ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಚೇರಿಯಲ್ಲಿ ಅಧಿಕಾರಿಗಳಿಲ್ಲ; ನಿಲ್ದಾಣದಲ್ಲಿ ವಾಹನಗಳಿಲ್ಲ

Last Updated 23 ಸೆಪ್ಟೆಂಬರ್ 2017, 6:58 IST
ಅಕ್ಷರ ಗಾತ್ರ

ಗಂಗಾವತಿ: ಕೊಪ್ಪಳದಲ್ಲಿ ಶುಕ್ರವಾರ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಫಲಾನುಭವಿಗಳ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳಲು ನಗರದಿಂದ ದೊಡ್ಡ ಪ್ರಮಾಣದಲ್ಲಿ ಅಧಿಕಾರಿಗಳು ತೆರಳಿದ್ದರಿಂದ ಬಹುತೇಕ ಎಲ್ಲ ಇಲಾಖೆಗಳ ಕಚೇರಿಯಲ್ಲಿ ಸಿಬ್ಬಂದಿಗಳಿಲ್ಲದೇ ಬಿಕೋ ಎನ್ನುವಂತಿದ್ದವು.

ಕಂದಾಯ, ಪೊಲೀಸ್, ನಗರಸಭೆ, ತೋಟಗಾರಿಕೆ, ಸಮಾಜಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕೃಷಿ, ತಾಲ್ಲೂಕು ಪಂಚಾಯಿತಿ, ಅಕ್ಷರ ದಾಸೋಹ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೀಗೆ ಸಾಲು ಸಾಲು ಕಚೇರಿಯಲ್ಲಿ ಅಧಿಕಾರಿಗಳ ಗೈರು ಹಾಜರಿಯಿತ್ತು.

ನಿತ್ಯದಂತೆ ಕೋರ್ಟ್‌, ಕಚೇರಿ, ಇಲಾಖೆಗಳಲ್ಲಿನ ಕೆಲಸಕ್ಕಾಗಿ ಗ್ರಾಮೀಣ ಪ್ರದೇಶದಿಂದ ಆಗಮಿಸಿದ್ದ ಜನ ಸಕಾಲಕ್ಕೆ ವಿವಿಧ ಇಲಾಖೆಯಲ್ಲಿ ಅಧಿಕಾರಿಗಳು ಸಿಗದೇ ಪರದಾಡಿದರು. ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ ಮನೆಗೆ ತೆರಳಿದರು.

ಸಾರಿಗೆ ಇಲಾಖೆಯಿಂದ ಹೆಚ್ಚಿನ ಸಂಖ್ಯೆಯ ವಾಹನಗಳನ್ನು ಕೊಪ್ಪಳಕ್ಕೆ ನಿಯೋಜಿಸಿದ್ದರಿಂದ ಗ್ರಾಮೀಣ ಭಾಗಕ್ಕೆ ಸಾರಿಗೆ ವಾಹನಗಳ ಸೇವೆ ಇಲ್ಲದೇ ಜನ ಪರದಾಡುವಂತಾಯಿತು. ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ಶುಕ್ರವಾರ ಖಾಸಗಿ ವಾಹನಗಳ ಅಬ್ಬರ ಕಂಡು ಬಂತು.

ಗ್ರಾಮೀಣ ಭಾಗದಿಂದ ಹಾಗೂ ನಗರದಿಂದ ವಿವಿಧ ಸ್ಥಳಕ್ಕೆ ಹೋಗಲು ಬಂದಿದ್ದ ನೂರಾರು ಪ್ರಯಾಣಿಕರು ಸಕಾಲಕ್ಕೆ ಸಾರಿಗೆ ಇಲಾಖೆಯ ವಾಹನ ಸೇವೆ ಲಭ್ಯವಾಗದ್ದರಿಂದ ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೇ ಕಾಯುವ ಶಿಕ್ಷೆ ಅನುಭವಿಸುವಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT