ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರೆಗಿಳಿದ ಗೊಂಬೆ ಲೋಕ

Last Updated 22 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನವರಾತ್ರಿ ಸಮಯದಲ್ಲಿ ಹಲವು ವರ್ಷಗಳಿಂದ ಜೋಪಾನವಾಗಿ ಸಂಗ್ರಹಿಸಿಟ್ಟ ಬೊಂಬೆಗಳನ್ನು ಉತ್ಸಾಹದಿಂದ ಹಂತಹಂತವಾಗಿ ಜೋಡಿಸಿ ಮನೆಯಲ್ಲಿ ಪ್ರದರ್ಶನ ಮಾಡುತ್ತಾರೆ ನಗರದ ವಸಂತಪುರದ ಅನಂತಕೃಷ್ಣ– ಸ್ವರ್ಣಲತಾ ದಂಪತಿ. ಇವರ ಮನೆಯಲ್ಲಿ ನೂರಾರು ವರ್ಷಗಳಿಂದ ಬೊಂಬೆ ಇಡುವ ಸಂಪ್ರದಾಯ ಇದೆ. ಗೊಂಬೆ ಕೂರಿಸುವ ವಿಧಾನದಲ್ಲಿ ಇವರು ಪ್ರತಿ ವರ್ಷವೂ ಹೊಸತನ ಕಾಪಾಡಿಕೊಳ್ಳುತ್ತಾರೆ. ದ್ವಾದಶ ಜ್ಯೋತಿರ್ಲಿಂಗಗಳ ಗೊಂಬೆ ಪ್ರದರ್ಶನ ಈ ವರ್ಷದ ವಿಶೇಷ.

ನವರಾತ್ರಿಗೆ ಎರಡು ವಾರಗಳ ಮೊದಲೇ ಬೊಂಬೆಗಳನ್ನು ಕೂರಿಸುವ ತಯಾರಿ ಆರಂಭಿಸುತ್ತಾರೆ. ಈ ಬಾರಿ ಮಣ್ಣಿನಿಂದ ತಾವೇ ಮೂರ್ತಿಗಳನ್ನು ಮಾಡಿ ಗೊಂಬೆ ಪ್ರದರ್ಶನಕ್ಕೆ ಇರಿಸಿದ್ದಾರೆ.

‘ಪ್ರತಿ ಬಾರಿ ನವರಾತ್ರಿ ಹಬ್ಬ ಬಂದಾಗ ಮಾರ್ಕೆಟ್‌ಗೆ ಹೋಗಿ ಗೊಂಬೆಗಳನ್ನು ತಂದು ಕೂರಿಸುತ್ತಿದ್ದೆವು. ಆದರೆ ಈ ಬಾರಿ ನಾವೇ ಯಾಕೆ ಮಾಡಬಾರದು ಎಂದು ಅನ್ನಿಸಿತು. ಎರಡು ವಾರಗಳಿಂದ ಈ ಗೊಂಬೆಗಳನ್ನು ಮಾಡಿದೆ. ಪತ್ನಿ ಸ್ವರ್ಣಲತಾ ಬಣ್ಣ ಹಚ್ಚಿ, ಅಲಂಕಾರ ಮಾಡಿದರೆ, ಅಮ್ಮ ಮಂಟಪಗಳನ್ನು ಮಾಡಿಕೊಟ್ಟರು. ತಂದೆ, ಇಬ್ಬರೂ ಮಕ್ಕಳು ಸಹಾಯ ಮಾಡಿದರು’ ಎಂದು ಹೇಳುತ್ತಾರೆ ಅನಂತಕೃಷ್ಣ.

ದೀಪಗಳ ನಡುವೆ ಇರಿಸಿರುವ ಗೊಂಬೆಗಳಿಗೆ ಹೊಸ ಬಟ್ಟೆಗಳನ್ನು ತೊಡಿಸಿ ಅಲಂಕಾರ ಮಾಡಿರುವುದು ಗಮನ ಸೆಳೆಯುತ್ತದೆ. ಮನೆಯ ಹಾಲ್‌ ಹಾಗೂ ಅಂಗಳದಲ್ಲಿ ಗೊಂಬೆಗಳನ್ನು ಸಾಲಾಗಿ ಜೋಡಿಸಿಟ್ಟಿದ್ದಾರೆ. ಅಂಗಳದಲ್ಲಿ ತುಳಸಿ ಕಟ್ಟೆ ಹಾಗೂ ಇತರ ಗಿಡಗಳ ನಡುವೆ ಸಣ್ಣ ಬೃಂದಾವನ ಮಾಡಿ ಅದರ ನಡುವೆ ಗೊಂಬೆಗಳನ್ನು ಇರಿಸಿದ್ದಾರೆ. ನೀರಿನ ಕೃತಕ ಸಣ್ಣ ತೊರೆಯನ್ನು ಮಾಡಿರುವುದು ಗೊಂಬೆ ಪ್ರದರ್ಶನದ ಕಳೆ ಹೆಚ್ಚಿಸಿದೆ. ಮಣ್ಣಿನಿಂದಲೇ ಸಣ್ಣ ಗುಡ್ಡ ಮಾಡಿ ವೆಂಕಟೇಶ್ವರ ಮೂರ್ತಿಯನ್ನು ಇಡುವ ಮೂಲಕ ಸೃಜನಶೀಲತೆಯನ್ನೂ ಮೆರೆದಿದ್ದಾರೆ.

ಮಾನಸ ಸರೋವರ, ಅಮರನಾಥ ಪ್ರತಿಕೃತಿಗಳೂ ಇವರ ಸಂಗ್ರಹದಲ್ಲಿವೆ. ಈ ಗೊಂಬೆಗಳು ಹುತ್ತದ ಮಣ್ಣಿನಲ್ಲಿ ಮಾಡಿದ್ದೇ ಆದರೂ ಬಣ್ಣಗಳ ಮೂಲಕ ಹಿಮದ ರಾಶಿ, ಹಿಮ ಪರ್ವತಗಳನ್ನು ಬಿಡಿಸಿದ್ದಾರೆ. ಇದಲ್ಲದೇ ದಶಾವತಾರ, ಕೃಷ್ಣನ ವಿವಿಧ ಲೀಲೆಗಳ ಗೊಂಬೆಗಳ ಸೆಟ್‌, ಶ್ರೀದೇವಿ– ಭೂದೇವಿ, ಆದಿಶೇಷ, ವೈಕುಂಠ, ಮದುವೆ ಮನೆ ಸಂಭ್ರಮ, ಸಂಗೀತ ವಿದ್ವಾಂಸರ ಪ್ರತಿಮೆಗಳ ಬೊಂಬೆಗಳು ತಮ್ಮದೇ ಕಥೆ ಹೇಳುತ್ತಾ ಎಲ್ಲರನ್ನೂ ಆಕರ್ಷಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT