ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಹಿಂಗ್ಯಾ ಮುಸ್ಲಿಮರ ಗಡಿಪಾರು ಕಾನೂನುಬಾಹಿರವಲ್ಲ

Last Updated 21 ಸೆಪ್ಟೆಂಬರ್ 2017, 19:42 IST
ಅಕ್ಷರ ಗಾತ್ರ

ನವದೆಹಲಿ: ಅಕ್ರಮವಾಗಿ ಭಾರತದಲ್ಲಿ ನೆಲೆಸಿರುವ ರೋಹಿಂಗ್ಯಾ ಮುಸ್ಲಿಮರನ್ನು ದೇಶದಿಂದ ಹೊರ ಹಾಕುವುದರಿಂದ ಕಾನೂನು ಉಲ್ಲಂಘನೆಯಾಗುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ. 

‘ಈ ಸಮುದಾಯಕ್ಕೆ ಸೇರಿದವರು ಅಕ್ರಮ ವಲಸಿಗರೇ ಹೊರತು ನಿರಾಶ್ರಿತರಲ್ಲ. ಅವರು ಇದುವರೆಗೂ ಆಶ್ರಯ ಕೋರಿ ಭಾರತ ಸರ್ಕಾರಕ್ಕೆ ಮನವಿ ಸಲ್ಲಿಸಿಲ್ಲ’ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಶುಕ್ರವಾರ ಆಯೋಜಿಸಿದ್ದ  ‘ಉತ್ತಮ ಆಡಳಿತ ಮತ್ತು ಮಾನವ ಹಕ್ಕುಗಳು’ ವಿಚಾರ ಸಂಕಿರಣದಲ್ಲಿ ಹೇಳಿದರು.

‘ಅವರನ್ನು ವಾಪಾಸ್‌ ಕರೆಸಿಕೊಳ್ಳಲು ಮ್ಯಾನ್ಮಾರ್‌ ಸಿದ್ಧವಾಗಿದೆ. ಆದರೆ, ಅವರ ಗಡಿಪಾರಿಗೆ ನಮ್ಮ ದೇಶದಲ್ಲಿಯೇ ಕೆಲವರು ಆಕ್ಷೇಪ ಎತ್ತುತ್ತಿದ್ದಾರೆ’ ಎಂದು ಸಿಂಗ್‌ ಅಸಮಾಧಾನ ವ್ಯಕ್ತಪಡಿಸಿದರು.

1951ರ ವಿಶ್ವಸಂಸ್ಥೆಯ ನಿರಾಶ್ರಿತರ ಒಪ್ಪಂದಕ್ಕೆ ಭಾರತ ಸಹಿ ಹಾಕಿಲ್ಲ. ವಾಸ್ತವ ಹೀಗಿರುವಾಗ ರೋಹಿಂಗ್ಯಾ ಮುಸ್ಲಿಮರನ್ನು ಭಾರತದಿಂದ ಹೊರ ಹಾಕಿದರೆ ಅಂತರರಾಷ್ಟ್ರೀಯ ಕಾನೂನು ಅಥವಾ ಒಪ್ಪಂದದ ಉಲ್ಲಂಘನೆಯಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಮಾನವೀಯ ನೆಲೆಯಲ್ಲಿ ಸ್ಪಂದನೆ
ರೋಹಿಂಗ್ಯಾ ಮುಸ್ಲಿಮರ ಸಮಸ್ಯೆಯನ್ನು ಮಾನವೀಯ ನೆಲೆಯಲ್ಲಿ ನೋಡುವುದಾಗಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್‌ಎಚ್‌ಆರ್‌ಸಿ) ಅಧ್ಯಕ್ಷ ಎಚ್‌.ಎಲ್‌. ದತ್ತು ಅವರು ಹೇಳಿದ್ದಾರೆ.

ಈ ವಿಚಾರದಲ್ಲಿ ಸರ್ಕಾರದ ನಿಲುವಿಗೆ ಪ್ರತಿಕಿಯಿಸಲು ನಿರಾಕರಿಸಿದರು. ಆದರೆ, ಮಾನವೀಯ ನೆಲೆಯಲ್ಲಿ ಆಯೋಗದ ಮಧ್ಯಪ್ರವೇಶ ತಪ್ಪಲ್ಲ ಎಂದು ಸಮರ್ಥಿಸಿಕೊಂಡರು.

ರೋಹಿಂಗ್ಯಾ ಮುಸ್ಲಿಮರ ಗಡಿಪಾರು ನಿರ್ಧಾರವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರಕ್ಕೆ ಎನ್‌ಎಚ್‌ಆರ್‌ಸಿ ಇತ್ತೀಚೆಗೆ ನೋಟಿಸ್‌ ನೀಡಿತ್ತು. ಈ ನಡುವೆ ಪಶ್ಚಿಮ ಬಂಗಾಳ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಕೇಂದ್ರ ಸರ್ಕಾರದ ಗಡಿಪಾರು ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ.

ಫೇಸ್‌ಬುಕ್‌ ನಿಷೇಧ
ಯಾಂಗೂನ್‌ (ಎಎಫ್‌ಪಿ): ರೋಹಿಂಗ್ಯಾ ಉಗ್ರ ಸಂಘಟನೆಯಾದ ‘ಅರಾಕನ್‌ ರೋಹಿಂಗ್ಯಾ ಸಂರಕ್ಷಣಾ ಸೇನೆ’ (ಎಆರ್‌ಎಸ್‌ಎ) ಚಟುವಟಿಕೆಗಳನ್ನು ತನ್ನ ಸಾಮಾಜಿಕ ಅಂತರ್ಜಾಲ ತಾಣದಲ್ಲಿ ನಿಷೇಧಿಸಿರುವುದಾಗಿ ಫೇಸ್‌ಬುಕ್‌ ಪ್ರಕಟಿಸಿದೆ.

ಸಾಮಾಜಿಕ ಅಂತರ್ಜಾಲ ತಾಣದಲ್ಲಿ ದ್ವೇಷಮಯ ಸಂದೇಶಗಳನ್ನು ಪ್ರಕಟಿಸುತ್ತಿರುವ ರೋಹಿಂಗ್ಯಾ ಸಂಘಟನೆಯನ್ನು ‘ಅಪಾಯಕಾರಿ ಸಂಘಟನೆ’ ಎಂದು ಫೇಸ್‌ಬುಕ್‌ ಗುರುತಿಸಿದೆ.

‘ಸಾಮಾಜಿಕ ಜಾಲ ತಾಣದಲ್ಲಿ ದ್ವೇಷ ಭಾಷಣ ಪ್ರಚಾರ ಮಾಡುವ ಮೂಲಕ ಮ್ಯಾನ್ಮಾರ್‌ನಲ್ಲಿನ ಇನ್ನಷ್ಟು ಬಿಕ್ಕಟ್ಟು ಸೃಷ್ಟಿಸಲು ಯತ್ನಿಸುತ್ತಿದ್ದ ಕಾರಣ ಈ ಗುಂಪನ್ನು ನಿಷೇಧಿಸಿದ್ದೇವೆ’ ಎಂದು ಫೇಸ್‌ಬುಕ್‌ ವಕ್ತಾರರು ಹೇಳಿದ್ದಾರೆ.

ರೋಹಿಂಗ್ಯಾ ಮುಸ್ಲಿಮರ ಮೇಲೆ ನಡೆಯುತ್ತಿರುವ ಅಮಾನುಷ ಹಲ್ಲೆ ಮತ್ತು ದಾಳಿಗಳ ಚಿತ್ರಗಳನ್ನು ಎಆರ್‌ಎಸ್‌ಎ ಫೇಸ್‌ಬುಕ್‌ನಲ್ಲಿ ಪ್ರಕಟಿಸುತ್ತಿದೆ.

ಸಂಘಟನೆಯ ಚಟುವಟಿಕೆಗಳನ್ನು ನಿಷೇಧಿಸುವಂತೆ ಸರ್ಕಾರ ಸೂಚನೆ ನೀಡಿಲ್ಲ. ಆದರೆ, ಉಗ್ರ ಸಂಘಟನೆಗಳ ಚಟುವಟಿಕೆಗಳಿಗೆ ಜಾಲತಾಣದಲ್ಲಿ ಅವಕಾಶ ನೀಡುವುದಿಲ್ಲ ಎಂಬ ಸ್ವಯಂ ನೀತಿಗೆ ಅನುಗುಣವಾಗಿ ಎಆರ್‌ಎಸ್‌ಎ ಚಟುವಟಿಕೆಗಳ ಮೇಲೆ ನಿಷೇಧ ಹೇರಿರುವುದಾಗಿ ಫೇಸ್‌ಬುಕ್‌ ಸ್ಪಷ್ಟಪಡಿಸಿದೆ.

ಟ್ವಿಟರ್‌ನಲ್ಲೂ ಸಕ್ರಿಯವಾಗಿರುವ ಎಆರ್‌ಎಸ್‌ಎ ತನ್ನ ಪ್ರತಿ ಚಟುವಟಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದೆ.

ಜನಸಂಖ್ಯೆ ನಿಯಂತ್ರಣಕ್ಕೆ ಮುಂದಾದ ಬಾಂಗ್ಲಾ ಸರ್ಕಾರ
ಢಾಕಾ: ರೋಹಿಂಗ್ಯಾ ಮುಸ್ಲಿಮರ ಜನಸಂಖ್ಯೆ ನಿಯಂತ್ರಣಕ್ಕೆ ಬಾಂಗ್ಲಾದೇಶದ ಸರ್ಕಾರ ಕುಟುಂಬ ಯೋಜನೆ ಆಂದೋಲನ ಆರಂಭಿಸಲು ಮುಂದಾಗಿದೆ.

ದೇಶದ ಮೂಲ ನಿವಾಸಿಗಳಿಗಿಂತ ನಿರಾಶ್ರಿತರ ಜನಸಂಖ್ಯೆ ಹೆಚ್ಚಾಗುವ ಆತಂಕದಿಂದ ಸರ್ಕಾರ ಈ ಸಮುದಾಯಕ್ಕೆ ಜನಸಂಖ್ಯಾ ನಿಯಂತ್ರಣ ಕ್ರಮಗಳ ಬಗ್ಗೆ ತಿಳಿ ಹೇಳುತ್ತಿದೆ. ನಿರಾಶ್ರಿತರ ಶಿಬಿರಗಳಲ್ಲಿ ಗರ್ಭನಿರೋಧಕ ಮಾತ್ರೆ ಹಾಗೂ ಸಾಧನಗಳನ್ನು ವಿತರಿಸುತ್ತಿದೆ.

ನಾವು ಉಗ್ರರಲ್ಲ: ರೋಹಿಂಗ್ಯಾ ಮುಸ್ಲಿಮರ ಅಳಲು
ಹೈದರಾಬಾದ್‌ (ಪಿಟಿಐ): ‘ತಾಯ್ನಾಡು ನಮ್ಮನ್ನು ಹೊರ ಹಾಕಿದೆ. ಆಶ್ರಯ ಕಲ್ಪಿಸಿದ ಭಾರತ ನಮಗೆ ಉಗ್ರರ ಹಣೆಪಟ್ಟಿ ಹಚ್ಚಿ ಗಡಿಪಾರು ಮಾಡುವ ಬೆದರಿಕೆ ಒಡ್ಡುತ್ತಿದೆ’ ಎಂದು ನಗರದಲ್ಲಿ ಆಶ್ರಯ ಪಡೆದಿರುವ ರೋಹಿಂಗ್ಯಾ ಮುಸ್ಲಿಮ್‌ ಸಮುದಾಯ ಕಣ್ಣೀರು ಹಾಕಿದೆ.

‘ನಾವು ಭಯೋತ್ಪಾದಕರಲ್ಲ. ಯಾವುದೇ ಸಮಸ್ಯೆ ಹುಟ್ಟು ಹಾಕಲು ನಾವು ಇಲ್ಲಿಗೆ ಬಂದಿಲ್ಲ’ ಎಂದು ಆ ಸಮುದಾಯದ ಸೈಯ್ಯದ್‌ ಉಲ್ಲಾ ಬಷರ್‌ ದುಃಖ ತೋಡಿಕೊಂಡಿದ್ದಾರೆ. 

‘ನಿರಾಶ್ರಿತರಾಗಬೇಕು ಎಂದು ಯಾರೂ ಬಯಸುವುದಿಲ್ಲ. ಅತ್ತ ಮ್ಯಾನ್ಮಾರ್‌ನಲ್ಲಿ ಸಾಮೂಹಿಕ ಹತ್ಯೆ ನಡೆಯುತ್ತಿದೆ. ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದರೆ ನಾವಾಗಿಯೇ ತಾಯ್ನಾಡಿಗೆ ಹಿಂದಿರುಗುತ್ತೇವೆ’ ಎಂದು ಅವರು ಹೇಳಿದರು.

ನಗರದ ನಿರಾಶ್ರಿತರ ಶಿಬಿರದಲ್ಲಿ ಆಶ್ರಯ ಪಡೆದಿರುವ ಬಷರ್‌ ಕುಟುಂಬ ತಮ್ಮನ್ನು ಭಾರತದಿಂದ ಹೊರ ಹಾಕದಂತೆ ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT