ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನಲ್ಲಿ ಗಾನಕಲಾ ಸಮ್ಮೇಳನ

Last Updated 24 ಸೆಪ್ಟೆಂಬರ್ 2017, 5:06 IST
ಅಕ್ಷರ ಗಾತ್ರ

ಅಗಾಧವಾದ ಜೀವನಾನುಭವ, ಅಪರಿಮಿತ ಸಂಗೀತ ಪ್ರೀತಿ, ಅದ್ಭುತ ಚಿಂತನೆ, ಅಳತೆಗೂ ಮೀರಿದ ಜೀವನ ಪ್ರೀತಿ...ಇವೆಲ್ಲವನ್ನೂ ಮಡಿಲಲ್ಲಿ ಇಟ್ಟುಕೊಂಡೇ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಅನನ್ಯ ಸಾಧನೆ ಮಾಡಿದ ವಿದುಷಿ ವಸಂತಮಾಧವಿ. ಇವರು ಗಾಯಕಿ ಮಾತ್ರವಲ್ಲ. ಬೋಧಕಿ, ಸಂಗೀತ ಶಿಕ್ಷಕಿ, ಸಂಗೀತ ಸಂಯೋಜಕಿ, ಸಂಘಟಕಿ, ಸಂಪನ್ಮೂಲ ವ್ಯಕ್ತಿ, ಮೇಲಾಗಿ ಸಂಗೀತದ ಬಗ್ಗೆ ನಿರರ್ಗಳವಾಗಿ ಅಷ್ಟೇ ವಿದ್ವತ್‌ಪೂರ್ಣವಾಗಿ ಮಾತನಾಡಬಲ್ಲ ಸಾಮರ್ಥ್ಯ ಹೊಂದಿರುವ ಅಪರೂಪದ ಕಲಾವಿದೆ. ಒಟ್ಟಿನಲ್ಲಿ ವಿದುಷಿ ವಸಂತಮಾಧವಿ ಅವರದು ಸಂಗೀತದಲ್ಲಿ ಬಹುಮುಖ ವ್ಯಕ್ತಿತ್ವ, ಬಹುಶ್ರುತ ಸಾಧನೆ..!

ಗಾನಕಲಾ ಪರಿಷತ್ತಿನ 48ನೇ ರಾಜ್ಯಮಟ್ಟದ ಸಂಗೀತ ಸಮ್ಮೇಳನದ ಅಧ್ಯಕ್ಷೆ ಜತೆಗೆ ‘ಗಾನಕಲಾಭೂಷಣ’ ಬಿರುದು ಪಡೆದ ಸಂಗೀತ ಸಾಧಕಿ. ಕರ್ನಾಟಕ ಶಾಸ್ತ್ರೀಯ ಸಂಗೀತದ ಒಳ ಹೊರಗನ್ನು, ಆಳ ಅಗಲವನ್ನು ಸವಿಸ್ತಾರವಾಗಿ ಬಿಚ್ಚಿಟ್ಟ ವಿದುಷಿ ವಸಂತಮಾಧವಿ, ಗಾನಕಲಾಪರಿಷತ್ತಿನೊಂದಿಗೆ ತಮ್ಮ ಒಡನಾಟ, ತಮ್ಮ ಎಳೆಯ ವಯಸ್ಸಿನಿಂದಲೇ ಸಂಗೀತದೊಂದಿಗೆ ಆತುಕೊಂಡ ಪರಿ, ಸಂಗೀತ ಸವಿಯನ್ನು ನಾಡಿನಾದ್ಯಂತ ದೇಶದಾದ್ಯಂತ, ಪ್ರಪಂಚದಾದ್ಯಂತ ಪಸರಿಸಿದ ಸಾಧಕಿ. ಜತೆಗೆ ಸಂಗೀತ ಚಿಕಿತ್ಸೆ ಮುಂತಾದ ಸಂಗೀತದ ತಾಂತ್ರಿಕ ಅಂಶಗಳನ್ನೂ ಕರಗತ ಮಾಡಿಕೊಂಡ ಅನನ್ಯ ಗಾಯಕಿ ವಸಂತ ಮಾಧವಿ.

ಕರ್ನಾಟಕ ಗಾನಕಲಾ ಪರಿಷತ್ತನ್ನು ಕಟ್ಟಿ ಬೆಳೆಸುವಲ್ಲಿ ಹಲವಾರು ಸಂಗೀತ ವಿದ್ವಾಂಸರ ಕೊಡುಗೆಯನ್ನು ಎಂದೂ ನೆನೆಯಲೇಬೇಕು. ವಿದ್ವಾನ್‌ ಬೆಂಗಳೂರು ಕೆ.ವೆಂಕಟ್ರಾಮ್‌, ಆನೂರು ರಾಮಕೃಷ್ಣ ಮುಂತಾದ ಕಲಾವಿದರು ನೀರೆರೆದು ಪೋಷಿಸಿದರು. ಸಂಗೀತ ಕಛೇರಿಗಳು ಬೆಂಗಳೂರಿನ ದೊಡ್ಡಗಣಪತಿ ದೇವಸ್ಥಾನ ಮುಂತಾದೆಡೆ ನಡೆಯುತ್ತಿದ್ದವು. ಪ್ರತಿ ವರ್ಷವೂ ಗಾನಕಲಾಪರಿಷತ್ತು ಸಂಗೀತ ಸಮ್ಮೇಳನ ಆಯೋಜಿಸುವ ಮೂಲಕ ಹಿರಿಯ, ಉದಯೋನ್ಮುಖ ಕಲಾವಿದರಿಗೆ ಸಂಗೀತ ಕಛೇರಿ ನಡೆಸಿಕೊಡಲು ಅವಕಾಶ ಮಾಡಿಕೊಡುತ್ತಿದೆ. ಹಿಂದೆ ಗಾನಕಲಾ ಪರಿಷತ್ತಿನ ಯುವ ಸಮ್ಮೇಳನ ಪ್ರತ್ಯೇಕವಾಗಿ ನಡೆಯುತ್ತಿತ್ತು. ವಿದ್ವತ್‌ ಸಮ್ಮೇಳನವನ್ನು ಎಂಟು ದಿನಗಳ ಕಾಲ ನಡೆಸುತ್ತಿದ್ದರು. ಆದರೆ ಆರ್ಥಿಕ ತೊಂದರೆ ಹಾಗೂ ಕಾರ್ಯಕ್ರಮ ಆಯೋಜಿಸಲು ಕಷ್ಟವಾಗುತ್ತಿರುವುದರಿಂದ ಈಗ ಐದು ದಿನಗಳಿಗೆ ಸಮ್ಮೇಳನ ಸೀಮಿತಗೊಳಿಸಲಾಗಿದೆ.

‘ಸಾಮಾನ್ಯವಾಗಿ ಎಲ್ಲರೂ ಹೇಳುವುದು ‘ಸಂಗೀತ ನೋವನ್ನು ಮರೆಸುತ್ತೆ. ಮನಸ್ಸಿಗೆ ನೋವಾದಾಗ, ಬೇಸರವಾದಾಗ ಸಂಗೀತ ಹಾಡಿದರೆ ನೆಮ್ಮದಿ ಆಗುತ್ತೆ, ಸಂಗೀತ ಎಲ್ಲವನ್ನೂ ಮರೆಸಿಬಿಡುತ್ತೆ..’ ಎಂದು. ಆದರೆ ನಾನು ಈ ವಾದವನ್ನು ಒಪ್ಪುವುದಿಲ್ಲ. ಮನಸ್ಸಿಗೆ ನೋವಾದಾಗ ನನಗೆ ಹಾಡಲಾಗುವುದೇ ಇಲ್ಲ. ಎಂಟು ವರ್ಷ ಹಿಂದೆ ನನ್ನ ತಂದೆ ಶ್ರೀನಿವಾಸಮೂರ್ತಿ ಅವರು ನಮ್ಮನ್ನು ಅಗಲಿದರು. ಆಗ ಮನಸ್ಸಿಗೆ ತುಂಬ ನೋವಾಯಿತು. ಸುಮಾರು ಎರಡು ತಿಂಗಳು ನಾನು ಆ ನೋವಿನಿಂದ ಹೊರಗೆ ಬರಲೇ ಇಲ್ಲ. ಆಗ ನಾನು ಹಾಡಲೇ ಇಲ್ಲ. ಮನಸ್ಸಿಗೆ ಸಂತೋಷ ಆದಾಗ, ನೆಮ್ಮದಿ ಇದ್ದಾಗ ಹಾಡೋದಕ್ಕೆ ಆಗುವ ಹಾಗೆ ನೋವಾದಾಗ ಹಾಡಲಾಗುವುದೇ ಇಲ್ಲ’ ಎನ್ನುತ್ತಾರೆ ವಿದುಷಿ ವಸಂತ ಮಾಧವಿ.

‘ಹಾಗೆಂದು ಸಂಗೀತ ಚಿಕಿತ್ಸೆ (ಮ್ಯೂಸಿಕ್‌ ಥೆರಪಿ) ಬಗ್ಗೆ ನನಗೆ ವಿಪರೀತ ನಂಬಿಕೆ ಹಾಗೂ ಸಹಮತ ಇದೆ. ಸಂಗೀತಕ್ಕೆ ಕಾಯಿಲೆಯನ್ನು ಗುಣಪಡಿಸುವ ಶಕ್ತಿ ಇದೆ. ಆಸ್ತಮಾ, ಬ್ರೋಂಕಿಯಾಟಿಕ್ಸ್, ಟಾನ್ಸಿಲ್ಸ್‌ ಆದಾಗ ಸಂಗೀತ ಚಿಕಿತ್ಸೆ ಇವೆಲ್ಲವನ್ನೂ ನಿವಾರಿಸುತ್ತದೆ. ಶುದ್ಧ ಸಂಗೀತ ಆಲಿಸುವುದರಿಂದ ಮನಸ್ಸಿಗೂ ಪ್ರಯೋಜನ ಸಿಗುತ್ತದೆ. ಸಂಗೀತ ಕೇಳುವುದರಿಂದ ಸದ್ಭಾವನೆ ಬೆಳೆಯುತ್ತದೆ. ಇನ್ನೊಬ್ಬರ ಕಷ್ಟಗಳಿಗೆ ಸ್ಪಂದಿಸುವ ಮನೋಭಾವನೆ ಬೆಳೆಯುತ್ತದೆ. ರಾಗ ಎನ್ನುವುದು ಬಣ್ಣ ಇದ್ದ ಹಾಗೆ. ಒಂದೊಂದು ಬಣ್ಣಕ್ಕೂ ಒಂದೊಂದು ಅರ್ಥ ಇರುವ ಹಾಗೆ ಒಂದೊಂದು ರಾಗಕ್ಕೂ ಅರ್ಥ ಇರುತ್ತದೆ. ಭಾವನೆ ಮೂಡಿಸುವ ಶಕ್ತಿ ಇರುತ್ತದೆ’ ಎನ್ನುವುದು ಈ ವಿದುಷಿಯ ಅಭಿಮತ.

ಅಪರಿಮಿತ ಸಾಧನೆ
ಆರು ವರ್ಷದ ಮಗುವಿರುವಾಗಲೇ ಸಂಗೀತ ಕಲಿಯಲಾರಂಭಿಸಿದರು. ಸಂಗೀತ ಶಾಲೆಗೆ ಹೋಗಿ ಬಂದು ತಂಗಿಯರಾದ ಟಿ.ಎಸ್‌. ಸತ್ಯವತಿ ಹಾಗೂ ಟಿ.ಎಸ್. ವಸುಂಧರಾ ಅವರಿಗೆ ಕಲಿಸಿಕೊಡುತ್ತಿದ್ದರು. ಹೀಗಾಗಿ ಈ ವಿದುಷಿ ಆರನೇ ವಯಸ್ಸಿಗೇ ‘ಸಂಗೀತ ಟೀಚರ್‌’ ಕೂಡ ಆಗಿದ್ದರು. ವಸಂತ ಮಾಧವಿ ಅವರ ಮನೆತನವೇ ಸಂಗೀತದ್ದು. ತಾಯಿ ರಂಗಲಕ್ಷ್ಮಿ ಸಂಗೀತ ಪಾಠ ಹೇಳಿಕೊಡುತ್ತಿದ್ದರು. ಇವರ ತಮ್ಮ ಡಾ.ನರಸಿಂಹಸ್ವಾಮಿ ಕೂಡ ಸಂಗೀತಗಾರ. ಹೀಗೆ ಚಿಕ್ಕಂದಿನಿಂದಲೇ ಸಂಗೀತದ ಜತೆಗೇ ಸಾಗುತ್ತಾ ಬಂದ ವಸಂತಮಾಧವಿ ಸದ್ಯ ಪ್ರಬುದ್ಧ ಕಲಾವಿದೆ.

ತಮ್ಮ ಐದನೇ ವಯಸ್ಸಿಗೇ ಸಂಗೀತವನ್ನು ವಿದ್ವಾನ್‌ ಶ್ರೀನಿವಾಸ ರಾಘವಾಚಾರ್‌ ಮತ್ತು ವಿದ್ವಾನ್‌ ಗೋಪಾಲಕೃಷ್ಣ ಅವರ ಬಳಿ ಕಲಿತರು. ಬಳಿಕ ವಿದ್ವಾನ್‌ ಡಿ. ಸುಬ್ಬರಾಮಯ್ಯ ಅವರ ಬಳಿ ಹೆಚ್ಚಿನ ಅಭ್ಯಾಸ ಮಾಡಿದರು. ಬೆಂಗಳೂರು, ಚೆನ್ನೈ, ಹೈದರಾಬಾದ್‌, ದೆಹಲಿ, ಪಾಂಡಿಚೇರಿ, ಮೈಸೂರುಗಳಲ್ಲಿ ಹಲವಾರು ಸಂಗೀತ ಸಭಾಗಳಲ್ಲಿ ಲೆಕ್ಕವಿಲ್ಲದಷ್ಟು ಸಂಗೀತ ಕಛೇರಿ ನೀಡಿದ್ದಾರೆ. ಅಮೆರಿಕದ ಅನೇಕ ದೇಶಗಳಲ್ಲಿ ಸಂಗೀತ ಕಛೇರಿ ನೀಡಿದ್ದು ಕೇಳುಗರ ಮೆಚ್ಚುಗೆಗೆ ಪಾತ್ರವಾಗಿದೆ. ಆಕಾಶವಾಣಿ, ದೂರದರ್ಶನಗಳಲ್ಲಿ ಸಾಕಷ್ಟು ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ನೆರವಲ್‌, ರಾಗ ತಾನ ಪಲ್ಲವಿಗಳಲ್ಲಿ ಪರಿಣತಿ ಪಡೆದಿರುವ ಇವರು ಹಾಡುಗಾರಿಕೆಯಲ್ಲಿ ಗಮಕ ಮತ್ತು ರಾಗಭಾವಗಳಿಗೆ ಹೆಚ್ಚಿನ ಒತ್ತು ನೀಡಿ ಹಾಡುವ ಅಪರೂಪದ ಕಲಾವಿದೆ.

‘ಕಲಾರಾಧನಶ್ರೀ, ಗುಣನಿಧಿ, ಸಂಗೀತ ವಾಗ್ಗೇಯ ಭೂಷಣಿ, ಕಲಾಜ್ಯೋತಿ, ಸ್ವರಭೂಷಣಿ’ ಮುಂತಾದವು ಇವರಿಗೆ ಸಂದ ಬಿರುದುಗಳು. ರಾಗ ತರಂಗ, ಲಲಿತಾ ಸಹಸ್ತ್ರನಾಮ ಸ್ತೋತ್ರ, ಎಂದರೋಮಹಾನುಭಾವಲು, ದಾಸಾಮೃತ, ಅಷ್ಟದಿಕ್ಪಾಲ, ನವಗ್ರಹಕೃತಿ, ಪರಮಹಂಸಗೀತಂ, ಶಂಕರಗೀತ, ಶ್ರೀವೆಂಕಟೇಶ್ವರ ನವರತ್ನ ಮಾಲಿಕಾ, ಮೇಳ ಮುಕ್ತಾವಳಿ ಇವರು ಹಾಡಿರುವ ಪ್ರಮುಖ ಸಿ.ಡಿಗಳು.

ಈ ಹಿರಿಯ ಕಲಾವಿದೆಗೆ ಇದೀಗ ರಾಜ್ಯದ ಪ್ರತಿಷ್ಠಿತ ‘ಗಾನಕಲಾಭೂಷಣ’ ಬಿರುದು. ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನಡೆಯುವ ರಾಜ್ಯಮಟ್ಟದ ಗಾನಕಲಾ ಪರಿಷತ್‌ ಸಮ್ಮೇಳನದ ಅಧ್ಯಕ್ಷತೆಯ ಗೌರವ.

ಮಂಜುನಾಥ್‌– ಗಾನಕಲಾಶ್ರೀ
ಅವನದ್ಧ ವಾದ್ಯ ಮೃದಂಗ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಒಂದು ಪ್ರಮುಖ ತಾಳವಾದ್ಯ. ಮೃದಂಗ ಪಕ್ಕವಾದ್ಯ ಇಲ್ಲದೆ ಸಂಗೀತ ಕಛೇರಿ ಅಪೂರ್ಣ. ಈ ಮೃದಂಗದಲ್ಲಿ ಹೊಮ್ಮುವ ನಾದವೂ ಕೇಳಲು ಆಪ್ಯಾಯಮಾನ.

ಮೃದಂಗ ಪಕ್ಕವಾದ್ಯದಲ್ಲಿ ಗಮನಾರ್ಹ ಸಾಧನೆ ಮಾಡಿ ವಾದನ ಕ್ರಮವನ್ನು ಒಲಿಸಿಕೊಂಡವರು ಬಿ.ಸಿ. ಮಂಜುನಾಥ್‌. ಹಿರಿಯ ಮೃದಂಗ ವಿದ್ವಾಂಸರಾದ ಬಿ.ಕೆ. ಚಂದ್ರಮೌಳಿ ಅವರ ಮಗ ಇವರು.

ಕೇಂದ್ರ ಸಂಗೀತ ನಾಟಕ ಅಕಾಡೆಮಿ ಯುವ ಕಲಾವಿದರಿಗೆ ನೀಡುವ ‘ಉಸ್ತಾದ್‌ ಬಿಸ್ಮಿಲ್ಲಾ ಖಾನ್‌ ಯುವ ಪುರಸ್ಕಾರ’ಕ್ಕೆ ಭಾಜನರಾಗಿರುವ ಮಂಜುನಾಥ್‌, ಮಲ್ಲೇಶ್ವರ ಸಂಗೀತ ಸಭಾ ನೀಡುವ ಸ್ವರಲಯ ಭಾರತಿ ಪ್ರಶಸ್ತಿ, ಕಂಚಿ ಕಾಮಕೋಟಿ ಪೀಠದಿಂದ ಕೊಡುವ ‘ಆಸ್ಥಾನ ವಿದ್ವಾನ್‌’ ಪುರಸ್ಕಾರ, ಬೆಂಗಳೂರಿನ ಅನನ್ಯ ಸಭಾ ನೀಡುವ ‘ಅನನ್ಯ ಯುವ ಪುರಸ್ಕಾರ’ ಗಳನ್ನು ಪಡೆದಿದ್ದಾರೆ.

ಗಾನಕಲಾ ಪರಿಷತ್‌ ನಡೆಸುವ ಯುವ ವಿದ್ವಾಂಸರ ಸಂಗೀತೋತ್ಸವದಲ್ಲಿ ಬಿ.ಸಿ. ಮಂಜುನಾಥ್‌ ಅಧ್ಯಕ್ಷತೆ ವಹಿಸಲಿದ್ದು, ‘ಗಾನಕಲಾಶ್ರೀ’ ಬಿರುದಿಗೂ ಭಾಜನರಾಗುವರು.

***

ಎತ್ತರೆತ್ತರಕ್ಕೆ ಗಾನಕಲಾ ಪರಿಷತ್ತು
ಶಾಸ್ತ್ರೀಯ ಸಂಗೀತ ಉಳಿಸಿ ಬೆಳೆಸಲೆಂದೇ ಸಂಗೀತಗಾರರೆಲ್ಲ ಸೇರಿ ಕಟ್ಟಿದ ಸಂಸ್ಥೆ ಕರ್ನಾಟಕ ಗಾನಕಲಾ ಪರಿಷತ್ತು. 1969ರಲ್ಲಿ ಆರಂಭವಾದ ಈ ಸಂಸ್ಥೆಯಲ್ಲಿ ಎಲ್‌.ಎಸ್‌. ಶೇಷಗಿರಿರಾವ್‌, ಇ.ಆರ್‌. ಸೇತುರಾಮ್‌, ಹೊನ್ನಪ್ಪ ಭಾಗವತರ್‌, ಎ. ವೀರಭದ್ರಯ್ಯ, ವಿಮಲಾ ರಂಗಾಚಾರ್‌, ಡಾ.ಎ.ಎಚ್‌. ರಾಮರಾವ್‌ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ಇವರೆಲ್ಲರ ಬಳಿಕ ಸದ್ಯ ಗಾನಕಲಾಭೂಷಣ ಆರ್‌.ಕೆ. ಪದ್ಮನಾಭ ಅವರು ಈ ಸಂಸ್ಥೆಯ ಅಧ್ಯಕ್ಷರು.

ವರ್ಷಕ್ಕೊಮ್ಮೆ ಸಂಗೀತ ಸಮ್ಮೇಳನವನ್ನು ಅದ್ಧೂರಿಯಾಗಿ ನಡೆಸಿಕೊಂಡು ಬರುವ ಸಂಸ್ಥೆ ಗದಗ, ಸಿದ್ಧಾಪುರ, ವಿಜಾಪುರ, ಬೇಲೂರು, ಹೊಳೇನರಸೀಪುರ.. ಹೀಗೆ ಕರ್ನಾಟಕದ ನಾನಾ ಭಾಗಗಳಲ್ಲಿ ನಡೆಸಿಕೊಂಡು ಬಂದಿದೆ. ಸದ್ಯ ಮೈಸೂರಿನಲ್ಲಿ ನಡೆಯುವುದು ಗಾನಕಲಾ ಪರಿಷತ್ತಿನ 48 ರಾಜ್ಯ ಸಂಗೀತ ಸಮ್ಮೇಳನ.

‘ಗಾನಕಲಾ ಪರಿಷತ್ತು ಪ್ರತೀ ತಿಂಗಳು ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ. ಬೇರೆ ಬೇರೆ ಸಂಸ್ಥೆ ಜತೆಗೆ ಸೇರಿ ನಡೆಸುವ ಈ ಸಂಗೀತ ಕಛೇರಿಗಳಲ್ಲಿ ಹಿಂದೂಸ್ತಾನಿ ಸಂಗೀತಕ್ಕೂ ಆದ್ಯತೆ ನೀಡುತ್ತೇವೆ. ಕಛೇರಿಗಳಲ್ಲದೆ ಸಂಗೀತ ವಿಚಾರ ಸಂಕಿರಣ, ಪ್ರಾತ್ಯಕ್ಷಿಕೆ, ಪುಸ್ತಕ, ಸಿ.ಡಿ ಬಿಡುಗಡೆಗಳಂತಹ ಕಾರ್ಯಕ್ರಮಗಳನ್ನೂ ನಡೆಸುತ್ತೇವೆ. ಒಟ್ಟಿನಲ್ಲಿ ಸಂಗೀತದ ಸರ್ವತೋಮುಖ ಯಶಸ್ಸಿಗೆ ಗಾನಕಲಾ ಪರಿಷತ್ತು ಶಕ್ತಿಮೀರಿ ಶ್ರಮಿಸುತ್ತಿದೆ’ ಎಂದು ಹೇಳುತ್ತಾರೆ ಪರಿಷತ್ತಿನ ಅಧ್ಯಕ್ಷರಾದ ವಿದ್ವಾನ್‌ ಆರ್‌.ಕೆ. ಪದ್ಮನಾಭ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT