ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪುಂಡಾಟಿಕೆ, ಗೂಂಡಾಗಿರಿ ಮಟ್ಟಹಾಕಿ’

Last Updated 21 ಸೆಪ್ಟೆಂಬರ್ 2017, 7:11 IST
ಅಕ್ಷರ ಗಾತ್ರ

ಮಂಗಳೂರು: ‘ಪುಂಡಾಟಿಕೆ, ಗೂಂಡಾಗಿರಿ ಮಾಡುವವರನ್ನು ಯಾವುದೇ ಮುಲಾಜಿಲ್ಲದೇ ಮಟ್ಟಹಾಕಿ. ಮತೀಯ ದ್ವೇಷ ಬಿತ್ತುವವರ ವಿರುದ್ಧ ಕಠಿಣವಾದ ಕಾನೂನಿನ ಅಸ್ತ್ರಗಳನ್ನು ಪ್ರಯೋಗಿಸಿ’ ಎಂದು ನೂತನ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಪಶ್ಚಿಮ ವಲಯ ಹಾಗೂ ಮಂಗಳೂರು ನಗರ ಪೊಲೀಸ್ ಕಮಿಷನರೇಟ್‌ನ ಪೊಲೀಸರಿಗೆ ತಾಕೀತು ಮಾಡಿದರು.

ಮಂಗಳೂರು ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಬುಧವಾರ ಪೊಲೀಸ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗೂಂಡಾಗಿರಿ ಮಾಡುವವರು, ನಿರಂತರ ಅಪರಾಧ ಕೃತ್ಯ ಎಸಗುವವರ ವಿರುದ್ಧ ಗೂಂಡಾ ಕಾಯ್ದೆ ಜಾರಿ ಮಾಡುವಂತೆ ನಿರ್ದೇಶನ ನೀಡಿದ್ದೇನೆ. ಅಗತ್ಯವಿದ್ದಲ್ಲಿ ಅಂತಹವರ ಗಡಿಪಾರು ಮಾಡುವುದಕ್ಕೂ ಸೂಚಿಸಿದ್ದೇನೆ’ ಎಂದರು.

ಗೂಂಡಾಗಿರಿ ನಡೆಯದಂತೆ ನಿಯಂತ್ರಿಸಿದರೆ ಮಾತ್ರವೇ ಕಾನೂನು ಸುವ್ಯವಸ್ಥೆ ಸರಿ ಇರಲು ಸಾಧ್ಯ. ಗೂಂಡಾಗಿರಿ ನಡೆಸುವವರ ಮೇಲೆ ತೀವ್ರ ನಿಗಾ ಇರಿಸಬೇಕು. ಸಣ್ಣಪುಟ್ಟ ಅಪರಾಧಗಳಲ್ಲಿ ಭಾಗಿಯಾದವರನ್ನು ರೌಡಿಪಟ್ಟಿಗೆ ಸೇರಿಸುವ ಬದಲಿಗೆ ಮನವೊಲಿಸಿ, ಮುಖ್ಯವಾಹಿನಿಗೆ ಕರೆತರಲು ಯತ್ನಿಸಬೇಕು ಎಂಬ ಸೂಚನೆಯನ್ನೂ ನೀಡಲಾಗಿದೆ ಎಂದು ತಿಳಿಸಿದರು.

‘ಮೀಟರ್‌ ಬಡ್ಡಿ ಮಾಫಿಯಾವನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕು. ನಗರ ಪ್ರದೇಶಗಳಲ್ಲಿ ಪೇಯಿಂಗ್ ಗೆಸ್ಟ್‌ಗಳಲ್ಲಿರುವ ವಿದ್ಯಾರ್ಥಿಗಳಿಂದ ರಾತ್ರಿ ವೇಳೆ ಅಕ್ಕಪಕ್ಕದ ಜನರಿಗೆ ತೊಂದರೆ ಆಗದಂತೆ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು. ವಿದೇಶಿ ವಿದ್ಯಾರ್ಥಿಗಳು ಮತ್ತು ವಿದೇಶಿ ಪ್ರವಾಸಿಗರಿಗೆ ಹೆಚ್ಚಿನ ಭದ್ರತೆ ನೀಡಬೇಕು. ಮದ್ಯದಂಗಡಿಗಳು ನಿಯಮ ಮೀರಿ ವಹಿವಾಟು ನಡೆಸದಂತೆ ಎಚ್ಚರಿಕೆ ವಹಿಸಬೇಕು ಎಂಬ ನಿರ್ದೇಶನವನ್ನೂ ಪೊಲೀಸರಿಗೆ ನೀಡಿದ್ದೇನೆ’ ಎಂದರು.

ಕ್ರಿಕೆಟ್‌ ಬೆಟ್ಟಿಂಗ್‌, ಲೈವ್‌ ಬ್ಯಾಂಡ್‌, ವೇಶ್ಯಾವಾಟಿಕೆ ನಡೆಯದಂತೆ ನಿಯಂತ್ರಿಸಲು ಬಿಗಿ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ. ಎಲ್ಲ ಪ್ರದೇಶಗಳಲ್ಲಿ ರಾತ್ರಿ ಗಸ್ತು ಹೆಚ್ಚಳ ಮಾಡುವಂತೆ ತಿಳಿಸಲಾಗಿದೆ. ನಗರ ಪ್ರದೇಶಗಳ ಸೂಕ್ಷ್ಮ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ಭದ್ರತೆ ಹೆಚ್ಚಿಸಲು ಸೂಚನೆ: ಕರಾವಳಿ ಪ್ರದೇಶದಲ್ಲಿರುವ ಬಂದರುಗಳು, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದ ಉದ್ದಿಮೆಗಳಿಗೆ ಹೆಚ್ಚಿನ ಭದ್ರತೆಯ ಅಗತ್ಯವಿದೆ. ಸಮುದ್ರ ಮಾರ್ಗದಲ್ಲಿ ದುಷ್ಟ ಶಕ್ತಿಗಳು ಈ ಪ್ರದೇಶ ಪ್ರವೇಶಿಸದಂತೆ ತಡೆಯಲು ಕರಾವಳಿ ಗಸ್ತು ಹೆಚ್ಚಿಸುವಂತೆಯೂ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ವಿಶೇಷ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ. ಹೆಣ್ಣುಮಕ್ಕಳ ಶಾಲಾ ಕಾಲೇಜುಗಳು ಹಾಗೂ ವಿದ್ಯಾರ್ಥಿ ನಿಲಯಗಳಿಗೆ ಹೆಚ್ಚಿನ ಭದ್ರತೆ ಒದಗಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಮೂಲ ಪತ್ತೆಗೆ ಕ್ರಮ: ‘ಕರಾವಳಿ ಪ್ರದೇಶದಲ್ಲಿ ಗಾಂಜಾ, ಅಫೀಮು ಮೊದಲಾದ ಮಾದಕ ವಸ್ತುಗಳ ಬಳಕೆ ಹೆಚ್ಚಾಗಿದೆ. ಇದರಿಂದ ಯುವಜನರು, ವಿದ್ಯಾರ್ಥಿಗಳು ಹಾದಿ ತಪ್ಪುತ್ತಿದ್ದಾರೆ. ಮಾದಕವಸ್ತು ಮಾರಾಟ ಮಾಡುವವರು, ಸೇವಿಸುವವರನ್ನು ನಿಯಂತ್ರಿಸಿದರೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಿಲ್ಲ. ಆದ್ದರಿಂದ ಇಲ್ಲಿಗೆ ಮಾದಕವಸ್ತು ಪೂರೈಸುವ ಜಾಲದ ಮೂಲವನ್ನು ಪತ್ತೆ ಮಾಡುವಂತೆ ಪೊಲೀಸರಿಗೆ ಆದೇಶ ಮಾಡಿದ್ದೇನೆ’ ಎಂದು ತಿಳಿಸಿದರು.

ಕಾನೂನು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್‌ ಮೋಹನ್, ಪಶ್ಚಿಮ ವಲಯ ಐಜಿಪಿ ಹೇಮಂತ್ ನಿಂಬಾಳ್ಕರ್, ಮಂಗಳೂರು ನಗರ ಪೊಲೀಸ್ ಕಮಿಷನರ್ ಟಿ.ಆರ್‌.ಸುರೇಶ್ ಪತ್ರಿಕಾಗೋಷ್ಠಿಯಲ್ಲಿದ್ದರು. ಚಿಕ್ಕಮಗಳೂರು ಎಸ್‌ಪಿ ಕೆ.ಅಣ್ಣಾಮಲೈ, ದಕ್ಷಿಣ ಕನ್ನಡ ಎಸ್‌ಪಿ ಸಿ.ಎಚ್‌.ಸುಧೀರ್‌ಕುಮಾರ್‌ ರೆಡ್ಡಿ, ಉಡುಪಿ ಎಸ್‌ಪಿ ಡಾ.ಸಂಜೀವ್ ಎಂ.ಪಾಟೀಲ್, ಉತ್ತರ ಕನ್ನಡ ಎಸ್‌ಪಿ ವಿನಾಯಕ್ ಪಾಟೀಲ್‌, ಮಂಗಳೂರು ನಗರ ಡಿಸಿಪಿ ಹನುಮಂತರಾಯ ಹಾಗೂ ಡಿವೈಎಸ್‌ಪಿ ಮತ್ತು ಉನ್ನತ ಶ್ರೇಣಿಯ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT