ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ತಾಲ್ಲೂಕು ರಚನೆ: ಅ.3ರೊಳಗೆ ಸಮಗ್ರ ವಿವರ ಸಲ್ಲಿಕೆಗೆ ಸೂಚನೆ

Last Updated 23 ಸೆಪ್ಟೆಂಬರ್ 2017, 7:12 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಗುರುಮಠಕಲ್, ವಡಗೇರಾ ಹಾಗೂ ಹುಣಸಗಿ ನೂತನ ತಾಲ್ಲೂಕು ಕೇಂದ್ರಗಳ ಕಾರ್ಯಾರಂಭ ಮಾಡಲು ಅಗತ್ಯ ಕಚೇರಿ, ಸಿಬ್ಬಂದಿ ಇತರೆ ಮಾಹಿತಿಯನ್ನು ಅ. 3ರೊಳಗಾಗಿ ಜಿಲ್ಲಾಡಳಿತಕ್ಕೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಜೆ. ಮಂಜುನಾಥ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹೊಸ ತಾಲ್ಲೂಕು ರಚನೆಗೆ ಕಚೇರಿ ಕಟ್ಟಡ, ಸಿಬ್ಬಂದಿ ಹಾಗೂ ಮೂಲ ಸೌಕರ್ಯಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ತಾಲ್ಲೂಕು ರಚನೆಯಲ್ಲಿ ಸರ್ಕಾರ ಸೂಚಿಸಿರುವ ಮಾನದಂಡಗಳನ್ನು ಅನುಸರಿಸಿ ಅಗತ್ಯ ಇರುವ ಕಚೇರಿಗಳನ್ನು ಆರಂಭ ಮಾಡುವ ಕುರಿತು ಚರ್ಚಿಸಲಾಯಿತು.
ನೂತನ ತಾಲ್ಲೂಕು ಕೇಂದ್ರಗಳಲ್ಲಿ ಅಗತ್ಯವಿರುವ ಕಚೇರಿಗಳನ್ನು ಪ್ರಾರಂಭಿಸಲು ವಿವಿಧ ಇಲಾಖೆಗಳಿಗೆ ಬೇಕಿರುವ ಕಟ್ಟಡಗಳನ್ನು ಬಾಡಿಗೆ ಅಥವಾ ಸ್ವಂತ ಕಟ್ಟಡದಲ್ಲಿ ಮುಂದಿನ ವರ್ಷದ ಜನವರಿ ತಿಂಗಳಿನಲ್ಲಿ ಪ್ರಾರಂಭಿಸಬೇಕಿದೆ ಎಂದು ಹೇಳಿದರು.

ಪ್ರಮುಖವಾಗಿ ತಾಲ್ಲೂಕು ಪಂಚಾಯಿತಿ ಕಾರ್ಯಾಲಯ, ತಹಶೀಲ್ದಾರ್‌, ಕೃಷಿ, ತೋಟಗಾರಿಕೆ, ಆರೋಗ್ಯ, ಶಿಕ್ಷಣ, ಕೈಗಾರಿಕೆ, ಕಾರ್ಮಿಕ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ, ಸಮಾಜ ಕಲ್ಯಾಣ, ಅರಣ್ಯ ಹಾಗೂ ಆಹಾರ ಸುರಕ್ಷತಾ ಇಲಾಖೆಯ ಕಚೇರಿಗಳಿಗೆ ಕಟ್ಟಡಗಳನ್ನು ಪಡೆಯಲು ಅವರು ಸೂಚಿಸಿದರು.

ಬಾಡಿಗೆಗೆ ಪಡೆಯುವ ಕಟ್ಟಡಗಳು ಶೌಚಾಲಯದಂತಹ ಮೂಲ ಸೌಕರ್ಯಗಳನ್ನು ಹೊಂದಿರಬೇಕು ಎಂದು ಸೂಚಿಸಿದರು. ಈಗಾಗಲೇ ಗುರುಮಠಕಲ್‌ನಲ್ಲಿ ಪಶು, ಗ್ರಂಥಾಲಯ, ರೇಷ್ಮೆ ಹಾಗೂ ಆರೋಗ್ಯ ಇಲಾಖೆಯ ಸ್ವಂತ ಕಟ್ಟಡಗಳಿದ್ದು, ತಾಲ್ಲೂಕು ಕಚೇರಿಗಳನ್ನು ಪ್ರಾರಂಭಿಸಲು ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಸೂಚಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿ ಕಾರ್ಯಾರಂಭ ಮಾಡಿರುವ ಕುರಿತು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ವಡಗೇರಾ, ಹುಣಸಗಿಯಲ್ಲಿ ಕಟ್ಟಡಗಳನ್ನು ಪಡೆಯುವಂತೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಯಾದಗಿರಿ, ಸುರಪುರ ಹಾಗೂ ಶಹಾಪುರ ತಾಲ್ಲೂಕಿನಲ್ಲಿ ವಿವಿಧ ಇಲಾಖೆಗಳಿಗೆ ಅಗತ್ಯವಿರುವ ಜಮೀನು ಕುರಿತು ಜಿಲ್ಲಾಧಿಕಾರಿ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT