈಗ ಕನಿಷ್ಠ ₹13 ಮತ್ತು ಗರಿಷ್ಠ ₹25 ನಿಗದಿಪಡಿಸಲಾಗಿದೆ. ಓಲಾ ಪ್ರೈಮ್‌, ಉಬರ್‌ ಎಕ್ಸ್‌ಎಲ್‌ ಸೇವೆಗೆ ₹10 ಇದ್ದದ್ದು, ಕನಿಷ್ಠ ₹14 ಹಾಗೂ ಗರಿಷ್ಠ 26 ಮಾಡಲಾಗಿದೆ. ಉಳಿದಂತೆ ಐಷಾರಾಮಿ ಟ್ಯಾಕ್ಸಿಗಳ ಕಿ.ಮೀಗೆ ದರವು ₹25 ರಿಂದ ₹30ಕ್ಕೆ ಏರಿಕೆಯಾಗಲಿದೆ’ ಎಂದು ಅವರು ವಿವರಿಸಿದರು.

ಮೂರು ಸುತ್ತಿನ ಸಭೆ: ಟ್ಯಾಕ್ಸಿ ಚಾಲಕರು, ಪ್ರಯಾಣಿಕರು ಹಾಗೂ ಕಂಪೆನಿಗಳ ಪ್ರತಿನಿಧಿಗಳ ಜತೆ ಮೂರು ಸುತ್ತಿನ ಸಭೆ ನಡೆಸಿದ್ದ ಇಲಾಖೆಯ ಸಮಿತಿ ಸದಸ್ಯರು, ಎಲ್ಲರ ಅಭಿಪ್ರಾಯ ಸಂಗ್ರಹಿಸಿಪ್ರಸ್ತಾವವನ್ನು ಸಿದ್ಧಪಡಿಸಿದ್ದಾರೆ.

‘ಈ ಹಿಂದೆ ನಿಗದಿಪಡಿಸಿದ್ದ ದರಗಳ ಬಗ್ಗೆ ಹಲವರಿಗೆ ಆಕ್ಷೇಪವಿತ್ತು. ಈಗ ಎಲ್ಲರೂ ಅಭಿಪ್ರಾಯ ತಿಳಿಸಿದ್ದಾರೆ. ಅದನ್ನು ಪರಿಗಣಿಸಿ ಚಾಲ್ತಿಯಲ್ಲಿರುವ ಕಾನೂನಿನ ಅನ್ವಯ ಹೊಸ ದರ ನಿಗದಿಪಡಿಸಿದ್ದೇವೆ’ ಎಂದು ಅಧಿಕಾರಿ ತಿಳಿಸಿದರು.

ವರ್ಷದ ಎರಡನೇ ಪ್ರಸ್ತಾವ: ದರ ನಿಗದಿ ಸಂಬಂಧ 2017ರಲ್ಲೇ ಎರಡನೇ ಬಾರಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಮೊದಲಬಾರಿ ಸಲ್ಲಿಸಿದ್ದ ಪ್ರಸ್ತಾವವನ್ನುತಿರಸ್ಕರಿಸಲಾಗಿತ್ತು.

‘ಈ ಹಿಂದೆ ಇಂಥ ಟ್ಯಾಕ್ಸಿಗಳಿಗೆ ಕಿ.ಮೀಗೆ ಗರಿಷ್ಠ ₹14.50 (ಎ.ಸಿ ಇಲ್ಲದ) ಹಾಗೂ ₹19.50 (ಎ.ಸಿ) ನಿಗದಿಪಡಿಸಲಾಗಿತ್ತು.  ಪ್ರಯಾಣಿಕರಿಗೆ ಹೊರೆಯಾಗುತ್ತದೆ ಎಂಬ ಕಾರಣಕ್ಕೆ ಹಲವು ಸಂಘ–ಸಂಸ್ಥೆಗಳ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು.’

‘ಕಿ.ಮೀಗೆ ₹10 (ಎ.ಸಿ ಇಲ್ಲದ) ಹಾಗೂ ₹12 (ಎ.ಸಿ) ಕನಿಷ್ಠ ದರ ನಿಗದಿಪಡಿಸಿ 2016ರ ಮೇನಲ್ಲಿ ಹೊಸ ಪ್ರಸ್ತಾವ ಸಲ್ಲಿಸಿದ್ದೆವು. ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಟ್ಯಾಕ್ಸಿ ಚಾಲಕರು, ಮತ್ತೊಮ್ಮೆ ದರ ನಿಗದಿ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಬಳಿಕ ಇಲಾಖೆಯ ಉನ್ನತ ಅಧಿಕಾರಿಗಳು ಆ ಪ್ರಸ್ತಾವವನ್ನು ತಿರಸ್ಕರಿಸಿದ್ದರು. ಈಗ ವಾಹನಗಳ ಮೌಲ್ಯದ ಆಧಾರದಲ್ಲಿ ಪ್ರಸ್ತಾವ ಸಲ್ಲಿಸಿದ್ದೇವೆ’ ಎಂದು ಅಧಿಕಾರಿ ವಿವರಿಸಿದರು.

ಕನಿಷ್ಠ ದರ ನಿಗದಿಗೆ ವಿರೋಧ: ಟ್ಯಾಕ್ಸಿಗಳಿಗೆ ಕನಿಷ್ಠ ದರ ನಿಗದಿಪಡಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಪ್ರಯಾಣಿಕರು, ‘ಸಾರಿಗೆ ಅಧಿಕಾರಿಗಳು ಅನಾವಶ್ಯವಾಗಿ ನಮ್ಮ ಮೇಲೆ ಆರ್ಥಿಕ ಹೊರೆಯನ್ನುಂಟು ಮಾಡುತ್ತಿದ್ದಾರೆ’ ಎಂದು ದೂರಿದ್ದಾರೆ.

‘ನಗರದಲ್ಲಿ 1.47 ಲಕ್ಷ ಟ್ಯಾಕ್ಸಿಗಳಿವೆ. ಕಂಪೆನಿಗಳ ನಡುವೆ ಪೈಪೋಟಿ ಇದ್ದು, ಕಡಿಮೆ ದರದಲ್ಲಿ ಪ್ರಯಾಣಿಕರಿಗೆ ಸೇವೆ ಸಿಗುತ್ತಿದೆ. ಈಗ ಕನಿಷ್ಠ ₹12 ದರ ನಿಗದಿ ಮಾಡಲಾಗಿದೆ. ಕಡಿಮೆ ದರದಲ್ಲಿ ಸೇವೆ ನೀಡಬೇಕೆಂಬ ಹಂಬಲವುಳ್ಳ ಕಂಪೆನಿಗಳಿಗೆ ಈ ದರವು ಅಡ್ಡಿಯುಂಟು ಮಾಡಲಿದೆ’ ಎಂದು ಪ್ರಯಾಣಿಕ ಬಸವನಗುಡಿಯಎನ್‌.ಆರ್‌.ರಾಮಚಂದ್ರ ದೂರಿದರು.

‘ಸದ್ಯ ಕನಿಷ್ಠ ಪ್ರಯಾಣ ದರದ ಅಗತ್ಯವಿಲ್ಲ. ಗರಿಷ್ಠ ದರವನ್ನು ಮಾತ್ರನಿಗದಿಪಡಿಸಬೇಕು. ಪ್ರಯಾಣಿಕರ ಹಿತವನ್ನು ಗಮನದಲ್ಲಿಟ್ಟಕೊಂಡು ದರಗಳನ್ನು ಇನ್ನೊಮ್ಮೆ ಪರಿಶೀಲಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT