ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಟಗಾರಿಕೆ ಬೆಳೆಗಾರರಿಗೆ ‘ಟ್ಯಾಂಕರ್ ಭಾಗ್ಯ’

Last Updated 22 ಸೆಪ್ಟೆಂಬರ್ 2017, 5:55 IST
ಅಕ್ಷರ ಗಾತ್ರ

ಬೆಳಗಾವಿ: ತೋಟಗಾರಿಕೆ ಬೆಳೆಗಾರರಿಗೆ ಟ್ಯಾಂಕರ್ ಖರೀದಿಸಲು ಸಹಾಯಧನ ನೀಡುವ ಯೋಜನೆಯನ್ನು ರಾಜ್ಯ ಸರ್ಕಾರ ಈ ಸಾಲಿನಲ್ಲಿ ಜಾರಿಗೊಳಿಸಿದೆ.
ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಈ ಸೌಲಭ್ಯ ಕಲ್ಪಿಸಲಾಗುತ್ತಿದೆ. ಸಾಮಾನ್ಯ ವರ್ಗದವರಿಗೆ ಶೇ 50ರಷ್ಟು ಹಾಗೂ ಪರಿಶಿಷ್ಟ ಜಾತಿ, ಪಂಗಡದವರಿಗೆ ಶೇ 90ರಷ್ಟು ಸಹಾಯಧನವನ್ನು ತೋಟಗಾರಿಕೆ ಇಲಾಖೆಯ ಮೂಲಕ ಒದಗಿಸಲಾಗುವುದು. ನಾಲ್ಕು ಸಾವಿರ ಅಥವಾ ಐದು ಸಾವಿರ ಲೀಟರ್‌ ಸಾಮರ್ಥ್ಯದ ಟ್‌್ಯಾಂಕರ್‌ ಖರೀದಿಸಲು ಅವಕಾಶವಿದೆ.

ಜಿಲ್ಲೆಯಲ್ಲಿ ಸಾಮಾನ್ಯ ವರ್ಗಕ್ಕೆ 50, ಪರಿಶಿಷ್ಟ ಜಾತಿಗೆ 5 ಹಾಗೂ ಪರಿಶಿಷ್ಟ ಪಂಗಡದವರಿಗೆ 2 ಸೇರಿ 57 ಗುರಿ ನೀಡಲಾಗಿದೆ. ₹ 31.03 ಲಕ್ಷ ಅನುದಾನವನ್ನೂ ನಿಗದಿಪಡಿಸಲಾಗಿದೆ.

‘ಸತತ ಬರಗಾಲದಿಂದಾಗಿ ಅಂತರ್ಜಲ ಮಟ್ಟ ಕುಸಿಯುತ್ತಿದೆ. ತೆಂಗು, ಮಾವು, ಸಪೋಟಾ, ದ್ರಾಕ್ಷಿಯಂತಹ ಬಹುವಾರ್ಷಿಕ ಬೆಳೆಗಳನ್ನು ಉಳಿಸಿಕೊಳ್ಳಲು ಬೆಳೆಗಾರರು ಹರಸಾಹಸ ಪಡುವಂತಾಗಿದೆ. ನೀರಿನ ಕೊರತೆಯಿಂದಾಗಿ ಬೆಳೆ ಒಣಗಿ ರೈತರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಕೆಲವೆಡೆ, ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ಗಳ ಮೂಲಕ ನೀರು ಖರೀದಿಸಿ ತಂದು ಬೆಳೆಗಳಿಗೆ ಹಾಯಿಸುತ್ತಿರುತ್ತಾರೆ.

ಬೆಳೆಗಾರರ ಈ ಬವಣೆಯನ್ನು ಅರಿತ ರಾಜ್ಯ ಸರ್ಕಾರವು ಅವರು ಟ್‌್ಯಾಂಕರ್‌ ಹೊಂದುವಂತಾಗಲು ಸಹಾಯಧನ ನೀಡುವ ಯೋಜನೆಯನ್ನು ಪ್ರಸಕ್ತ ಸಾಲಿನಿಂದ ಅನುಷ್ಠಾನಕ್ಕೆ ತಂದಿದೆ. ಶೀಘ್ರವೇ ಅರ್ಜಿ ಆಹ್ವಾನಿಸಲಾಗುವುದು’ ಎಂದು ತೋಟಗಾರಿಕೆ ಅಧಿಕಾರಿ (ಸಮಗ್ರ ಅಭಿವೃದ್ಧಿ) ಶಿವಕುಮಾರ ಮಾಳಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ಸೌಲಭ್ಯ ಪಡೆಯುವುದು ಹೇಗೆ?: ಬಹುವಾರ್ಷಿಕ ಬೆಳೆ ಹೊಂದಿರುವವರು ಮಾತ್ರ ಯೋಜನೆಯಡಿ ನೆರವು ಪಡೆಯಲು ಅರ್ಹತೆ ಗಳಿಸಿದ್ದಾರೆ. ತೆಂಗು, ಮಾವು, ಸಪೋಟಾ, ಗೇರು, ದ್ರಾಕ್ಷಿಯಂತಹ ಬೆಳೆ ಉಳಿಸಿಕೊಳ್ಳಲು ಸಹಕಾರ ನೀಡಲಾಗುವುದು. ಸಾಮಾನ್ಯ ವರ್ಗದವರು ಎರಡೂವರೆ ಎಕರೆ, ಪರಿಶಿಷ್ಟ ಜಾತಿ, ಪಂಗಡದವರು ಒಂದು ಎಕರೆಯಲ್ಲಿ ಬೆಳೆ ಹೊಂದಿರಬೇಕು. 30 ಎಚ್‌ಪಿ (ಅಶ್ವಶಕ್ತಿ)ಗಿಂತ ಹೆಚ್ಚಿನ ಸಾಮರ್ಥ್ಯದ ಟ್ರ್ಯಾಕ್ಟರ್‌ ಹೊಂದಿರಬೇಕು, ಜಮೀನು ಅವರ ಹೆಸರಿನಲ್ಲಿ ಇರಬೇಕು, ಬೆಳೆ ಪ್ರಮಾಣಪತ್ರ ಸಲ್ಲಿಸಬೇಕು.

‘4,000 ಲೀಟರ್ ಸಾಮರ್ಥ್ಯದ ಟ್ಯಾಂಕರ್ ಗೆ ₹ 1.15 ಲಕ್ಷ ಹಾಗೂ ಜಿಎಸ್‌ಟಿ (ಸರಕು ಹಾಗೂ ಸೇವಾ ತೆರಿಗೆ), 5,000 ಲೀಟರ್‌ ಸಾಮರ್ಥ್ಯದ ಟ್‌್ಯಾಂಕರ್‌ಗೆ ₹ 1.40 ಲಕ್ಷ ಹಾಗೂ ಜಿಎಸ್‌ಟಿ ನಿಗದಿಪಡಿಸಲಾಗಿದೆ. ಗುಣಮಟ್ಟವನ್ನು ಕಾಯ್ದುಕೊಳ್ಳುವುದಕ್ಕೆ ಹಾಗೂ ಅವ್ಯವಹಾರ ತಡೆಯುವುದಕ್ಕಾಗಿ ಇಲಾಖೆಯಿಂದಲೇ ಕೆಲವು ಟ್‌್ಯಾಂಕರ್‌ ತಯಾರಿಕೆ ಹಾಗೂ ಮಾರಾಟಗಾರರ ಪಟ್ಟಿಯನ್ನು ಕೊಡಲಾಗುತ್ತದೆ.

ಅಲ್ಲಿಯೇ ಟ್ಯಾಂಕರ್ ಖರೀದಿಸಬೇಕು. ಆ ಕಂಪೆನಿಯವರು ರೈತರಿಗೆ 5 ವರ್ಷ ಉಚಿತವಾಗಿ ಸರ್ವಿಸ್‌ ಮಾಡಿಕೊಡಬೇಕು ಹಾಗೂ ವಾರಂಟಿಯನ್ನೂ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಟ್ಯಾಂಕರ್ ಖರೀದಿಗೆ ಮುನ್ನವೇ ಇಲಾಖೆಯ ತಾಲ್ಲೂಕು ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು. ಜೇಷ್ಠತೆ ಹಾಗೂ ದಾಖಲೆಗಳನ್ನು
ಆಧರಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ನಿಜವಾದ ಬೆಳೆಗಾರರಿಗೆ ಸೌಲಭ್ಯ ದೊರೆಯುವಂತೆ ಮಾಡಲು ಕ್ರಮ ವಹಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಈಚಿನ ಮಾಹಿತಿ ಪ್ರಕಾರ, 80,708 ಹೆಕ್ಟೇರ್‌ನಷ್ಟು ತೋಟಗಾರಿಕೆ ಬೆಳೆ ಇದೆ. ಈ ಪೈಕಿ 43,230 ಹೆಕ್ಟೇರ್‌ನಲ್ಲಿ ತರಕಾರಿ, 17,734 ಹೆಕ್ಟೇರ್‌ನಲ್ಲಿ ಹಣ್ಣು, 9,768 ಹೆಕ್ಟೇರ್‌ನಲ್ಲಿ ತೋಟದ ಬೆಳೆಗಳು, 9,112 ಹೆಕ್ಟೇರ್‌ನಲ್ಲಿ ಸಂಬಾರು ಬೆಳೆ ಹಾಗೂ 1,352 ಹೆಕ್ಟೇರ್‌ನಲ್ಲಿ ಹೂವು, ಔಷಧಿ ಬೆಳೆಗಳನ್ನು ಬೆಳೆಯಲಾಗಿದೆ. ಬದುಗಳು ಹಾಗೂ ಕ್ಷೇತ್ರದಲ್ಲಿರುವ ಎಲ್ಲವನ್ನೂ ಸೇರಿಸಿದರೆ 35ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಬಹುವಾರ್ಷಿಕ ಬೆಳೆಗಳಿವೆ.

ಅಂಕಿ ಅಂಶ
57 ಜಿಲ್ಲೆಗೆ ನಿಗದಿಯಾದ ಗುರಿ

₹31.03ಲಕ್ಷ ಮಂಜೂರಾದ ಅನುದಾನ

50 ಸಾಮಾನ್ಯ ವರ್ಗದವರಿಗೆ ಮೀಸಲು

* * 

ಬೆಳೆ ಉಳಿಸಿಕೊಳ್ಳಲು ರೈತರು ಬಾಡಿಗೆ ಟ್ಯಾಂಕರ್ ಗಳಿಗೆ ಮೊರೆ ಹೋಗುತ್ತಾರೆ. ಇದಕ್ಕಾಗಿ ಅವರು ಸಾಕಷ್ಟು ಹಣ ಖರ್ಚು ಮಾಡಬೇಕಾಗುತ್ತದೆ. ಇದನ್ನು ತಪ್ಪಿಸಲು ಸರ್ಕಾರ ನೆರವಾಗುತ್ತಿದೆ
ಶಿವಕುಮಾರ ಮಾಳಶೆಟ್ಟಿ
ತೋಟಗಾರಿಕೆ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT